Skip to content
Opens in a new window
Listen to this chapter • 2:51

[1] ನನ್ನ ಜೀವವೇ ನನಗೆ ಬೇಸರವಾಗಿದೆ. ಎದೆಬಿಚ್ಚಿ ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು.

[2] ನಾನು ದೇವರ ಮುಂದೆ, “ನನ್ನನ್ನು ಅಪರಾಧಿಯೆಂದು ನಿರ್ಣಯಿಸಬೇಡ, ನನ್ನೊಡನೆ ಏಕೆ ವ್ಯಾಜ್ಯವಾಡುತ್ತೀ ತಿಳಿಸು ಎನ್ನುವೆನು.

[3] ನೀನು ದುಷ್ಟರ ಆಲೋಚನೆಗೆ ಪ್ರಸನ್ನನಾಗಿ ನಿನ್ನ ಕೈಕಷ್ಟದಿಂದ ಸೃಷ್ಟಿಸಿದ್ದನ್ನು ತಿರಸ್ಕರಿಸಿ, ಬಾಧಿಸುವುದು ನಿನಗೆ ಸಂತೋಷವೋ?

[4] ನೀನು ಮಾಂಸದ ಕಣ್ಣುಳ್ಳವನೋ? ಮನುಷ್ಯರು ನೋಡುವಂತೆ ನೋಡುತ್ತೀಯಾ?

[5] ನಿನ್ನ ದಿನಗಳು ಮನುಷ್ಯನ ದಿನಗಳಷ್ಟು ಅಲ್ಪವಾಗಿವೆಯೋ? ನಿನ್ನ ಸಂವತ್ಸರಗಳೂ ಮಾನವನ ದಿನಗಳಷ್ಟೇನೇ,

[6] ನೀನು ಇಷ್ಟು ಅವಸರದಿಂದ ನನ್ನ ದೋಷವನ್ನು ಹುಡುಕಿ, ನನ್ನ ಪಾಪವನ್ನು ವಿಚಾರಿಸುವುದೇಕೆ?

[7] ನಾನು ಅಪರಾಧಿಯಲ್ಲವೆಂದು ನಿನಗೆ ತಿಳಿಯಿತಲ್ಲಾ; ನಿನ್ನ ಕೈಯೊಳಗಿಂದ ಬಿಡಿಸತಕ್ಕವರು ಯಾರೂ ಇಲ್ಲವೋ?

[8] ನೀನು ನನ್ನನ್ನು ನಿರ್ಮಿಸಿ ರೂಪಿಸಿದ್ದರೂ, ಈಗ ಮನಸ್ಸನ್ನು ಬೇರೆ ಮಾಡಿಕೊಂಡು ನನ್ನನ್ನು ನಾಶ ಮಾಡಿಬಿಡುವೆಯಾ?

[9] ನೀನು ನನ್ನನ್ನು ಜೇಡಿಮಣ್ಣಿನಿಂದಲೇ ರೂಪಿಸಿದ್ದೀಯೆಂದು ಕೃಪೆಮಾಡಿ ನೆನಸಿಕೋ. ನನ್ನನ್ನು ತಿರುಗಿ ಮಣ್ಣಾಗುವಂತೆ ಮಾಡುವೆಯಾ?

[10] ನೀನು ನನ್ನನ್ನು ಹಾಲಿನಂತೆ ಹೊಯ್ದು, ಮೊಸರಿನ ಹಾಗೆ ಹೆಪ್ಪುಗಟ್ಟಿಸಿದಿಯಲ್ಲಾ.

[11] ನನ್ನನ್ನು ಎಲುಬು ನರಗಳಿಂದ ಹೆಣೆದು ಮಾಂಸಚರ್ಮಗಳಿಂದ ಹೊದಿಸಿದಿ.

[12] ನೀನು ನನಗೆ ಜೀವವನ್ನು ಅನುಗ್ರಹಿಸಿ ಕೃಪೆತೋರಿಸಿದ್ದಿ; ನಿನ್ನ ಪರಾಂಬರಿಕೆ ನನ್ನ ಆತ್ಮವನ್ನು ಕಾಪಾಡಿದೆ.

[13] ಆದರೂ ನಿನ್ನ ಹೃದಯದಲ್ಲಿ ಇವುಗಳನ್ನು ಮರೆಮಾಡಿಕೊಂಡಿದ್ದಿ, ಇವು ನಿನ್ನಲ್ಲಿ ಇದ್ದೇ ಇರುತ್ತವೆಂದು ನನಗೆ ಗೊತ್ತುಂಟು.

[14] ಅದೇನೆಂದರೆ, ನಾನು ತಪ್ಪುಮಾಡಿದರೆ ನೀನು ಗಮನಿಸುತ್ತಿ; ನನ್ನ ದೋಷವನ್ನು ಕ್ಷಮಿಸುವುದಿಲ್ಲ.

[15] ಅಯ್ಯೋ, ನಾನು ದುರ್ಮಾರ್ಗಿಯಾದರೆ ನನಗೇನು ಗತಿ! ನಾನು ಸನ್ಮಾರ್ಗಿಯಾದರೂ, ನನ್ನ ಶ್ರಮೆಗಳನ್ನು ನೋಡುತ್ತಾ ಅವಮಾನಭರಿತನಾಗಿ ತಲೆಯೆತ್ತಲಾರೆನು.

[16] ತಲೆಯೆತ್ತಿದರೆ ಸಿಂಹದಂತೆ ನನ್ನನ್ನು ಬೇಟೆಯಾಡುವಿ; ನಿನ್ನ ಅದ್ಭುತ ಚಮತ್ಕಾರವನ್ನು ತಿರುಗಿ ನನ್ನಲ್ಲಿ ತೋರಿಸುವಿ.

[17] ನನ್ನ ವಿರುದ್ಧವಾಗಿ ಹೊಸ ಹೊಸ ಸಾಕ್ಷಿಗಳನ್ನು ಬರಮಾಡಿ ಹೆಚ್ಚೆಚ್ಚಾಗಿ ನನ್ನ ಮೇಲೆ ಸಿಟ್ಟುಗೊಳ್ಳುವಿ. ಸೈನ್ಯವು ತರಂಗ ತರಂಗವಾಗಿ ನನ್ನ ಮೇಲೆ ಬೀಳುವುದಲ್ಲಾ.

[18] ನನ್ನನ್ನು ಗರ್ಭದಿಂದ ಏಕೆ ಹೊರತೆಗೆದೆ? ಯಾರೂ ನನ್ನನ್ನು ನೋಡದಿರುವಾಗಲೇ ನಾನು ಪ್ರಾಣಬಿಡಬೇಕಾಗಿತ್ತು.

[19] ಆಗ ನಾನು ಇರುತ್ತಿರಲಿಲ್ಲ; ನನ್ನನ್ನು ಗರ್ಭದಿಂದ ಸಮಾಧಿಗೆ ಹೊತ್ತುಕೊಂಡು ಹೋಗುತ್ತಿದ್ದರು.

[20] ನನ್ನ ದಿನಗಳು ಅಲ್ಪವಾಗಿರುತ್ತವಲ್ಲಾ? ಬಿಡು, ನಿನ್ನ ದೃಷ್ಟಿಯನ್ನು ನನ್ನ ಕಡೆಯಿಂದ ತಿರುಗಿಸು.

[21] ನಾನು ಅಂಧಕಾರದಿಂದಲೂ, ಮರಣಾಂಧಕಾರದಿಂದಲೂ ತುಂಬಿದ ದೇಶಕ್ಕೆ ಹೋಗುವುದರೊಳಗೆ ಸ್ವಲ್ಪ ಹರ್ಷಗೊಳ್ಳಲು ಅವಕಾಶವಾಗಲಿ. ಆ ದೇಶದಿಂದ ತಿರುಗಿ ಬರಲಾರೆನು.

[22] ರಾತ್ರಿಗೂ, ಮರಣಾಂಧಕಾರಕ್ಕೂ ಸಮಾನವಾದ, ಕಗ್ಗತ್ತಲು ಅದನ್ನು ಆವರಿಸಿದೆ, ಅಲ್ಲಿ ಏನೂ ಕ್ರಮವಿಲ್ಲ, ಅದರ ಬೆಳಕು ರಾತ್ರಿಯ ಬೆಳಕಿನಂತೆ.”

ಯೋಬನು — Chapters