Skip to content
Opens in a new window
Listen to this chapter • 2:09

[1] ನನ್ನ ಆತ್ಮ ಮುರಿದುಹೋಗಿದೆ; ನನ್ನ ದಿನಗಳು ಮುಗಿದಿವೆ; ಸಮಾಧಿ ನನಗೆ ಸಿದ್ಧವಾಗಿದೆ.

[2] ಅಪಹಾಸ್ಯಗಾರರು ನನ್ನ ಬಳಿಯಲ್ಲಿ ಇದ್ದಾರೆ; ಅವರ ಹಗೆತನದ ಬಗ್ಗೆ ನಾನು ಎಚ್ಚರವಾಗಿರಬೇಕು.

[3] “ದೇವರೇ, ನೀವು ಹಕ್ಕಾಗಿ ಕೇಳುವ ಈಡನ್ನು ನೀವೇ ನನಗೆ ಕೊಡಿರಿ; ನಿಮ್ಮನ್ನು ಬಿಟ್ಟು ಯಾರು ನನಗೆ ಭದ್ರತೆಯನ್ನು ಕೊಡುವವರು?

[4] ತಿಳುವಳಿಕೆ ಪ್ರವೇಶಿಸದಂತೆ ನೀವು ನನ್ನ ಸ್ನೇಹಿತರ ಮನಸ್ಸನ್ನು ಮುಚ್ಚಿರುವಿರಿ; ಆದ್ದರಿಂದ ನೀವು ಅವರನ್ನು ಜಯಿಸುವುದಕ್ಕೆ ಬಿಡುವುದಿಲ್ಲ.

[5] ಯಾರು ಸ್ವಂತ ಲಾಭಕ್ಕಾಗಿ ಸ್ನೇಹಿತರಿಗೆ ದ್ರೋಹ ಮಾಡುತ್ತಾರೋ, ಅಂಥವರ ಮಕ್ಕಳ ಕಣ್ಣುಗಳು ಮಂಕಾಗಿಬಿಡುವುದು.

[6] “ದೇವರು ನನ್ನನ್ನು ಜನರ ಕಟ್ಟುಗಾದೆಗೆ ಆಸ್ಪದ ಮಾಡಿದ್ದಾರೆ; ನನ್ನನ್ನು ಕಾಣುವವರು ನನ್ನ ಮುಖಕ್ಕೆ ಉಗುಳುವಂತೆ ಮಾಡಿದ್ದಾರೆ.

[7] ನನ್ನ ಕಣ್ಣು ದುಃಖದಿಂದ ಮೊಬ್ಬಾಗಿವೆ; ನನ್ನ ಅಂಗಗಳೆಲ್ಲಾ ನೆರಳಿನ ಹಾಗೆ ಇವೆ.

[8] ಪ್ರಾಮಾಣಿಕರು ಇದನ್ನು ನೋಡಿ ಬೆರಗಾಗಿದ್ದಾರೆ; ನಿರಪರಾಧಿಯು ಭಕ್ತಿಹೀನರ ವಿಷಯದಲ್ಲಿ ಎಚ್ಚರಗೊಳ್ಳುತ್ತಾನೆ.

[9] ಆದರೆ ನೀತಿವಂತನು ತನ್ನ ಮಾರ್ಗದಲ್ಲಿ ಮುಂದುವರಿಯುವನು; ಶುದ್ಧ ಕೈಗಳುಳ್ಳವರು ಬಲದಲ್ಲಿ ಬೆಳೆಯುತ್ತಾ ಇರುವರು.

[10] “ಆದರೆ ನೀವೆಲ್ಲರೂ ಬಂದು ಮತ್ತೆ ವಾದ ಮಾಡಲು ಪ್ರಯತ್ನಿಸಿರಿ! ನಿಮ್ಮಲ್ಲಿ ನಾನು ಒಬ್ಬ ಜ್ಞಾನಿಯನ್ನು ಸಹ ಕಂಡುಕೊಳ್ಳಲಿಲ್ಲ.

[11] ನನ್ನ ದಿನಗಳು ಮುಗಿದು ಹೋದವು; ನನ್ನ ಹೃದಯದ ಬಯಕೆಯಾಗಿರುವ ನನ್ನ ಉದ್ದೇಶಗಳು ಭಂಗವಾದವು.

[12] ನನ್ನ ಸ್ನೇಹಿತರು ರಾತ್ರಿಯನ್ನು ಹಗಲು ಎಂದು ಸಾಧಿಸುತ್ತಾರೆ; ಕತ್ತಲಿಂದ ಬೆಳಕು ಬೇಗ ಬರಲಿದೆ ಎನ್ನುತ್ತಾರೆ.

[13] ಸಮಾಧಿಯೇ ನನ್ನ ಮನೆಯೆಂದು ನಾನು ನಿರೀಕ್ಷಿಸಿದರೆ, ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿಕೊಂಡರೆ,

[14] ಸಮಾಧಿಗೆ, ‘ನೀನು ನನ್ನ ತಂದೆ’ ಎಂದೂ, ಹುಳಕ್ಕೆ, ‘ನನ್ನ ತಾಯಿ, ನನ್ನ ತಂಗಿ’ ಎಂದೂ ನಾನು ಕರೆಯುವುದಾದರೆ,

[15] ನನ್ನ ನಿರೀಕ್ಷೆ ಎಲ್ಲಿ? ನನ್ನ ನಿರೀಕ್ಷೆಯನ್ನು ಯಾರು ನೋಡುವರು?

[16] ನಿರೀಕ್ಷೆಯು ನನ್ನ ಸಂಗಡ ಪಾತಾಳಕ್ಕೆ ಇಳಿದು ಬರುವುದೇ? ನಾವು ಜೊತೆಯಾಗಿ ಮಣ್ಣಿಗೆ ಸೇರಲಾದೀತೆ?”

ಯೋಬ — Chapters