[1] ತರುವಾಯ ಯೋಬನು ಪ್ರಸ್ತಾಪವನ್ನೆತ್ತಿ ಇಂತೆಂದನು,
[2] “ಅಯ್ಯೋ ನಾನು ಹಿಂದಿನ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಸಂತೋಷವಾಗಿತ್ತು! ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಿದ್ದನಲ್ಲಾ!
[3] ಆತನ ದೀಪವು ನನ್ನ ತಲೆಯ ಮೇಲೆ ಪ್ರಕಾಶಿಸುತ್ತಿತ್ತು, ಆತನ ಬೆಳಕಿನಿಂದ ಕತ್ತಲಲ್ಲೂ ಸಂಚರಿಸುತ್ತಿದ್ದೆನು.
[4] ಆ ದಿನಗಳು ನನ್ನ ಜೀವಮಾನದ ಸುಗ್ಗೀಕಾಲವು, ದೇವರ ಸ್ನೇಹವು ನನ್ನ ಗುಡಾರವನ್ನು ಆವರಿಸಿಕೊಂಡಿತ್ತು.
[5] ಸರ್ವಶಕ್ತನಾದ ದೇವರು ಇನ್ನೂ ನನ್ನೊಂದಿಗಿದ್ದನು, ನನ್ನ ಮಕ್ಕಳು ನನ್ನ ಸುತ್ತಲಿದ್ದರು.
[6] ಹಾಲು ತುಪ್ಪದಲ್ಲಿ ನನ್ನ ಪಾದಗಳನ್ನು ತೊಳೆಯುತ್ತಿದ್ದೆ, ಬಂಡೆಯು ನನಗೋಸ್ಕರ ಎಣ್ಣೆಯನ್ನು ಪ್ರವಾಹವಾಗಿ ಸುರಿಸುತ್ತಿತ್ತು.
[7] ಊರ ಮುಂದಿನ ಚಾವಡಿಗೆ ಹೋದಾಗಲೂ, ಚೌಕದಲ್ಲಿ ಆಸನವನ್ನು ಹಾಕಿಸಿಕೊಂಡಾಗಲೂ
[8] ಯೌವನಸ್ಥರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು, ವೃದ್ಧರು ಎದ್ದು ನಿಂತರು.
[9] ಪ್ರಭುಗಳು ಮೌನವಾಗಿ ಬಾಯ ಮೇಲೆ ಕೈಯಿಟ್ಟುಕೊಂಡರು.
[10] ಮುಖಂಡರ ನಾಲಿಗೆಯು ಸೇದಿಹೋಗಿ ಧ್ವನಿಯಡಗಿತು.
[11] ಕೇಳಿದ ಕಿವಿಯು ನನ್ನನ್ನು ಹರಸಿತು, ನೋಡಿದ ಕಣ್ಣು ಸಾಕ್ಷಿ ಕೊಟ್ಟಿತು.
[12] ಏಕೆಂದರೆ ಅಂಗಲಾಚುವ ಬಡವನನ್ನೂ, ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿದ್ದೆನು.
[13] ಗತಿಯಿಲ್ಲದವನು ನನ್ನನ್ನು ಹರಸುತ್ತಿದ್ದನು, ವಿಧವೆಯ ಹೃದಯವನ್ನು ಉತ್ಸಾಹಗೊಳಿಸುತ್ತಿದ್ದೆನು.
[14] ನಾನು ಧರ್ಮವನ್ನು ಧರಿಸಿಕೊಂಡೆನು, ಧರ್ಮವು ನನ್ನನ್ನು ಧರಿಸಿತು. ನನ್ನ ನ್ಯಾಯವೇ ನನಗೆ ನಿಲುವಂಗಿಯೂ, ಕಿರೀಟವೂ ಆಗಿತ್ತು.
[15] ನಾನು ಕುರುಡನಿಗೆ ಕಣ್ಣಾಗಿಯೂ, ಕುಂಟನಿಗೆ ಕಾಲಾಗಿಯೂ ಇದ್ದೆನು.
[16] ದರಿದ್ರರಿಗೆ ತಂದೆಯಾಗಿ, ಪರಿಚಯವಿಲ್ಲದವನ ವ್ಯಾಜ್ಯವನ್ನೂ ವಿಚಾರಿಸುತ್ತಿದ್ದೆನು.
[17] ಅನ್ಯಾಯಗಾರನ ಕೋರೆಗಳನ್ನು ಮುರಿದು, ಅವನ ಹಲ್ಲುಗಳಿಂದ ಬೇಟೆಯನ್ನು ಕಿತ್ತು ತರುತ್ತಿದ್ದೆನು.
[18] ಆಗ ನಾನು ಹೇಳಿದ್ದೇನೆಂದರೆ, ‘ನನ್ನ ಗೂಡಿನಲ್ಲಿಯೇ ನಾನು ಸಾಯುವೆನು, ನನ್ನ ದಿನಗಳು ಮರಳಿನಂತೆ ಅಸಂಖ್ಯವಾಗಿರುವವು.
[19] ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುವವು, ರಾತ್ರಿಯಲ್ಲಿ ಇಬ್ಬನಿಯು ನನ್ನ ರೆಂಬೆಗಳ ಮೇಲೆ ಬಿದ್ದಿರುವುದು.
[20] ನನ್ನ ಮಾನವು ಹೊಸದಾಗುತ್ತಲೂ, ನನ್ನ ಬಿಲ್ಲು ಕೈಯಲ್ಲಿ ಬಲಗೊಳ್ಳುತ್ತಲೂ ಇರುವವು’ ಎಂಬುದೇ.
[21] ಜನರು ಕಾದುಕೊಂಡಿದ್ದು ನನ್ನ ಮಾತಿಗೆ ಕಿವಿಗೊಟ್ಟು, ನನ್ನ ಆಲೋಚನೆಯನ್ನು ತಿಳಿದುಕೊಳ್ಳಬೇಕೆಂದು ಮೌನವಾಗಿದ್ದರು.
[22] ನಾನು ಮಾತನಾಡಿದ ಮೇಲೆ ಮತ್ತೆ ಅವರು ಮಾತನಾಡುತ್ತಿರಲಿಲ್ಲ, ನನ್ನ ವಚನವೃಷ್ಟಿಯು ಅವರ ಮೇಲೆ ಬೀಳುತ್ತಿತ್ತು,
[23] ಮಳೆಯನ್ನು ಹೇಗೋ ಹಾಗೆಯೇ ನನ್ನನ್ನು ಎದುರು ನೋಡುತ್ತಾ, ಮುಂಗಾರಿಗೋ ಎಂಬಂತೆ ಬಾಯ್ದೆರೆಯುತ್ತಿದ್ದರು.
[24] ನಾನು ಅವರನ್ನು ನೋಡಿ ನಗಲು ಅವರು ಧೈರ್ಯಗೆಟ್ಟರು, ನನ್ನ ಮುಖಕಾಂತಿಯನ್ನೋ ಅವರು ಎಂದೂ ಕುಂದಿಸಲಿಲ್ಲ.
[25] ನಾನು ಅವರಿಗೆ ತಕ್ಕ ಮಾರ್ಗವನ್ನು ಆರಿಸಿಕೊಟ್ಟು, ತನ್ನ ಸೈನ್ಯಗಳ ಮಧ್ಯದಲ್ಲಿ ಕುಳಿತಿರುವ ರಾಜನಂತೆಯೂ, ದುಃಖಿತರನ್ನು ಸಂತೈಸುವ ಮುಖಂಡನಾಗಿ ಆಸೀನನಾಗಿದ್ದೆನು.”