Skip to content
Opens in a new window
Listen to this chapter • 2:07

[1] ಆ ಮೇಲೆ ಎಲೀಹು ಮತ್ತೆ ಇಂತೆಂದನು,

[2] “ನೀತಿಯಿಂದ ನನಗೇನು ಪ್ರಯೋಜನವಾಯಿತು? ಪಾಪಮಾಡದೆ ಇದ್ದುದರಿಂದ ನನಗಾದ ಹೆಚ್ಚು ಲಾಭವೇನು?

[3] ಈ ರೀತಿ ನೀನು ನುಡಿಯುವುದು ನ್ಯಾಯವೆಂದು ನೀನು ಊಹಿಸಿಕೊಂಡು, ನನ್ನ ನೀತಿಯು ದೇವರ ನೀತಿಗಿಂತ ಹೆಚ್ಚೆಂದುಕೊಳ್ಳುತ್ತಿಯಾ?

[4] ನಾನು ನಿನಗೂ, ನಿನ್ನ ಜೊತೆಗಾರರಿಗೂ ಕೂಡ ಉತ್ತರಕೊಡುವೆನು.

[5] ಕಣ್ಣೆತ್ತಿ ಗಗನಮಂಡಲವನ್ನು ನೋಡು, ಮೇಘಮಾರ್ಗವನ್ನು ದೃಷ್ಟಿಸು, ಅವು ನಿನಗಿಂತ ಎಷ್ಟೋ ಎತ್ತರವಾಗಿವೆ!

[6] ನೀನು ಪಾಪಮಾಡಿದ್ದರೆ ಆತನಿಗೆ ಏನು ಮಾಡಿದಂತಾಯಿತು? ನಿನ್ನ ದ್ರೋಹಗಳು ಹೆಚ್ಚಾಗಿದ್ದರೂ ಆತನಿಗೇನು?

[7] ನೀನು ನೀತಿವಂತನಾಗಿದ್ದರೆ ಆತನಿಗೇನು ಕೊಟ್ಟಂತಾಯಿತು? ನಿನ್ನ ಕೈಯಿಂದ ಆತನಿಗೆ ಲಾಭವೇನು?

[8] ನಿನ್ನ ಕೆಟ್ಟತನದಿಂದ ನಿನ್ನಂಥ ಮನುಷ್ಯನಿಗೇ ನಷ್ಟವಾದೀತು, ನಿನ್ನ ನೀತಿಯಿಂದ ನರಜನ್ಮದವನಿಗೇನು ಲಾಭ ಸಿಕ್ಕಬಹುದು.

[9] ಅಪಾರವಾದ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾ, ಬಲಿಷ್ಠರ ಭುಜಬಲದಿಂದ ಪೀಡಿತರಾಗಿ ಕೂಗಿಕೊಳ್ಳುವರು.

[10] ‘ನನ್ನ ಸೃಷ್ಟಿ ಕರ್ತನಾದ ದೇವರು ಎಲ್ಲಿ? ಆತನು ರಾತ್ರಿಯಲ್ಲಿಯೂ ಕೀರ್ತನೆಗಳನ್ನು ಹಾಡುತ್ತಾನಲ್ಲಾ ಎಂದು ಯಾರೂ ಹೇಳುವುದಿಲ್ಲ.

[11] ಆತನು ಕಾಡು ಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನು ಬೋಧಿಸುತ್ತಾ, ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ಧಿಯನ್ನು ನಮಗೆ ಕಲಿಸುತ್ತಾನೆ’ ಎಂದು ಹೇಳುವುದೇ ಇಲ್ಲ.

[12] ಇಂಥಾ ಸಂದರ್ಭದಲ್ಲಿ ಅವರು ದುಷ್ಟರ ಸೊಕ್ಕಿನಿಂದ ನೊಂದು ಗೋಳಾಡುವರು, ಆದರೂ ಆತನು ಉತ್ತರವನ್ನು ದಯಪಾಲಿಸುವುದಿಲ್ಲ.

[13] ದೇವರು ಮೂರ್ಖನ ಮಾತಿಗೆ ಕಿವಿಗೊಡುವುದೇ ಇಲ್ಲ, ಸರ್ವಶಕ್ತನಾದ ದೇವರು ಅದನ್ನು ಎಂದಿಗೂ ಲಕ್ಷಿಸುವುದಿಲ್ಲ.

[14] ಹೀಗಿರಲು ಆತನು ಕಾಣುವುದಿಲ್ಲ, ನನ್ನ ವ್ಯಾಜ್ಯವು ಆತನ ಮುಂದೆ ಇದೆ, ಆತನನ್ನು ಕಾದಿರುತ್ತೇನೆ ಎಂದು ನೀನು ಹೇಳಿದರೆ ಆತನು ಕೇಳುತ್ತಾನೆಯೇ?

[15] ಆತನು ದುಷ್ಟರ ಮೇಲೆ ತನ್ನ ಕೋಪವನ್ನು ತೀರಿಸದೆ ಇರುವ ಕಾರಣ ಆಹಾ, ಆತನು ದ್ರೋಹವನ್ನು ವಿಶೇಷವಾಗಿ ಗಮನಿಸುವುದಿಲ್ಲವೆಂದು,

[16] ಯೋಬನು ಸುಮ್ಮನೆ ಬಾಯಿ ತೆರೆಯುತ್ತಾನೆ, ಯಾವ ತಿಳಿವಳಿಕೆಯೂ ಇಲ್ಲದೆ ಬಹಳ ಮಾತನಾಡುತ್ತಾನೆ.”

ಯೋಬನು — Chapters