[1] “ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು, ನನ್ನನ್ನು ನೋಡಿ ಪರಿಹಾಸ್ಯ ಮಾಡುತ್ತಾರೆ. ಇವರ ಪಿತೃಗಳನ್ನು ನನ್ನ ಕುರಿಮಂದೆಯ ನಾಯಿಗಳೊಡನೆ ಇರಲೂ ಅಯೋಗ್ಯರು ಎಂದೆಣಿಸಿದ್ದೆನು.
[2] ಇವರ ಕೈಗಳ ಬಲದಿಂದ ನನಗೇನಾಗುತ್ತಿತ್ತು? ಆಗ ಅವರ ಚೈತನ್ಯವು ಕುಗ್ಗಿಹೋಗಿತ್ತು!
[3] ಅವರು ಬಡತನದಿಂದಲೂ ಹಸಿವಿನಿಂದಲೂ ಬಳಲಿಹೋಗಿದ್ದರು. ನಿರ್ಜನ ಮತ್ತು ಕತ್ತಲೆಯಾದ ಮರುಭೂಮಿಗಳ ಕಡೆಗೆ ಆಹಾರಕ್ಕಾಗಿ ಓಡಾಡುತ್ತಿದ್ದರು.
[4] ಪೊದೆಗಳಲ್ಲಿನ ಉಪ್ಪಿನ ಸೊಪ್ಪು ಸಂಗ್ರಹಿಸುತ್ತಿದ್ದರು. ಜಾಲಿಯ ಬೇರುಗಳೇ ಅವರ ಆಹಾರವಾಗಿತ್ತು.
[5] ಜನರು ಅವರನ್ನು ಹೊರಗೆ ಹಾಕುತ್ತಿದ್ದರು; ಕಳ್ಳರು ಎಂಬಂತೆ ಅವರನ್ನು ಓಡಿಸುತ್ತಿದ್ದರು.
[6] ಆಗ ಅವರು ಭಯಂಕರ ತಗ್ಗುಗಳ ಸಂದುಗಳಲ್ಲಿಯೂ, ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸಿಸುತ್ತಿದ್ದರು.
[7] ಪೊದೆಗಳ ನಡುವೆ ಇದ್ದುಕೊಂಡು ಅರಚುತ್ತಿದ್ದರು. ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
[8] ಆಗ ಅವರು ಹುಚ್ಚರಂತೆಯೂ ಹೆಸರಿಲ್ಲದ ಮಕ್ಕಳಂತೆಯೂ ನಾಡಿನಿಂದ ಹೊರಗೆ ಅಲೆದಾಡುತ್ತಿದ್ದರು.
[9] “ಆದರೆ ಈಗ ನಾನು ಅವರ ಹಾಸ್ಯದ ಹಾಡೂ, ಅವರಿಗೆ ಗಾದೆಯೂ ಆಗಿದ್ದೇನೆ.
[10] ಈಗ ನನ್ನನ್ನು ಕಂಡು ಅಸಹ್ಯಪಟ್ಟು, ನನ್ನಿಂದ ದೂರಸರಿಯುತ್ತಿದ್ದಾರೆ. ನನ್ನ ಮುಖದ ಮೇಲೆ ಉಗುಳಲೂ ಹಿಂಜರಿಯುವದಿಲ್ಲ.
[11] ಏಕೆಂದರೆ, ದೇವರು ನನ್ನ ಬಿಲ್ಲಿನ ಹಗ್ಗವನ್ನು ಸಡಲಿಸಿ, ಅವರಿಂದ ನನ್ನನ್ನು ಬಾಧಿಸಿದ್ದಾರೆ. ಆದ್ದರಿಂದ ಈಗ ಅವರು ಯಾವುದೇ ನಿರ್ಬಂಧವಿಲ್ಲದಂತೆ ನನ್ನ ಮೇಲೆ ಹೀಗೆಲ್ಲಾ ವರ್ತಿಸುತ್ತಿದ್ದಾರೆ.
[12] ಬಲಗಡೆಯಲ್ಲಿ ಯುವಕರು ಎದ್ದಿದ್ದಾರೆ; ಅವರು ನನ್ನ ಕಾಲುಗಳಿಗೆ ಬಲೆ ಹಾಕಿದ್ದಾರೆ. ನನ್ನನ್ನು ನಾಶಮಾಡಲು ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಿದ್ದಾರೆ.
[13] ನನ್ನ ದಾರಿಯನ್ನೂ ಕಡಿದುಹಾಕಿದ್ದಾರೆ; ಅವರು ನನ್ನನ್ನು ನಾಶಮಾಡಲು ಯಶಸ್ವಿಯಾಗುತ್ತಿದ್ದಾರೆ; ‘ಅವನಿಗೆ ಸಹಾಯಕನಿಲ್ಲ,’ ಎಂದು ಹೇಳುತ್ತಿದ್ದಾರೆ.
[14] ಆ ಯುವಕರು ಅಗಲವಾದ ಬಿರುಕಿನಲ್ಲಿ ನೀರು ಬರುವಂತೆ ಬರುತ್ತಿದ್ದಾರೆ; ನಾಶನದಲ್ಲಿರುವ ನನ್ನ ಮೇಲೆ ಅವರು ಉರುಳಿಬೀಳಲಿದ್ದಾರೆ.
[15] ವಿಪತ್ತುಗಳು ನನ್ನ ಮೇಲೆ ತಿರುಗಿಬಿದ್ದು, ನನ್ನ ಮಾನಮರ್ಯಾದೆ ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿದೆ; ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಗುತ್ತಿದೆ.
[16] “ಆದರೆ ಈಗ ನನ್ನ ಪ್ರಾಣವು ನನ್ನಲ್ಲಿಯೇ ಕರಗಿಹೋಗಿದೆ; ಸಂಕಟದ ದಿವಸಗಳು ನನ್ನನ್ನು ಬಿಗಿಹಿಡಿದಿವೆ.
[17] ರಾತ್ರಿಯಲ್ಲಿ ನನ್ನ ಎಲುಬುಗಳು ನನ್ನಲ್ಲಿ ಕೊರೆಯುತ್ತಿವೆ; ನನ್ನ ಸಂಕಟಗಳು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.
[18] ದೇವರ ಅಧಿಕ ಬಲದಲ್ಲಿ ನನ್ನ ಬಟ್ಟೆಯು ರೋಗದಿಂದ ಬಿಗಿಯಾಗಿ, ಅಂಗಿಯ ಕೊರಳ ಪಟ್ಟಿಯಂತೆ ನನ್ನನ್ನು ಸುತ್ತಿಕೊಂಡಿದೆ.
[19] ದೇವರು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾರೆ; ನಾನು ಧೂಳಿಗೂ ಬೂದಿಗೂ ಸಮಾನನಾಗಿದ್ದೇನೆ.
[20] “ದೇವರೇ, ನಿಮಗೆ ಮೊರೆಯಿಡುತ್ತೇನೆ ಆದರೆ ನೀವು ನನಗೆ ಉತ್ತರ ಕೊಡುವುದಿಲ್ಲ, ನಾನು ಎದ್ದುನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿರಿ.
[21] ನೀವು ನನಗೆ ಕ್ರೂರರಾಗಿದ್ದೀರಿ, ನಿಮ್ಮ ಹಸ್ತ ಶಕ್ತಿಯಿಂದ ನನಗೆ ಹಿಂಸೆಕೊಡುತ್ತೀರಿ.
[22] ನನ್ನನ್ನು ಗಾಳಿಗೆ ಎತ್ತಿ ತೂರಿಬಿಟ್ಟಿರುವಿರಿ, ನನ್ನನ್ನು ಬಿರುಗಾಳಿಗೆ ತೊಳಲಾಡುವಂತೆ ಮಾಡಿದ್ದೀರಿ.
[23] ದೇವರೇ, ನೀವು ನನ್ನನ್ನು ಎಲ್ಲಾ ಜೀವಿಗಳಿಗೆ ನೇಮಕವಾದ ಮನೆಯೆಂಬ ಮರಣಕ್ಕೆ, ಸೇರಿಸುವಿರಿ ಎಂದು ನನಗೆ ಗೊತ್ತಿದೆ.
[24] “ಆದರೂ ಮುರಿದ ಮನುಷ್ಯನಾಗಿರುವ ನಾನು ಸಹಾಯಕ್ಕಾಗಿ ಕೈಚಾಚಬಾರದೆ? ಆಪತ್ತಿಗೆ ಒಳಪಟ್ಟವನಾದ ನಾನು ಕೂಗಿಕೊಳ್ಳಬಾರದೆ?
[25] ಕಷ್ಟದಲ್ಲಿ ಇದ್ದವರಿಗೋಸ್ಕರ ನಾನು ಕಣ್ಣೀರಿಡಲಿಲ್ಲವೆ? ದರಿದ್ರನಿಗೋಸ್ಕರ ನನ್ನ ಪ್ರಾಣವು ದುಃಖಪಡಲಿಲ್ಲವೆ?
[26] ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರಲು ಕೇಡು ಬಂದೊದಗಿತು; ನಾನು ಬೆಳಕನ್ನು ಎದುರು ನೋಡಲು, ಅಂಧಕಾರ ಬಂದು ಕವಿಯಿತು.
[27] ನನ್ನ ಹೃದಯವು ಯಾವಾಗಲೂ ಅಶಾಂತಿಯಿಂದ ಕುದಿಯುತ್ತಿದೆ; ಸಂಕಟಗಳ ದಿವಸಗಳು ನನ್ನನ್ನು ಎದುರಿಸುತ್ತಿವೆ.
[28] ಬಿಸಿಲು ನನ್ನ ಮೇಲೆ ಬೀಳದಿದ್ದರೂ ನಾನು ಕಪ್ಪಾಗಿ ಹೋದೆನು; ನಾನು ಸಭೆಯಲ್ಲಿ ಎದ್ದು ನಿಂತು ಸಹಾಯಕ್ಕಾಗಿ ಕೂಗಿದೆನು.
[29] ನಾನು ನರಿಗಳಿಗೆ ಸಹೋದರನಾದೆನು; ಗೂಬೆಗಳಿಗೆ ನಾನು ಜೊತೆಯವನಾದೆನು.
[30] ನನ್ನ ಮೇಲಿನ ಚರ್ಮವು ಕಪ್ಪಾಗಿ ಉದುರುತ್ತಿದೆ; ನನ್ನ ಶರೀರ ಜ್ವರದಿಂದ ಬಿಸಿಯಾಗಿದೆ.
[31] ನನ್ನ ಕಿನ್ನರಿಯಲ್ಲಿ ಗೋಳಾಟದ ಧ್ವನಿಯು ಕೇಳಿಸುತ್ತಿದೆ. ನನ್ನ ಕೊಳಲಿನಲ್ಲಿ ಅಳುವವರ ಸ್ವರವೇ ಕೇಳಿಬರುತ್ತಿದೆ.