[1] ಆ ಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು,
[2] “ಮನುಷ್ಯ ಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು? ಒಬ್ಬನು ವಿವೇಕಿಯಾಗಿ ನಡೆದುಕೊಂಡರೆ ಅವನಿಗೆ ಪ್ರಯೋಜನವಷ್ಟೆ.
[3] ನೀನು ನೀತಿವಂತನಾಗಿರುವುದು ಸರ್ವಶಕ್ತನಾದ ದೇವರಿಗೆ ಸುಖವೋ? ನಿನ್ನ ನಡತೆಯನ್ನು ಸರಿಪಡಿಸಿಕೊಂಡರೆ ಆತನಿಗೇನು ಲಾಭ?
[4] ನಿನ್ನ ಭಯಭಕ್ತಿಗಾಗಿಯೇ ಆತನು ನಿನ್ನನ್ನು ಶಿಕ್ಷಿಸಿ ನ್ಯಾಯತೀರ್ಪಿಗೆ ಗುರಿಮಾಡುತ್ತಾನೋ?
[5] ನಿನ್ನ ಕೆಟ್ಟತನವು ಬಹಳವಲ್ಲವೇ? ನಿನ್ನ ಪಾಪಗಳಿಗೆ ಮಿತಿಯೇ ಇಲ್ಲವಲ್ಲಾ?
[6] ನೋಡು, ನಿನ್ನ ಸಹೋದರನಿಂದ ಸುಮ್ಮನೆ ಒತ್ತೆಯಾಳುಗಳನ್ನು ತೆಗೆದುಕೊಂಡಿದ್ದಿ, ಬೆತ್ತಲೆಯವರ ಬಟ್ಟೆಯನ್ನೂ ಸೆಳಕೊಂಡಿದ್ದಿ.
[7] ಬಳಲಿದವನಿಗೆ ನೀರು ಕೊಡದೆ, ಹಸಿದವನಿಗೆ ಅನ್ನಕೊಡದೆ ಹೋಗಿದ್ದಿ.
[8] ಬಲಿಷ್ಠನಾದರೆ ದೇಶವೇ ಅವನದು, ಅಲ್ಲಿ ಸನ್ಮಾನ ಯೋಗ್ಯನಾಗಿ ವಾಸಿಸತಕ್ಕವನು ಅವನೇ.
[9] ನೀನು ವಿಧವೆಯರನ್ನು ಬರಿಗೈಯಾಗಿ ಕಳುಹಿಸಬಿಟ್ಟು, ಅನಾಥರ ಕೈಗಳನ್ನು ಮುರಿದಿದ್ದಿ.
[10] ಆದಕಾರಣ ಬೋನುಗಳು ನಿನ್ನ ಸುತ್ತಲು ಕಾದಿವೆ, ಫಕ್ಕನೆ ಉಂಟಾದ ಭಯವು ನಿನ್ನನ್ನು ತಲ್ಲಣಗೊಳಿಸುತ್ತದೆ.
[11] ಇದಲ್ಲದೆ ದಾರಿಕಾಣದಂತೆ ಕತ್ತಲೂ, ಮುಸುಕಿ ಜಲಪ್ರವಾಹವೂ ನಿನ್ನನ್ನು ಆವರಿಸುತ್ತವೆ.
[12] ದೇವರು ಉನ್ನತ ಆಕಾಶದಲ್ಲಿಲ್ಲವೋ? ನಕ್ಷತ್ರಮಂಡಲದ ತುದಿಯು ಎಷ್ಟೋ ಎತ್ತರ, ನೋಡು!
[13] ನೀನಾದರೋ, ‘ದೇವರಿಗೆ ಏನು ಗೊತ್ತು? ಕಾರ್ಗತ್ತಲಿನ ಆಚೆಯಿಂದ ನ್ಯಾಯತೀರಿಸಬಲ್ಲನೋ?
[14] ದಟ್ಟವಾದ ಮೋಡಗಳು ಆತನಿಗೆ ಪರದೆಯ ಹಾಗಿರುವುದರಿಂದ ನೋಡಲಾರನು; ಆಕಾಶಮಂಡಲದ ಮೇಲೆ ನಡೆದಾಡುತ್ತಾನೆ’ ಎಂದು ಹೇಳಿಕೊಂಡೆಯಲ್ಲವೇ.
[15] ಕೆಟ್ಟವರು ಮೊದಲಿನಿಂದಲೂ, ನಡೆದ ದಾರಿಯನ್ನು ನೀನು ಹಿಡಿಯುವಿಯಾ?
[16] ಅಕಾಲ ಮರಣವು ಅವರನ್ನು ಅಪಹರಿಸಿತು, ಅವರಿಗೆ ಆಧಾರವಾಗಿದ್ದ ನೆಲವು ನೀರಾಗಿ ಹರಿಯಿತು.
[17] ಅವರು ಆತನನ್ನು ಕುರಿತು, ‘ನಮ್ಮಿಂದ ತೊಲಗಿ ಹೋಗು, ಸರ್ವಶಕ್ತನಾದ ದೇವರು ನಮಗೇನು ಮಾಡಾನು’ ಎಂದು ಹೇಳಿಕೊಳ್ಳುತ್ತಿದ್ದರು.
[18] ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದನು. ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
[19] ನೀತಿವಂತರು ಇದನ್ನು ನೋಡಿ ಹಿಗ್ಗುವರು, ನಮ್ಮ ವಿರುದ್ಧವಾಗಿ ಎದ್ದವರು ಹಾಳಾಗಿಯೇ ಹೋದರು.
[20] ‘ಅವರ ಉಳಿದ ಸೊತ್ತನ್ನು ಬೆಂಕಿಯು ನಾಶಮಾಡಿತು’ ಎಂದು, ನಿರ್ದೋಷಿಗಳು ದುಷ್ಟರನ್ನು ಅಣಕಿಸುವರು.
[21] ದೇವರ ಚಿತ್ತಕ್ಕೆ ಒಳಪಟ್ಟು ಸಮಾಧಾನ ಹೊಂದು, ಇದರಿಂದ ನಿನಗೆ ಶುಭವಾಗುವುದು.
[22] ಆತನ ಬಾಯಿಂದಲೇ ಬೋಧನೆಯನ್ನು ಸ್ವೀಕರಿಸಿ, ಆತನ ಮಾತುಗಳನ್ನು ಹೃದಯದಲ್ಲಿ ಇಟ್ಟುಕೋ.
[23] ನೀನು ಸರ್ವಶಕ್ತನಾದ ದೇವರ ಕಡೆಗೆ ತಿರುಗಿಕೊಂಡು, ನಿನ್ನ ಗುಡಾರಗಳಿಂದ ಅನ್ಯಾಯವನ್ನು ದೂರಮಾಡಿದರೆ ಉದ್ಧಾರವಾಗುವಿ.
[24] ನಿನ್ನ ಚಿನ್ನವನ್ನು ಧೂಳಿನಲ್ಲಿ ಹಾಕು, ಓಫೀರ್ ದೇಶದ ಅಪರಂಜಿಯನ್ನು ಹೊಳೆಗಳ ಬಂಡೆಗಳಿಗೆ ಎಸೆದುಬಿಡು.
[25] ಸರ್ವಶಕ್ತನಾದ ದೇವರು ನಿನಗೆ ಚಿನ್ನವಾಗಿಯೂ, ಬೆಳ್ಳಿಯ ರಾಶಿಗಳಾಗಿಯೂ ಇರುವನು.
[26] ಆಗ ನೀನು ಸರ್ವಶಕ್ತನಾದ ದೇವರಲ್ಲಿ ಆನಂದಪಟ್ಟು, ದೇವರ ಅಭಿಮುಖನಾಗಿರುವೆ.
[27] ನೀನು ಪ್ರಾರ್ಥಿಸುವಿ, ಆತನು ಲಾಲಿಸುವನು, ಆತನಿಗೆ ಹರಕೆಗಳನ್ನು ಒಪ್ಪಿಸುವಿ.
[28] ಯಾವುದನ್ನು ಸಂಕಲ್ಪಿಸಿಕೊಳ್ಳುವಿಯೋ ಅದು ನಿನಗೆ ನೆರವೇರುವುದು, ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.
[29] ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ಮೇಲಕ್ಕೆ ಎತ್ತಲ್ಪಡುವೆನು ಅಂದುಕೊಳ್ಳುವಿ, ಆಗ ದೀನದೃಷ್ಟಿಯುಳ್ಳ ನಿನ್ನನ್ನು ಆತನು ರಕ್ಷಿಸುವನು.
[30] ನಿರ್ದೋಷಿಯನ್ನು ಆತನು ತಪ್ಪಿಸುವನು, ಹೌದು, ಆತನು ಇಂಥವನನ್ನು ತಪ್ಪಿಸುವುದಕ್ಕೆ ನಿನ್ನ ಕೈಗಳ ಪರಿಶುದ್ಧತೆಯೇ ಕಾರಣವಾಗಿರುವುದು.”