[1] ಎಲೀಹು ಮುಂದುವರೆಸಿ ಹೇಳಿದ್ದೇನೆಂದರೆ:
[2] ಜ್ಞಾನಿಗಳೇ, ನನ್ನ ನುಡಿಗಳನ್ನು ಕೇಳಿರಿ; ಪಂಡಿತರೇ, ನನಗೆ ಕಿವಿಗೊಡಿರಿ.
[3] ಏಕೆಂದರೆ ಆಹಾರವನ್ನು ನಾಲಿಗೆ ರುಚಿ ನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.
[4] ನಾವು ಸರಿಯಾದುದನ್ನೇ ಆಯ್ದುಕೊಳ್ಳೋಣ; ಒಳ್ಳೆಯದು ಏನೆಂದು ನಮ್ಮೊಳಗೆ ನಾವೇ ತಿಳಿದುಕೊಳ್ಳೋಣ.
[5] “ಏಕೆಂದರೆ ಯೋಬನು, ‘ನಾನು ನಿರ್ದೋಷಿಯಾಗಿದ್ದೇನೆ. ಆದರೆ ದೇವರು ನನಗೆ ನ್ಯಾಯವನ್ನು ನಿರಾಕರಿಸಿದ್ದಾರೆ.
[6] ನನ್ನಲ್ಲಿ ನ್ಯಾಯವಿದ್ದರೂ ನನ್ನನ್ನು ಸುಳ್ಳುಗಾರನೆಂದು ಪರಿಗಣಿಸಲಾಗಿದೆ; ನಾನು ನಿರ್ದೋಷಿಯಾಗಿದ್ದರೂ ದೇವರ ಬಾಣವು ಗುಣಪಡಿಸಲಾಗದ ಗಾಯವನ್ನು ನನಗೆ ಉಂಟುಮಾಡಿದೆ,’ ಎಂದು ಹೇಳುತ್ತಿದ್ದಾನೆ.”
[7] ಯೋಬನಿಗೆ ಸಮಾನನು ಯಾರು? ಅವನು ನೀರು ಕುಡಿಯುವಂತೆ ಅಪಹಾಸ್ಯ ಮಾಡುತ್ತಿದ್ದಾನೆ.
[8] ಯೋಬನು ದುಷ್ಕರ್ಮಿಗಳೊಂದಿಗೆ ಸಹವಾಸ ಇಟ್ಟುಕೊಳ್ಳುತ್ತಾ ದುಷ್ಟಜನರ ಸಂಗಡ ನಡೆದಾಡುತ್ತಾನೆ.
[9] “ಏಕೆಂದರೆ ಅವನು, ‘ದೇವರನ್ನು ಮೆಚ್ಚಿಸಲು ಪ್ರಯತ್ನಿಸುವುದರಿಂದ ಮನುಷ್ಯನಿಗೆ ಯಾವುದೇ ಲಾಭವಿಲ್ಲ,’ ಎಂದು ಹೇಳುತ್ತಾನೆ.”
[10] “ಆದ್ದರಿಂದ ಬುದ್ಧಿವಂತರೇ, ನಾನು ಹೇಳುವುದನ್ನು ಕೇಳಿರಿ, ದೇವರು ಕೆಟ್ಟದ್ದನ್ನು ಮಾಡುತ್ತಾರೆಂಬ ಯೋಚನೆ ದೂರವಿರಲಿ. ಸರ್ವಶಕ್ತರು ಅನ್ಯಾಯವನ್ನು ಎಸಗುತ್ತಾರೆಂಬ ಭಾವನೆ ದೂರವಾಗಿರಲಿ.
[11] ದೇವರು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕ ಫಲವನ್ನು ಕೊಡುತ್ತಾರೆ; ಹೌದು, ದೇವರು ಪ್ರತಿಯೊಬ್ಬರನ್ನು ಅವರವರ ನಡತೆಗೆ ತಕ್ಕಂತೆ ಅನುಭವಿಸಮಾಡುತ್ತಾರೆ.
[12] ನಿಶ್ಚಯವಾಗಿ ದೇವರು ಕೆಟ್ಟದ್ದನ್ನು ಮಾಡುವುದಿಲ್ಲ, ಸರ್ವಶಕ್ತರು ನ್ಯಾಯವನ್ನು ಡೊಂಕು ಮಾಡುವುದಿಲ್ಲ.
[13] ಭೂಮಿಯ ಮೇಲೆ ದೇವರನ್ನು ನೇಮಿಸಿದವರು ಯಾರು? ಸರ್ವಲೋಕವನ್ನು ದೇವರ ವಶಕ್ಕೆ ಒಪ್ಪಿಸಿಕೊಟ್ಟವರು ಯಾರು?
[14] ಒಂದು ವೇಳೆ, ದೇವರು ತಮ್ಮ ಆತ್ಮವನ್ನೂ, ಶ್ವಾಸವನ್ನೂ, ನಮ್ಮಿಂದ ಹಿಂದಕ್ಕೆ ತೆಗೆದುಕೊಳ್ಳಲು ಮನಸ್ಸುಮಾಡುವುದಾದರೆ,
[15] ಎಲ್ಲಾ ಮನುಷ್ಯರೂ ಒಟ್ಟಿಗೆ ಅಳಿದುಹೋಗುವರು; ಇಡೀ ಮಾನವಕುಲವು ಧೂಳಿಗೆ ಹಿಂದಿರುಗುವುದು.”
[16] “ಯೋಬನೇ, ಅರ್ಥಮಾಡಿಕೊಂಡು, ಇದನ್ನು ಕೇಳಿಸಿಕೋ; ನನ್ನ ಮಾತಿಗೆ ಕಿವಿಗೊಡು.
[17] ನ್ಯಾಯವನ್ನು ದ್ವೇಷಿಸುವ ದೇವರು, ಆಳ್ವಿಕೆಮಾಡಲು ಸಾಧ್ಯವೇ? ನೀತಿವಂತರೂ, ಸರ್ವಶಕ್ತರೂ ಆಗಿರುವ ದೇವರ ಮೇಲೆ ನೀನು ತಪ್ಪುಹೊರಿಸುವಿಯೋ?
[18] ದೇವರು ಅರಸನಿಗೆ, ‘ನೀನು ಮೂರ್ಖ,’ ಎಂದು ಹೇಳಬಲ್ಲರು. ದೇವರು ಪ್ರಧಾನರಿಗೆ, ‘ನೀವು ದುಷ್ಟರು’ ಎಂದು ಕರೆಯಬಲ್ಲರು ಅಲ್ಲವೇ?
[19] ದೇವರು ಅಧಿಪತಿಗಳಿಗೆ ಮುಖದಾಕ್ಷಿಣ್ಯ ತೋರಿಸುವರೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ದೇವರು ಲಕ್ಷಿಸುವರೋ? ಏಕೆಂದರೆ ಅವರೆಲ್ಲರೂ ದೇವರ ಸೃಷ್ಟಿಯಾಗಿದ್ದಾರೆ.
[20] ಜನರು ಮಧ್ಯರಾತ್ರಿಯಲ್ಲಿ ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಅವರು ತಲ್ಲಣಗೊಂಡು ಇಲ್ಲದೆ ಹೋಗುತ್ತಾರೆ; ಪರಾಕ್ರಮಿಗಳು ಸಹ ಮಾನವರ ಕೈ ಒಳಪಡದೆ ಗತಿಸಿಹೋಗುತ್ತಾರೆ.”
[21] “ಏಕೆಂದರೆ ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ ಇರುತ್ತದೆ; ದೇವರು ಮನುಷ್ಯನ ಪ್ರತಿಯೊಂದು ಹೆಜ್ಜೆಯನ್ನೂ ನೋಡುತ್ತಾರೆ.
[22] ಆದ್ದರಿಂದ ದೇವರ ದೃಷ್ಟಿಯಿಂದ ದುಷ್ಟರು ಅಡಗಿಕೊಳ್ಳಲು, ಗಾಢಾಂಧಕಾರವೂ ಇಲ್ಲ, ನೆರಳೂ ಇರುವುದಿಲ್ಲ.
[23] ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ. ಮನುಷ್ಯನು ನ್ಯಾಯವಿಚಾರಣೆಗೆ ಬರಬೇಕೆಂದು ದೇವರು ಕರೆಯುವ ಅವಶ್ಯಕತೆಯೂ ಇಲ್ಲ.
[24] ಯಾವ ವಿಚಾರಣೆ ಇಲ್ಲದೆಯೇ ದೇವರು ಪರಾಕ್ರಮಿಗಳನ್ನು ದಂಡಿಸಬಹುದು. ದೇವರು ಮತ್ತೊಬ್ಬರನ್ನು ಅವರ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯ.
[25] ಏಕೆಂದರೆ, ದೇವರು ಅಂಥವರ ದುಷ್ಕಾರ್ಯಗಳನ್ನು ತಿಳಿದಿದ್ದಾರೆ. ರಾತ್ರಿಯಲ್ಲಿ ಅವರನ್ನು ಕೆಡವಿ ದಂಡನೆಗೆ ಗುರಿಮಾಡುವರು.
[26] ಅವರ ದುಷ್ಟತನಕ್ಕಾಗಿ ದೇವರು ಎಲ್ಲರು ನೋಡುವಂತೆ ಅವರನ್ನು ಶಿಕ್ಷಿಸುವರು.
[27] ಅವರು ದೇವರನ್ನು ಹಿಂಬಾಲಿಸದೆ, ದೇವರ ಮಾರ್ಗಗಳನ್ನೆಲ್ಲಾ ಅಲಕ್ಷ್ಯ ಮಾಡಿದ್ದರಷ್ಟೆ.
[28] ಹೀಗೆ ದುಷ್ಟರು ಬಡವರ ಕೂಗನ್ನು ದೇವರ ಬಳಿಗೆ ಬರುವಂತೆ ಮಾಡಿದ್ದರು ದೇವರು ದಿಕ್ಕಿಲ್ಲದವರ ಕೂಗನ್ನು ಆಲೈಸಿದ್ದರು.
[29] ಆದರೆ ದೇವರು ಸುಮ್ಮನಿದ್ದರೆ ಅವರ ಮೇಲೆ, ತಪ್ಪುಹೊರಿಸುವವರು ಯಾರು? ದೇವರು ತಮ್ಮ ಮುಖವನ್ನು ವ್ಯಕ್ತಿಗಾಗಲಿ, ದೇಶಕ್ಕಾಗಲಿ ಮರೆಮಾಡಿದರೆ, ದೇವದರ್ಶನ ಪಡೆಯಬಲ್ಲವರು ಯಾರು?
[30] ಭಕ್ತಿಹೀನನು ಆಳಬಾರದು, ಯಾರೂ ಜನರಿಗೆ ಉರುಲಾಗಬಾರದು, ಎಂಬುದೇ ಇದರಲ್ಲಿ ದೇವರ ಉದ್ದೇಶ.”
[31] “ಒಂದು ವೇಳೆ, ಯಾರಾದರೂ ದೇವರಿಗೆ, ‘ನಾನು ಪಾಪಮಾಡಿದ್ದೇನೆ, ಆದರೆ ಇನ್ನು ಮುಂದೆ ಪಾಪಮಾಡುವುದಿಲ್ಲ.
[32] ದೇವರೇ, ನಾನು ಕಾಣದಿರುವುದನ್ನು ನನಗೆ ಬೋಧಿಸಿರಿ. ನಾನು ತಪ್ಪುಮಾಡಿದ್ದರೂ, ಇನ್ನು ಮೇಲೆ ಅದನ್ನು ಮಾಡುವುದಿಲ್ಲ,’ ಎಂದು ಹೇಳಿದ್ದರೆ ಸರಿ.
[33] ಆದರೆ ನೀನು ಪಶ್ಚಾತ್ತಾಪಪಡಲು ನಿರಾಕರಿಸಿದಾಗ, ದೇವರು ನಿನಗೆ ತಕ್ಕ ದಂಡನೆಯನ್ನು ಕೊಡಬಾರದೆ? ಇದನ್ನು ನೀನೇ ತೀರ್ಮಾನಿಸು, ನಾನು ತೀರ್ಮಾನಿಸುವುದಿಲ್ಲ; ಆದ್ದರಿಂದ ನಿನಗೆ ತಿಳಿದದ್ದನ್ನು ನನಗೆ ತಿಳಿಸು.”
[34] “ತಿಳುವಳಿಕೆಯುಳ್ಳವರೂ, ನನ್ನನ್ನು ಆಲಿಸಿದ ಜ್ಞಾನಿಗಳೂ ನಿನ್ನ ವಿಷಯವಾಗಿ:
[35] ‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡಿದ್ದಾನೆ; ಅವನ ಮಾತುಗಳು ಬುದ್ಧಿಯಿಲ್ಲದ ಮಾತುಗಳು.
[36] ಯೋಬನನ್ನು ಕಡೆಯವರೆಗೆ ಪರೀಕ್ಷಿಸಬೇಕೆಂದು ಬಯಸುತ್ತೇವೆ. ಏಕೆಂದರೆ ಅವನು ದುಷ್ಟರ ಹಾಗೆ ಉತ್ತರ ಕೊಡುತ್ತಾನೆ.
[37] ಯೋಬನು ತನ್ನ ಪಾಪಕ್ಕೆ ದೇವರಿಗೆ ಎದುರಾಗಿ ಪ್ರತಿಭಟನೆಯನ್ನು ಸಹ ಕೂಡಿಸುತ್ತಿದ್ದಾನೆ; ಅಪಹಾಸ್ಯದಿಂದ ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ; ದೇವರಿಗೆ ವಿರುದ್ಧ ಹೆಚ್ಚು ಮಾತುಗಳನ್ನಾಡುತ್ತಾನೆ,’ ಎಂದು ನನಗೆ ಹೇಳುತ್ತಿದ್ದಾರೆ.”