Skip to content
Opens in a new window
Listen to this chapter • 3:45

[1] ಆಗ ಯೋಬನು ಪುನಃ ಇಂತೆಂದನು,

[2] “ಎಷ್ಟರವರೆಗೆ ನನ್ನ ಆತ್ಮವನ್ನು ನೋಯಿಸಿ, ಮಾತುಗಳಿಂದ ನನ್ನನ್ನು ಜಜ್ಜುತ್ತಿರುವಿರಿ?

[3] ಈವರೆಗೆ ಹತ್ತಾರು ಸಾರಿ ನನ್ನನ್ನು ಅವಮಾನಪಡಿಸಿ ನನಗೆ ಕೇಡುಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಿಲ್ಲವಲ್ಲಾ.

[4] ನಾನು ನಿಜವಾಗಿ ತಪ್ಪುಮಾಡಿದ್ದರೆ ಆ ತಪ್ಪು ನನ್ನದೇ.

[5] ನನ್ನ ವಿರುದ್ಧವಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಂಡು ನನಗಾದ ಅವಮಾನವನ್ನು ನ್ಯಾಯವೆಂದು ಸ್ಥಾಪಿಸುವುದಕ್ಕೆ ನಿಜವಾಗಿ ಇಷ್ಟಪಡುವಿರೋ?

[6] ಹೀಗಾದರೆ ನನ್ನ ನ್ಯಾಯವನ್ನು ತಿರುಗಿಸಿಬಿಟ್ಟು ನನ್ನ ಸುತ್ತಲೂ ತನ್ನ ಬಲೆಯನ್ನೊಡ್ಡಿದವನು ದೇವರೇ ಎಂದು ತಿಳಿದುಕೊಳ್ಳಿರಿ.

[7] ಇಗೋ, ಬಲಾತ್ಕಾರವೆಂದು ನಾನು ಕೂಗಿಕೊಂಡರೂ, ಯಾವ ಉತ್ತರವೂ ಇಲ್ಲ. ನಾನು ಮೊರೆಯಿಟ್ಟರೂ, ನ್ಯಾಯವು ನೆರವೇರದು.

[8] ನಾನು ಮುಂದೆ ಹೋಗದ ಹಾಗೆ ಆತನು ನನ್ನ ದಾರಿಗೆ ಅಡ್ಡಗೋಡೆ ಹಾಕಿ, ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾನೆ.

[9] ನನ್ನ ಘನತೆಯನ್ನು ಸುಲಿದುಬಿಟ್ಟು, ಕಿರೀಟವನ್ನು ನನ್ನ ತಲೆಯಿಂದ ತೆಗೆದುಹಾಕಿದ್ದಾನೆ.

[10] ಆತನು ನನ್ನನ್ನು ಸುತ್ತುಮುತ್ತಲೂ ಕೆಡವಿದ್ದರಿಂದ ಇಲ್ಲದೆ ಹೋದೆನು. ಮರವನ್ನು ಕೀಳುವ ಹಾಗೆ ನನ್ನ ನಿರೀಕ್ಷೆಯನ್ನು ಕಿತ್ತುಬಿಟ್ಟಿದ್ದಾನೆ.

[11] ನನ್ನ ಮೇಲೆ ತನ್ನ ಕೋಪಾಗ್ನಿಯನ್ನು ಧಗಧಗಿಸಿ; ಉರಿಯುವಂತೆ ಮಾಡಿ ನನ್ನನ್ನು ವೈರಿಯೆಂದೆಣಿಸಿದ್ದಾನೆ.

[12] ಆತನ ದಂಡುಗಳು ಒಟ್ಟಿಗೆ ಮುಂದುವರೆದು ನನ್ನ ವಿರುದ್ಧವಾಗಿ ದಿಬ್ಬಹಾಕಿ, ನನ್ನ ಗುಡಾರದ ಸುತ್ತಲೂ ಇಳಿದಿವೆ.

[13] ನನ್ನ ಸಹೋದರರನ್ನು ನನ್ನಿಂದ ಅಗಲಿಸಿದ್ದಾನೆ, ನನ್ನ ಪರಿಚಿತರು ನನ್ನನ್ನು ಸಂಪೂರ್ಣವಾಗಿ ತೊರೆದಿದ್ದಾರೆ.

[14] ನನ್ನ ಬಂಧುಗಳು ನನ್ನನ್ನು ಬಿಟ್ಟುಬಿಟ್ಟಿದ್ದಾರೆ, ನನಗೆ ಪರಿಚಯವಿದ್ದವರು ನನ್ನನ್ನು ಮರೆತಿದ್ದಾರೆ.

[15] ನನ್ನ ಪರಿಜನರೂ, ದಾಸಿಯರೂ ನನ್ನನ್ನು ಅನ್ಯನೆಂದೆಣಿಸುತ್ತಾರೆ, ಅವರ ದೃಷ್ಟಿಗೆ ಪರದೇಶಿಯಾಗಿದ್ದಾನೆ.

[16] ನಾನು ನನ್ನ ಆಳನ್ನು ಕರೆದರೂ ಅವನು ಉತ್ತರಕೊಡುವುದಿಲ್ಲ, ಬಾಯಿ ತೆರೆದು ಬೇಡಿಕೊಳ್ಳಬೇಕಾಗಿ ಬಂತು.

[17] ನನ್ನ ಉಸಿರು ನನ್ನ ಹೆಂಡತಿಗೆ ಅಸಹ್ಯವಾಗಿದೆ, ನನ್ನ ಒಡಹುಟ್ಟಿದವರಿಗೂ ಹೇಸಿಕೆಯಾಗಿದ್ದೇನೆ.

[18] ಚಿಕ್ಕವರೂ ಕೂಡ ನನ್ನನ್ನು ಹೀನೈಸುತ್ತಾರೆ, ನಾನು ಏಳಲು ಪ್ರಯಾಸಪಡುತ್ತಿರುವಾಗ ಅವರ ಹರಟೆಗೆ ಗುರಿಯಾಗುತ್ತೇನೆ.

[19] ನನ್ನ ಆಪ್ತಮಿತ್ರರೆಲ್ಲರೂ ನನ್ನನ್ನು ನೋಡಿ ಹೇಸಿಕೊಳ್ಳುತ್ತಾರೆ; ನನ್ನ ಪ್ರೀತಿಪಾತ್ರರು ಸಹ ನನ್ನ ಮೇಲೆ ತಿರುಗಿಬಿದ್ದಿದ್ದಾರೆ.

[20] ನನ್ನ ಎಲುಬು ಚರ್ಮಕ್ಕೂ, ಮಾಂಸಕ್ಕೂ ಅಂಟಿಹೋಗಿದೆ, ಹಲ್ಲಿನ ಪರೆಯನ್ನು ಮಾತ್ರ ಉಳಿಸಿಕೊಂಡು (ಮರಣಕ್ಕೆ) ಓರೆಯಾಗಿದ್ದೇನೆ.

[21] ನನ್ನ ಮಿತ್ರರೇ, ಕರುಣಿಸಿರಿ, ನೀವಾದರೂ ಕರುಣಿಸಿರಿ! ದೇವರ ಕೈ ನನ್ನನ್ನು ಹೊಡೆಯಿತಲ್ಲಾ.

[22] ದೇವರ ಹಾಗೆ ನೀವೂ ನನ್ನನ್ನು ಏಕೆ ಹಿಂಸಿಸುತ್ತೀರಿ? ನನ್ನನ್ನು ಹಿಂಸಿಸಿ ನಿಮಗೆ ಸಾಕಾಗಲಿಲ್ಲವೋ?

[23] ಆಹಾ, ನನ್ನ ಮಾತುಗಳನ್ನು ಬರೆದಿಟ್ಟರೆ ಎಷ್ಟೋ ಲೇಸು! ಪುಸ್ತಕದಲ್ಲಿ ದಾಖಲಿಸಿದರೆ ಎಷ್ಟೋ ಒಳ್ಳೆಯದು!

[24] ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸ ಎರೆದು, ಶಾಶ್ವತ ಶಾಸನವಾಗಿ ಮಾಡಿದರೆ ನನಗೆ ಎಷ್ಟೋ ಉಪಕಾರ!

[25] ನಾನಂತು ನನ್ನ ನ್ಯಾಯಸ್ಥಾಪಕನು ಜೀವಸ್ವರೂಪನೆಂದು ಬಲ್ಲೆನು, ಕೊನೆಯಲ್ಲಿ ಆತನು ಭೂಮಿಗೆ ಇಳಿದು ಬರುವನು.

[26] ನನ್ನ ಚರ್ಮವು ಹೀಗೆ ಬಿರಿದು ಹಾಳಾದ ಬಳಿಕ, ದೇಹಧಾರಿಯಾಗಿ ದೇವರನ್ನು ನೋಡುವೆನು.

[27] ಕಣ್ಣಾರೆ ಕಾಣುವೆನು, ನಾನೇ ನಾನಾಗಿ ನೋಡುವೆನು, ಮತ್ತೊಬ್ಬನಾಗಿ ಅಲ್ಲ. ನನ್ನ ಹೃದಯವು ಹಂಬಲಿಕೆಯಿಂದ ನನ್ನಲ್ಲಿ ಕುಂದಿದೆ.

[28] ಅವನಿಗೆ, ‘ಆದಷ್ಟು ಹಿಂಸೆಯನ್ನು ಮಾಡೋಣ, ಅವನಿಗೆ ಸಂಭವಿಸಿದ್ದಕ್ಕೆ ಮೂಲವು ಅವನಲ್ಲಿಯೇ ಅಡಗಿದೆ’ ಎಂದು ನೀವು ಆಡಿಕೊಂಡ ಕಾರಣ,

[29] ಕತ್ತಿಗೆ ಭಯಪಡಿರಿ, ಏಕೆಂದರೆ ಕತ್ತಿಯ ದಂಡನೆಗಳು ತೀಕ್ಷ್ಣವಾಗಿದೆ, ಇದರಿಂದ ನ್ಯಾಯನಿರ್ಣಯವುಂಟೆಂದು ತಿಳಿದುಕೊಳ್ಳುವಿರಿ.”

ಯೋಬನು — Chapters