[1] ಆಗ ಯೋಬನು ಹೀಗೆ ಉತ್ತರಕೊಟ್ಟನು,
[2] “ಇಂಥಾ ಮಾತುಗಳನ್ನು ಬಹಳವಾಗಿ ಕೇಳಿದ್ದೇನೆ, ನೀವೆಲ್ಲರೂ ಬೇಸರಿಕೆಯನ್ನು ಹುಟ್ಟಿಸುವ ಮಾತನಾಡುವಿರಿ. ಆದರಣೆಗೆ ಬದಲಾಗಿ ಬಾಧಿಸುವವರು ನೀವು.
[3] ನೀವಾಡುವ ಒಣಮಾತುಗಳಿಗೆ ಇತಿಮಿತಿ ಇಲ್ಲವೇ? ಇಂತಹ ಮಾತನಾಡಲು ಒತ್ತಾಯಪಡಿಸಿದ್ದೇನೆಯೇ?
[4] ನಾನೂ ನಿಮ್ಮ ಹಾಗೆ ಮಾತನಾಡಬಲ್ಲೆನು; ನಾನು ನಿಮ್ಮಂತೆ ಇದ್ದಿದ್ದರೆ, ನಾನು ನಿಮ್ಮ ವಿರುದ್ಧವಾಗಿ ಮಾತುಗಳನ್ನು ಹೆಣೆದು ನಿಮ್ಮ ವಿಷಯದಲ್ಲಿ ತಲೆಯಾಡಿಸಬಹುದಾಗಿತ್ತು.
[5] ನಾನೂ ಬಾಯಿಮಾತಿಗಾಗಿ ನಿಮ್ಮನ್ನು ಧೈರ್ಯಗೊಳಿಸಿ, ತುಟಿಗಳ ಆದರಣೆಯಿಂದ ನಿಮ್ಮ ದುಃಖವನ್ನು ಶಮನಪಡಿಸಬಹುದಾಗಿತ್ತು.
[6] ನಾನು ಮಾತನಾಡಿದರೂ, ನನ್ನ ಮನೋವ್ಯಥೆಯು ಶಾಂತವಾಗುವುದಿಲ್ಲ. ಸುಮ್ಮನಾದರೂ, ಕಷ್ಟ ನಿವಾರಣೆಯಾಗುವುದಿಲ್ಲ.
[7] ಆದರೆ ಈಗ ಆತನು ನನ್ನನ್ನು ಕುಂದಿಸಿದ್ದಾನೆ; (ದೇವಾ) ನೀನು ನನ್ನ ಬಳಗದವರನ್ನೆಲ್ಲಾ ಹಾಳು ಮಾಡಿದ್ದಿ.
[8] ನೀನು ನನ್ನನ್ನು ಹಿಡಿದಿರುವುದು ನನಗೆ ಪ್ರತಿಸಾಕ್ಷಿಯಾಗಿದೆ, ನನ್ನ ಬಲಹೀನವು ನನ್ನ ವಿರುದ್ಧವಾಗಿ ನನ್ನ ಮುಖದ ಮುಂದೆ ಸಾಕ್ಷಿಕೊಡುತ್ತದೆ.
[9] ಆತನ ಸಿಟ್ಟು ನನ್ನನ್ನು ಸೀಳಿ ಹಿಂಸಿಸುತ್ತಿದೆ; ಆತನು ನನ್ನ ಮೇಲೆ ಹಲ್ಲು ಕಡಿದಿದ್ದಾನೆ, ಆತನು ನನ್ನ ಮೇಲೆ ದೃಷ್ಟಿಯನ್ನು ತೀಕ್ಷ್ಣ ಮಾಡಿದ್ದಾನೆ.
[10] ನನಗೆ ವಿರುದ್ಧವಾಗಿ ಹಲವರು ಗುಂಪುಕೂಡಿ ನನ್ನನ್ನು ಅಣಕಿಸಿ ಛೀಮಾರಿ ಹಾಕಿ, ನನ್ನ ದವಡೆಯ ಮೇಲೆ ಬಡಿದಿದ್ದಾರೆ.
[11] ದೇವರು ನನ್ನನ್ನು ಅಪರಿಶುದ್ಧರಿಗೆ ಒಪ್ಪಿಸಿ, ದುಷ್ಟರ ಕೈಗೆ ಒಪ್ಪಿಸಿಬಿಟ್ಟಿದ್ದಾನೆ.
[12] ನಾನು ನೆಮ್ಮದಿಯಿಂದಿದ್ದಾಗ ಆತನು ನನ್ನನ್ನು ಒಡೆದು ಹಾಕಿದನು; ಕತ್ತುಹಿಡಿದು ನನ್ನನ್ನು ಚೂರು ಚೂರು ಮಾಡಿದನು. ಬಾಣ ಪ್ರಯೋಗಿಸಲು ನನ್ನನ್ನು ಗುರಿಮಾಡಿಕೊಂಡಿದ್ದಾನೆ.
[13] ಆತನ ಬಾಣಗಳು ನನ್ನನ್ನು ಮುತ್ತಿಕೊಂಡಿವೆ. ಆತನು ಕರುಣೆಯಿಲ್ಲದೆ ನನ್ನ ಅಂತರಂಗವನ್ನು ಇರಿದು, ಭೂಮಿಯ ಮೇಲೆ ನನ್ನ ಪಿತ್ತವನ್ನು ಸುರಿಸುತ್ತಾನೆ.
[14] ಮೇಲಿಂದ ಮೇಲೆ ನನಗೆ ಪೆಟ್ಟುಕೊಟ್ಟು ನನ್ನನ್ನು ಶಕ್ತಿಹೀನನಾಗಿ ಮಾಡಿದ್ದಾನೆ ಶೂರನ ಹಾಗೆ ನನ್ನ ಮೇಲೆ ಎರಗುತ್ತಾನೆ.
[15] ಗೋಣಿಯನ್ನು ಹೊಲೆದು ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಕೊಂಬನ್ನು ಧೂಳಿನಲ್ಲಿ ತಗ್ಗಿಸಿಕೊಂಡಿದ್ದೇನೆ.
[16] ಕಣ್ಣೀರು ಸುರಿಯುವುದರಿಂದ ನನ್ನ ಮುಖವು ಕೆಂಪಾಗಿ ಹೋಗಿದೆ. ರೆಪ್ಪೆಯ ಮೇಲೆ ಮರಣಾಂಧಕಾರವು ಕವಿದಿದೆ.
[17] ಆದರೆ ನನ್ನ ಕೈ ಯಾವ ಬಲಾತ್ಕಾರವನ್ನೂ ಮಾಡಿಲ್ಲವಲ್ಲಾ, ನನ್ನ ವಿಜ್ಞಾಪನೆಯು ನಿರ್ಮಲವಾದದ್ದು.
[18] ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ! ನನ್ನ ಮೊರೆಗೆ ಬಿಡುವು ಸಿಕ್ಕದಿರಲಿ!
[19] ಆಹಾ, ಈಗಲೂ ನನ್ನ ಕಡೆಯ ಸಾಕ್ಷಿಯು ಆಕಾಶದಲ್ಲಿ ಉಂಟು, ನನ್ನ ಪಕ್ಷದ ಹೊಣೆಗಾರನು ಮೇಲಣ ಲೋಕದಲ್ಲಿದ್ದಾನೆ.
[20] ಗೆಳೆಯರೋ ನನ್ನನ್ನು ಹೀನೈಸುವವರಾಗಿದ್ದಾರೆ, ನಾನಾದರೋ ದೇವರ ಮುಂದೆ ಕಣ್ಣೀರು ಸುರಿಸುತ್ತಿರುವೆನು.
[21] ನನ್ನ ನ್ಯಾಯವನ್ನು ದೇವರ ಮುಂದೆಯೂ, ಮಾನವನ ನ್ಯಾಯವನ್ನು ಅವನ ಮಿತ್ರನ ಮುಂದೆಯೂ ಸ್ಥಾಪಿಸಲಿ ಎಂದು ದೇವರಿಗೆ ಕಣ್ಣೀರು ಸುರಿಸುತ್ತೇನೆ.
[22] ನಾನು ಹಿಂದಿರುಗದ ದಾರಿಯನ್ನು, ಕೆಲವು ವರ್ಷಗಳೊಳಗೆ ಹಿಡಿಯುವೆನು.”