Skip to content
Opens in a new window
Listen to this chapter • 4:59

[1] “ಕನ್ಯೆಯನ್ನು ಕೆಟ್ಟದೃಷ್ಟಿಯಿಂದ ನೋಡುವುದಿಲ್ಲ ಎಂದು ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ,

[2] ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವನು, ಸರ್ವಶಕ್ತನಾದ ದೇವರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?

[3] ಆತನು ಅನ್ಯಾಯಗಾರರಿಗೆ ವಿಪತ್ತನ್ನೂ, ಕೆಡುಕರಿಗೆ ಉಪದ್ರವವನ್ನೂ ಕೊಡುತ್ತಾನಲ್ಲವೆ?

[4] ಆತನೇ ನನ್ನ ನಡತೆಯನ್ನು ನೋಡಿ ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಿದ್ದಾನೆ ಎಂದುಕೊಳ್ಳುತ್ತಿದ್ದೆನು.

[5] ಒಂದು ವೇಳೆ ನಾನು ಕಪಟತನದ ಜೊತೆಯಲ್ಲಿ ನಡೆದು ಮೋಸವನ್ನು ಹಿಂಬಾಲಿಸಿ ಓಡಿದರೆ,

[6] ದೇವರು ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ, ನನ್ನ ಯಥಾರ್ಥತ್ವವನ್ನು ತಿಳಿದುಕೊಳ್ಳಲಿ!

[7] ನನ್ನ ನಡತೆಯಲ್ಲಿ ದಾರಿತಪ್ಪಿದ್ದರೆ, ನನ್ನ ಹೃದಯವು ಕಂಡಕಂಡದ್ದನ್ನು ಹಿಂಬಾಲಿಸಿದ್ದರೆ, ನನ್ನ ಕೈಗಳಲ್ಲಿ ಕಲ್ಮಷವು ಅಂಟಿಕೊಂಡಿದ್ದರೆ,

[8] ನಾನು ಬಿತ್ತಿದ್ದನ್ನು ಮತ್ತೊಬ್ಬನು ಉಣ್ಣಲಿ, ನನ್ನ ಬೆಳೆಯು ನಿರ್ಮೂಲವಾಗಲಿ!

[9] ಒಂದು ವೇಳೆ ನನ್ನ ಹೃದಯವು ಪರಸ್ತ್ರೀಯಲ್ಲಿ ಮೋಹಗೊಂಡು, ನಾನು ನೆರೆಯವನ ಬಾಗಿಲಲ್ಲಿ ಹೊಂಚು ಹಾಕಿದ್ದರೆ,

[10] ನನ್ನ ಹೆಂಡತಿಯು ಮತ್ತೊಬ್ಬನಿಗೆ ಧಾನ್ಯ ಬೀಸುವ ದಾಸಿಯಾಗಲಿ, ಇತರರು ಆಕೆಯನ್ನು ಸಂಗಮಿಸಲಿ!

[11] ನಾನು ಹೀಗೆ ಮಾಡಿದ್ದರೆ ಅದು ದುಷ್ಕಾರ್ಯವೇ ಸರಿ, ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು.

[12] ಅದು ನಾಶ ಲೋಕದವರೆಗೂ ನುಂಗುವ ಬೆಂಕಿಯಾಗಿದ್ದು, ನನ್ನ ಆದಾಯವನ್ನೆಲ್ಲಾ ನಿರ್ಮೂಲಮಾಡುತ್ತಿತ್ತು.

[13] ಒಂದು ವೇಳೆ ನನಗೂ, ನನ್ನ ದಾಸನಿಗೂ, ಇಲ್ಲವೆ ದಾಸಿಗೂ ವ್ಯಾಜ್ಯವಾದಾಗ, ನಾನು ಅವರ ನ್ಯಾಯವನ್ನು ಅಲಕ್ಷ್ಯಮಾಡಿದ್ದರೆ

[14] ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡೆನು? ಆತನು ವಿಚಾರಿಸುವಾಗ ಯಾವ ಉತ್ತರಕೊಟ್ಟೇನು?

[15] ನನ್ನನ್ನು ಗರ್ಭದಲ್ಲಿ ನಿರ್ಮಿಸಿದಾತನೇ ಅವನನ್ನೂ ನಿರ್ಮಿಸಲಿಲ್ಲವೋ? ಆತನೊಬ್ಬನೇ ನಮ್ಮಿಬ್ಬರನ್ನೂ ಗರ್ಭದಲ್ಲಿ ರೂಪಿಸಿದನಲ್ಲವೇ.

[16] ನಾನು ಬಡವರ ಇಷ್ಟವನ್ನು ಭಂಗಪಡಿಸಿದೆನೋ? ಅಥವಾ ವಿಧವೆಯ ಕಣ್ಣುಗಳನ್ನು ಮಂಕಾಗಿಸಿದೆನೋ?

[17] ಅಥವಾ ನನಗಿರುವ ತುತ್ತು ಅನ್ನದಲ್ಲಿ ಅನಾಥರಿಗೆ ಏನೂ ಕೊಡದೆ, ನಾನೊಬ್ಬನೇ ತಿಂದೆನೋ?

[18] ಹಾಗಲ್ಲ, ನಾನು ಬಾಲ್ಯದಿಂದಲೂ ತಂದೆಯ ರೀತಿಯಲ್ಲಿ ಅನಾಥನನ್ನು ಸಾಕುತ್ತಾ, ನಾನು ಹುಟ್ಟಿದಂದಿನಿಂದಲು ಅನಾಥಳಿಗೆ ದಾರಿತೋರಿಸುತ್ತಾ ಇದ್ದೇನಷ್ಟೆ.

[19] ಬಟ್ಟೆಯಿಲ್ಲದೆ ಅಳಿದುಹೋಗುವವನನ್ನೂ, ಹೊದಿಕೆಯಿಲ್ಲದ ಬಡವನನ್ನೂ ನಾನು ಕಂಡಾಗೆಲ್ಲಾ,

[20] ಅವರ ಸೊಂಟವು ನನ್ನ ಕುರಿಗಳ ಉಣ್ಣೆಯಿಂದ ಬೆಚ್ಚಗಾಗಿ, ನಾನು ಅವರಿಂದ ಹರಸಲ್ಪಡಲಿಲ್ಲವೋ?

[21] ನ್ಯಾಯಸ್ಥಾನದಲ್ಲಿ ನನಗೆ ಸಹಾಯ ಉಂಟೆಂದು, ಅನಾಥನ ಮೇಲೆ ಕೈಮಾಡಿದೆನೋ?

[22] ಹೀಗಿದ್ದರೆ ನನ್ನ ಹೆಗಲಿನ ಕೀಲು ತಪ್ಪಲಿ, ತೋಳು ಸಂದಿನಿಂದ ಮುರಿದು ಬೀಳಲಿ.

[23] ದೇವರಿಂದ ಬರುವ ವಿಪತ್ತಿಗೆ ಹೆದರಿಕೊಂಡಿದ್ದೆನಷ್ಟೆ, ಆತನ ಪ್ರಭಾವದ ದೆಸೆಯಿಂದ ನಾನು ಇಂಥ ಕೃತ್ಯವನ್ನು ಮಾಡುವುದಕ್ಕಾಗಲಿಲ್ಲ.

[24] ಒಂದು ವೇಳೆ ನಾನು ಬಂಗಾರದಲ್ಲಿ ಭರವಸವಿಟ್ಟು, ಅಪರಂಜಿಗೆ, ‘ನಿನ್ನನ್ನೇ ನಂಬಿದ್ದೇನೆ’ ಎಂದು ಹೇಳಿದ್ದರೆ,

[25] ನನ್ನ ಆಸ್ತಿ ದೊಡ್ಡದೆಂದೂ, ನನ್ನ ಕೈಯೇ ಬಹು ಸಂಪತ್ತನ್ನು ಪಡೆಯಿತೆಂದೂ ಹೆಚ್ಚಳಪಟ್ಟಿದ್ದರೆ,

[26] ಸೂರ್ಯನು ಪ್ರಕಾಶಿಸುವುದನ್ನಾಗಲಿ, ಚಂದ್ರನು ಕಳೆತುಂಬಿದವನಾಗಿ ಚಲಿಸುವುದನ್ನಾಗಲಿ ನಾನು ನೋಡಿದಾಗ,

[27] ಹೃದಯವು ಮರುಳುಗೊಂಡು, ಕೈಯನ್ನು ಬಾಯಿ ಮುದ್ದಾಡಿದ್ದರೆ,

[28] ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು, ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.

[29] ನನ್ನನ್ನು ದ್ವೇಷಿಸುವವನಿಗೆ ಕೇಡು ಬಂದಾಗ ಉಬ್ಬಿಕೊಂಡು, ಅವನ ನಾಶನಕ್ಕೆ ಹಿಗ್ಗಿದೆನೋ?

[30] ಇಲ್ಲವೇ ಇಲ್ಲ, ನನ್ನ ಬಾಯಿ ಅವನನ್ನು ಶಪಿಸಿ ಅವನ ಪ್ರಾಣ ಹೋಗಲಿ ಎಂದು ಬೇಡಿಕೊಂಡು ಪಾಪವಶವಾಗುವುದಕ್ಕೆ ನಾನು ಒಪ್ಪಲೇ ಇಲ್ಲ.

[31] ನನ್ನ ಗುಡಾರದ ಆಳುಗಳು, ‘ನಮ್ಮ ಯಜಮಾನ ಬಡಿಸಿದ ಮಾಂಸದಿಂದ ತೃಪ್ತರಾಗದವರು ಎಲ್ಲಿಯೂ ಸಿಕ್ಕಲಾರರು’ ಎಂದು ಹೇಳಿಕೊಳ್ಳುತ್ತಿರಲಿಲ್ಲವೋ?

[32] ಪರಸ್ಥಳದವನು ಬಯಲಿನಲ್ಲಿ ಇಳಿದುಕೊಳ್ಳಲಿಲ್ಲವಲ್ಲಾ, ದಾರಿಗೆ ನನ್ನ ಮನೆಯ ಬಾಗಿಲುಗಳನ್ನು ತೆರೆದಿದ್ದೆನಷ್ಟೆ.

[33] ಮನುಷ್ಯನು ಜನ ಸಮುದಾಯಕ್ಕೆ ಹೆದರಿದ್ದರಿಂದಾಗಲಿ, ಕುಲೀನರ ತಿರಸ್ಕಾರವು ನನಗೆ ಭಯ ಹುಟ್ಟಿಸಿದ್ದರಿಂದಾಗಲಿ,

[34] ನಾನು ಬಾಗಿಲು ದಾಟದೆ ಮೌನವಾಗಿದ್ದು, ಸಾಮಾನ್ಯ ಜನರ ಹಾಗೆ ನನ್ನ ದ್ರೋಹಗಳನ್ನು ಮರೆಮಾಡಿ, ಎದೆಯಲ್ಲಿ ನನ್ನ ಪಾಪವನ್ನು ಬಚ್ಚಿಟ್ಟುಕೊಂಡಿದ್ದರೆ,

[35] ಅಯ್ಯೋ, ನನ್ನ ಕಡೆಗೆ ಕಿವಿಗೊಡತಕ್ಕವನು ಇದ್ದರೆ ಎಷ್ಟೋ ಲೇಸು! ಇದೇ ನನ್ನ ಕೈಗುರುತು ನೋಡಿರಿ, ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ! ನನ್ನ ವಿರೋಧಿಯು ಬರೆದುಕೊಂಡ ಅಪಾದನೆಯ ಪತ್ರವು ನನಗೆ ಸಿಕ್ಕಿದರೆ ಎಷ್ಟೋ ಸಂತೋಷ!

[36] ಅದನ್ನು ಹೆಗಲ ಮೇಲೆ ಇಟ್ಟುಕೊಳ್ಳುತ್ತಿದ್ದೆನು, ಕಿರೀಟವನ್ನಾಗಿ ಧರಿಸುತ್ತಿದ್ದೆನು.

[37] ಪ್ರಭುವಿನಂತೆ ಆತನ ಸಾನ್ನಿಧ್ಯದಲ್ಲಿ ಪ್ರವೇಶಿಸಿ ನನ್ನ ಹೆಜ್ಜೆಗಳ ಲೆಕ್ಕವನ್ನು, ಆತನಿಗೆ ಅರಿಕೆಮಾಡಿಕೊಳ್ಳುತ್ತಿದ್ದೆನು.

[38] ನನ್ನ ಭೂಮಿಯು ನನ್ನ ಮೇಲೆ ಕೂಗಿಕೊಂಡರೆ ಅದರ ನೇಗಿಲ ಗೆರೆಗಳೆಲ್ಲಾ ಅತ್ತರೆ,

[39] ನಾನು ಹಣಕೊಡದೆ ಅದರ ಸಾರವನ್ನು ಅನುಭವಿಸಿ, ಅದರ ದಣಿಗಳ ಪ್ರಾಣ ಹಾನಿಗೆ ಕಾರಣನಾಗಿದ್ದರೆ,

[40] ಗೋದಿಗೆ ಬದಲಾಗಿ ಮುಳ್ಳುಗಳೂ, ಜವೆಗೋದಿಗೆ ಪ್ರತಿಯಾಗಿ ಕೆಟ್ಟ ಕಳೆಗಳೂ ಬೆಳೆಯಲಿ.” ಎಂದನು. ಹೀಗೆ ಯೋಬನ ಮಾತುಗಳು ಮುಗಿದವು.

ಯೋಬನು — Chapters