Skip to content
Opens in a new window
Listen to this chapter • 3:54

[1] ಆಗ ಯೋಬನು ಇಂತೆಂದನು,

[2] “ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ. ನಿಮ್ಮಿಂದ ನನಗಾಗಬೇಕಾದ ಆದರಣೆಯು ಇಷ್ಟೇ.

[3] ತಾಳ್ಮೆಯಿಂದಿರಿ, ನಾನೂ ಮಾತನಾಡುವೆನು, ಆಮೇಲೆ ಹಾಸ್ಯಮಾಡಿದರೂ ಮಾಡಿರಿ.

[4] ನಾನೇನು ಮನುಷ್ಯನ ವಿಷಯದಲ್ಲಿ ಗುಣುಗುಟ್ಟುತ್ತಿರುವೆನೆ? ನಾನೇಕೆ ಬೇಸರಗೊಳ್ಳಬಾರದು?

[5] ನನ್ನ ಕಡೆಗೆ ಗಮನಿಸಿ, ನಿಮ್ಮ ಬಾಯಿಯ ಮೇಲೆ ಕೈಯಿಟ್ಟು ಬೆರಗಾಗಿ,

[6] ಈ ವಿಷಯವನ್ನು ನೆನಪಿಗೆ ತಂದುಕೊಂಡ ಹಾಗೆಲ್ಲಾ, ನಡುಕವು ನನ್ನ ಮಾಂಸವನ್ನು ಹಿಡಿಯುತ್ತದೆ.

[7] ದುಷ್ಟರು ಬಾಳಿ ವೃದ್ಧರಾಗುವುದಕ್ಕೂ, ಬಲಿಷ್ಠರಾಗಿ ಪ್ರಬಲಿಸುವುದಕ್ಕೂ ಕಾರಣವೇನು?

[8] ಅವರ ಸಂತಾನದವರು ಅವರೊಂದಿಗಿರುತ್ತಾ ಅವರ ಮುಂದೆಯೇ ಸುಸ್ಥಿರವಾಗಿರುವರು, ಅವರ ಮಕ್ಕಳು ಅವರ ಕಣ್ಣೆದುರಿನಲ್ಲಿ ಅಚಲವಾಗಿ ನಿಲ್ಲುವರು.

[9] ಅವರ ಮನೆಗಳು ಸುರಕ್ಷಿತವಾಗಿ ನಿರ್ಭಯದಿಂದ ಇರುವವು; ದೇವರ ದಂಡವು ಅವರ ಮೇಲೆ ಬೀಳದು.

[10] ಅವರ ಗೂಳಿಯು ಬೇಸರಗೊಳ್ಳದೆ ಸಂತತಿಯನ್ನು ಹುಟ್ಟಿಸುತ್ತದೆ; ಅವರ ಹಸುವು ಕಂದುಹಾಕದೆ ಈಯುವುದು.

[11] ತಮ್ಮ ಮಕ್ಕಳನ್ನು ಮಂದೆಮಂದೆಯಾಗಿ ನಡೆಸುವರು, ಅವರ ಮಕ್ಕಳು ಕುಣಿದಾಡುವರು.

[12] ಅವರು ದಮ್ಮಡಿ ಕಿನ್ನರಿಗಳೊಡನೆ ಸ್ವರವೆತ್ತಿ, ಕೊಳಲಿನ ಧ್ವನಿಗೆ ಉಲ್ಲಾಸಪಡುವರು.

[13] ಹೀಗೆ ತಮ್ಮ ದಿನಗಳನ್ನು ಸುಖವಾಗಿ ಕಳೆದು, ಸಮಾಧಾನದಿಂದ ಸಮಾಧಿಗೆ ಸೇರುವರು.

[14] ಆದರೆ ಇವರೇ ದೇವರನ್ನು ಕುರಿತು, ‘ನಮ್ಮಿಂದ ತೊಲಗಿ ಹೋಗು, ನಿನ್ನ ಮಾರ್ಗಗಳ ತಿಳಿವಳಿಕೆಯೇ ನಮಗೆ ಬೇಡ ಎಂದೂ

[15] ಆ ಸರ್ವಶಕ್ತನಾದ ದೇವರು ಎಷ್ಟರವನು, ಆತನನ್ನು ನಾವು ಏಕೆ ಸೇವಿಸಬೇಕು? ಆತನಿಗೆ ವಿಜ್ಞಾಪನೆ ಮಾಡುವುದರಿಂದ ಪ್ರಯೋಜನವೇನು?’ ಎಂದೂ ಹೇಳುತ್ತಿದ್ದರು.

[16] ಆಹಾ, ಅವರ ಸುಖವು ಅವರ ಕೈಯಲ್ಲಿ ನೆಲಸಿರುವುದಿಲ್ಲ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!

[17] ದುಷ್ಟರ ದೀಪವು ಆರಿಹೋದದ್ದು ಎಷ್ಟು ಸಾರಿ? ಎಷ್ಟು ಸಾರಿ ಉಪದ್ರವವು ಅವರಿಗೆ ಸಂಭವಿಸಿದೆ? ದೇವರು ಕೋಪಗೊಂಡು ಅವರ ಪಾಲಿಗೆ ಸಂಕಟಗಳನ್ನು ಕೊಟ್ಟದ್ದು ಎಷ್ಟು ಸಾರಿ?

[18] ಅವರು ಗಾಳಿಗೆ ಸಿಕ್ಕಿಬಿದ್ದ ಹುಲ್ಲಿನಂತೆ ಆದದ್ದು ಎಷ್ಟು ಸಾರಿ? ಎಷ್ಟು ಸಾರಿ ಬಿರುಗಾಳಿಯು ಕೊಚ್ಚಿಕೊಂಡು ಹೋಗುವ ಹೊಟ್ಟಿನಂತಿದ್ದರು?

[19] ‘ದೇವರು ದುಷ್ಟನ ಪಾಪ ಫಲವನ್ನು ಅವನ ಮಕ್ಕಳಿಗಾಗಿ ಇಟ್ಟಿದ್ದಾನೆ’ ಎನ್ನುತ್ತೀರೋ, ಆ ಫಲವನ್ನು ಅನುಭವಿಸುವ ಹಾಗೆ ದೇವರು ಅವನಿಗೆ ಕೊಟ್ಟುಬಿಡಲಿ.

[20] ಅವನು ತನ್ನ ನಾಶವನ್ನು ಕಣ್ಣಾರೆ ಕಾಣಲಿ, ಸರ್ವಶಕ್ತನಾದ ದೇವರ ರೌದ್ರರಸವನ್ನು ಪಾನಮಾಡಲಿ.

[21] ಅವನಿಗೆ ನೇಮಕವಾದ ದಿನಗಳು ಮುಗಿದುಹೋದ ಮೇಲೆ ತನ್ನನ್ನು ಹಿಂಬಾಲಿಸುವ ಸಂತತಿಯವರ ಚಿಂತೆ ಏನು?

[22] ಮೇಲಣ ಲೋಕದವರಿಗೂ, ನ್ಯಾಯತೀರಿಸುವ ದೇವರಿಗೂ ಜ್ಞಾನಬೋಧನೆಯನ್ನು ಮಾಡಬಹುದೇ?

[23] ಒಬ್ಬನು ಸಮೃದ್ಧನಾಗಿ, ತುಂಬಾ ಸುಖದಿಂದಲೂ, ನೆಮ್ಮದಿಯಿಂದಲೂ ಇರುವಾಗ ಸಾಯುವನು.

[24] ಅವನ ತೊಟ್ಟಿಗಳಲ್ಲಿ ಹಾಲು ತುಂಬಿರುವುದು, ಅವನ ಎಲಬುಗಳು ಮಜ್ಜೆಯಿಂದ ಸಾರವಾಗಿರುವುದು.

[25] ಮತ್ತೊಬ್ಬನು ಸ್ವಲ್ಪವೂ ಸುಖಾನುಭವವಿಲ್ಲದೆ, ಮನೋವ್ಯಥೆಪಡುತ್ತಾ ಸಾಯುವನು.

[26] ಇಬ್ಬರೂ ಧೂಳಿನಲ್ಲಿ ಮಲಗುವರು, ಹುಳುಗಳು ಅವರನ್ನು ಮುತ್ತಿಕೊಳ್ಳುವವು.

[27] ಆಹಾ, ನಿಮ್ಮ ಯೋಚನೆಗಳನ್ನು ಬಲ್ಲೆ, ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ತಿಳಿದುಕೊಂಡಿದ್ದೇನೆ.

[28] ‘ಪ್ರಧಾನನ ಮನೆ ಏನಾಯಿತು? ದುಷ್ಟರು ವಾಸಿಸಿದ ಗುಡಾರವೆಲ್ಲಿ?’ ಎನ್ನುತ್ತೀರಷ್ಟೆ.

[29] ನೀವು ಮಾರ್ಗಸ್ಥರನ್ನು ವಿಚಾರಿಸಲಿಲ್ಲವೋ? ಅವರು ಕೊಟ್ಟ ದೃಷ್ಟಾಂತಗಳಿಂದ,

[30] ಆಪತ್ತಿನ ದಿನದಲ್ಲಿ ದುಷ್ಟನು ಉಳಿದು, ಕೋಪವು ತುಂಬಿ ತುಳುಕುವ ದಿನದಲ್ಲಿ ತಪ್ಪಿಸಲ್ಪಡುವನು ಎಂಬುದು ನಿಮಗೆ ಗೊತ್ತಾಗಲಿಲ್ಲವೋ?

[31] ನೀನು ದುರ್ಮಾರ್ಗಿ ಎಂದು ಅವನಿಗೆ ಮುಖಾಮುಖಿಯಾಗಿ ಯಾರು ತಾನೇ ಹೇಳುವರು? ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸುವವರು ಯಾರು?

[32] ಅವನನ್ನು ಮೆರವಣಿಗೆಯಿಂದ ಸಮಾಧಿಗೆ ತೆಗೆದುಕೊಂಡು ಹೋಗುವರು; ಅವನ ಗೋರಿಗೆ ಕಾವಲಿಡುವರು.

[33] ಆ ಕಣಿವೆಯ ಪ್ರದೇಶದ ಹೆಂಟೆಗಳು ಅವನಿಗೆ ಒಪ್ಪಿತವಾಗಿರುವವು. ಅವನಿಗಿಂತ ಹಿಂದೆ ಲೆಕ್ಕವಿಲ್ಲದಷ್ಟು ಜನರು ಹೀಗೆಯೇ ಇದ್ದರು, ಇನ್ನು ಮುಂದೆ ಸಮಸ್ತರೂ ಹೀಗೆಯೇ ಅವನನ್ನು ಹಿಂಬಾಲಿಸುವರು.

[34] ನೀವು ನನಗೆ ಮಾಡುವ ಆದರಣೆಯು ಎಷ್ಟು ವ್ಯರ್ಥವಾಗಿದೆ! ನಿಮ್ಮ ಉತ್ತರಗಳಲ್ಲಿ ಉಳಿದಿರುವುದು ಮಿತ್ರ ದ್ರೋಹವೇ.”

ಯೋಬನು — Chapters