Skip to content
Opens in a new window
Listen to this chapter • 4:08

[1] ಅದಿರಲಿ, ಯೋಬನೇ, ನನ್ನ ಮಾತನ್ನು ಕೇಳು, ನನ್ನ ಮಾತುಗಳಿಗೆಲ್ಲಾ ಕಿವಿಗೊಡು.

[2] ಇಗೋ, ನನ್ನ ಬಾಯನ್ನು ತೆರೆದಿದ್ದೇನೆ, ನನ್ನ ನಾಲಿಗೆಯು ಬಾಯಿಯೊಳಗಿಂದ ಮಾತನಾಡುತ್ತಿದೆ.

[3] ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುವವು, ನನ್ನ ತುಟಿಗಳು ತಿಳಿದುಕೊಂಡದ್ದನ್ನೇ ಸತ್ಯವಾಗಿ ಹೇಳುವವು.

[4] ನಾನು ದೇವರಾತ್ಮನಿಂದಲೇ ನಿರ್ಮಿತನಾಗಿದ್ದೇನೆ, ನನ್ನ ಜೀವವು ಸರ್ವಶಕ್ತನಾದ ದೇವರ ಶ್ವಾಸದಿಂದುಂಟಾಗಿದೆ.

[5] ನಿನಗೆ ಸಾಮರ್ಥ್ಯವಿದ್ದರೆ ನನಗೆ ಉತ್ತರಕೊಡು, ನನ್ನೆದುರಿನಲ್ಲಿಯೇ ವಾದವನ್ನು ಹೂಡಿ ನಿಂತುಕೋ.

[6] ನೋಡು, ನಾನು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇದ್ದೇನೆ. ನಾನೂ ಜೇಡಿಮಣ್ಣಿನಿಂದ ರೂಪಿಸಲ್ಪಟ್ಟಿದ್ದೇನೆ.

[7] ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು, ನನ್ನ ಒತ್ತಾಯವು ನಿನಗೆ ಹೊರೆಯಾಗಿರದು.

[8] ನಿನ್ನ ನುಡಿಯ ಧ್ವನಿಯನ್ನು ಕೇಳಿದ್ದೇನೆ, ನನ್ನ ಕಿವಿಗೆ ಬಿದ್ದ ಈ ಮಾತುಗಳನ್ನು ಆಡಿದ್ದಿ,

[9] ‘ನಾನು ಪರಿಶುದ್ಧನು, ನನ್ನೊಳಗೆ ದೋಷವಿಲ್ಲ, ನಾನು ನಿರ್ಮಲನು, ನನ್ನಲ್ಲಿ ಏನು ಪಾಪವಿಲ್ಲ.

[10] ಆಹಾ, ಆತನು ನನ್ನಲ್ಲಿ ವಿರೋಧಕ್ಕೆ ಕಾರಣಗಳನ್ನು, ನನ್ನನ್ನು ಶತ್ರುವೆಂದು ಎಣಿಸಿಕೊಂಡಿದ್ದಾನೆ.

[11] ನನ್ನ ಕಾಲುಗಳನ್ನು ಕೋಳಕ್ಕೆ ಹಾಕಿ, ನನ್ನ ಮಾರ್ಗಗಳನ್ನೆಲ್ಲಾ ಕಂಡುಕೊಂಡಿದ್ದಾನೆ’ ಎಂದು ಹೇಳಿದೆಯಲ್ಲಾ.

[12] ಇಗೋ, ನೀನು ಹೀಗೆ ಹೇಳಿದ್ದು ನ್ಯಾಯವಲ್ಲವೆಂಬುದೇ ನನ್ನ ಉತ್ತರ, ದೇವರು ಮನುಷ್ಯನಿಗಿಂತ ದೊಡ್ಡವನಾಗಿದ್ದಾನಷ್ಟೆ.

[13] ಆತನು ನಿನ್ನ ಮಾತುಗಳಲ್ಲಿ ಒಂದಕ್ಕಾದರೂ ಉತ್ತರ ದಯಪಾಲಿಸನೆಂಬುದಾಗಿ, ನೀನು ಆತನೊಂದಿಗೆ ವ್ಯಾಜ್ಯವಾಡುವುದೇಕೆ?

[14] ದೇವರು ಮಾತನಾಡುವ ರೀತಿ ಒಂದುಂಟು ಹೌದು, ಎರಡೂ ಉಂಟು, ಮನುಷ್ಯನಾದರೋ ಲಕ್ಷಿಸುವುದಿಲ್ಲ.

[15] ಮನುಷ್ಯರಿಗೆ ಗಾಢನಿದ್ರೆಯು ಉಂಟಾದಾಗಲೂ, ಹಾಸಿಗೆಯ ಮೇಲೆ ಮಲಗಿದಾಗ ಜೊಂಪುಹತ್ತಿದಾಗಲೂ ಆತನು ಸ್ವಪ್ನದಲ್ಲಿ ರಾತ್ರಿಯ ಕನಸಿನಲ್ಲಿ,

[16] ಅವರ ಕಿವಿಗಳನ್ನು ತೆರೆದು, ಅವರಿಗೆ ಶಿಕ್ಷಾವಚನವನ್ನು ಉಪದೇಶಿಸಿ ಅದಕ್ಕೆ ಮುದ್ರೆ ಹಾಕುವನು.

[17] ಹೀಗೆ ಮನುಷ್ಯನನ್ನು ಅವನ ದುಷ್ಕಾರ್ಯದಿಂದ ತಪ್ಪಿಸುವನು, ಮಾನವನಿಗೆ ಗರ್ವವನ್ನು ಮರೆಮಾಡುವನು.

[18] ಅವನ ಆತ್ಮವನ್ನು ಅಧೋಲೋಕಕ್ಕೆ ಬೀಳದಂತೆ ತಡೆದು, ಅವನ ಜೀವವನ್ನು ದೈವಾಸ್ತ್ರದಿಂದ ಅಳಿದು ಹೋಗದ ಹಾಗೆ ನಿಲ್ಲಿಸುವನು.

[19] ಇದಲ್ಲದೆ ಸಂಕಟದಿಂದಲೂ, ನಿತ್ಯವಾದ ಎಲುಬುಗಳ ನೋವಿನಿಂದಲೂ, ಮನುಷ್ಯನು ಹಾಸಿಗೆಯ ಮೇಲೆ ಶಿಕ್ಷಿಸಲ್ಪಡುವನು.

[20] ಅವನ ಜೀವವು ಆಹಾರಕ್ಕೆ ಬೇಸರಗೊಳ್ಳುವುದು, ಅವನ ಆತ್ಮವು ಮೃಷ್ಟಾನ್ನಕ್ಕೂ ಅಸಹ್ಯಪಡುವುದು.

[21] ಅವನ ಮಾಂಸವು ಕ್ಷಯಿಸಿ ಕಾಣದೆ ಹೋಗುವುದು, ಕಾಣದಿದ್ದ ಅವನ ಎಲುಬುಗಳು ಬಯಲಾಗುವವು.

[22] ಅವನ ಆತ್ಮವು ಅಧೋಲೋಕವನ್ನು ಸಮೀಪಿಸುವುದು, ಅವನ ಪ್ರಾಣವು ಸಂಹಾರದೂತರಿಗೆ ಹತ್ತಿರವಾಗುವುದು.

[23] ಮನುಷ್ಯನ ಕರ್ತವ್ಯವನ್ನು ತೋರಿಸತಕ್ಕ ಸಹಸ್ರ ದೇವದೂತರಲ್ಲಿ ಒಬ್ಬನು ಅವನಿಗೆ ಮಧ್ಯಸ್ಥನಾಗಿ ಬೇಡುವುದರಿಂದ,

[24] ದೇವರು ಒಂದು ವೇಳೆ ಆ ಮನುಷ್ಯನನ್ನು ಮೆಚ್ಚಿ ಈಡು ದೊರಕುವಂತೆ ಮಾಡಿ, ‘ಅಧೋಲೋಕಕ್ಕೆ ಇಳಿಯದಂತೆ ಇವನನ್ನು ರಕ್ಷಿಸು’ ಎಂದು ಅಪ್ಪಣೆಕೊಟ್ಟರೆ,

[25] ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವುದು. ಅವನು ಪುನಃ ಎಳೆತನದ ಚೈತನ್ಯವನ್ನು ಅನುಭವಿಸುವನು.

[26] ಅವನು ದೇವರನ್ನು ಪ್ರಾರ್ಥಿಸಿ ಆತನ ಒಲುಮೆಗೆ ಪಾತ್ರನಾಗಿ, ಆತನ ದರ್ಶನ ಮಾಡಿ ಉತ್ಸಾಹದಿಂದ ಧ್ವನಿಗೈದು, ತಿರುಗಿ ಆತನಿಂದ ನೀತಿವಂತನೆಂದು ಎನ್ನಿಸಿಕೊಳ್ಳುವನು.

[27] ಅವನು ಮನುಷ್ಯರ ಮುಂದೆ ನಿಂತು, ‘ನಾನು ಪಾಪ ಮಾಡಿ ನ್ಯಾಯವನ್ನು ಕೆಡಿಸಿದ್ದರೂ, ಆತನು ಮುಯ್ಯಿತೀರಿಸಲಿಲ್ಲ.

[28] ನನ್ನ ಆತ್ಮವನ್ನು ಅಧೋಲೋಕಕ್ಕೆ ಹೋಗದಂತೆ ವಿಮೋಚಿಸಿದ್ದಾನೆ, ನನ್ನ ಜೀವವು ಬೆಳಕನ್ನು ಕಾಣುತ್ತಿರುವುದು’ ಎಂದು ಕೀರ್ತನೆ ಹಾಡುವನು.

[29] ದೇವರು ಎರಡು ಸಾರಿ, ಹೌದು ಮೂರು ಸಾರಿ ಈ ಕಾರ್ಯಗಳನ್ನೆಲ್ಲಾ ಮಾಡುವನು.

[30] ನೋಡು, ಮನುಷ್ಯನ ಆತ್ಮವು ಅಧೋಲೋಕದಿಂದ ಹಿಂದಿರುಗಿ, ಜೀವಲೋಕದ ಬೆಳಕನ್ನು ಅನುಭವಿಸುವಂತೆ ಮಾಡುವನು

[31] ಯೋಬನೇ, ನನ್ನ ಕಡೆಗೆ ಗಮನವಿಟ್ಟು ಕೇಳು, ಮೌನವಾಗಿರು, ನಾನೇ ಮಾತನಾಡುವೆನು.

[32] ನೀನು ಏನಾದರೂ ಹೇಳಬೇಕೆಂದಿದ್ದರೆ ನನಗೆ ಉತ್ತರವಾಗಿ ಹೇಳು, ಮಾತನಾಡು, ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಆಶೆ.

[33] ಇಲ್ಲವಾದರೆ ನೀನೇ ನನಗೆ ಕಿವಿಗೊಟ್ಟು ಮೌನವಾಗಿರು, ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.”

ಯೋಬನು — Chapters