Skip to content
Opens in a new window
Listen to this chapter • 2:58

[1] ಆಗ ಯೋಬನು ಸ್ವಂತ ಗಣನೆಯಲ್ಲಿ ನೀತಿವಂತನಾಗಿದ್ದರಿಂದ ಆ ಮೂವರು ಅವನಿಗೆ ಉತ್ತರಕೊಡುವುದನ್ನು ನಿಲ್ಲಿಸಿಬಿಟ್ಟರು.

[2] ಆಮೇಲೆ ಬೂಜ್ ಕುಲಕ್ಕೂ, ರಾಮ್ ಗೋತ್ರಕ್ಕೂ ಸೇರಿದ ಬರಕೇಲನ ಮಗನಾದ ಎಲೀಹುವಿಗೆ ಸಿಟ್ಟೇರಿತು; ಯೋಬನು ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡಿದ್ದರಿಂದ ಅವನ ಮೇಲೆ ಎಲೀಹುವಿಗೆ ಸಿಟ್ಟು ಬಂತು.

[3] ಇದಲ್ಲದೆ ಅವನ ಮೂವರು ಸ್ನೇಹಿತರು ಯೋಬನನ್ನು ಖಂಡಿಸತಕ್ಕ ಉತ್ತರವನ್ನು ಹೇಳಲಾರದೆ ಹೋದುದರಿಂದ ಅವನು ಅವರ ಮೇಲೂ ಕೋಪಿಸಿಕೊಂಡನು.

[4] ಅವರು ತನಗಿಂತ ವೃದ್ಧರಾಗಿದ್ದ ಕಾರಣ, ಎಲೀಹು ಯೋಬನೊಂದಿಗೆ ಮೊದಲು ಮಾತನಾಡದೆ ತಡೆದಿದ್ದನು.

[5] ಎಲೀಹು ಈ ಮೂವರ ಬಾಯಲ್ಲಿ ತಕ್ಕ ಉತ್ತರವಿಲ್ಲದ್ದನ್ನು ಕಂಡು ರೋಷಗೊಂಡನು.

[6] ಆಗ ಬೂಜ್ ಕುಲಕ್ಕೆ ಸೇರಿದ ಬರಕೇಲನ ಮಗನಾದ ಆ ಎಲೀಹು ಇಂತೆಂದನು, “ನಾನು ಯೌವನಸ್ಥನು, ನೀವು ನನಗಿಂತ ಹಿರಿಯರು; ಆದುದರಿಂದ ಸಂಕೋಚಪಟ್ಟು ನನ್ನ ಅಭಿಪ್ರಾಯವನ್ನು ನಿಮಗೆ ಅರಿಕೆಮಾಡಲು ಹೆದರಿದೆನು.”

[7] ಅದಕ್ಕೆ ಅವನು, “ಹೆಚ್ಚು ದಿನಗಳವರು ಮಾತನಾಡಲಿ, ಬಹಳ ವರ್ಷದವರು ಜ್ಞಾನೋಪದೇಶಮಾಡಲಿ” ಎಂದುಕೊಂಡಿದ್ದೆನು.

[8] ಆದರೆ ಮನುಷ್ಯರಲ್ಲಿ ಆತ್ಮವೊಂದುಂಟು, ಸರ್ವಶಕ್ತನಾದ ದೇವರ ಶ್ವಾಸದಿಂದ ಅವರಿಗೆ ವಿವೇಕ ದೊರೆಯುತ್ತದೆ.

[9] ವೃದ್ಧರೇ ಜ್ಞಾನಿಗಳಲ್ಲ, ಮುದುಕರು ಮಾತ್ರ ನ್ಯಾಯ ಬಲ್ಲವರಲ್ಲ.

[10] ಆದಕಾರಣ, “ನನ್ನ ಕಡೆಗೆ ಕಿವಿಗೊಡಿರಿ, ನಾನು ನನ್ನ ಅಭಿಪ್ರಾಯವನ್ನು ಅರಿಕೆಮಾಡುವೆನೆಂದು ಹೇಳಿಕೊಳ್ಳುತ್ತೇನೆ.

[11] ಇಗೋ, ನೀವು ಆಡುತ್ತಿದ್ದ ಮಾತುಗಳನ್ನು ಕಾದು ಕೇಳುತ್ತಿದ್ದೆನು; ಏನು ಹೇಳಬೇಕೆಂದು ನೀವು ಆಲೋಚಿಸುತ್ತಿದ್ದಾಗ ನಿಮ್ಮ ನ್ಯಾಯಗಳಿಗಾಗಿ ಕಿವಿಗೊಟ್ಟಿದ್ದೆನು.

[12] ನಿಮ್ಮ ಮೇಲೆ ಲಕ್ಷ್ಯವಿಟ್ಟಿದ್ದೆನು; ಆಹಾ, ನಿಮ್ಮಲ್ಲಿ ಯೋಬನನ್ನು ಖಂಡಿಸಬಲ್ಲವನು, ಅವನ ಮಾತುಗಳಿಗೆ ಉತ್ತರಕೊಡತಕ್ಕವನು, ಯಾರೂ ಸಿಕ್ಕಲಿಲ್ಲ.

[13] ‘ನಾವು ಅವನಲ್ಲಿ ಜ್ಞಾನವನ್ನು ಕಂಡುಕೊಂಡಿದ್ದೇವೆ, ದೇವರೇ ಅವನನ್ನು ಖಂಡಿಸಿಬಿಡಲಿ, ಮನುಷ್ಯನಿಂದಾಗುವುದಿಲ್ಲ’ ಎಂದು ಅಂದುಕೊಳ್ಳಬೇಡಿರಿ.

[14] ಅವನು ನನಗೆ ಪ್ರತಿಕೂಲವಾಗಿ ಇನ್ನೂ ವಾದವನ್ನು ಹೂಡಲಿಲ್ಲ; ನಾನೂ ಅವನಿಗೆ ಉತ್ತರಕೊಡುವಾಗ ನಿಮ್ಮ ಹಾಗೆ ಮಾತನಾಡೆನು.

[15] ಅವರು ಬೆರಗಾಗಿ ಇನ್ನು ಉತ್ತರಕೊಡಲಾರರು, ಅವರ ಸೊಲ್ಲೇ ಅಡಗಿಹೋಯಿತು.

[16] ಅವರು ಇನ್ನು ಉತ್ತರಕೊಡದೆ ಮೌನವಾಗಿ ಸುಮ್ಮನೆ ನಿಂತಿದ್ದರೆ, ನಾನೂ ಕಾದುಕೊಂಡಿರಬೇಕೋ?

[17] ನಾನೂ ನನ್ನ ಪಾಲಿನ ಉತ್ತರವನ್ನು ಹೇಳುವೆನು, ನಾನೂ ನನ್ನ ಅಭಿಪ್ರಾಯವನ್ನು ತಿಳಿಸುವೆನು.

[18] ನನ್ನಲ್ಲಿ ಮಾತುಗಳು ತುಂಬಿವೆ, ನನ್ನ ಅಂತರಾತ್ಮವು ನನ್ನನ್ನು ಒತ್ತಾಯಪಡಿಸುತ್ತದೆ.

[19] ಆಹಾ, ದ್ರಾಕ್ಷಾರಸವನ್ನು ತುಂಬಿ, ಬಾಯಿಕಟ್ಟಿದ ಹೊಸ ಬುದ್ದಲಿಗಳಂತೆ ನನ್ನ ಹೊಟ್ಟೆಯು ಒಡೆದುಹೋಗುವ ಹಾಗಿದೆ.

[20] ನನಗೆ ಉಪಶಮನವಾಗುವ ಹಾಗೆ ಮಾತನಾಡುವೆನು. ನನ್ನ ತುಟಿಗಳನ್ನು ತೆರೆದು ಉತ್ತರ ಹೇಳುವೆನು.

[21] ಆದರೆ ನಾನು ಯಾರಿಗೂ ಮುಖದಾಕ್ಷಿಣ್ಯವನ್ನು ತೋರಿಸಬಾರದು, ಯಾವ ಮನುಷ್ಯನಿಗಾದರೂ ಮುಖಸ್ತುತಿಯನ್ನು ಮಾಡಕೂಡದು.

[22] ಮುಖಸ್ತುತಿಯನ್ನು ಮಾಡುವುದಕ್ಕೆ ನನ್ನಿಂದಾಗುವುದಿಲ್ಲ; ಮಾಡಿದರೆ ನನ್ನ ಸೃಷ್ಟಿಕರ್ತನು ನನ್ನನ್ನು ಬೇಗ ನಿರ್ಮೂಲ ಮಾಡುವೆನು.

ಯೋಬನು — Chapters