[1] “ಮಾನವ ಜನ್ಮ ಪಡೆದವನು, ಅಲ್ಪಾಯುಷ್ಯನಾಗಿಯೂ, ಕಳವಳದಿಂದ ತುಂಬಿದವನಾಗಿಯೂ ಇರುವನು.
[2] ಹೂವಿನ ಹಾಗೆ ಅರಳಿ ಬಾಡುವನು, ನೆರಳಿನಂತೆ ನಿಲ್ಲದೆ ಓಡಿಹೋಗುವನು.
[3] ನೀನು ಇಂಥವನಾದ ನನ್ನ ಮೇಲೆ ಕಣ್ಣಿಟ್ಟು, ನಿನ್ನ ನ್ಯಾಯಸ್ಥಾನಕ್ಕೆ ನನ್ನನ್ನು ಬರಮಾಡುವಿಯಾ?
[4] ಅಶುದ್ಧದಿಂದ ಶುದ್ಧವು ಉಂಟಾದೀತೇ? ಎಂದಿಗೂ ಇಲ್ಲ.
[5] ಮನುಷ್ಯನ ದಿನಗಳು ಇಷ್ಟೇ ಎಂಬುದು ತೀರ್ಮಾನವಾಗಿದೆಯಲ್ಲಾ; ಅವನ ತಿಂಗಳುಗಳ ಲೆಕ್ಕವು ನಿನಗೆ ಗೊತ್ತು; ದಾಟಲಾರದ ಗಡಿಗಳನ್ನು ಅವನಿಗೆ ನೇಮಿಸಿದ್ದಿ.
[6] ನಿನ್ನ ದೃಷ್ಟಿಯನ್ನು ಅವನ ಕಡೆಯಿಂದ ತಿರುಗಿಸು, ಅವನಿಗೆ ಸ್ವಲ್ಪ ವಿರಾಮವಿರಲಿ, ಕೂಲಿಯವನಿಗಿರುವಷ್ಟು ಸಂತೋಷದಿಂದಾದರೂ ತನ್ನ ದಿನವನ್ನು ಕಳೆಯಲಿ.
[7] ಕಡಿದ ಮರವೂ, ತಾನು ಮೊಳೆಯುವುದನ್ನು ನಿಲ್ಲಿಸದೆ, ಮತ್ತೆ ಚಿಗುರುವೆನೆಂದು ನಿರೀಕ್ಷಿಸುತ್ತದಲ್ಲವೇ!
[8] ನೆಲದಲ್ಲಿ ಅದರ ಬೇರು ಹಳೆಯದಾದರೂ, ಮಣ್ಣಿನಲ್ಲಿ ಸತ್ತರೂ,
[9] ಮಳೆ ನೀರಿನ ವಾಸನೆಯಿಂದಲೇ ಅದು ಮೊಳೆತು, ಚಿಗುರಿ ಗಿಡದ ಹಾಗೆ ಕವಲೊಡೆಯುವುದು.
[10] ಮನುಷ್ಯನಾದರೋ ಸತ್ತು ಬೋರಲುಬೀಳುವನು, ಪ್ರಾಣಹೋಗಲು ಅವನ ಅಂತ್ಯವಾಗುತ್ತದೆ.
[11] ಸರೋವರದ ನೀರು ಬತ್ತುವಂತೆ, ನದಿಯ ನೀರು ಆವಿಯಾಗಿ ಒಣಗುವ ಹಾಗೆ,
[12] ಮನುಷ್ಯರು ಮಲಗಿಕೊಂಡು ಏಳದೇ ಇರುವರು; ಆಕಾಶವು ಅಳಿದು ಹೋಗುವ ತನಕ ಅವರು ನಿದ್ರೆಯನ್ನು, ತಿಳಿಯುವುದಿಲ್ಲ, ಎಬ್ಬಿಸಲ್ಪಡುವುದಿಲ್ಲ.
[13] ನಿನ್ನ ಕೋಪವು ಇಳಿಯುವ ವರೆಗೆ ನನ್ನನ್ನು ಮರೆಮಾಡಿ, ನೀನು ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು, ನನಗೆ ಅವಧಿಯನ್ನು ಗೊತ್ತುಮಾಡಿ ಕಡೆಯಲ್ಲಿ ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!
[14] ಒಬ್ಬ ಮನುಷ್ಯನು ಸತ್ತು ಪುನಃ ಬದುಕುವನೇ? ಹಾಗಾಗುವುದಾದರೆ ನನಗೆ ಬಿಡುಗಡೆಯಾಗುವವರೆಗೆ, ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು.
[15] ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಪ್ರೀತಿ ಹುಟ್ಟೀತು.
[16] ಈಗ ನೀನು ನನ್ನ ಹೆಜ್ಜೆಗಳನ್ನು ಲೆಕ್ಕಿಸಿ, ನನ್ನ ಪಾಪದ ಮೇಲೆ ಕಾವಲಾಗಿದ್ದೀಯಲ್ಲಾ!
[17] ನನ್ನ ದ್ರೋಹವನ್ನು ಚೀಲದಲ್ಲಿಟ್ಟು ಮುದ್ರಿಸಿ, ನನ್ನ ದೋಷವನ್ನು ಭದ್ರವಾಗಿ ಕಟ್ಟಿದ್ದೀ.
[18] ಆದರೆ ಪರ್ವತವೂ ಬಿದ್ದು ಕರಗಿಹೋಗುವುದು, ಬಂಡೆಯು ತನ್ನ ಸ್ಥಳದಿಂದ ಜರುಗುವುದು,
[19] ನೀರು ಕಲ್ಲುಗಳನ್ನು ಸವೆಯಿಸುವುದು, ಜಲಪ್ರವಾಹಗಳು ಭೂಮಿಯ ಮಣ್ಣನ್ನು ಕೊಚ್ಚಿಕೊಂಡು ಹೋಗುವವು. ಹೀಗೆಯೇ ಮನುಷ್ಯರ ನಿರೀಕ್ಷೆಯನ್ನು ಹಾಳುಮಾಡುವಿ.
[20] ನೀನು ಅವನಿಗೆ ಶಾಶ್ವತವಾದ ಅಪಜಯವನ್ನುಂಟು ಮಾಡಿದ್ದರಿಂದ ಅವನು ಗತಿಸಿ ಹೋಗುವನು. ನೀನು ಅವನ ಮುಖವನ್ನು ಮಾರ್ಪಡಿಸಿ ಅವನನ್ನು ತೊಲಗಿಸಿಬಿಡುವಿ.
[21] ಅವನ ಮಕ್ಕಳು ಘನತೆಯನ್ನು ಹೊಂದುವುದು ಅವನಿಗೆ ತಿಳಿಯುವುದಿಲ್ಲ. ಅವರು ಅಧೋಗತಿಗೆ ಗುರಿಯಾದರೂ ಅವನಿಗೆ ಗೋಚರವಾಗುವುದಿಲ್ಲ.
[22] ಆದರೂ ಅವನ ದೇಹದ ಕಣಕಣವು ನೋವನ್ನು ಅನುಭವಿಸುವುದು, ಅವನ ಆತ್ಮವು ಪ್ರಲಾಪಿಸುವುದು.”