[1] ಆಗ ಯೋಬನು ಹೀಗೆ ಉತ್ತರಕೊಟ್ಟನು,
[2] “ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು! ಬಲಹೀನವಾದ ಕೈಗೆ ಮಹಾ ಸಹಾಯ ದೊರಕಿತು.
[3] ಬುದ್ಧಿಯಿಲ್ಲದವನಿಗೆ ನೀನು ಹೇಳಿದ ಬುದ್ಧಿಯನ್ನು ಎಷ್ಟೆಂದು ಹೇಳಲಿ! ಸುಜ್ಞಾನವನ್ನು ಧಾರಾಳವಾಗಿ ಉಪದೇಶಿಸಿದ್ದಿ!
[4] ಯಾರಿಗೆ ಮಾತುಗಳನ್ನು ಕಲಿಸಿದ್ದಿ? ನಿನ್ನಿಂದ ಹೊರಟ ನುಡಿಗಳನ್ನು ಯಾವ ಆತ್ಮವು ಪ್ರೇರೇಪಿಸಿತು?”
[5] ಅದಕ್ಕೆ ಬಿಲ್ದದನು, “ಜಲಚರಗಳಿಂದ ತುಂಬಿರುವ ಸಾಗರದ ಕೆಳಗಿನ ಲೋಕದಲ್ಲಿ, ಪ್ರೇತಗಳು ಆತನ ಭಯದಿಂದ ಯಾತನೆಪಡುವವು.
[6] ಪಾತಾಳವು ದೇವರ ದೃಷ್ಟಿಗೆ ತೆರೆದಿದೆ, ನಾಶಲೋಕವು ಮರೆಯಾಗಿಲ್ಲ.
[7] ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ, ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ.
[8] ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು, ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು.
[9] ತನ್ನ ಸಿಂಹಾಸನಕ್ಕೆ ಮರೆಯಾಗಿ, ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು.
[10] ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ, ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ.
[11] ಆಕಾಶಮಂಡಲದ ಸ್ತಂಭಗಳು, ಆತನ ಗದರಿಕೆಯಿಂದ ಬೆರಗಾಗಿ ಕದಲುವವು.
[12] ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು; ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು.
[13] ಆತನ ಶ್ವಾಸವು ಆಕಾಶಮಂಡಲವನ್ನು ಶುಭ್ರಮಾಡುವುದು, ಆತನ ಹಸ್ತವು ವೇಗವಾಗಿ ಓಡುವ ಸರ್ಪವನ್ನು ಇರಿಯುವುದು.
[14] ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇವೆ, ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?”