Skip to content
Opens in a new window
Listen to this chapter • 5:13

[1] ಅದಕ್ಕೆ ಯೋಬನು ಉತ್ತರಿಸುತ್ತಾ ಇಂತೆಂದನು:

[2] “ನಿಜಕ್ಕೂ, ಇದು ಸತ್ಯ ಎಂದು ಬಲ್ಲೆನು; ಆದರೆ ಮನುಷ್ಯರು ದೇವರ ಮುಂದೆ ತಮ್ಮ ಮುಗ್ಧತೆಯನ್ನು ಪ್ರಮಾಣಿಕರಿಸುವುದು ಹೇಗೆ?

[3] ದೇವರ ಸಂಗಡ ವ್ಯಾಜ್ಯವಾಡಲು ಮನುಷ್ಯನು ಬಯಸಿದರೂ, ದೇವರ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಕೊಡಲಾರನು.

[4] ದೇವರ ಜ್ಞಾನವು ಆಳವಾದದ್ದು, ಶಕ್ತಿಯಲ್ಲಿ ದೇವರು ಪ್ರಬಲರೂ ಆಗಿದ್ದಾರೆ; ದೇವರ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?

[5] ದೇವರು ಪರ್ವತಗಳನ್ನು ಅವುಗಳಿಗೆ ತಿಳಿಯದ ಹಾಗೆ ಸರಿಸುತ್ತಾರೆ; ತಮ್ಮ ಎದುರಿನಲ್ಲಿ ಅವುಗಳನ್ನು ತಿರುಗಿಸುತ್ತಾರೆ.

[6] ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುತ್ತಾರೆ; ಅದರ ಸ್ತಂಭಗಳು ನಡುಗುತ್ತವೆ.

[7] ದೇವರು ಸೂರ್ಯನಿಗೆ ಪ್ರಕಾಶಿಸದಂತೆ ಅಪ್ಪಣೆ ಕೊಟ್ಟರೆ, ಪ್ರಕಾಶಿಸುತ್ತಿರಲಿಲ್ಲ; ನಕ್ಷತ್ರಗಳಿಗೆ ಮುದ್ರೆ ಹಾಕಿದ್ದರೆ, ನಕ್ಷತ್ರವೂ ಮಿನುಗುತ್ತಿರಲಿಲ್ಲ.

[8] ದೇವರೊಬ್ಬರೇ ಆಕಾಶಗಳನ್ನು ಹರಡಿಸುತ್ತಾರೆ; ದೇವರು ಸಮುದ್ರದ ತೆರೆಗಳ ಮೇಲೆ ನಡೆಯುತ್ತಾರೆ.

[9] ಸಪ್ತರ್ಷಿಮಂಡಲವನ್ನೂ, ಮೃಗಶಿರವನ್ನೂ, ಕೃತ್ತಿಕೆಯನ್ನೂ ದಕ್ಷಿಣ ದಿಕ್ಕಿನ ನಕ್ಷತ್ರಗ್ರಹಗಳನ್ನೂ ನಿರ್ಮಿಸಿದವರು ದೇವರೇ.

[10] ದೇವರು ಕಂಡು ಹಿಡಿಯಲಾರದಂಥ ಮಹತ್ಕಾರ್ಯಗಳನ್ನೂ, ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುತ್ತಾರೆ.

[11] ದೇವರು ನನ್ನ ಮುಂದೆ ಹಾದುಹೋದಾಗ, ನನಗೆ ಅವರು ಕಾಣುವುದಿಲ್ಲ; ದೇವರು ದಾಟಿ ಹೋಗುತ್ತಾರೆ; ಆದರೆ ನಾನು ಅವರನ್ನು ಗ್ರಹಿಸಿಕೊಳ್ಳುವುದಿಲ್ಲ.

[12] ದೇವರು ತೆಗೆದುಕೊಂಡರೆ, ಅವರಿಗೆ ಅಡ್ಡಿ ಮಾಡುವವರು ಯಾರು? ದೇವರನ್ನು, ‘ನೀವು ಏನು ಮಾಡುತ್ತೀರಿ?’ ಎಂದು ಕೇಳುವವರ‍್ಯಾರು.

[13] ದೇವರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ; ರಹಾಬನ ಸಹಾಯಕರು ಸಹ ದೇವರ ಕಾಲಿಗೆ ಅಡ್ಡಬಿದ್ದರಲ್ಲಾ.

[14] “ದೇವರೊಂದಿಗೆ ವಾದಿಸಲು ನಾನು ಅಶಕ್ತನು; ದೇವರಿಗೆ ತಕ್ಕ ಉತ್ತರ ಕೊಡಲು ನಾನು ಎಷ್ಟರವನು?

[15] ನಾನು ನೀತಿವಂತನಾಗಿದ್ದರೂ ಉತ್ತರ ಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಕರುಣೆಗೋಸ್ಕರ ಮೊರೆಯಿಡುವೆನು.

[16] ನಾನು ಕರೆಯಲು ದೇವರು ನನಗೆ ಉತ್ತರ ಕೊಟ್ಟರೂ, ನನ್ನ ವಿಜ್ಞಾಪನೆಗೆ ದೇವರು ಕಿವಿಗೊಡುವರೆಂದು ನಾನು ನಂಬುತ್ತಿರಲಿಲ್ಲ.

[17] ಏಕೆಂದರೆ ದೇವರು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾರೆ; ನನ್ನ ಗಾಯಗಳನ್ನು ಕಾರಣವಿಲ್ಲದೆ ಹೆಚ್ಚಿಸುತ್ತಾರೆ.

[18] ನಾನು ಉಸಿರಾಡಲು ಕಷ್ಟಪಡುತ್ತಿದ್ದೇನೆ, ದೇವರು ಕಹಿಯಾದವುಗಳಿಂದ ನನ್ನನ್ನು ತುಂಬಿಸುತ್ತಾರೆ.

[19] ಶಕ್ತಿಯ ವಿಷಯದಲ್ಲಿ ಹೇಳಬೇಕಾದರೆ, ಇಗೋ ದೇವರು ಬಲಶಾಲಿ! ನ್ಯಾಯದ ವಿಷಯದಲ್ಲಿ ವಾದಿಸಬೇಕಾದರೆ, ದೇವರಿಗೆ ಸವಾಲು ಹಾಕುವವರು ಯಾರು?

[20] ನಾನು ನೀತಿವಂತನಾಗಿದ್ದರೂ, ನನ್ನ ಸ್ವಂತ ಬಾಯೇ ನನ್ನನ್ನು ಖಂಡಿಸುತ್ತದೆ; ನಾನು ನಿರ್ದೋಷಿಯಾಗಿದ್ದರೂ, ದೇವರು ನನ್ನನ್ನು ಅಪರಾಧಿ ಎಂದು ನಿರೂಪಿಸುವರು.

[21] “ನಾನು ನಿರ್ದೋಷಿಯೇ ಹೌದು, ನನ್ನ ಬಗ್ಗೆ ನನಗೆ ಚಿಂತೆ ಇಲ್ಲ; ನನ್ನ ಬಾಳನ್ನೇ ತಿರಸ್ಕಾರ ಮಾಡುತ್ತೇನೆ.

[22] ಇದೆಲ್ಲಾ ಒಂದೇ ವಿಷಯ; ಆದ್ದರಿಂದ ನಾನು ಇದನ್ನು ಹೇಳುತ್ತೇನೆ: ‘ನಿರ್ದೋಷಿಯನ್ನೂ, ಕೆಟ್ಟವನನ್ನೂ ದೇವರು ದಂಡಿಸುತ್ತಾರೆ.’

[23] ವಿಪತ್ತು ಅಕಸ್ಮಾತ್ತಾಗಿ ಮರಣವನ್ನು ತಂದರೆ, ನಿರಪರಾಧಿಯ ಬುದ್ಧಿಹೀನತೆಗೆ ದೇವರು ನಗುವರು.

[24] ಲೋಕವು ಕೆಟ್ಟವರ ಕೈವಶವಾಗಿದೆ; ನ್ಯಾಯಾಧಿಪತಿಗಳ ಮುಖಕ್ಕೆ ಮುಸುಕುಹಾಕಲಾಗಿದೆ; ಇದನ್ನು ಅನುಮತಿಸಿದವರು ದೇವರಲ್ಲದೆ ಮತ್ತೆ ಯಾರು?

[25] “ಆದರೆ ನನ್ನ ದಿನಗಳು ಅಂಚೆಯವನಿಗಿಂತಲೂ ತ್ವರೆಯಾಗಿವೆ; ಆನಂದವನ್ನೂ ನೋಡದೆ ದಿನಗಳು ಓಡಿಹೋಗುತ್ತವೆ.

[26] ಆಪಿನ ದೋಣಿಗಳು ದಾಟಿ ಹೋಗುವಂತೆಯೂ, ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ದಿನಗಳು ವೇಗವಾಗಿ ಗತಿಸಿಹೋಗುತ್ತವೆ.

[27] ‘ನಾನು ನನ್ನ ದೂರುಗಳನ್ನು ಮರೆತು, ನನ್ನ ಭಾರವನ್ನು ಬಿಟ್ಟು, ಆದರಣೆ ಹೊಂದುವೆನು,’ ಎಂದು ತೀರ್ಮಾನಿಸಿಕೊಂಡರೆ,

[28] ನನಗಾದ ವ್ಯಥೆಗಳಿಗೆಲ್ಲಾ ನಾನು ಇನ್ನೂ ಹೆದರುತ್ತಿದ್ದೇನೆ; ದೇವರು ನನ್ನನ್ನು ನಿರಪರಾಧಿ ಎಂದು ಎಣಿಸುವುದಿಲ್ಲವೆಂದು ಸಹ ನನಗೆ ಗೊತ್ತಿದೆ.

[29] ನಾನು ಈಗಾಗಲೇ ಅಪರಾಧಿ ಎಂದು ನಿರ್ಣಯವಾಗಿರುವಾಗ, ನಾನು ಏಕೆ ವ್ಯರ್ಥವಾಗಿ ಹೋರಾಡಬೇಕು?

[30] ನಾನು ಹಿಮದ ನೀರಿನಲ್ಲಿ ಸ್ನಾನಮಾಡಿ, ಸಾಬೂನಿನಿಂದ ನನ್ನ ಕೈಗಳನ್ನು ತೊಳೆದುಕೊಂಡರೂ,

[31] ದೇವರು ನನ್ನನ್ನು ಕುಣಿಯಲ್ಲಿ ಮುಳುಗಿಸಿ ಬಿಡುವರು; ನನ್ನ ಸ್ವಂತ ವಸ್ತ್ರಗಳೇ ನನ್ನನ್ನು ಅಸಹ್ಯಪಡಬೇಕಾಗುವುದು.

[32] “ದೇವರು ನನ್ನಂಥ ಕೇವಲ ಮನುಷ್ಯನಲ್ಲ, ನಾನು ದೇವರೊಂದಿಗೆ ವಾದಿಸುವುದು ಹೇಗೆ? ನಾವಿಬ್ಬರೂ ನ್ಯಾಯಾಲಯದ ಮುಂದೆ ಕೂಡಿ ವಾದಿಸುವುದು ಹೇಗೆ?

[33] ನಮ್ಮಿಬ್ಬರನ್ನು ಒಟ್ಟು ಸೇರಿಸುವ ಮಧ್ಯಸ್ಥ ಒಂದು ವೇಳೆ ನಮ್ಮ ನಡುವೆ ಇದ್ದಿದ್ದರೆ,

[34] ದೇವರ ಶಿಕ್ಷೆಯಕೋಲನ್ನು ನನ್ನ ಮೇಲಿನಿಂದ ತೊಲಗಿಸುವ ಒಬ್ಬ ಮಧ್ಯಸ್ಥ ಇದ್ದಿದ್ದರೆ, ದೇವರ ಭೀತಿಗೆ ನಾನು ಎಂದಿಗೂ ಹೆದರದೆ ಇರುತ್ತಿದ್ದೆ.

[35] ಆಗ ನಾನು ದೇವರೊಂದಿಗೆ ಭಯಪಡದೆ ಮಾತನಾಡುತ್ತಿದ್ದೆ; ನನ್ನ ಸ್ವಂತ ಶಕ್ತಿಯಿಂದ ಈಗ ನಾನು ಅದನ್ನೆಲ್ಲಾ ನನಗೆ ಮಾಡಲು ಸಾಧ್ಯವಿಲ್ಲ.

ಯೋಬ — Chapters