Skip to content
Opens in a new window
Listen to this chapter • 3:18

[1] ಆ ಮೇಲೆ ನಾಮಾಥ್ಯನಾದ ಚೋಫರನು ಹೀಗೆಂದನು,

[2] “ನನ್ನ ಮನೋವ್ಯಥೆಯು ಪ್ರತ್ಯುತ್ತರವನ್ನು ನನಗೆ ಹೇಳಿಕೊಡುತ್ತದೆ, ಆತುರವು ನನ್ನಲ್ಲಿ ತುಂಬಿದೆ.

[3] ಏಕೆಂದರೆ ನಾನು ಅಪಮಾನಕರವಾದ ನಿನ್ನ ಖಂಡನೆಯನ್ನು ಕೇಳಿದ್ದೇನೆ, ಆದಕಾರಣ ನನ್ನ ಆತ್ಮವು ನನ್ನ ಬುದ್ಧಿಯಿಂದಲೇ ಕಲಿತ ಉತ್ತರವನ್ನು ನನಗೆ ತಿಳಿಸುತ್ತದೆ.

[4] ಮನುಷ್ಯನು ಲೋಕದಲ್ಲಿ ಉದ್ಭವಿಸಿದ ಪುರಾತನಕಾಲದಿಂದಲೂ,

[5] ದುಷ್ಟರ ಉತ್ಸಾಹ ಧ್ವನಿಯು ಅಲ್ಪಕಾಲದ್ದು, ಭ್ರಷ್ಟನ ಉಲ್ಲಾಸವು ಕ್ಷಣಿಕವಾದದ್ದು ಎಂದು ನಿನಗೆ ಗೊತ್ತಿಲ್ಲವೋ?

[6] ಅವನ ಪ್ರತಿಷ್ಠೆಯು ಆಕಾಶಕ್ಕೆ ಏರಿದರೂ, ಅವನ ತಲೆಯು ಮೋಡಗಳಿಗೆ ತಗುಲಿದರೂ,

[7] ತನ್ನ ಮಲದ ಹಾಗೆ ನಿತ್ಯನಾಶನವನ್ನೂ ಹೊಂದುವನು, ಅವನನ್ನು ಕಂಡವರು ಕೂಡ ‘ಅವನು ಎಲ್ಲಿ?’ ಎನ್ನುವರು.

[8] ಅವನು ಸ್ವಪ್ನದಂತೆ ಮರೆಯಾಗಿ ಸಿಕ್ಕುವುದಿಲ್ಲ, ರಾತ್ರಿಯ ಕನಸಿನ ಹಾಗೆ ಓಡಿಹೋಗುವನು.

[9] ಕಂಡವನ ಕಣ್ಣಿಗೆ ಮತ್ತೆ ಕಾಣಿಸನು, ಅವನ ನಿವಾಸವು ಅವನನ್ನು ತಿರುಗಿ ನೋಡುವುದೇ ಇಲ್ಲ.

[10] ಅವನ ಮಕ್ಕಳು ದರಿದ್ರರ ದಯೆಯನ್ನು ಬೇಡುವರು. ಅವನು ತನ್ನ ಕೈಯಿಂದಲೇ ತನ್ನ ಆಸ್ತಿಯನ್ನು ಹಿಂದಕ್ಕೆ ಕೊಟ್ಟು ಬಿಡಬೇಕಾಗುವುದು.

[11] ಯೌವನವು ಅವನ ಎಲುಬುಗಳಲ್ಲಿ ಇನ್ನೂ ತುಂಬಿರುವಾಗಲೇ, ಅದು ಅವನೊಂದಿಗೆ ಧೂಳಿನಲ್ಲಿ ಮಲಗುವುದು.

[12] ಕೆಟ್ಟತನವು ಅವನ ಬಾಯಿಗೆ ಸಿಹಿಯಾಗಿರಲು, ಅವನು ನಾಲಿಗೆಯ ಕೆಳಗೆ ಅದನ್ನು ಅಡಗಿಸಿ,

[13] ನುಂಗದೆ ಕಾಪಾಡುತ್ತಾ ಬಾಯಲ್ಲೇ ಇಟ್ಟುಕೊಂಡಿದ್ದರೂ

[14] ತಿಂದ ಮೇಲೆ ಆ ಪದಾರ್ಥವು ಮಾರ್ಪಟ್ಟು, ಅವನೊಳಗೆ ಹಾವಿನ ವಿಷವಾಗುವುದು.

[15] ನುಂಗಿದ ಐಶ್ವರ್ಯವನ್ನು ಅವನು ಕಾರುವನು, ದೇವರು ಅವನ ಹೊಟ್ಟೆಯೊಳಗಿಂದ ಅದನ್ನು ಕಕ್ಕಿಸಿ ಬಿಡುವನು.

[16] ಅವನು ಚೀಪುವುದು ಹಾವಿನ ವಿಷವೇ, ಸರ್ಪದ ನಾಲಿಗೆಯು ಅವನನ್ನು ಕೊಲ್ಲುವುದು.

[17] ಜೇನೂ, ಮೊಸರೂ ಸಮೃದ್ಧಿಯಾಗಿ ಹರಿಯುವ ನದಿಗಳನ್ನು ಅವನು ನೋಡುವುದೇ ಇಲ್ಲ.

[18] ಅವನು ದುಡಿದದ್ದನ್ನು ಅನುಭವಿಸದೆ ಪರರ ಪಾಲು ಮಾಡುವನು, ಅವನ ಲಾಭದಿಂದಾಗತಕ್ಕ ಆನಂದವು ಅವನಿಗೆ ಸಿಕ್ಕುವುದಿಲ್ಲ.

[19] ಅವನು ಬಡವರನ್ನು ಜಜ್ಜಿ ತ್ಯಜಿಸಿಬಿಟ್ಟಿದ್ದಾನಲ್ಲಾ; ಸುಲಿಗೆಯಿಂದ ಕಿತ್ತುಕೊಂಡ ಮನೆಯನ್ನು ಭದ್ರಪಡಿಸಿಕೊಳ್ಳದೆ ಹೋಗುವನು.

[20] ಅವನ ಹೊಟ್ಟೆಗೆ ತೃಪ್ತಿಯಿಲ್ಲವಾದ ಕಾರಣ, ಅವನು ತನ್ನ ಇಷ್ಟ ಸಂಪತ್ತಿನಲ್ಲಿ ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ.

[21] ಏನೂ ಉಳಿಯದಂತೆ ಅವನು ನುಂಗಿಬಿಟ್ಟಿದರಿಂದ; ಅವನ ಸುಖವು ಅಸ್ಥಿರವಾಗಿರುವುದು.

[22] ಸಮೃದ್ಧಿಯು ತುಂಬಿರುವಾಗಲೇ ಅವನಿಗೆ ಇಕ್ಕಟ್ಟಾಗುವುದು. ಶ್ರಮೆಯನ್ನು ಅನುಭವಿಸುವ ಪ್ರತಿಯೊಬ್ಬನ ಕೈ ಅವನ ಮೇಲೆ ಬೀಳುವುದು.

[23] ಅವನ ಹೊಟ್ಟೆ ತುಂಬುವುದು, ಹೌದು, ದೇವರು ತನ್ನ ಕೋಪಾಗ್ನಿಯನ್ನು ಕಳುಹಿಸಿ; ಅದನ್ನೇ ಆಹಾರವನ್ನಾಗಿ ಅವನ ಮೇಲೆ ಸುರಿಸುವನು.

[24] ಕಬ್ಬಿಣದ ಆಯುಧದ ದೆಸೆಯಿಂದ ಓಡಿಹೋಗುವನು, ತಾಮ್ರದ ಬಿಲ್ಲು ಅವನನ್ನು ಇರಿಯುವುದು.

[25] ಅವನು ಬಾಣವನ್ನು ಕೀಳಲು ಅದು ಬೆನ್ನಿನಿಂದ ಹೊರಬರುವುದು, ಥಳಥಳಿಸುತ್ತಾ ಅವನ ಪಿತ್ತಕೋಶದೊಳಗಿಂದ ಹೊರಡುತ್ತಿರುವುದು, ಭಯಭ್ರಾಂತಿಗಳು ಅವನನ್ನು ಮುತ್ತಿಕೊಳ್ಳುವವು.

[26] ಅವನ ನಿಧಿನಿಕ್ಷೇಪಗಳಿಗಾಗಿ ಪೂರ್ಣಾಂಧಕಾರವು ಕಾದಿರುವುದು, ಯಾರೂ ಹೊತ್ತಿಸದ ಬೆಂಕಿಯು ಅವನನ್ನು ತಿಂದುಹಾಕಿ, ಅವನ ಗುಡಾರದಲ್ಲಿ ತಪ್ಪಿಸಿಕೊಂಡದ್ದನ್ನು ಮೇದು ಬಿಡುವುದು.

[27] ಆಕಾಶವು ಅವನ ಪಾಪವನ್ನು ಬಯಲುಪಡಿಸುವುದು. ಭೂಮಿಯು ಅವನ ವಿರುದ್ಧ ಸಾಕ್ಷಿಯಾಗಿ ಏಳುವುದು.

[28] ದೇವರ ಸಿಟ್ಟಿನ ದಿನದಲ್ಲಿ ಅವನ ಮನೆಯ ಧನಧಾನ್ಯಗಳು, ಪ್ರವಾಹದಿಂದ ಕೊಚ್ಚಿಕೊಂಡು ತೊಲಗಿಹೋಗುವವು.

[29] ದುಷ್ಟನಿಗೆ ದೇವರಿಂದ ದೊರೆಯುವ ಪಾಲೂ, ದೇವರು ನೇಮಿಸಿರುವ ಸ್ವಾಸ್ತ್ಯವೂ ಇವೇ.”

ಯೋಬನು — Chapters