Skip to content
Opens in a new window
Listen to this chapter • 3:17

[1] ಬೆಟ್ಟದ ಮೇಕೆಗಳು ಈಯುವ ಸಮಯವನ್ನು ತಿಳಿದುಕೊಂಡಿದ್ದೀಯೋ? ಹರಿಣಗಳ ಹೆರಿಗೆಯನ್ನು ನೋಡಿಕೊಳ್ಳುವೆಯಾ?

[2] ಅವು ಗರ್ಭವನ್ನು ಹೊರುವ ತಿಂಗಳುಗಳನ್ನು ಎಣಿಸುತ್ತೀಯೋ? ಅವು ಈಯುವ ಕಾಲವನ್ನು ಗೊತ್ತುಮಾಡುವೆಯೋ?

[3] ಅವು ಮರಿಗಳನ್ನು ಹಾಕಿದೊಡನೆಯೇ ತಮ್ಮ ವೇದನೆಯನ್ನೂ ತೊರೆದುಬಿಡುವವು.

[4] ಅವುಗಳ ಮರಿಗಳು ಪುಷ್ಟಿಯಾಗಿ ಬಯಲಿನಲ್ಲಿ ಬೆಳೆದು ಅಗಲಿದ ಮೇಲೆ ತಾಯಿಯ ಬಳಿಗೆ ಪುನಃ ಸೇರುವುದೇ ಇಲ್ಲ.

[5] ಕಾಡುಕತ್ತೆಯನ್ನು ಸ್ವತಂತ್ರವಾಗಿರುವಂತೆ ಯಾರು ಕಳುಹಿಸಿಬಿಟ್ಟರು? ಅದರ ಕಟ್ಟನ್ನು ಬಿಚ್ಚಿದವರು ಯಾರು?

[6] ನಾನು ಅಡವಿಯನ್ನು ಅದಕ್ಕೆ ಮನೆಯನ್ನಾಗಿಯೂ, ಮರುಭೂಮಿಯನ್ನು ಅದರ ನಿವಾಸವನ್ನಾಗಿಯೂ ಮಾಡಿದ್ದೇನಷ್ಟೆ.

[7] ಅದು ಊರುಗದ್ದಲವನ್ನು ಧಿಕ್ಕರಿಸಿ, ಹೊಡೆಯುವವನ ಕೂಗಾಟವನ್ನು ಕೇಳಿದ್ದೇ ಇಲ್ಲ.

[8] ಅದರ ಕಾವಲು ವಿಶಾಲವಾದ ಬೆಟ್ಟಗಳೇ. ಹಸಿರು ಎಲ್ಲಿದ್ದರೂ ಅದನ್ನು ಹುಡುಕುತ್ತಲೇ ಇರುವುದು.

[9] ಕಾಡುಕೋಣವು ನಿನ್ನನ್ನು ಸೇವಿಸಲು ಒಪ್ಪಿ, ನಿನ್ನ ಗೋದಲಿಯ ಹತ್ತಿರ ತಂಗುವುದೋ?

[10] ನೇಗಿಲ ಸಾಲಿಗೆ ಕಾಡುಕೋಣವನ್ನು ಹಗ್ಗದಿಂದ ಕಟ್ಟುವೆಯಾ? ಅದು ತಗ್ಗಿನ ಭೂಮಿಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೋ?

[11] ಬಲ ಹೆಚ್ಚಾಗಿರುವುದರಿಂದ ಅದರಲ್ಲಿ ನಂಬಿಕೆಯಿಟ್ಟು, ನಿನ್ನ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯೋ?

[12] ಅದು ನಿನ್ನ ಕಣದಲ್ಲಿ ಕಾಳನ್ನು ಕೂಡಿಸಿ, ನಿನ್ನ ಬೆಳೆಯನ್ನು ಹೊತ್ತುಕೊಂಡು ಬರುವುದೆಂದು ಭರವಸವಿಡುವೆಯಾ?

[13] ಉಷ್ಟ್ರಪಕ್ಷಿಯ ಪಕ್ಷವು ಸಂತೋಷದಿಂದ ಬಡಿದಾಡುವುದು, ಆದರೆ ಅದರ ರೆಕ್ಕೆಗರಿಗಳಿಗೆ ಪ್ರೀತಿಭಾವವುಂಟೋ?

[14] ಅದು ತನ್ನ ಮೊಟ್ಟೆಗಳನ್ನು ಭೂಮಿಯಲ್ಲಿಟ್ಟು, ಧೂಳಿನಿಂದಲೇ ಅವುಗಳಿಗೆ ಕಾವು ಕೊಡಿಸುವುದಲ್ಲವೇ.

[15] ಯಾರಾದರು ಕಾಲಿನಿಂದ ತುಳಿದಾರು, ಕಾಡುಮೃಗ ತುಳಿದೀತು ಎಂದು ಯೋಚಿಸುವುದೇ ಇಲ್ಲ.

[16] ತನ್ನ ಮರಿಗಳನ್ನು ತನ್ನವುಗಳೆಂದೆಣಿಸದೆ ಬಾಧೆಗೊಳಪಡಿಸುವುದು, ತನ್ನ ಹೆರಿಗೆ ನಿಷ್ಫಲವಾದರೂ ಅದಕ್ಕೆ ಏನೂ ಚಿಂತೆ ಇಲ್ಲ.

[17] ದೇವರು ಅದಕ್ಕೆ ಜ್ಞಾನವನ್ನು ಮರೆಮಾಡಿ, ವಿವೇಕವನ್ನು ದಯಪಾಲಿಸದೆ ಇದ್ದಾನಷ್ಟೆ!

[18] ಅದು ರೆಕ್ಕೆಬಡಿಯುತ್ತಾ ನೀಳವಾಗಿ ಓಡುವ ಸಮಯದಲ್ಲಾದರೋ, ಕುದುರೆಯನ್ನೂ, ಸವಾರನನ್ನೂ ಹೀಯಾಳಿಸುವುದು.

[19] ನೀನು ಕುದುರೆಗೆ ಶಕ್ತಿಯನ್ನು ಕೊಟ್ಟು, ಅದರ ಕೊರಳಿಗೆ ಗುಡುಗನ್ನು ಕಟ್ಟಿದವನು ನಿನಲ್ಲವೇ?

[20] ಅದು ಮಿಡತೆಯ ಹಾಗೆ ಕುಪ್ಪಳಿಸಿ ಹಾರುವಂತೆ ಮಾಡಿದೆಯಾ? ಅದರ ಕೆನೆತನದ ಪ್ರತಾಪವು ಭಯಂಕರವಾಗಿದೆ.

[21] ಅದು ತಗ್ಗಿನ ನೆಲವನ್ನು ಕೆರೆದು ತನ್ನ ಬಲಕ್ಕೆ ಹಿಗ್ಗಿ, ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೋಗುವುದು.

[22] ಅದು ಕಳವಳಗೊಳ್ಳದೆ ಖಡ್ಗಕ್ಕೆ ಹಿಂದೆಗೆಯದೆ ಭಯವನ್ನು ತಾತ್ಸಾರ ಮಾಡುವುದು.

[23] ಬತ್ತಳಿಕೆಯೂ, ಥಳಥಳಿಸುವ ಭರ್ಜಿಯೂ, ಈಟಿಯೂ ಅದರ ಮೇಲೆ ಜಣಜಣಿಸುವವು.

[24] ಅದು ತುತ್ತೂರಿಯ ಶಬ್ದವನ್ನು ಕೇಳಿದರೂ, ನಿಲ್ಲದೆ ಉಗ್ರತೆಯಿಂದ ಕಂಪಿಸುತ್ತಾ ನೆಲವನ್ನು ನುಂಗಿಬಿಡುವುದೋ ಎಂಬಂತೆ ಓಡುವುದು.

[25] ತುತ್ತೂರಿ ಊದಿದಾಗೆಲ್ಲಾ ಆಹಾ! ಎಂದುಕೊಂಡು ಕಾಳಗ, ಆರ್ಭಟ, ಸೇನಾಪತಿಗಳ ಗರ್ಜನೆ, ಇವುಗಳನ್ನು ದೂರದಲ್ಲಿದ್ದರೂ ಮೂಸಿನೋಡಿ ತಿಳಿಯುವುದು.

[26] ಗಿಡಗವು ತನ್ನ ರೆಕ್ಕೆಗಳನ್ನು ಹರಡಿ, ದಕ್ಷಿಣದಿಕ್ಕಿಗೆ ಹಾರುವುದು ನಿನ್ನ ವಿವೇಕದಿಂದಲೋ?

[27] ಹದ್ದು ಮೇಲಕ್ಕೆ ಹಾರಿ ಉನ್ನತದಲ್ಲಿ ಗೂಡುಮಾಡುವುದು ನಿನ್ನ ಅಪ್ಪಣೆಯಿಂದಲೋ?

[28] ಅದಕ್ಕೆ ಬಂಡೆಯೇ ನಿವಾಸವು; ಅದು ಶಿಲಾಶಿಖರದಲ್ಲಿಯೂ, ದುರ್ಗದಲ್ಲಿಯೂ ತಂಗುವುದು.

[29] ಅಲ್ಲಿಂದಲೇ ಬೇಟೆಯನ್ನು ನೋಡುತ್ತಾ; ದೂರದಲ್ಲಿದ್ದರೂ ಅದನ್ನು ಕಂಡುಹಿಡಿಯುವುದು.

[30] ಹೆಣಬಿದ್ದಲ್ಲಿ ರಣಹದ್ದೂ ಅದರ ಮರಿಗಳೂ ಹೀರುತ್ತವೆ ರಕ್ತವನ್ನು;

ಯೋಬನು — Chapters