Skip to content
Opens in a new window
Listen to this chapter • 4:39

[1] ಆಗ ಎಲೀಹು ಮತ್ತೆ ಇಂತೆಂದನು,

[2] “ವಿವೇಕಿಗಳೇ, ನನ್ನ ಮಾತುಗಳನ್ನು ಕೇಳಿರಿ, ಜ್ಞಾನಿಗಳೇ, ನನಗೆ ಕಿವಿಗೊಡಿರಿ!

[3] ನಾಲಿಗೆಯು ಆಹಾರವನ್ನು ರುಚಿನೋಡುವಂತೆ, ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.

[4] ನ್ಯಾಯವನ್ನೇ ಆರಿಸಿಕೊಳ್ಳೋಣ, ಒಳ್ಳೆಯದು ಇಂಥದೆಂದು ನಮ್ಮನಮ್ಮೊಳಗೆ ನಿಶ್ಚಯಿಸಿಕೊಳ್ಳೋಣ.

[5] ಯೋಬನು, ‘ನಾನು ನೀತಿವಂತನು, ದೇವರು ನನ್ನ ನ್ಯಾಯವನ್ನು ತಪ್ಪಿಸಿದ್ದಾನೆ.

[6] ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರ ಎಂದು ಎನ್ನಿಸಿಕೊಂಡಿದ್ದೇನೆ. ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ’ ಎಂದು ಹೇಳಿಕೊಂಡಿದ್ದಾನೆ.

[7] ಯೋಬನಿಗೆ ಸಮಾನನು ಯಾರು? ದೇವದೂಷಣೆಯನ್ನು ನೀರಿನಂತೆ ಕುಡಿಯುತ್ತಾನಲ್ಲಾ.

[8] ಅವನು ಅಧರ್ಮಿಗಳ ಜೊತೆಯಲ್ಲಿ ಸಂಚರಿಸುತ್ತಾನೆ, ಕೆಟ್ಟವರ ಸಂಗಡ ನಡೆದಾಡುತ್ತಾನೆ.

[9] ‘ಒಬ್ಬನು ದೇವರ ಅನ್ಯೋನ್ಯತೆಯಲ್ಲಿ ಸಂತೋಷಪಟ್ಟರೂ, ಅವನಿಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳಿದ್ದಾನಷ್ಟೆ.

[10] ಹೀಗಿರಲು, ಬುದ್ಧಿವಂತರೇ, ನನ್ನ ಮಾತುಗಳನ್ನು ಕೇಳಿರಿ, ದೇವರು ಕೆಟ್ಟದ್ದನ್ನು ಮಾಡುತ್ತಾನೆಂಬ ಯೋಚನೆಯೂ, ಸರ್ವಶಕ್ತನಾದ ದೇವರು ಅನ್ಯಾಯವನ್ನು ನಡೆಸುತ್ತಾನೆಂಬ ಭಾವನೆಯೂ ದೂರವಾಗಿರಲಿ!

[11] ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು, ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ಅನುಭವಿಸುವಂತೆ ಮಾಡುವನು.

[12] ಹೌದು, ದೇವರು ಕೆಟ್ಟದ್ದನ್ನು ನಡೆಸುವುದೇ ಇಲ್ಲ, ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕುಮಾಡುವುದೇ ಇಲ್ಲ.

[13] ಭೂಲೋಕವನ್ನು ಆತನ ವಶಕ್ಕೆ ಕೊಟ್ಟವನು ಯಾರು? ಯಾರು ಭೂಮಂಡಲವನ್ನೆಲ್ಲಾ ಕ್ರಮಪಡಿಸಿದನು?

[14] ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು ತನ್ನ ಆತ್ಮವನ್ನೂ, ಶ್ವಾಸವನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಾದರೆ,

[15] ಸಮಸ್ತ ಜನರು ಒಟ್ಟಾಗಿ ಅಳಿದುಹೋಗುವರು, ಪುನಃ ಮನುಷ್ಯರು ಧೂಳೇ ಆಗುವರು.

[16] ನಿನಗೆ ವಿವೇಕವಿದ್ದರೆ ಇದನ್ನು ಕೇಳು, ನನ್ನ ಮಾತುಗಳ ಧ್ವನಿಗೆ ಕಿವಿಗೊಡು!

[17] ನ್ಯಾಯವನ್ನು ದ್ವೇಷಿಸುವವನು ಆಳ್ವಿಕೆ ಮಾಡಾನೇ? ಧರ್ಮಸ್ವರೂಪನೂ, ಮಹಾಶಕ್ತನೂ ಆಗಿರುವಾತನನ್ನು ಕೆಟ್ಟವನೆಂದು ನಿರ್ಣಯಿಸುವೆಯಾ?

[18] ಆತನು ರಾಜನಿಗೆ, ‘ನೀನು ಮೂರ್ಖ’ ಪ್ರಭುಗಳಿಗೆ, ‘ನೀವು ಕೆಟ್ಟವರು’ ಎಂದು ಹೇಳಬಲ್ಲನೇ?

[19] ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ, ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು; ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ.

[20] ಕ್ಷಣ ಮಾತ್ರದೊಳಗೆ ಸಾಯುವರು; ಮಧ್ಯರಾತ್ರಿಯಲ್ಲೇ ಪ್ರಜೆಗಳು ಕದಲಿ ಇಲ್ಲವಾಗುವರು, ಮನುಷ್ಯನ ಕೈ ಸೋಕದೆ ಬಲಿಷ್ಠರೂ ಅಪಹರಿಸಲ್ಪಡುವರು.

[21] ಆತನು ಮನುಷ್ಯನ ಮಾರ್ಗಗಳ ಮೇಲೆ ಕಣ್ಣಿಟ್ಟು, ಅವನ ಹೆಜ್ಜೆಗಳನ್ನೆಲ್ಲಾ ನೋಡುವನು.

[22] ಅಧರ್ಮಿಗಳು ಅಡಗಿಕೊಳ್ಳುವುದಕ್ಕೆ, ಅನುಕೂಲವಾದ ಯಾವ ಕತ್ತಲೂ, ಯಾವ ಗಾಢಾಂಧಕಾರವೂ ಇರುವುದಿಲ್ಲ.

[23] ದೇವರು ಮನುಷ್ಯನ ಮೇಲೆ ಹೆಚ್ಚು ಗಮನವಿಡುವುದೂ, ಮನುಷ್ಯನೂ ಆತನ ನ್ಯಾಯವಿಚಾರಣೆಗೆ ಬರುವುದೂ, ಅವಶ್ಯವಿಲ್ಲ.

[24] ಯಾವ ವಿಮರ್ಶಕರೂ ಇಲ್ಲದೆ ತೀರ್ಮಾನಿಸಿ ಬಲಿಷ್ಠರನ್ನು ಮುರಿದು, ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸುವನು.

[25] ಈ ಪ್ರಕಾರ ಆತನು ಅವರ ಕಾರ್ಯಗಳನ್ನು ಲಕ್ಷಿಸಿ, ರಾತ್ರಿಯಲ್ಲಿ ಅವರನ್ನು ಕೆಡವಿ ನಾಶಕ್ಕೆ ಗುರಿಮಾಡುವನು.

[26] ಅಪರಾಧಿಗಳಿಗೋ ಎಂಬಂತೆ ಬಹಿರಂಗವಾಗಿ ಅವರಿಗೆ ಪೆಟ್ಟುಹಾಕುವನು.

[27] ಅವರು ಆತನನ್ನು ಹಿಂಬಾಲಿಸದೆ, ತಿರುಗಿಕೊಂಡು ಆತನ ಮಾರ್ಗಗಳನ್ನೆಲ್ಲಾ ಅಲಕ್ಷ್ಯಮಾಡಿದ್ದರಷ್ಟೆ.

[28] ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ಮಾಡಿದ್ದರು, ಆತನು ದಿಕ್ಕಿಲ್ಲದವರ ಮೊರೆಯನ್ನು ಆಲಿಸಿದನು.

[29] ಆತನು ನೆಮ್ಮದಿಯನ್ನು ದಯಪಾಲಿಸಿದರೆ ತಪ್ಪುಹೊರಿಸುವವರು ಯಾರು? ವಿಮುಖನಾದರೆ ಆತನ ದರ್ಶನ ಮಾಡುವವರಾರು? ಆತನು ಜನಾಂಗಕ್ಕಾಗಲಿ, ಮನುಷ್ಯನಿಗಾಗಲಿ ಮಾಡುವುದೆಲ್ಲಾ ಹೀಗೆಯೇ.

[30] ಭ್ರಷ್ಟನು ಆಳಬಾರದು, ಯಾರೂ ಜನರಿಗೆ ಉರುಲಾಗಕೂಡದು ಎಂಬುದೇ ಆತನ ಉದ್ದೇಶ.

[31] ಮನುಷ್ಯನು ದೇವರನ್ನು ಕುರಿತು, ‘ನಾನು ಕೆಟ್ಟದ್ದನ್ನು ಮಾಡದಿದ್ದರೂ ದಂಡನೆಯನ್ನು ಸಹಿಸಿಕೊಂಡಿದ್ದೇನೆ,

[32] ನಾನು ಕಾಣದಿರುವುದನ್ನು ನೀನೇ ಸೂಚಿಸು; ನಾನು ಒಂದು ವೇಳೆ ಅನ್ಯಾಯವನ್ನು ಮಾಡಿದ್ದರೂ ಇನ್ನು ಮೇಲೆ ಮಾಡುವುದಿಲ್ಲ’ ಎಂದು ಹೇಳುವುದಕ್ಕಾದೀತೇ?

[33] ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವುದೇಕೆ? ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ? ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು. ನಿನಗೆ ತಿಳಿದದ್ದನ್ನು ತಿಳಿಸು.

[34] ಬುದ್ಧಿವಂತರೂ, ನನ್ನ ಕಡೆಗೆ ಕಿವಿಗೊಡುವ ಪ್ರತಿಯೊಬ್ಬ ಜ್ಞಾನಿಯೂ ನಿನ್ನ ವಿಷಯವಾಗಿ,

[35] ‘ಯೋಬನು ತಿಳಿವಳಿಕೆಯಿಲ್ಲದೆ ನುಡಿಯುತ್ತಾನೆ, ಅವನ ಮಾತುಗಳಲ್ಲಿ ಬುದ್ಧಿಯಿಲ್ಲ.’

[36] ಯೋಬನ ಪರಿಶೋಧನೆಯು ನಿರಂತರವಾಗಿದ್ದರೆ ಸಂತೋಷ! ದುಷ್ಟರ ಹಾಗೆ ಉತ್ತರಕೊಡುತ್ತಾನಲ್ಲವೆ.

[37] ಅವನು ಅಪರಾಧವನ್ನಲ್ಲದೆ ದೈವದ್ರೋಹವನ್ನೂ ಮಾಡಿದ್ದಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆಹೊಡೆದು, ದೇವರಿಗೆ ವಿರುದ್ಧವಾಗಿ ಅಧಿಕ ಮಾತುಗಳನ್ನು ಆಡುತ್ತಾನೆ” ಎಂದು ನನಗೆ ಹೇಳುವರು.

ಯೋಬನು — Chapters