[1] ಆ ಮೇಲೆ ಯೋಬನು ಪ್ರತ್ಯುತ್ತರವಾಗಿ ಹೀಗೆ ಹೇಳಿದನು,
[2] “ಹೌದು, ನೀವೇ ಮನುಷ್ಯರು; ಜ್ಞಾನವು ನಿಮ್ಮೊಡನೆಯೇ ಸಾಯುವುದು, ನಿಜ.
[3] ನಿಮ್ಮ ಹಾಗೆ ನನಗೂ ಬುದ್ಧಿಯುಂಟು, ನಿಮಗಿಂತ ನಾನು ಕಡೆಯಲ್ಲ. ಇಂಥವು ಯಾರಿಗೆ ತಾನೇ ಗೊತ್ತಿಲ್ಲ.
[4] ನಾನು ಗೆಳೆಯನ ಗೇಲಿಗೆ ಗುರಿಯಾಗಿದ್ದೇನೆ! ದೇವರನ್ನು ಪ್ರಾರ್ಥಿಸಿದೆನಲ್ಲಾ, ಆತನು ಲಾಲಿಸಿದನಲ್ಲಾ, ನೀತಿವಂತನೂ, ನಿರ್ದೋಷಿಯೂ ಆದವನು ಹಾಸ್ಯಾಸ್ಪದನಾಗಿದ್ದೇನೆ.
[5] ಆಪತ್ತನ್ನು ಅನುಭವಿಸುವವರು ತಿರಸ್ಕಾರಕ್ಕೆ ಯೋಗ್ಯರೆಂಬುದು ನೆಮ್ಮದಿಯಿಂದಿರುವವನ ಯೋಚನೆ; ಜಾರಿ ಬಿದ್ದವರಿಗೆ ಅಪಮಾನವು ಕಾದಿರುತ್ತದೆ.
[6] ಕಳ್ಳರ ಗುಡಾರಗಳಾದರೋ ಸಮೃದ್ಧವಾಗಿರುವವು, ಕೈಯಲ್ಲಿರುವುದನ್ನೇ ದೇವರನ್ನಾಗಿ ಮಾಡಿಕೊಂಡು, ದೇವರನ್ನು ಕೋಪಕ್ಕೆ ಗುರಿಮಾಡುವವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದಿರುವರು.
[7] ಆದರೆ ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶ ಮಾಡುವವು; ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು;
[8] ಭೂಮಿಯನ್ನು ಮಾತನಾಡಿಸು, ನಿನಗೆ ಬೋಧಿಸುವುದು; ಸಮುದ್ರದ ಮೀನುಗಳು ನಿನಗೆ ಹೇಳುವವು.
[9] ಈ ಎಲ್ಲವುಗಳ ಸಾಕ್ಷಿಯಿಂದ ಯೆಹೋವನ ಕೈಯೇ ಸಕಲ ಕಾರ್ಯಗಳನ್ನು ಮಾಡುತ್ತದೆ ಎಂದು ಯಾರಿಗೆ ತಾನೇ ಗೊತ್ತಾಗುವುದಿಲ್ಲ?
[10] ಪ್ರತಿ ಪ್ರಾಣಿಯ ಪ್ರಾಣವು, ಸಮಸ್ತ ಮನುಷ್ಯರ ಆತ್ಮಗಳೂ ಯೆಹೋವನ ಕೈಯಲ್ಲಿರುವವು.
[11] ಬಾಯಿಯು ಆಹಾರವನ್ನು ರುಚಿ ನೋಡುವ ಪ್ರಕಾರ ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.
[12] ಜ್ಞಾನವು ವೃದ್ಧರಲ್ಲೇ ಅಡಗಿದೆಯೋ? ದಿರ್ಘಾಷ್ಯರಲ್ಲಿ ವಿವೇಕವಿದೆ.
[13] ಆತನಲ್ಲಿ ಜ್ಞಾನವೂ ಶಕ್ತಿಯೂ ಉಂಟು, ಆಲೋಚನೆಯೂ, ವಿವೇಕವೂ ಆತನವೇ.
[14] ಇಗೋ, ಯಾರೂ ಕಟ್ಟದ ಹಾಗೆ ಕೆಡವಿಬಿಡುವನು, ಯಾರೂ ಬಿಡಿಸದಂತೆ ಸೆರೆಹಾಕುವನು.
[15] ನೋಡಿರಿ, ಆತನು ನೀರುಗಳನ್ನು ತಡೆದರೆ ಅವು ಬತ್ತಿಹೋಗುತ್ತವೆ; ಆತನು ನೀರುಗಳನ್ನು ಬಿಟ್ಟರೆ, ಅವು ಭೂಮಿಯನ್ನು ಹಾಳುಮಾಡುತ್ತವೆ.
[16] ಆತನಲ್ಲಿ ಬಲವೂ, ಸಾಮರ್ಥ್ಯವೂ ಉಂಟು; ತಪ್ಪಿದವನೂ, ತಪ್ಪಿಸಿದವನೂ ಆತನಿಗೆ ಅಧೀನರಾಗಿರುವರು.
[17] ಮಂತ್ರಿಗಳನ್ನು ಸುಲಿಗೆಮಾಡಿ ಸಾಗಿಸಿಕೊಂಡು ಹೋಗುವನು, ನ್ಯಾಯಾಧಿಪತಿಗಳನ್ನು ಹುಚ್ಚರನ್ನಾಗಿ ಮಾಡುವನು.
[18] ಅರಸರು ಹಾಕಿದ ಬಂಧನವನ್ನು ಬಿಚ್ಚಿಬಿಟ್ಟು ಅವರ ಸೊಂಟಕ್ಕೆ ನಡುಕಟ್ಟನ್ನು ಬಿಗಿಯುವನು.
[19] ಯಾಜಕರನ್ನು ಸುಲಿಗೆಮಾಡಿ ಸಾಗಿಸಿಕೊಂಡು ಹೋಗುವನು, ಪ್ರಧಾನರನ್ನು ದೊಬ್ಬಿಬಿಡುವನು.
[20] ಆಲೋಚನಾಕರ್ತರ ವಾಕ್ಚಾತುರ್ಯವನ್ನು ಕುಗ್ಗಿಸುತ್ತಾನೆ, ಹಿರಿಯರ ವಿವೇಕವನ್ನು ತೆಗೆದುಹಾಕುವನು.
[21] ಪ್ರಭುಗಳಿಗೆ ಅವಮಾನವನ್ನು ಉಂಟುಮಾಡಿ ಬಲಿಷ್ಠರ ನಡುಕಟ್ಟನ್ನು ಸಡಿಲಿಸುವನು.
[22] ಅಗಾಧ ವಿಷಯಗಳನ್ನು ಕತ್ತಲೊಳಗಿಂದ ಬಯಲಿಗೆ ತಂದು ಗಾಢಾಂಧಕಾರವನ್ನು ಪ್ರಕಾಶಗೊಳಿಸುವನು.
[23] ಜನಾಂಗಗಳನ್ನು ವೃದ್ಧಿಗೊಳಿಸಿ ನಾಶಪಡಿಸುವನು, ಅವುಗಳನ್ನು ವಿಸ್ತರಿಸಿ ಗಡೀಪಾರುಮಾಡುವನು.
[24] ಪ್ರಜಾಪ್ರಮುಖರ ಬುದ್ಧಿಯನ್ನು ತೊಲಗಿಸಿ, ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವನು.
[25] ಅವರು ಬೆಳಕಿಲ್ಲದ ಕತ್ತಲಲ್ಲಿ ತಡಕಾಡುವರು; ಅವರನ್ನು ಅಮಲೇರಿದವರಂತೆ ಓಲಾಡಿಸಿ ತಡವರಿಸುವಂತೆ ಮಾಡುವನು.”