[1] ಆಗ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು,
[2] “ಜ್ಞಾನಿಯು ತನ್ನ ಹೊಟ್ಟೆಯಲ್ಲಿ ಮೂಡಣ ಗಾಳಿಯನ್ನು ತುಂಬಿಕೊಂಡು, ಶೂನ್ಯವಾದ ತಿಳಿವಳಿಕೆಯಿಂದ ಮಾತನಾಡಬಹುದೇ?
[3] ಪ್ರಯೋಜನವಿಲ್ಲದ ನುಡಿಯಿಂದಲೂ, ಫಲವಿಲ್ಲದ ವಾಕ್ಯಗಳಿಂದಲೂ ತರ್ಕಿಸುವುದು ಯುಕ್ತವೋ?
[4] ಇದಲ್ಲದೆ ನೀನು ದೇವರ ಭಯವನ್ನು ಹಾಳುಮಾಡುತ್ತಿರುವೆ, ನೀನು ನನ್ನನ್ನು ಪಾತಾಳಕ್ಕೆ ತಳ್ಳಿ ನನ್ನ ದೇವಭಕ್ತಿಯನ್ನು ಕ್ಷಯಗೊಳಿಸುತ್ತೀ.
[5] ನಿನ್ನ ಪಾಪವೇ ನಿನಗೆ ಮಾತುಗಳನ್ನು ಕಲಿಸಿಕೊಡುತ್ತದೆ. ಕಪಟಿಗಳು ಆಡುವ ಭಾಷೆಯನ್ನು ಆರಿಸಿಕೊಂಡಿದ್ದಿ.
[6] ನಿನ್ನನ್ನು ಅಪರಾಧಿಯೆಂದು ನಿರ್ಣಯಿಸುವವನು ನಾನಲ್ಲ, ನಿನ್ನ ಮಾತುಗಳು ಕೂಡ ನಿನಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತವೆ, ನಿನ್ನನ್ನು ಅಪರಾಧಿಯನ್ನಾಗಿಸುತ್ತದೆ.
[7] ನೀನು ಆದಿಪುರುಷನೋ? ಬೆಟ್ಟಗಳಿಗಿಂತ ಮುಂಚೆ ಹುಟ್ಟಿದವನೋ?
[8] ದೇವರ ಆಲೋಚನಾ ಸಭೆಯಲ್ಲಿದ್ದುಕೊಂಡು ಅಲ್ಲಿ ಹೇಳಿದ್ದನ್ನು ಕೇಳಿದ್ದೀಯಾ? ಜ್ಞಾನವನ್ನೆಲ್ಲಾ ನಿನ್ನ ಕಡೆಗೆ ಸೆಳೆದುಕೊಂಡಿದ್ದೀಯಾ?
[9] ನಮಗೆ ತಿಳಿಯದಿರುವ ಯಾವ ವಿಷಯ ಗೊತ್ತಿದೆ? ನಮ್ಮಲ್ಲಿಲ್ಲದ ಯಾವ ಸಂಗತಿಯನ್ನು ಗ್ರಹಿಸಿದ್ದೀ?
[10] ತಲೆನರೆತು ನಿನ್ನ ತಂದೆಗಿಂತ ವೃದ್ಧನಾದ ಮುದುಕನು ನಮ್ಮಲ್ಲಿದ್ದಾನೆ.
[11] ದೇವರ ಆದರಣೆಗಳೂ, ನಿನಗೆ ದೊರೆತ ಶಾಂತಿಯ ಮಾತುಗಳೂ ಸಾಲುವುದಿಲ್ಲವೇ?
[12] ನಿನ್ನ ಹೃದಯವು ಏಕೆ ನಿನ್ನನ್ನು ಸೆಳೆದುಕೊಂಡು ಹೋಗುವುದು? ನಿನ್ನ ಕಣ್ಣುಗಳು ಕಿಡಿಕಿಡಿಯಾಗುವುದೇಕೆ?
[13] ನೀನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ವ್ಯರ್ಥವಾದ ಮಾತುಗಳನ್ನು ಸುಮ್ಮನೆ ಸುರಿಸುತ್ತೀಯಲ್ಲಾ!
[14] ನರನು ಎಷ್ಟರವನು! ಅವನು ಪರಿಶುದ್ಧನಾಗಿರುವುದು ಸಾಧ್ಯವೋ? ಮಾನವನಾಗಿ ಹುಟ್ಟಿದವನು ನೀತಿವಂತನಾಗಿರಬಹುದೇ?
[15] ಆಹಾ, ತನ್ನ ದೂತರಲ್ಲಿಯೂ ಆತನು ನಂಬಿಕೆಯಿಡುವುದಿಲ್ಲ, ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಾಗಿರದು.
[16] ಹೀಗಿರಲು ಅಧರ್ಮವನ್ನು ನೀರಿನಂತೆ ಕುಡಿಯುತ್ತಾ ಅಸಹ್ಯನೂ, ಕೆಟ್ಟವನೂ ಆದ ನರಜನ್ಮದವನು ಮತ್ತೂ ಅಶುದ್ಧನಲ್ಲವೇ!
[17] ಕೇಳು, ನಾನು ಒಂದು ಸಂಗತಿಯನ್ನು ತಿಳಿಸುವೆನು, ಕಂಡದ್ದನ್ನೇ ವಿವರಿಸುವೆನು.
[18] ಅವರು ತಮ್ಮ ನಾಡಿನ ಬಾಧ್ಯತೆಯನ್ನು ಕಳೆದುಕೊಂಡವರಲ್ಲಿ ಪರದೇಶಿಯರು ಅವರ ನಾಡನ್ನು ಹಾದುಹೋಗುವಂತಿರಲಿಲ್ಲ.
[19] ಇದೇ ಸಂಗತಿಯನ್ನು ತಮ್ಮ ಪೂರ್ವಿಕರಿಂದ ಕೇಳಿ, ಕಲಿತದ್ದನ್ನು ಮರೆಮಾಡದೆ ಪ್ರಕಟಿಸಿದ್ದಾರೆ.
[20] ಹಿಂಸಕನಿಗೆ ಎಷ್ಟು ವರ್ಷಗಳು ನೇಮಕವಾಗಿವೆಯೋ, ಅಷ್ಟು ಕಾಲವೂ ಆ ದುಷ್ಟನು ಪೀಡಿತನಾಗಿಯೇ ಇರುವನು.
[21] ಭಯ ಅಪಾಯಗಳ ಸಪ್ಪಳವು ಅವನ ಕಿವಿಯಲ್ಲೇ ಇರುವುದು, ತಾನು ಸುಖವಾಗಿರುವಾಗಲೂ ಸೂರೆಗಾರನು ತನ್ನ ಮೇಲೆ ಬೀಳುವನೆಂದು ಭಯಪಡುವನು.
[22] ಕತ್ತಲೊಳಗಿಂದ ತಾನು ಹಿಂದಿರುಗುತ್ತೇನೆಂದು ಅವನು ನಂಬುವುದಿಲ್ಲ; ಅವನ ಕತ್ತಿಯು ಅವನಿಗಾಗಿ ಕಾದಿದೆ.
[23] ‘ರೊಟ್ಟಿ ಎಲ್ಲಿ?’ ಎಂದು ಹುಡುಕುತ್ತಾ ಅಲೆದಾಡುವನೆಂಬುದಾಗಿ ನಿಶ್ಚಯಿಸಿಕೊಂಡು, ಆ ಕತ್ತಲಿನ ದಿನವು ತನ್ನ ಪಕ್ಕದಲ್ಲಿ ಸಿದ್ಧವಾಗಿದೆ ಎಂದು ತಿಳಿದುಕೊಂಡಿರುವನು.
[24] ಸಂಕಟವೂ, ಪೇಚಾಟವೂ ಯುದ್ಧಸನ್ನದ್ಧ ರಾಜರಂತೆ ಅವನನ್ನು ಹೆದರಿಸಿ ಸೋಲಿಸುವವು.
[25] ಅವನು ದೇವರಿಗೆ ವಿರುದ್ಧವಾಗಿ ಕೈಚಾಚಿ ಸರ್ವಶಕ್ತನಾದ ದೇವರ ಎದುರು ನಿಂತು ಶೂರನಂತೆ ಮೆರೆದನಲ್ಲಾ.
[26] ದೊಡ್ಡ ಬಲವುಳ್ಳ ಗುರಾಣಿಯನ್ನು ಹಿಡಿದು ತಲೆ ನಿಮಿರಿಸಿ ಆತನ ಮೇಲೆ ಬೀಳಬೇಕೆಂದು ಓಡಿದನು.
[27] ಅವನು ಮುಖದಲ್ಲಿ ಕೊಬ್ಬೇರಿಸಿಕೊಂಡು ಸೊಂಟದಲ್ಲಿ ಬೊಜ್ಜನ್ನು ಬೆಳೆಸಿಕೊಂಡಿದ್ದನು.
[28] ಅವನು ಹಾಳು ಪಟ್ಟಣಗಳಲ್ಲಿ ಸೇರಿಕೊಂಡು, ‘ದಿಬ್ಬಗಳಾಗಿ ಹೋಗಲಿ ಯಾರೂ ವಾಸಿಸದಿರಲಿ’ ಎಂದು ಶಾಪಹೊಂದಿದ ಮನೆಗಳೊಳಗೆ ವಾಸವಾಗಿದ್ದನು.
[29] ಇಂಥವನು ಐಶ್ವರ್ಯವಂತನಾಗುವುದಿಲ್ಲ, ಅವನ ಆಸ್ತಿಯು ಸ್ಥಿರವಾಗಿ ನಿಲ್ಲದು. ಅವನ ಪ್ರತಿ ಫಲವು ಭಾರದಿಂದ ಭೂಮಿಯ ಕಡೆಗೆ ಬಾಗುವುದಿಲ್ಲ.
[30] ಕತ್ತಲೊಳಗಿಂದ ಅವನು ಪಾರಾಗುವುದಿಲ್ಲ, ಕಿಚ್ಚು ಅವನ ಕೊಂಬೆಗಳನ್ನು ಒಣಗಿಸುವುದು, ದೇವರ ಶ್ವಾಸದಿಂದ ಒಣಗಿ ಹೋಗುವನು.
[31] ಅವನು ಭ್ರಮೆಗೊಂಡು ಶೂನ್ಯವಾದದ್ದರ ಮೇಲೆ ನಂಬಿಕೆಯಿಡದಿರಲಿ, ಇಟ್ಟರೆ ಅವನಿಗಾಗುವ ಪ್ರತಿಫಲವು ಶೂನ್ಯವೇ,
[32] ಅವನ ಕಾಲವು ಕೊನೆಮುಟ್ಟುವುದಕ್ಕೆ ಮೊದಲೇ ಆ ಪ್ರತಿಫಲವು ತಲುಪಿಬಿಡುವುದು. ಅವನ ಕೊಂಬೆಯು ಹಸುರಾಗಿರುವುದಿಲ್ಲ,
[33] ಮಾಗದ ಹಣ್ಣುಗಳನ್ನು ಕಳೆದುಕೊಂಡ ದ್ರಾಕ್ಷಿಯ ಬಳ್ಳಿಯಂತೆ ಇರುವನು, ಎಣ್ಣೆಯ ಮರದ ಹಾಗೆ ತನ್ನ ಹೂವುಗಳನ್ನು ಉದುರಿಸಿಬಿಡುವನು.
[34] ಭ್ರಷ್ಟರ ಸಂಘವು ನಿರರ್ಥಕ, ಬೆಂಕಿಯು ಲಂಚಕೋರರ ಗುಡಾರಗಳನ್ನು ಸುಟ್ಟು ಹಾಕುವುದು.
[35] ಅವರು ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುವರು, ಅವರ ಹೊಟ್ಟೆಯು ವಂಚನೆಯಿಂದ ತುಂಬಿರುವುದು.”