[1] ಆಗ ನಾಮಾಥ್ಯನಾದ ಚೋಫರನು ಹೀಗೆಂದನು,
[2] “ಬಹಳ ಮಾತುಗಳಿಗೆ ಉತ್ತರ ಕೊಡಬಾರದೋ? ವ್ಯರ್ಥವಾಗಿ ಮಾತನಾಡುವವ ನೀತಿವಂತನೆಂದು ಹೇಳಿಸಿಕೊಂಡಾನೇ?
[3] ನೀನು ಬಡಾಯಿಕೊಚ್ಚಿದರೆ ಮನುಷ್ಯರು ಸುಮ್ಮನಿರಬೇಕೋ? ನೀನು ಕುಚೋದ್ಯವಾಗಿ ಮಾತನಾಡುವಾಗ ನಿನ್ನನ್ನು ಯಾರೂ ನಾಚಿಕೆಗೆ ಒಳಪಡಿಸಬಾರದೋ?
[4] ‘ನನ್ನ ಬೋಧನೆಯು ನಿರ್ಮಲವಾದದ್ದು, ದೇವದೃಷ್ಟಿಯಲ್ಲಿ ಶುದ್ಧನಾಗಿದ್ದೇನೆ’ ಎಂದು ನೀನು ಹೇಳಿದ್ದೀಯಲ್ಲಾ.
[5] ಆಹಾ, ದೇವರು ಬಾಯ್ದೆರೆದು ನಿನ್ನ ವಿರುದ್ಧವಾಗಿ ಮಾತನಾಡಿದರೆ ಎಷ್ಟೋ ಉತ್ತಮ!
[6] ಆತನು ಜ್ಞಾನದ ರಹಸ್ಯಗಳನ್ನು ನಿನಗೆ ತಿಳಿಸಿ, ಸುಜ್ಞಾನವು ಬಹುಮುಖವಾಗಿದೆ ಎಂದು ತೋರಿಸಿಕೊಟ್ಟರೆ ಎಷ್ಟೋ ಲೇಸು! ದೇವರು ನಿನ್ನ ಅಧರ್ಮವನ್ನೆಲ್ಲಾ ಗಣನೆಗೆ ತರಲಿಲ್ಲವೆಂದು ತಿಳಿದುಕೋ!
[7] ದೇವರ ಅಗಾಧಗಳನ್ನು ಕಂಡುಕೊಳ್ಳಬಲ್ಲೆಯಾ? ಸರ್ವಶಕ್ತನಾದ ದೇವರನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಬಹುದೋ?
[8] ಆಹಾ, (ಆತನ ಜ್ಞಾನವು) ಆಕಾಶದ ಹಾಗೆ ಉನ್ನತವಾಗಿದೆ; ನೀನು ಮಾಡುವುದೇನು? ಪಾತಾಳಕ್ಕಿಂತ ಆಳವಾಗಿದೆ; ನೀನು ತಿಳಿದುಕೊಳ್ಳುವುದೇನು?
[9] ಅದರ ಅಳತೆಯು ಭೂಮಿಗಿಂತಲೂ ಉದ್ದವಾಗಿದೆ, ಸಮುದ್ರಕ್ಕಿಂತಲೂ ಅಗಲವಾಗಿದೆ.
[10] ಆತನು ಹಾದುಹೋದರೂ, ಸೆರೆಯಲ್ಲಿಟ್ಟರೂ, ನ್ಯಾಯವಿಚಾರಣೆಗೆ ಕರೆದರೂ ಆತನನ್ನು ತಳ್ಳಿಬಿಡುವವರು ಯಾರು?
[11] ಆತನೇ ವ್ಯರ್ಥ ಜನರನ್ನು ತಿಳಿದುಕೊಳ್ಳುವನು; ಯಾವ ವಿಮರ್ಶೆಯೂ ಇಲ್ಲದೆ ಅಧರ್ಮವನ್ನು ಕಂಡು ಹಿಡಿಯುವನು.
[12] ಕಾಡುಕತ್ತೆಯ ಮರಿಗೆ ನರಜನ್ಮವಾದರೆ ಅವಿವೇಕಿಯಾದ ಮನುಷ್ಯನು ವಿವೇಕವನ್ನು ಪಡೆಯುವನು.
[13] ನೀನಂತು ಮನಸ್ಸನ್ನು ಪರಿವರ್ತಿಸಿಕೊಂಡು ದೇವರ ಕಡೆಗೆ ಕೈಗಳನ್ನೆತ್ತಿ ಸ್ತುತಿಸು.
[14] ಅಧರ್ಮವು ನಿನ್ನ ಕೈಯಲ್ಲಿದ್ದರೆ ಅದನ್ನು ದೂರಮಾಡಿಬಿಡು; ಅನ್ಯಾಯವು ನಿನ್ನ ಗುಡಾರಗಳಲ್ಲಿ ವಾಸಿಸದಿರಲಿ.
[15] ಆಗ ನೀನು ನಿಷ್ಕಳಂಕವಾದ ಮುಖವನ್ನೆತ್ತಿಕೊಂಡು, ಸ್ಥಿರಚಿತ್ತನೂ, ನಿರ್ಭಯನೂ ಆಗಿರುವಿ.
[16] ನಿನ್ನ ಕಷ್ಟವನ್ನು ಮರೆತುಬಿಡುವಿ; ಹರಿದುಹೋದ ನೀರನ್ನೋ ಎಂಬಂತೆ ಅದನ್ನು ಜ್ಞಾಪಿಸಿಕೊಳ್ಳುವಿ.
[17] ನಿನ್ನ ಜೀವಮಾನವು ಮಧ್ಯಾಹ್ನದ ಬೆಳಕಿಗಿಂತ ಹೆಚ್ಚಾಗಿ ಪ್ರಜ್ವಲಿಸುವುದು, ಕತ್ತಲಿದ್ದರೂ ಹಗಲಿನಂತಿರುವುದು.
[18] ನಿರೀಕ್ಷೆಗೆ ಆಸ್ಪದವಿರುವುದರಿಂದ ಧೈರ್ಯಗೊಂಡಿರುವಿ, ಸುತ್ತಲೂ ನೋಡಿ ಅಪಾಯವಿಲ್ಲವೆಂದು ವಿಶ್ರಮಿಸಿಕೊಳ್ಳುವಿ.
[19] ಮಲಗಿಕೊಂಡಾಗ ನಿನ್ನನ್ನು ಯಾರೂ ಹೆದರಿಸುವುದಿಲ್ಲ. ಅನೇಕರು ನಿನ್ನ ಮುಖ ಪ್ರಸನ್ನತೆಯನ್ನು ಅಪೇಕ್ಷಿಸುವರು.
[20] ಆದರೆ ದುಷ್ಟರು ನಿರಾಶ್ರಯರಾಗಿ ಕಂಗೆಡುವರು, ಪ್ರಾಣಬಿಡಬೇಕೆಂಬುದೇ ಅವರ ಬಯಕೆ.”