Skip to content
Opens in a new window
Listen to this chapter • 2:24

[1] ಆಗ ಶೂಹ್ಯನಾದ ಬಿಲ್ದದನು ಪ್ರತ್ಯುತ್ತರವಾಗಿ ಹೀಗೆಂದನು,

[2] “ಇನ್ನೆಷ್ಟರವರೆಗೆ ಮಾತುಗಳನ್ನು ಹಿಡಿಯುವುದಕ್ಕೆ ಹೊಂಚು ಹಾಕುತ್ತಿರುವೆ? ಮೊದಲು ನೀನು ಆಲೋಚಿಸು, ಆ ಮೇಲೆ ಮಾತನಾಡೋಣ.

[3] ಏಕೆ ನಮ್ಮನ್ನು ಮೃಗಗಳೆಂದು ಎಣಿಸಿದ್ದೀ? ನಿನ್ನ ದೃಷ್ಟಿಯಲ್ಲಿ ನಾವು ದಡ್ಡರೋ?

[4] ಸಿಟ್ಟಿನಿಂದ ನಿನ್ನನ್ನು ಸೀಳಿಕೊಳ್ಳುವವನೇ, ನಿನಗಾಗಿ ಲೋಕವೇ ಹಾಳಾಗಬೇಕೋ, ಬಂಡೆಯು ತನ್ನ ಸ್ಥಳದಿಂದ ಜರುಗಬೇಕೋ?

[5] ಹೇಗಾದರೂ ದುಷ್ಟನ ದೀಪವು ಆರುವುದು, ಅವನ ಒಲೆಯು ಉರಿಯುವುದಿಲ್ಲ.

[6] ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು, ಅವನ ಮೇಲಣ ತೂಗು ದೀವಿಗೆಯು ನಂದಿಹೋಗುವುದು.

[7] ಅವನ ಬಲವುಳ್ಳ ಹೆಜ್ಜೆಗಳು ಇಕ್ಕಟ್ಟಾಗುವುದು, ಅವನ ಆಲೋಚನೆಯೇ ಅವನನ್ನು ಕೆಡವಿಹಾಕುವುದು.

[8] ತನ್ನ ಹೆಜ್ಜೆಗಳಿಂದಲೇ ಬಲೆಗೆ ಬೀಳುವನು, ಹಾಳು ಗುಂಡಿಯ ಮೇಲೆ ನಡೆಯುವನು.

[9] ಬಲೆ ಅವನ ಹಿಮ್ಮಡಿಯನ್ನು ಸಿಕ್ಕಿಸಿ ಕಚ್ಚುವುದು, ಉರುಲು ಅವನನ್ನು ಹಿಡಿಯುವುದು.

[10] ನೆಲದ ಮೇಲೆ ಪಾಶವೂ, ದಾರಿಯಲ್ಲಿ ಜಾಲವೂ ಅವನಿಗಾಗಿ ಹೊಂಚಿಕೊಂಡಿರುವವು.

[11] ಎಲ್ಲಾ ಕಡೆಯಲ್ಲಿಯೂ ಅಪಾಯಗಳು ಅವನನ್ನು ಹೆದರಿಸಿ; ಅವನ ಹಿಮ್ಮಡಿ ತುಳಿಯುತ್ತಾ ಬೆನ್ನು ಹತ್ತುವವು.

[12] ಅವನ ಬಲವು ಕುಂದಿಹೋಗುವುದು. ಅವನು ಎಡವಿ ಬಿದ್ದಾನೇ ಎಂದು ವಿಪತ್ತು ಕಾದಿರುವುದು.

[13] ಮೃತ್ಯುವಿನ ಹಿರಿಯ ಮಗನು ಅವನ ಚರ್ಮವನ್ನು ಚೂರು ಚೂರಾಗಿ ತಿಂದು, ಅವನ ಅಂಗಗಳನ್ನು ನುಂಗಿಬಿಡುವನು.

[14] ಅವನ ನಿರ್ಭಯದ ಗುಡಾರದಿಂದ ಅವನನ್ನು ಎಳೆದು, ಮಹಾಭೀತಿಗಳ ರಾಜನ ಸನ್ನಿಧಿಗೆ ಸಾಗಿಸಿಕೊಂಡು ಹೋಗುವನು.

[15] ಅವನ ಸಂಬಂಧಿಕರಲ್ಲದವರು ಅವನ ಗುಡಾರದಲ್ಲಿ ವಾಸಿಸುವರು, ಅವನ ಮನೆಯ ಮೇಲೆ ಗಂಧಕವು ಎರಚಲ್ಪಡುವುದು.

[16] ಅವನ ವಂಶವೃಕ್ಷದ ಬೇರುಗಳು ಒಣಗುವುದು, ಅದರ ರೆಂಬೆಯು ಮೇಲೆ ಬಾಡುವುದು.

[17] ಅವನ ಸ್ಮರಣೆಯು ಭೂಮಿಯಲ್ಲಿ ಅಳಿದುಹೋಗುವುದು, ಅವನ ಹೆಸರು ಹೊರಗಣ ಪ್ರಾಂತ್ಯಗಳಲ್ಲಿಯೂ ಇರುವುದಿಲ್ಲ.

[18] ಅವನನ್ನು ಬೆಳಕಿನಿಂದ ಕತ್ತಲೆಗೆ ನೂಕಿ, ಲೋಕದಿಂದಲೇ ಅಟ್ಟಿಬಿಡುವರು.

[19] ಅವನಿಗೆ ಸ್ವಜನರಲ್ಲಿ ಮಗನಾಗಲಿ, ಮೊಮ್ಮಗನಾಗಲಿ ಇರುವುದಿಲ್ಲ. ಅವನು ವಾಸಿಸುವ ಸ್ಥಳದಲ್ಲಿ ಯಾರೂ ಉಳಿಯುವುದಿಲ್ಲ.

[20] ಪಡುವಣದವರು ಅವನ ನಾಶದ ದಿನವನ್ನು ನೋಡಿ ಹೆದರುವರು, ಹಾಗೆಯೇ ಮೂಡಣದವರು ಭಯಭ್ರಾಂತರಾಗುವರು.

[21] ಕೆಡುಕರ ನಿವಾಸಗಳ ಸ್ಥಿತಿಯು ಇಂಥದೇ. ದೇವರನ್ನು ಲಕ್ಷಿಸದವನ ಸ್ಥಿತಿಯು ಹೀಗೆಯೇ ಇರುತ್ತದೆ.”

ಯೋಬನು — Chapters