[1] ಭೂಲೋಕದಲ್ಲಿ ಮನುಷ್ಯನಿಗೆ ದುಡಿಯುವ ಕಾಲ ಉಂಟಲ್ಲವೇ. ಅವನ ದಿನಗಳು ಜೀತದಾಳಿನ ದಿನಗಳಂತೆ ಕಳೆಯುತ್ತವೆ.
[2] ನಾನು ಸಂಜೆಯನ್ನು ಬಯಸುವ ದಾಸನಂತೆಯೂ, ಕೂಲಿಯನ್ನು ನಿರೀಕ್ಷಿಸುವ ಆಳಿನಂತೆಯೂ ಇದ್ದೇನೆ.
[3] ಬೇಸರಿಕೆಯ ಮಾಸಗಳೂ, ಆಯಾಸದ ರಾತ್ರಿಗಳೂ ನನ್ನ ಪಾಲಿಗೆ ನೇಮಕವಾಗಿವೆ.
[4] ಮಲಗುವ ವೇಳೆಯಲ್ಲಿ ಯಾವಾಗ ಏಳುವೆನೋ ಅಂದುಕೊಳ್ಳುವೆನು; ರಾತ್ರಿಯು ಬೆಳೆಯುತ್ತಾ ಹೋಗುತ್ತದೆ. ಉದಯದವರೆಗೂ ಹೊರಹೊರಳಿ ಸಾಕಾಗುತ್ತದೆ.
[5] ಹುಳಗಳೂ, ಮಣ್ಣುಹಕ್ಕಳೆಗಳೂ ನನ್ನ ಮಾಂಸವನ್ನು ಮುಸುಕಿವೆ. (ಬಿರಿದ) ಚರ್ಮವು ಕೂಡುತ್ತಾ ಬಂದು ಬಿರಿಯುತ್ತದೆ.
[6] ನನ್ನ ದಿನಗಳು ಮಗ್ಗದ ಲಾಳಿಗಿಂತ ವೇಗವಾಗಿ, ನಿರೀಕ್ಷೆಯಿಲ್ಲದೆ ಕಳೆದು ಹೋಗುತ್ತವೆ.
[7] ನನ್ನ ಜೀವವು ಗಾಳಿಯಂತೆ ಇದೆಯೆಂತಲೂ, ನನ್ನ ಕಣ್ಣು ಇನ್ನು ಸುಖವನ್ನು ಕಾಣುವುದಿಲ್ಲವೆಂತಲೂ ನೆನಪು ಮಾಡಿಕೋ.
[8] ನನ್ನನ್ನು ನೋಡುವವನ ಕಣ್ಣಿಗೆ ನಾನು ಕಾಣಿಸುವುದಿಲ್ಲ, ನಿನ್ನ ಕಣ್ಣುಗಳು ನನ್ನ ಕಡೆ ಇದ್ದರೂ ನಾನು ಇರುವುದಿಲ್ಲ.
[9] ಮೋಡ ಹರಿದು ಮಾಯವಾಗುವಂತೆ, ಪಾತಾಳಕ್ಕೆ ಇಳಿದು ಹೋದವನು ತಿರುಗಿ ಬರುವುದಿಲ್ಲ.
[10] ಅವನು ತನ್ನ ಮನೆಗೆ ಪುನಃ ಸೇರುವುದಿಲ್ಲ, ಇನ್ನು ಮೇಲೆ ಅವನ ನಿವಾಸಕ್ಕೆ ಅವನ ಪರಿಚಯ ಇರುವುದಿಲ್ಲ.
[11] ನಾನಂತೂ ಬಾಯಿಮುಚ್ಚುವುದಿಲ್ಲ; ಆತ್ಮವೇದನೆಯಿಂದ ಮಾತನಾಡುವೆನು, ಮನೋವ್ಯಥೆಯಿಂದ ಪ್ರಲಾಪಿಸುವೆನು.
[12] ನೀನು ನನ್ನ ಮೇಲೆ ಕಾವಲಿಡುವುದೇಕೆ? ನಾನೇನು ಸಮುದ್ರವೋ, ಸಾಗರವೆಂಬ ಘಟಸರ್ಪವೋ?
[13] ನನ್ನ ಹಾಸಿಗೆಯು ನನ್ನನ್ನು ಸಂತೈಸುವುದು, ನನ್ನ ಮಂಚವು ನನ್ನ ಬಾಧೆಯನ್ನು ಹೊರುವುದು ಅಂದುಕೊಳ್ಳುವಾಗ
[14] ನೀನು ಸ್ವಪ್ನಗಳಿಂದ ನನ್ನನ್ನು ಬೆದರಿಸಿ, ದರ್ಶನಗಳ ಮೂಲಕ ಭಯಪಡಿಸುವಿ.
[15] ನನ್ನ ಆತ್ಮವು ಈ ಅಸ್ಥಿಪಂಜರದಲ್ಲಿ ಉಳಿಯುವುದಕ್ಕಿಂತಲೂ, ಉಸಿರುಕಟ್ಟಿ ಸಾಯುವುದೇ ಲೇಸೆಂದು ಬಯಸುತ್ತದೆ.
[16] ನಾನು ಬೇಸರಗೊಂಡಿದ್ದೇನೆ, ಹೀಗೆ ನಿರಂತರ ಬದುಕುವುದಕ್ಕೆ ಇಷ್ಟವಿಲ್ಲ. ನನ್ನನ್ನು ಬಿಟ್ಟುಬಿಡು; ನನ್ನ ದಿನಗಳು ಉಸಿರಿನಂತಿವೆ.
[17] ಮಾನವನು ಎಷ್ಟರವನು, ಅವನನ್ನು ನೀನು ಏಕೆ ಲಕ್ಷಿಸಬೇಕು? ಅವನಲ್ಲಿ ಏಕೆ ಮನಸ್ಸಿಡಬೇಕು?
[18] ದಿನಂಪ್ರತಿ ಅವನ ಮೇಲೆ ಲಕ್ಷ್ಯವಿಟ್ಟು, ಕ್ಷಣಕ್ಷಣಕ್ಕೂ ಅವನನ್ನು ಪರಿಶೋಧಿಸುವುದೇಕೆ?
[19] ಇನ್ನೆಷ್ಟರವರೆಗೆ ನೀನು ನನ್ನ ಕಡೆಯಿಂದ ದೃಷ್ಟಿ ತಿರುಗಿಸದೆ ಇರುವಿ? ಉಗುಳನ್ನು ನುಂಗುವಷ್ಟು ಕಾಲವಾದರೂ ನನ್ನನ್ನು ಬಿಡುವುದಿಲ್ಲವೇ?
[20] ಮನುಷ್ಯರ ಮೇಲೆ ಕಾವಲಿಡುವವನೇ, ನಾನು ಪಾಪ ಮಾಡಿದ್ದರೂ ನನ್ನ ಕೃತ್ಯದಿಂದ ನಿನಗೆ ಏನಾಯಿತು? ನನ್ನನ್ನು ಶಿಕ್ಷೆಗೆ ಗುರಿಮಾಡಿಕೊಂಡದ್ದೇಕೆ? ನನಗೆ ನಾನೇ ಭಾರವಾಗಿದ್ದೇನೆ.
[21] ನೀನು ನನ್ನ ಅಪರಾಧವನ್ನು ಕ್ಷಮಿಸಿ ನನ್ನ ದೋಷವನ್ನು ಏಕೆ ಪರಿಹರಿಸುವುದಿಲ್ಲ? ನಾನು ಈಗ ಮಣ್ಣಿನಲ್ಲಿ ಮಲಗಿಕೊಳ್ಳುವೆನು; ನೀನು ನನ್ನನ್ನು ಹುಡುಕುವಾಗ ನಾನು ಇಲ್ಲದೆ ಹೋಗಿರುವೆನು.