Skip to content
Opens in a new window
Listen to this chapter • 2:12

[1] ಆಗ ಯೋಬನು ಇಂತೆಂದನು,

[2] “ನಾನು ನನ್ನ ನರಳಾಟವನ್ನು ಎಷ್ಟು ಬಿಗಿಹಿಡಿದರೂ; ಆ ನನ್ನ ಮುಲುಗುವಿಕೆಯು ದೇವದ್ರೋಹವೆಂದು ಈಗಲೂ ಎಣಿಸುತ್ತೀರಾ?

[3] ಆಹಾ, ಆತನ ದರ್ಶನವು ಎಲ್ಲಿ ಆದೀತು, ನನಗೆ ಗೊತ್ತಾಗಿದ್ದರೆ ಎಷ್ಟೋ ಸಂತೋಷ! ಆತನ ಸನ್ನಿಧಿಯನ್ನು ಸೇರೆನು.

[4] ನನ್ನ ಬಾಯಿಯನ್ನು ತರ್ಕಗಳಿಂದ ತುಂಬಿಸಿಕೊಂಡು ನನ್ನ ನ್ಯಾಯವನ್ನು ಆತನ ಮುಂದೆ ವಿವರಿಸುವೆನು.

[5] ಆತನ ಪ್ರತ್ಯುತ್ತರದ ಮಾತುಗಳನ್ನು ತಿಳಿದುಕೊಂಡು ಆತನು ನನಗೆ ಹೇಳುವುದನ್ನು ವಿವೇಚಿಸುವೆನು.

[6] ಆತನು ತನ್ನ ಮಹಾಶಕ್ತಿಯಿಂದ ನನ್ನ ಸಂಗಡ ವ್ಯಾಜ್ಯವಾಡುವನೋ? ಇಲ್ಲವೇ ಇಲ್ಲ; ನನ್ನ ವಿಜ್ಞಾಪನೆಯನ್ನು ಗಮನಿಸುವನು.

[7] ಅಲ್ಲಿ ಯಥಾರ್ಥಚಿತ್ತನು ಆತನೊಂದಿಗೆ ವಾದಿಸುವನು. ನನ್ನ ನ್ಯಾಯಾಧಿಪತಿಯಿಂದ ನನಗೆ ನಿತ್ಯವಾದ ಬಿಡುಗಡೆಯಾಗುವುದು.

[8] ಅಯ್ಯೋ, ನಾನು ಮುಂದೆ ಹೋದರೂ ಆತನು ಸಿಕ್ಕುವುದಿಲ್ಲ, ಹಿಂದೆ ಹೋದರೂ ಆತನನ್ನು ತಿಳಿಯಲಾರೆನು.

[9] ಎಡಗಡೆಯಲ್ಲಿ ಹುಡುಕಿದರೂ ನೋಡಲಾರೆನು, ಬಲಗಡೆಗೆ ತಿರುಗಿಕೊಂಡರೂ ಆತನು ಕಾಣಿಸುವುದಿಲ್ಲ.

[10] ಆತನಾದರೋ ನನ್ನ ದಾರಿಯನ್ನು ಬಲ್ಲನು, ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು.

[11] ಆತನ ಹೆಜ್ಜೆಯ ಜಾಡಿನಲ್ಲೇ ಕಾಲಿಟ್ಟಿದ್ದೇನೆ, ಓರೆಯಾಗದೆ ಆತನ ದಾರಿಯನ್ನೇ ಹಿಡಿದಿದ್ದೇನೆ.

[12] ಆತನ ತುಟಿಗಳಿಂದ ಹೊರಟ ನಿಯಮಗಳಿಗೆ ನಾನು ಹಿಂದೆಗೆಯಲಿಲ್ಲ, ಆತನ ಬಾಯಿಂದ ಬಂದ ಮಾತುಗಳನ್ನು ಎದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.

[13] ಆತನಂತು ಒಂದೇ ಮನಸ್ಸುಳ್ಳವನಾಗಿದ್ದಾನೆ, ತಿರುಗಿಸಬಲ್ಲವರು ಯಾರು? ತಾನು ಬಯಸಿದ್ದನ್ನೇ ಮಾಡುತ್ತಾನೆ.

[14] ನನ್ನ ವಿಷಯದಲ್ಲಿ ನೇಮಕವಾದದ್ದನ್ನು ಪೂರೈಸುವವನಷ್ಟೆ, ಆತನಲ್ಲಿ ಇಂಥಾ ಸಂಕಲ್ಪಗಳು ಅನೇಕವಾಗಿವೆ.

[15] ಆದಕಾರಣ ನಾನು ಆತನ ಸನ್ನಿಧಿಯಲ್ಲಿ ಗಾಬರಿಯಾಗಿದ್ದೇನೆ; ಇದನ್ನೆಲ್ಲಾ ಯೋಚಿಸಿಕೊಳ್ಳುವಾಗ ಆತನಿಗೆ ಹೆದರುತ್ತೇನೆ.

[16] ನನ್ನ ಹೃದಯವನ್ನು ಕುಂದಿಸಿದವನು ದೇವರೇ, ನನ್ನನ್ನು ಗಾಬರಿಪಡಿಸಿದವನು ಸರ್ವಶಕ್ತನಾದ ದೇವರೇ.

[17] ನಾನು ಹಾಳಾದದ್ದಕ್ಕೆ ಈ ಅಂಧಕಾರವು ಕಾರಣವಲ್ಲ, ನನ್ನ ಮುಖವನ್ನು ಕವಿದಿರುವ ಕಾರ್ಗತ್ತಲು ಕಾರಣವಲ್ಲ.”

ಯೋಬನು — Chapters