[1] ಈಗಲಾದರೋ ನನಗಿಂತ ಚಿಕ್ಕವಯಸ್ಸಿನವರು ನನ್ನನ್ನು ಪರಿಹಾಸ್ಯಮಾಡುತ್ತಾರೆ; ಇವರ ಹೆತ್ತವರನ್ನು ನನ್ನ ಕುರಿ ಮಂದೆಯ ನಾಯಿಗಳ ಸಂಗಡ ಸೇರಿಸುವುದಕ್ಕೂ ಉದಾಸಿನ ಮಾಡಿದೆನು.
[2] ಅವರ ಕೈ ಬಲದಿಂದ ನನಗೆ ಏನಾದೀತು? ಅವರ ಪುಷ್ಟಿಯು ಕುಗ್ಗಿಹೋಗಿದೆಯಷ್ಟೆ.
[3] ಅವರು ಕೊರತೆಯಿಂದಲೂ, ಹಸಿವಿನಿಂದಲೂ ಸೊರಗಿ, ನಿನ್ನೆಯವರೆಗೂ ಹಾಳುಬೀಳಾದ ಒಣ ನೆಲವನ್ನು ನೆಕ್ಕುವರು.
[4] ಪೊದೆಗಳಲ್ಲಿ ಉಪ್ಪಿನ ಸೊಪ್ಪನ್ನು ಕಿತ್ತು, ತಿಂದು ಜಾಲಿಯ ಬೇರುಗಳನ್ನೂ ಆಹಾರಮಾಡಿಕೊಳ್ಳುವರು.
[5] ಜನರು ಅವರನ್ನು ತಮ್ಮ ಮಧ್ಯದಿಂದ ತಳ್ಳಿಬಿಟ್ಟು, ಕಳ್ಳನನ್ನು ಓಡಿಸುವ ಹಾಗೆ ಕೂಗಾಡಿ ಓಡಿಸುವರು.
[6] ಅವರು ಭಯಂಕರವಾದ ತಗ್ಗುಗಳ ಸಂದುಗಳಲ್ಲಿ ವಾಸಿಸತಕ್ಕವರು, ಭೂಮಿಯಲ್ಲಿಯೂ, ಬಂಡೆಗಳಲ್ಲಿಯೂ ಇರುವ ಗುಹೆಗಳೇ ಅವರ ಮನೆಗಳು.
[7] ಪೊದೆಗಳ ಮಧ್ಯದಲ್ಲಿ ಅರಚುವರು ಕತ್ತೆಗಳಂತೆ, ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುವರು.
[8] ಮೂರ್ಖರ ಮಕ್ಕಳಾದ ಈ ನೀಚ ಜಾತಿಯವರು ದೇಶಭ್ರಷ್ಟರು. ಅವರು ಕೊರಡೆಗಳ ಪೆಟ್ಟಿನಿಂದ ದೇಶದಿಂದ ಹೊರಹಾಕಲ್ಪಟ್ಟಿದ್ದರೆ.
[9] ಈಗಲಾದರೋ ನನ್ನ ಮೇಲೆ ಗೇಲಿಮಾಡುವ ಹಾಡುಗಳನ್ನು ಕಟ್ಟುವರು. ಮತ್ತು ಅವರ ಕಟ್ಟುಕಥೆಗಳಿಗೆ ಆಸ್ಪದವಾಗಿದ್ದೇನೆ.
[10] ನನಗೆ ಅಸಹ್ಯಪಟ್ಟು ದೂರ ನಿಂತು, ನನ್ನ ಮೇಲೆ ಉಗುಳುವುದಕ್ಕೂ ಹಿಂದೆಗೆಯರು.
[11] ದೇವರು ತಾನು ಹಾಕಿದ್ದ ಕಟ್ಟನ್ನು ಸಡಲಿಸಿ ನನ್ನನ್ನು ಬಾಧಿಸುವುದಕ್ಕೆ ಅವರನ್ನು ಬಿಟ್ಟಿದ್ದಾನೆ. ಅವರು ನನ್ನ ಎದುರಿನಲ್ಲಿಯೇ ಕಡಿವಾಣವನ್ನು ಕಿತ್ತು ಹಾಕಿದ್ದಾರೆ.
[12] ಆ ಕಲಹಗಾರರು ನನ್ನ ಬಲಗಡೆ ಎದ್ದು, ನನ್ನ ಕಾಲುಗಳನ್ನು ಹಿಂದಕ್ಕೆ ತಳ್ಳುತ್ತಾ ನನ್ನ ನಾಶಕ್ಕಾಗಿ ಹೊಂಚು ಹಾಕಿದ್ದಾರೆ.
[13] ಅವರು ನನ್ನ ದಾರಿಯನ್ನು ಕಡಿದು, ನನ್ನ ಉಪದ್ರವವನ್ನು ಹೆಚ್ಚಿಸುತ್ತಾರೆ; ಅವರನ್ನು ಎದುರಿಸತಕ್ಕ ಸಹಾಯಕನು ಯಾರೂ ಇಲ್ಲ.
[14] ಕೋಟೆ ಬಿರುಕುಗಳಲ್ಲಿ ನುಗ್ಗಿ, ಹಾಳುಬೀಳಿನಲ್ಲಿ ನಿಂತಿರುವ ನನ್ನ ಮೇಲೆ ಹೊರಳುತ್ತಾರೆ.
[15] ಅಪಾಯಗಳು ನನ್ನ ಮೇಲೆ ತಿರುಗಿಬಿದ್ದು; ನನ್ನ ಮಾನವನ್ನು ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿವೆ; ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಯಿತು.
[16] ಈಗ ನನ್ನ ಆತ್ಮವು ಕರಗಿಹೋಗಿದೆ, ಬಾಧೆಯ ದಿನಗಳು ನನ್ನನ್ನು ಹಿಡಿದುಕೊಂಡಿವೆ.
[17] ರಾತ್ರಿಯು ನನ್ನ ಎಲುಬುಗಳನ್ನು ಕೊರೆದು ಕೀಳುತ್ತದೆ, ನನ್ನನ್ನು ಕಚ್ಚುತ್ತಿರುವ ಸಂಕಟಗಳು ಸುಮ್ಮನಿರುವುದಿಲ್ಲ.
[18] ನನ್ನ ಬಟ್ಟೆಯು ರೋಗದ ಅಧಿಕ ಬಲದಿಂದ ಕೆಟ್ಟುಹೋಗಿ; ಅಂಗಿಯ ಕೊರಳ ಪಟ್ಟಿಯ ಹಾಗೆ ನನ್ನನ್ನು ಸುತ್ತಿಕೊಂಡಿದೆ.
[19] ಆತನು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾನೆ, ಧೂಳುಬೂದಿಗಳಿಗೆ ಸಮಾನನಾಗಿದ್ದೇನೆ.
[20] ಓ ದೇವರೇ ನಾನು ನಿನಗೆ ಮೊರೆಯಿಟ್ಟರೂ ನೀನು ಉತ್ತರಕೊಡುವುದಿಲ್ಲ, ಎದ್ದು ನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿ.
[21] ನೀನು ನನಗೆ ಕ್ರೂರನಾಗಿ ಮಾರ್ಪಟ್ಟಿದ್ದಿ, ನಿನ್ನ ಕೈಬಲದಿಂದ ನನ್ನನ್ನು ಹಿಂಸಿಸುತ್ತಿ.
[22] ನನ್ನನ್ನು ಬಿರುಗಾಳಿಗೆ ಎತ್ತಿ ತೂರಿಬಿಟ್ಟು, ಅದರ ಆರ್ಭಟದಲ್ಲಿ ಮಾಯಮಾಡುತ್ತಿ.
[23] ನೀನು ನನ್ನನ್ನು ಮರಣಕ್ಕೆ ಗುರಿಮಾಡಿ, ಸಮಸ್ತ ಜೀವಿಗಳು ಹೋಗಬೇಕಾದ ಮನೆಗೆ ಸೇರಿಸುವಿಯೆಂದು ನನಗೆ ಗೊತ್ತೇ ಇದೆ.
[24] ಆದರೂ ನಾಶಕ್ಕೆ ಒಳಗಾದವನು ಕೈಚಾಚುವುದಿಲ್ಲವೋ? ಆಪತ್ತಿಗೆ ಒಳಪಟ್ಟವನು ಕೂಗಿಕೊಳ್ಳುವುದಿಲ್ಲವೋ?
[25] ಕಷ್ಟಾನುಭವಿಯನ್ನು ಕಂಡು ನಾನು ಕಣ್ಣೀರಿಡಲಿಲ್ಲವೇ? ದಿಕ್ಕಿಲ್ಲದವನಿಗೆ ದುಃಖಿಸುವವನೂ ಆಗಿದ್ದೇನಷ್ಟೆ.
[26] ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರುವಲ್ಲಿ ಕೇಡು ಬಂತು, ಬೆಳಕನ್ನು ಎದುರು ನೋಡುತ್ತಿರುವಾಗ ಕತ್ತಲಾಯಿತು.
[27] ನನ್ನ ಹೃದಯವು ಕುದಿಯುತ್ತಿದೆ, ಅದಕ್ಕೆ ಶಾಂತಿಯಿಲ್ಲ; ಬಾಧೆಯ ದಿನಗಳು ನನಗೆ ಒದಗಿವೆ.
[28] ಸಂತೈಸುವ ಸೂರ್ಯನಿಲ್ಲದೆ; ಮಂಕುಬಡಿದಂತೆ ಅಲೆಯುತ್ತಾ ಸಭೆಯ ಮಧ್ಯನಿಂತು ಅಂಗಲಾಡುತ್ತಿದ್ದೇನೆ. ಸಂಘದಲ್ಲಿ ನಿಂತು ಅಂಗಲಾಚಿಕೊಳ್ಳುತ್ತೇನೆ.
[29] ನಾನು ನರಿಗಳ ತಮ್ಮನೂ, ಉಷ್ಟ್ರಪಕ್ಷಿಗಳ ಗೆಳೆಯನೂ ಆಗಿದ್ದೇನೆ.
[30] ನನ್ನ ಚರ್ಮವು ಕರಿದಾಗಿ ಉದುರುತ್ತದೆ, ನನ್ನ ಎಲುಬುಗಳು ತಾಪದಿಂದ ಬೆಂದಿದೆ.
[31] ಇದರಿಂದ ನನ್ನ ಕಿನ್ನರಿಯಲ್ಲಿ ಗೋಳಾಟವೂ, ನನ್ನ ಕೊಳಲಿನಲ್ಲಿ ಅಳುವ ಧ್ವನಿಯೂ ಕೇಳಿಸುತ್ತವೆ.