[1] “ಸರ್ವಶಕ್ತರು ತೀರ್ಪಿನ ಕಾಲವನ್ನು ನಿಗದಿಪಡಿಸದೆ ಇರುವುದೇಕೆ? ದೇವರನ್ನು ತಿಳಿದವರು ದೇವರ ದಿನಗಳಿಗೋಸ್ಕರ ವ್ಯರ್ಥವಾಗಿ ನೋಡುತ್ತಿರುವುದು ಏಕೆ?
[2] ಕೆಲವರು ಗಡಿಗಳ ಕಲ್ಲುಗಳನ್ನು ಬದಲಿಸುತ್ತಾರೆ, ಕದ್ದ ಮಂದೆಗಳನ್ನು ತೆಗೆದುಕೊಂಡು ಸಾಕಿಕೊಳ್ಳುತ್ತಾರೆ.
[3] ದಿಕ್ಕಿಲ್ಲದವರ ಕತ್ತೆಗಳನ್ನು ಹೊಡೆದುಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
[4] ದರಿದ್ರನನ್ನು ದಾರಿಯಿಂದ ತೊಲಗಿಸುತ್ತಾರೆ; ದೇಶದ ಬಡವರು ಕೂಡ ಅವರಿಂದ ಓಡಿ ಅಡಗಿಕೊಳ್ಳುತ್ತಾರೆ.
[5] ಕಾಡುಕತ್ತೆಗಳ ಹಾಗೆ ಬಡವರು ತಮ್ಮ ಆಹಾರಕ್ಕಾಗಿ ಅಲೆಯುತ್ತಾರೆ; ಪಾಳುಭೂಮಿಯಿಂದ ಅವರಿಗೂ, ಅವರ ಮಕ್ಕಳಿಗೂ ಆಹಾರ ಸಿಗುತ್ತದೆ.
[6] ಬಡವರು ಹೊಲಗಳಲ್ಲಿ ಮೇವನ್ನು ಕೊಯ್ದು, ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುತ್ತಾರೆ.
[7] ಸಾಕಷ್ಟು ಬಟ್ಟೆ ಇಲ್ಲದೆ ಅವರು ರಾತ್ರಿಯನ್ನು ಕಳೆಯುತ್ತಾರೆ; ಚಳಿಯಲ್ಲಿ ಅವರಿಗೆ ಹೊದ್ದುಕೊಳ್ಳುವುದಕ್ಕೆ ಇಲ್ಲ.
[8] ಬೆಟ್ಟಗಳ ಮಳೆಯಿಂದ ನೆನೆದುಹೋಗುತ್ತಾರೆ; ಬಂಡೆಗಳಲ್ಲಿ ಆಶ್ರಯವನ್ನು ಪಡೆಯುತ್ತಾರೆ.
[9] ಆದರೆ ದುಷ್ಟರು ದಿಕ್ಕಿಲ್ಲದ ಶಿಶುವನ್ನು ತಾಯಿಯ ಎದೆಯಿಂದ ಕಸೆದುಕೊಳ್ಳುತ್ತಾರೆ; ಬಡವನ ಶಿಶುವನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
[10] ಬಡವರೋ ಸಾಕಷ್ಟು ಬಟ್ಟೆಯಿಲ್ಲದವರಾಗಿ ಅಲೆಯುತ್ತಾರೆ; ಹಸಿದವರಾಗಿ ಸಿವುಡುಗಳನ್ನು ಹೊರುತ್ತಾರೆ.
[11] ಯಜಮಾನರ ಮಾಳಿಗೆಗಳ ಮೇಲೆ ಓಲಿವ್ ಎಣ್ಣೆಗಾಣಗಳನ್ನು ಆಡಿಸುತ್ತಾರೆ; ದಾಹಗೊಂಡೇ ದ್ರಾಕ್ಷೆಯ ತೊಟ್ಟಿಗಳಲ್ಲಿ ಕೆಲಸ ಮಾಡುತ್ತಾರೆ.
[12] ಪಟ್ಟಣದೊಳಗಿಂದ ಮನುಷ್ಯರ ನರಳುವಿಕೆಯು ಜೋರಾಗುತ್ತದೆ; ಗಾಯಪಟ್ಟವರ ಪ್ರಾಣವು ಸಹಾಯಕ್ಕಾಗಿ ಕೂಗುತ್ತದೆ; ಆದರೂ ದೇವರು ಯಾರ ಮೇಲೆಯೂ ತಪ್ಪು ಹೊರಿಸುವುದಿಲ್ಲ.
[13] “ಬೆಳಕಿನ ವಿರೋಧವಾಗಿ ತಿರುಗಿಬಿದ್ದವರು ಇದ್ದಾರೆ; ಅಂಥವರು ಬೆಳಕಿನ ಮಾರ್ಗಗಳನ್ನು ಅರಿಯದವರು; ಬೆಳಕಿನ ದಾರಿಗಳಲ್ಲಿ ವಾಸವಾಗಿರದವರೂ ಆಗಿದ್ದಾರೆ.
[14] ಕೊಲೆಗಾರನು ಮುಂಜಾನೆಯೇ ಎದ್ದು, ದಿಕ್ಕಿಲ್ಲದವರನ್ನೂ, ಬಡವರನ್ನೂ ಸಂಹರಿಸುತ್ತಾನೆ; ರಾತ್ರಿಯಲ್ಲಿ ಕಳ್ಳನಂತೆ ವರ್ತಿಸುತ್ತಾನೆ.
[15] ವ್ಯಭಿಚಾರಿಯು ಸಂಜೆಯನ್ನು ಎದುರುನೋಡುತ್ತಿರುವನು. ತರುವಾಯ, ‘ಯಾವ ಕಣ್ಣೂ ನನ್ನನ್ನು ನೋಡುವುದಿಲ್ಲ,’ ಎಂದು ಹೇಳುತ್ತಾನೆ; ಯಾರು ತನ್ನನ್ನು ಕಾಣದಂತೆ ಮುಖವನ್ನು ಮುಚ್ಚಿಕೊಳ್ಳುತ್ತಾನೆ.
[16] ಕಳ್ಳರು ಕತ್ತಲಲ್ಲಿ ಕನ್ನ ಕೊರೆದು ಮನೆಗಳೊಳಗೆ ನುಗ್ಗುತ್ತಾರೆ. ಹಗಲಿನಲ್ಲಿ ತಮ್ಮ ಮನೆಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಾರೆ; ಅವರು ಬೆಳಕಿನಲ್ಲಿ ಏನೂ ಮಾಡಲು ಬಯಸುವುದಿಲ್ಲ.
[17] ಅವರೆಲ್ಲರಿಗೂ ಕಾರ್ಗತ್ತಲು ಬೆಳಕಿನಂತಿರುವುದು; ಕತ್ತಲೆಯ ಭೀತಿಯೇ ಅವರಿಗೆ ಸ್ನೇಹಿತರು.
[18] “ಆದರೂ ಅವರು ನೀರಿನ ಮೇಲಿನ ಗುಳ್ಳೆಯಂತೆ ಇದ್ದಾರೆ. ಅವರ ಜಮೀನು ಶಾಪಕ್ಕೆ ಒಳಪಟ್ಟಿರುವುದರಿಂದ, ಯಾರೂ ಅವರ ದ್ರಾಕ್ಷೆಯ ತೋಟಕ್ಕೆ ಹೋಗುವುದಿಲ್ಲ.
[19] ಬರಗಾಲದ ಬಿಸಿಲು ಹಿಮದ ನೀರನ್ನು ಹೀರಿಕೊಳ್ಳುವಂತೆ, ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ.
[20] ಹೆತ್ತ ಕರುಳು ಅಂಥವರನ್ನು ಮರೆತು ಬಿಡುವುದು; ಹುಳವು ಅಂಥವರ ಹೆಣವನ್ನು ರುಚಿಯಿಂದ ತಿಂದುಬಿಡುವುದು; ಇನ್ನು ಅವರ ನೆನಪು ಇರುವುದಿಲ್ಲ; ಮರದ ಹಾಗೆ ದುಷ್ಟರು ಮುರಿದುಹೋಗುವರು.
[21] ದುಷ್ಟರು ಆಸ್ತಿಯ ವಿಷಯದಲ್ಲಿ ಬಂಜೆಯರನ್ನು ಮೋಸಮಾಡುತ್ತಾನೆ; ದುಷ್ಟರು ವಿಧವೆಯರಿಗೆ ದಯೆ ತೋರಿಸುವುದಿಲ್ಲ.
[22] ಆದರೆ ದೇವರು ತಮ್ಮ ಶಕ್ತಿಯಿಂದ ಬಲಿಷ್ಠರನ್ನು ಎಳೆದೊಯ್ಯುತ್ತಾರೆ; ಬಲಿಷ್ಠರು ಉದ್ಧಾರವಾಗಿದ್ದರೂ ಅವರಿಗೆ ಜೀವನದ ಭರವಸೆ ಇಲ್ಲ.
[23] ಭದ್ರತೆಯಲ್ಲಿ ವಿಶ್ರಾಂತಿ ಪಡೆಯಲು ದೇವರು ಅವರಿಗೆ ಅವಕಾಶ ನೀಡಬಹುದು; ಆದರೆ ದೇವರ ಕಣ್ಣುಗಳು ಅವರ ಮಾರ್ಗಗಳ ಮೇಲಿರುವುದು.
[24] ಅವರು ಸ್ವಲ್ಪಕಾಲ ಉನ್ನತವಾಗಿದ್ದು ನಂತರ ಇಲ್ಲದೆ ಹೋಗುತ್ತಾರೆ; ಅವರು ಎಲ್ಲಾ ಮನುಷ್ಯರಂತೆ ಕೊಯ್ದ ತೆನೆಯ ಹಾಗೆ ಕೆಳಗೆ ಬಿದ್ದು ಕಾಳಿನಂತೆ ಬೇರ್ಪಡುತ್ತಾರೆ.
[25] “ಈ ಮಾತು ನಿಜ ಇಲ್ಲದಿದ್ದರೆ, ಯಾರು ನನ್ನನ್ನು ಸುಳ್ಳುಗಾರನನ್ನಾಗಿ ಸ್ಥಾಪಿಸಬಲ್ಲರು? ಯಾರು ನನ್ನ ಮಾತನ್ನು ವ್ಯರ್ಥಮಾಡಬಲ್ಲರು?”