[1] “ಸರ್ವಶಕ್ತನಾದ ದೇವರು ಏಕೆ ದುಷ್ಟರಿಗೆ ದಂಡನೆಯ ಕಾಲಗಳನ್ನು ನೇಮಿಸಿ ಇಟ್ಟುಕೊಂಡಿಲ್ಲ? ಆತನನ್ನು ಅರಿತವರಿಗೆ ಆತನ ನ್ಯಾಯತೀರ್ಪಿನ ದಿನಗಳು ಏಕೆ ಗೋಚರವಾಗುವುದಿಲ್ಲ?
[2] ಮೇರೆಗಳನ್ನು ದಾಟಿ ಆಶ್ರಯಿಸಿಕೊಳ್ಳುವವರು ಇದ್ದಾರೆ. ದನಕುರಿಗಳನ್ನು ಅಪಹರಿಸಿ ಸಾಕಿಕೊಳ್ಳುವವರಿದ್ದಾರೆ.
[3] ಅನಾಥರ ಕತ್ತೆಯನ್ನು ಹೊಡೆದುಕೊಂಡು ಹೋಗುತ್ತಾರೆ, ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
[4] ದಿಕ್ಕಿಲ್ಲದವರನ್ನು ದಾರಿತಪ್ಪಿಸುತ್ತಾರೆ, ನಾಡಿನ ಬಡವರು ಒಟ್ಟಾಗಿ ಅಡಗಿಕೊಳ್ಳುತ್ತಾರೆ.
[5] ಇಗೋ, ಅಡವಿಯಲ್ಲಿ ಕಾಡುಕತ್ತೆಗಳು ಹೇಗೋ ಹಾಗೆಯೇ, ಇವರು ತಮ್ಮ ಹೊಟ್ಟೇ ಪಾಡಿಗಾಗಿ ಹೊರಟು ಆಹಾರವನ್ನು ಆತುರವಾಗಿ ಹುಡುಕುವರು; ಅರಣ್ಯವೇ ಇವರ ಮಕ್ಕಳಿಗಾಗಿ ಆಹಾರವನ್ನು ಒದಗಿಸುವುದು.
[6] ತಮ್ಮ ಹೊಟ್ಟೆಗಾಗಿ ಬಯಲಿನಲ್ಲಿ ಸೊಪ್ಪನ್ನು ಕೊಯ್ದುಕೊಳ್ಳುವರು, ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುವರು.
[7] ಹೊದಿಕೆ ಇಲ್ಲದೆ ಬೆತ್ತಲೆಯಾಗಿ ರಾತ್ರಿಯನ್ನು ಕಳೆಯುವರು, ಚಳಿಗಾಲದಲ್ಲಿಯೂ ಅವರಿಗೆ ಬಟ್ಟೆಯಿಲ್ಲ.
[8] ಮಲೆನಾಡಿನ ದೊಡ್ಡ ಮಳೆಯಿಂದ ನೆನೆದುಹೋಗಿ, ಆಶ್ರಯವಿಲ್ಲದೆ ಬಂಡೆಯನ್ನು ಅಪ್ಪಿಕೊಳ್ಳುವರು.
[9] ತಂದೆಯಿಲ್ಲದ ಮಗುವನ್ನು ತಾಯಿಯ ಮೊಲೆಯಿಂದ ಕಿತ್ತು, ಬಡವರಿಂದ ಒತ್ತೆ ತೆಗೆದುಕೊಳ್ಳುವವರಿದ್ದಾರೆ.
[10] ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಅಲೆಯುವರು; ಹಸಿವಿನಿಂದಲೇ ಸಿವುಡುಗಳನ್ನು ಹೊರುವರು.
[11] ಯಜಮಾನರ ಪೌಳಿಗೋಡೆಗಳೊಳಗೇ ಇದ್ದುಕೊಂಡು ಎಣ್ಣೆಗಾಣವನ್ನು ತಿರುಗಿಸುವರು; ದಾಹಗೊಂಡೇ ಅವರ ತೊಟ್ಟಿಗಳಲ್ಲಿ ದ್ರಾಕ್ಷಿಯನ್ನು ತುಳಿಯುವರು.
[12] ತುಂಬಿದ ಪಟ್ಟಣದೊಳಗಿಂದ ಜನರು ನರಳುವರು, ಗಾಯಪಟ್ಟವರು ಮೊರೆಯಿಡುವರು, ಆದರೆ ದೇವರಾದರೋ ಅವರ ಮೊರೆಗೆ ಕಿವಿಗೊಡನು.
[13] ಬೆಳಕಿನ ವಿರುದ್ಧ ತಿರುಗಿ ಬಿದ್ದವರು ಇದ್ದಾರೆ; ಇವರು ಹಗಲಿನ ದಾರಿಗಳನ್ನು ತಿಳಿಯದವರಾಗಿ, ಅದರ ಹಾದಿಗಳಲ್ಲಿ ಇರುವುದಿಲ್ಲ.
[14] ಕೊಲೆಪಾತಕನು ಮುಂಜಾನೆ ಎದ್ದು, ದಿಕ್ಕಿಲ್ಲದ ಬಡವರನ್ನು ಕೊಂದು, ರಾತ್ರಿಯಲ್ಲಿ ಕಳ್ಳನಂತಿರುವನು.
[15] ಜಾರನು ತಾನು, ಯಾರ ಕಣ್ಣಿಗೂ ಬೀಳಬಾರದು ಎಂದು, ಸಂಜೆಯನ್ನು ಎದುರು ನೋಡುತ್ತಿದ್ದು ಮುಖಕ್ಕೆ ಮುಸುಕು ಹಾಕಿಕೊಳ್ಳುವನು.
[16] ಅವರು ಕತ್ತಲಲ್ಲಿ ಕನ್ನಕೊರೆದು ಮನೆಗಳೊಳಗೆ ನುಗ್ಗಿ; ಹಗಲಿನಲ್ಲಿ ಅಡಗಿಕೊಂಡಿದ್ದು; ಬೆಳಕನ್ನು ತಿಳಿಯದೆ ಇರುವರು.
[17] ಅವರೆಲ್ಲರಿಗೂ ಬೆಳಕು ಕಾರ್ಗತ್ತಲಿನಂತಿರುವುದು, ಕಾರ್ಗತ್ತಲಿನ ಅಪಾಯಗಳನ್ನು ಅವರು ಬಲ್ಲರಷ್ಟೆ.
[18] (ನೀವು ಹೇಳುವುದೇನೆಂದರೆ) ದುಷ್ಟನು ಪ್ರವಾಹದಲ್ಲಿ ವೇಗವಾಗಿ ಕೊಚ್ಚಿಕೊಂಡು ಹೋಗುವನು, ಭೂಲೋಕದ ಅವನ ಆಸ್ತಿಯು ಶಾಪಗ್ರಸ್ತವಾಗಿರುವುದು. ದ್ರಾಕ್ಷಿತೋಟಗಳ ಕಡೆಗೆ ತಿರುಗಲಾರನು.
[19] ಬರಗಾಲವೂ, ಬಿಸಿಲೂ ಹಿಮದ ನೀರನ್ನು ಹೀರುವ ಹಾಗೆ, ಪಾತಾಳವು ಪಾಪಿಗಳನ್ನು ಎಳೆದುಕೊಳ್ಳುವುದು.
[20] ಹೆತ್ತ ಹೊಟ್ಟೆಯೇ ಅವನನ್ನು ಮರೆತುಬಿಡುವುದು; ಹುಳವು ಅವನ ಹೆಣವನ್ನು ಸವಿದು ತಿನ್ನುವುದು; ಇನ್ನು ಮೇಲೆ ಯಾರಿಗೂ ಅವನ ನೆನಪಿರದು; ಅನ್ಯಾಯವು ಮರದ ಹಾಗೆ ಮುರಿಯಲ್ಪಡುವುದು.
[21] ಅವನು ಮಕ್ಕಳಿಲ್ಲದ ಬಂಜೆಯರನ್ನು ನುಂಗಿಬಿಟ್ಟು, ವಿಧವೆಯರನ್ನು ಉದ್ಧರಿಸದೆ ಹೋದನಷ್ಟೆ (ಎಂಬುದೇ).
[22] ದೇವರಂತು ತನ್ನ ಶಕ್ತಿಯಿಂದ ಬಲಿಷ್ಠರನ್ನು ಉಳಿಸುತ್ತಾನೆ, ಅವರು ತಮ್ಮ ಜೀವವು ಇನ್ನು ಉಳಿಯುವುದಿಲ್ಲವೆಂದು ನಂಬಿದ್ದರೂ ಉದ್ಧಾರವಾಗುವರು.
[23] ದೇವರು ಅವರಿಗೆ ಅಭಯವನ್ನು ಕೊಟ್ಟಿದ್ದರಿಂದ ಅವರು ಅದನ್ನು ಆಧಾರಮಾಡಿಕೊಳ್ಳುವರು; ಆತನ ಕಟಾಕ್ಷವು ಅವರ ಮಾರ್ಗಗಳ ಮೇಲಿರುವುದು.
[24] ಅವರು ಉನ್ನತಿಗೆ ಬರುವರು; ಸ್ವಲ್ಪ ಕಾಲದ ಮೇಲೆ ಅವರು ಎಲ್ಲಿಯೋ? ಸರ್ವ ಮನುಷ್ಯರೊಂದಿಗೆ ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಕೆಳಕ್ಕೆ ಬಿದ್ದು ಕೂಡಿಸಲ್ಪಡುವರು.
[25] ಹೀಗಲ್ಲವೆಂದು ನೀವು ನಂಬಿದರೆ ನಾನು ಸುಳ್ಳುಗಾರನೆಂದೂ ನನ್ನ ಮಾತುಗಳು ನಿರರ್ಥಕವೆಂದೂ; ನಿಮ್ಮಲ್ಲಿ ಯಾರು ಸ್ಥಾಪಿಸಬಲ್ಲರು?.”