[1] “ಬೆಳ್ಳಿ ಸಿಕ್ಕುವ ಗಣಿಯೂ, ಚಿನ್ನದ ಅದುರು ದೊರಕುವ ಸ್ಥಳವೂ ಉಂಟಷ್ಟೆ.
[2] ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು, ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು.
[3] ಮನುಷ್ಯರು ಕತ್ತಲನ್ನು ನಿವಾರಿಸಿ ಕಾರ್ಗತ್ತಲಲ್ಲಿಯೂ, ಘೋರಾಂಧಕಾರದಲ್ಲಿಯೂ ಮರೆಯಾಗಿರುವ ಕಲ್ಲುಗಳನ್ನು ಕಟ್ಟಕಡೆಯ ವರೆಗೆ ಹುಡುಕುವರು.
[4] ಗಣಿಯನ್ನು ತೋಡಿ ತೋಡಿ ಭೂಮಿಯೊಳಗೆ ಬಹುದೂರ ಜನರು ವಾಸಸ್ಥಳಗಳಿಂದ ದೂರವಾಗುವರು, ಭೂಮಿಯ ಮೇಲೆ ನಡೆದಾಡುವವರಿಗೆ ಕಾಣದೆ, ನರಲೋಕಕ್ಕೆ ಅನ್ಯರಾಗಿ ಅತ್ತಿತ್ತ ಅಲೆದಾಡುವರು.
[5] ಭೂಮಿಯು ಅನ್ನವನ್ನು ಕೊಡುವುದು, ಅದರ ಕೆಳಭಾಗವು ಬೆಂಕಿ ಬಿದ್ದಂತೆ ಹಾಳಾಗಿರುವುದು.
[6] ಅದರ ಕಲ್ಲುಗಳಲ್ಲಿ ಇಂದ್ರನೀಲ ಮಣಿಗಳು ಸಿಕ್ಕುವವು, ಅದರಲ್ಲಿ ಚಿನ್ನದ ಪುಡಿಯೂ ಇರುವುದು.
[7] ಆ ದಾರಿಯು ಯಾವ ಹದ್ದಿಗೂ ತಿಳಿಯದು, ಗಿಡಗದ ಕಣ್ಣಿಗೂ ಬಿದ್ದಿಲ್ಲ.
[8] ಸೊಕ್ಕಿದ ಮೃಗಗಳು ಅದನ್ನು ತುಳಿದಿಲ್ಲ, ಸಿಂಹವು ಆ ಮಾರ್ಗವನ್ನು ತುಳಿದಿಲ್ಲ.
[9] ಮನುಷ್ಯನು ಕಗ್ಗಲ್ಲಿನ ಮೇಲೆ ಕೈಮಾಡಿ ಬೆಟ್ಟಗಳನ್ನು ಬುಡದ ತನಕ ಕೆಡವಿಬಿಡುವನು.
[10] ಬಂಡೆಗಳಲ್ಲಿ ಸುರಂಗಗಳನ್ನು ಕೊರೆಯುವನು; ಅವನ ಕಣ್ಣು ಅಮೂಲ್ಯ ಪದಾರ್ಥಗಳನ್ನೆಲ್ಲಾ ಕಾಣುವುದು.
[11] ನೀರಿನ ಒರತೆಗಳನ್ನು ಹುಡುಕಿ ಹೊರತರುತ್ತಾನೆ, ಮರೆಯಾಗಿದ್ದ ವಸ್ತುವನ್ನು ಬೆಳಕಿಗೆ ತರುವನು.
[12] ಜ್ಞಾನವಾದರೋ ಎಲ್ಲಿ ಸಿಕ್ಕೀತು? ವಿವೇಕವು ದೊರೆಯುವ ಸ್ಥಳವೆಲ್ಲಿ?
[13] ಅದರ ಕ್ರಯವು ಯಾರಿಗೂ ಗೊತ್ತಿಲ್ಲ, ಭೂಲೋಕದಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು.
[14] ಭೂಮಿಯ ಕೆಳಗಣ ಸಾಗರವು ನನ್ನಲ್ಲಿ ಇಲ್ಲ ಎನ್ನುವುದು, ಸಮುದ್ರವು, ತನ್ನ ಹತ್ತಿರ ಇಲ್ಲ ಎಂದು ಹೇಳುವುದು.
[15] ಚೊಕ್ಕ ಬಂಗಾರವನ್ನು ಕೊಟ್ಟು ಅದನ್ನು ಕೊಂಡುಕೊಳ್ಳುವುದು ಅಸಾಧ್ಯ, ಅದರ ಬೆಲೆಗೆ ಬೆಳ್ಳಿಯನ್ನು ತೂಗುವುದು ಅಶಕ್ಯ.
[16] ಓಫೀರ್ ದೇಶದ ಅಪರಂಜಿ, ಅಮೂಲ್ಯ ಗೋಮೇಧಿಕ, ಇಂದ್ರನೀಲ, ಇವುಗಳಿಂದ ಜ್ಞಾನದ ಬೆಲೆ ಇಷ್ಟೆಂದು ಗೊತ್ತು ಮಾಡುವುದಕ್ಕೆ ಆಗದು.
[17] ಬಂಗಾರವಾಗಲಿ, ಸ್ಫಟಿಕವಾಗಲಿ ಅದಕ್ಕೆ ಸಮವಾದೀತೇ? ಚಿನ್ನದ ಆಭರಣಗಳನ್ನು ಅದಕ್ಕೆ ಬದಲಾಗಿಕೊಡುವುದು ಸಾಧ್ಯವೋ?
[18] ಜ್ಞಾನವಿರುವಲ್ಲಿ ಹವಳವೂ, ಸ್ಫಟಿಕವೂ ನೆನಪಿಗೆ ಬರುವುದಿಲ್ಲ. ಮುತ್ತುಗಳನ್ನು ಸಂಪಾದಿಸುವುದಕ್ಕಿಂತಲೂ ಜ್ಞಾನವನ್ನು ಸಂಪಾದಿಸುವುದು ಕಷ್ಟ!
[19] ಕೂಷ್ ದೇಶದ ಪುಷ್ಯರಾಗವು ಅದಕ್ಕೆ ಸಾಟಿಯಿಲ್ಲ, ಶುದ್ಧ ಕನಕದೊಡನೆ ಅದನ್ನು ತೂಗಲಾಗದು.
[20] ಹೀಗಿರಲು ಜ್ಞಾನವು ಎಲ್ಲಿಂದ ಬರುವುದು? ವಿವೇಕವು ಯಾವ ಸ್ಥಳದಲ್ಲಿ ದೊರಕೀತು?
[21] ಅದು ಎಲ್ಲಾ ಜೀವಿಗಳ ದೃಷ್ಟಿಗೆ ಅಗೋಚರವಾಗಿದೆ, ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ.
[22] ನಾಶನವೂ, ಮೃತ್ಯುವೂ, ‘ಅದರ ಸುದ್ದಿ ಮಾತ್ರ ನಮ್ಮ ಕಿವಿಗೆ ಬಿದ್ದಿದೆ’ ಎಂದು ಹೇಳುವವು.
[23] ಅದರ ಮಾರ್ಗವನ್ನು ಬಲ್ಲವನು ದೇವರೇ; ಅದರ ಸ್ಥಳವು ಆತನೊಬ್ಬನಿಗೇ ಗೊತ್ತು.
[24] ಆತನೊಬ್ಬನೇ ಭೂಮಿಯ ಕಟ್ಟಕಡೆಯ ತನಕ ದೃಷ್ಟಿಸಿ ಆಕಾಶದ ಕೆಳಗಿನ ಸಮಸ್ತವನ್ನೂ ನೋಡುವವನಾಗಿದ್ದಾನೆ.
[25] ಆತನು ಗಾಳಿಗೆ ತಕ್ಕಷ್ಟು ತೂಕವನ್ನು ನೇಮಿಸಿ ನೀರುಗಳನ್ನು ತಕ್ಕ ಪರಿಮಾಣಗಳಿಂದ ಅಳತೆಮಾಡಿದನು.
[26] ಮಳೆಗೆ ಕಟ್ಟಳೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ,
[27] ಜ್ಞಾನವನ್ನು ಕಂಡು ಲಕ್ಷಿಸಿದನು, ಅದನ್ನು ಸ್ಥಾಪಿಸಿದ್ದಲ್ಲದೆ ವಿಮರ್ಶೆಮಾಡಿದನು.
[28] ಆಮೇಲೆ ಮನುಷ್ಯರಿಗೆ, ‘ಇಗೋ, ಕರ್ತನ ಭಯವೇ ಜ್ಞಾನ; ದುಷ್ಟತನವನ್ನು ತ್ಯಜಿಸುವುದೇ ವಿವೇಕ’” ಎಂದು ಹೇಳಿದನು.