Skip to content
Opens in a new window
Listen to this chapter • 3:39

[1] ಆ ಮೇಲೆ ಯೋಬನು ಮತ್ತೆ ಇಂತೆಂದನು,

[2] “ಆಹಾ, ತ್ರಾಸಿನಲ್ಲಿ ನನ್ನ ವಿಪತ್ತನ್ನು ಇಟ್ಟು; ಅದರಿಂದ ನನ್ನ ಕರಕರೆಯ ಭಾರವನ್ನು ತೂಕ ಮಾಡುವುದಾದರೆ ಎಷ್ಟೋ ಒಳ್ಳೆಯದು.

[3] ಆಗ ನನ್ನ ವಿಪತ್ತು ಸಮುದ್ರದ ಮರಳಿಗಿಂತಲೂ ಹೆಚ್ಚು ಭಾರವುಳ್ಳದ್ದೆಂದು ಗೊತ್ತಾಗುವುದು ಎಂದು ದುಡುಕಿನಿಂದ ಮಾತನಾಡಿದ್ದೇನೆ.

[4] ಸರ್ವಶಕ್ತನಾದ ದೇವರ ಬಾಣಗಳು ನನ್ನಲ್ಲಿ ನಾಟಿರುತ್ತವೆ, ನನ್ನ ಆತ್ಮವು ಅವುಗಳ ವಿಷವನ್ನು ಹೀರಿಕೊಳ್ಳುತ್ತದೆ; ದೇವರು ಕಳುಹಿಸಿದ ಅಪಾಯಗಳು ನನಗೆ ವಿರುದ್ಧವಾಗಿ ವ್ಯೂಹಕಟ್ಟಿವೆ.

[5] ಕಾಡುಕತ್ತೆಗೆ ಹುಲ್ಲಿರಲು ಅರಚೀತೇ? ಎತ್ತಿಗೆ ಮೇವಿರಲು ಕೂಗೀತೇ?

[6] ಸಪ್ಪೆಯನ್ನು ಉಪ್ಪಿಲ್ಲದೆ ತಿನ್ನಬಹುದೇ? ಮೊಟ್ಟೆಯಲ್ಲಿರುವ ಲೋಳೆಯು ರುಚಿಯೇ?

[7] ಇಂಥಾ ಆಹಾರವು ನನಗೆ ಅಸಹ್ಯವಾಗಿದೆ; ಮುಟ್ಟಲಾರೆನು.

[8] ಅಯ್ಯೋ, ನನ್ನ ವಿಜ್ಞಾಪನೆಯು ನೆರವೇರುವುದಿಲ್ಲವೇ, ನಾನು ಬಯಸುವುದನ್ನು ದೇವರು ಕೊಡುವುದಿಲ್ಲವೇ?

[9] ನಾನು ನಾಶವಾಗುವುದು ದೇವರಿಗೆ ಮೆಚ್ಚಿಕೆಯಾಗುವುದಾದರೆ, ತನ್ನ ಕೈ ಚಾಚಿ ನನ್ನನ್ನು ಸಂಹರಿಸಿದರೆ ಒಳ್ಳೆಯದು.

[10] ಆಗ ನಾನು ಆದರಣೆ ಹೊಂದಿ ಮಿತಿಯಿಲ್ಲದ ಯಾತನೆಯಲ್ಲಿಯೂ ಉಲ್ಲಾಸಿಸುವೆನು. ಪರಿಶುದ್ಧ ದೇವರ ಆಜ್ಞೆಗಳನ್ನು ನಾನು ತೊರೆದುಬಿಟ್ಟವನಲ್ಲ.

[11] ನನ್ನ ಬಲವು ಎಷ್ಟರದು, ನಾನು ಹೇಗೆ ಕಾದುಕೊಳ್ಳಲಿ? ನನ್ನ ಅಂತ್ಯಸ್ಥಿತಿಯೇನು, ನಾನು ತಾಳ್ಮೆಯಿಂದಿರುವುದೇಕೆ?

[12] ನನ್ನ ಬಲವು ಕಲ್ಲಿನ ಬಲವೋ? ಅಥವಾ ನನ್ನ ಶರೀರವು ತಾಮ್ರದ್ದೋ?

[13] ನನ್ನಲ್ಲಿ ಏನೂ ಸಹಾಯವಿಲ್ಲವಲ್ಲಾ, ನನ್ನ ಸಾಮರ್ಥ್ಯವು ತೊಲಗಿಹೋಗಿದೆ.

[14] ಒಬ್ಬನು ಮನಗುಂದಿ ಸರ್ವಶಕ್ತನಾದ ದೇವರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ; ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.

[15] ನನ್ನ ಸಹೋದರರಾದರೋ ತೊರೆಯ ಹಾಗೂ, ಪ್ರವಾಹವು ಹಾದುಹೋಗಿ ಬತ್ತಿದ ಹಳ್ಳದ ಹಾಗೂ ದ್ರೋಹಿಗಳಾಗಿದ್ದಾರೆ.

[16] ಹಿಮವು ಅಡಗಿರುವ ಪ್ರವಾಹಗಳು, ಮಂಜುಗಡ್ಡೆಯಿಂದ ಕೂಡಿ ಕಪ್ಪಾಗಿರುವವು.

[17] ಬೇಸಿಗೆ ಬರುತ್ತಲೇ ಮಾಯವಾಗುವವು, ಸೆಕೆಯುಂಟಾದಾಗ ಅವು ಬತ್ತಿ ಕಾಣಿಸದೆ ಹೋಗುವವು.

[18] ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣಮಾಡುವ ವರ್ತಕರ ಗುಂಪುಗಳು ಓರೆಯಾಗಿ, ಮರುಭೂಮಿಗೆ ತಿರುಗಿ ನಾಶವಾಗುತ್ತವೆ.

[19] ತೇಮದ ಗುಂಪಿನವರು ಕಣ್ಣೆತ್ತಿ ನೋಡಿದರು, ಶೆಬದ ಸಮೂಹದವರು ಆ ತೊರೆಗಳನ್ನು ಹಾರೈಸಿದರು.

[20] ಅಲ್ಲಿಗೆ ಸೇರಿ ಆಶಾಭಂಗಪಟ್ಟರು, ನಂಬಿದಷ್ಟೂ ನಿರೀಕ್ಷೆಗೆಟ್ಟರು.

[21] ಈಗ ನೀವು ಹಾಗೆಯೇ ಇದ್ದೀರಿ. (ನನ್ನ) ವಿಪತ್ತನ್ನು ಕಂಡ ಕೂಡಲೆ ಹೆದರಿದಿರಿ.

[22] ನನ್ನ ಬಿನ್ನಹವೇನು? ‘ನನಗೆ ದಾನಮಾಡಿರಿ’ ಎಂದು ಬಿನ್ನವಿಸಿದೆನೋ? ನಿಮ್ಮ ಆಸ್ತಿಯಿಂದ, ‘ನನಗಾಗಿ ಲಂಚಕೊಡಿರಿ’ ಎಂದೆನೋ?

[23] ವಿರೋಧಿಯ ಕೈಯಿಂದ, ‘ನನ್ನನ್ನು ರಕ್ಷಿಸಿರಿ’ ಎಂದು ಕೇಳಿಕೊಂಡೆನೋ? ಬಲಾತ್ಕರಿಸುವವರಿಂದ, ‘ನನ್ನನ್ನು ವಿಮೋಚಿಸಿರಿ’ ಎಂದು ಬೇಡಿಕೊಂಡೆನೋ?

[24] ನನಗೆ ಉಪದೇಶಮಾಡಿ ನನ್ನ ತಪ್ಪನ್ನು ನನಗೆ ತಿಳಿಯಪಡಿಸಿರಿ, ನಾನು ಮೌನದಿಂದಿರುವೆನು.

[25] ನೀತಿಯ ನುಡಿಗಳು ಎಷ್ಟೋ ಖಂಡಿತವಾಗಿವೆ, ಆದರೆ ನಿಮ್ಮ ಖಂಡನೆಯು ನಿರಾರ್ಥಕ?

[26] ಬರೀ ಮಾತುಗಳಿಂದ ಖಂಡಿಸಬೇಕೆನ್ನುವಿರೋ? ದೆಸೆಗೆಟ್ಟವನ ಮಾತುಗಳು ಗಾಳಿಗೆ ಹೋಗತಕ್ಕವುಗಳಲ್ಲವೇ?

[27] ನೀವು ಚೀಟಿಹಾಕಿ ಅನಾಥನನ್ನು ಕೊಂಡುಕೊಳ್ಳುವವರು; ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.

[28] ಆದುದರಿಂದ ಈಗ ದಯಮಾಡಿ ನನ್ನನ್ನು ನೋಡಿರಿ, ನಿಮ್ಮ ಮುಖದೆದುರಿಗೆ ನಾನು ಸುಳ್ಳಾಡುವೆನೋ?

[29] ದಯವಿಟ್ಟು ನನ್ನ ವಿಚಾರಣೆಗೆ ಅನ್ಯಾಯವಾಗದಿರಲಿ; ಮತ್ತೆ ವಿಮರ್ಶೆ ಮಾಡಿರಿ. ನನ್ನ ವ್ಯಾಜ್ಯವು ನ್ಯಾಯವಾದದ್ದು.

[30] ರುಚಿಗೆ ನನ್ನ ನಾಲಿಗೆಯು ತಪ್ಪುಮಾಡುತ್ತದೋ? ಸತ್ಯಾಸತ್ಯಗಳ, ನ್ಯಾಯಾನ್ಯಾಯಗಳನ್ನು ವಿವೇಚಿಸುವ ಸಾಮರ್ಥ್ಯ ನನಗಿಲ್ಲವೇ?

ಯೋಬನು — Chapters