Skip to content
Opens in a new window
Listen to this chapter • 3:11

[1] “ಮನುಷ್ಯರಿಗೆ ಭೂಮಿಯಲ್ಲಿ ಕಠಿಣ ದುಡಿತ ಇಲ್ಲವೇ? ಮಾನವನ ದಿನಗಳು ಜೀತದಾಳಿನ ದಿನಗಳ ಹಾಗಲ್ಲವೋ?

[2] ಗುಲಾಮನು ಸಾಯಂಕಾಲದ ನೆರಳನ್ನು ಅಪೇಕ್ಷಿಸುವ ಪ್ರಕಾರವೂ, ನಾನು ಕೂಲಿಯವನು ತನ್ನ ಕೂಲಿಯನ್ನು ಕೋರುವ ಪ್ರಕಾರವೂ ಇದ್ದೇನೆ.

[3] ನನಗೆ ನಿರರ್ಥಕತೆಯ ತಿಂಗಳುಗಳನ್ನು ನೀಡಲಾಗಿದೆ; ಬೇಸರಿಕೆಯ ರಾತ್ರಿಗಳು ನನಗೆ ನೇಮಕವಾಗಿವೆ.

[4] ಮಲಗುವ ವೇಳೆಯಲ್ಲಿ, ‘ಯಾವಾಗ ಏಳುವೆನೋ?’ ಅಂದುಕೊಳ್ಳುವೆನು, ರಾತ್ರಿ ಬೆಳೆಯುತ್ತಾ ಹೋಗುತ್ತದೆ; ಉದಯದವರೆಗೂ ಹೊರಳಿ ಹೊರಳಿ ಸಾಕಾಗುತ್ತದೆ.

[5] ನನ್ನ ದೇಹವು ಹುಳಹಕ್ಕಳೆಗಳನ್ನೂ ಧರಿಸಿಕೊಂಡಿದೆ; ನನ್ನ ಚರ್ಮವು ಕಜ್ಜಿಯಿಂದ ಬಿರಿದು ಹೋಗಿದೆ.

[6] “ನನ್ನ ದಿನಗಳು ಮಗ್ಗದ ಲಾಳಿಗಿಂತ ತ್ವರೆಯಾಗಿವೆ; ದಿನಗಳು ನಿರೀಕ್ಷೆ ಇಲ್ಲದೆ ಮುಗಿಯುತ್ತವೆ.

[7] ಓ ದೇವರೇ, ನನ್ನ ಜೀವವು ಕೇವಲ ಉಸಿರೆಂದು ನೆನಪುಮಾಡಿಕೊಳ್ಳಿರಿ. ನನ್ನ ಕಣ್ಣು ತಿರುಗಿ ಸಂತೋಷವನ್ನು ಕಾಣುವುದಿಲ್ಲ.

[8] ನನ್ನನ್ನು ನೋಡುವವನ ಕಣ್ಣು, ಇನ್ನು ಮೇಲೆ ನನ್ನನ್ನು ನೋಡದು; ನೀವು ನನ್ನನ್ನು ನೋಡಿದರೂ, ನಾನು ಬದುಕಿರುವುದಿಲ್ಲ.

[9] ಮೋಡವು ಕರಗಿ ಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು.

[10] ಇನ್ನು ಅವನು ತನ್ನ ಮನೆಗೆ ತಿರುಗಿಕೊಳ್ಳುವುದಿಲ್ಲ; ಅವನ ಸ್ಥಳವು ಇನ್ನು ಅವನ ಗುರುತನ್ನು ಅರಿಯದು.

[11] “ಆದ್ದರಿಂದ ನಾನು ನನ್ನ ಬಾಯಿ ಮುಚ್ಚುವುದಿಲ್ಲ; ಆತ್ಮವೇದನೆಯಿಂದ ಮಾತಾಡುವೆನು, ನನ್ನ ಆತ್ಮದ ಕಹಿಯಲ್ಲಿ ನಾನು ವಾದಿಸುವೆನು.

[12] ನೀವು ನನಗೆ ಕಾವಲಿಡುವುದಕ್ಕೆ ನಾನೇನು ಸಮುದ್ರವೋ? ಇಲ್ಲವೆ ತಿಮಿಂಗಿಲವೋ?

[13] ನನ್ನ ಹಾಸಿಗೆಯು ನನ್ನನ್ನು ಸಂತೈಸುವುದು; ನನ್ನ ಮಂಚವು ನನ್ನ ಚಿಂತೆಯನ್ನು ಶಮನ ಮಾಡಲಿ ಎಂದುಕೊಳ್ಳುವಾಗ,

[14] ನೀವು ಸ್ವಪ್ನಗಳಿಂದ ನನ್ನನ್ನು ಹೆದರಿಸುತ್ತೀರಿ; ದರ್ಶನಗಳಿಂದ ನನ್ನನ್ನು ಭಯಪಡಿಸುತ್ತೀರಿ.

[15] ಆದ್ದರಿಂದ ನನ್ನ ದೇಹದಲ್ಲಿ ಸಂಕಟಪಡುವುದಕ್ಕಿಂತಲೂ ಉಸಿರುಕಟ್ಟಿ, ನಾನು ನನ್ನ ಪ್ರಾಣಬಿಡುವುದು ಲೇಸು.

[16] ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ; ನಿರಂತರ ನಾನು ಬದುಕಲೊಲ್ಲೆನು; ನನ್ನನ್ನು ಬಿಟ್ಟುಬಿಡಿರಿ; ನನ್ನ ಬಾಳಿನ ದಿನಗಳಿಗೆ ಅರ್ಥವಿಲ್ಲ.

[17] “ದೇವರೇ, ಮಾನವನು ಎಷ್ಟರವನು? ನೀವು ಮಾನವನಿಗೆ ಬಹು ಗೌರವ ಕೊಡುತ್ತೀರಿ, ಅವನ ಕಡೆಗೆ ಗಮನಹರಿಸುತ್ತೀರಿ.

[18] ಮನುಷ್ಯನನ್ನು ಪ್ರತಿ ಉದಯದಲ್ಲಿ ವಿಚಾರಿಸುತ್ತೀರಿ, ನೀವು ಕ್ಷಣಕ್ಷಣಕ್ಕೆ ಅವನನ್ನು ಪರೀಕ್ಷಿಸುವುದೇಕೆ?

[19] ನೀವು ನನ್ನ ಕಡೆಯಿಂದ ದೃಷ್ಟಿಯನ್ನು ತೊಲಗಿಸುವುದಿಲ್ಲವೋ? ನಾನು ಒಂದು ಕ್ಷಣ ಉಗುಳು ನುಂಗುವುದಕ್ಕೂ ನನ್ನನ್ನು ಬಿಡುವುದಿಲ್ಲ?

[20] ಮನುಷ್ಯರನ್ನು ಕಾಯುವವರೇ, ನಾನು ಪಾಪಮಾಡಿದ್ದರೆ, ನಾವು ಮಾಡುವ ಪ್ರತಿಯೊಂದನ್ನೂ ನೋಡುವವರೇ, ನಾನು ನಿಮಗೆ ಏನು ಮಾಡಿದೆ? ನಾನು ನಿಮಗೆ ಭಾರವಾಗಿದ್ದೇನೋ? ನನ್ನನ್ನು ನಿಮ್ಮ ಗುರಿಯಾಗಿ ಇಟ್ಟುಕೊಳ್ಳುವುದು ಏಕೆ?

[21] ನೀವು ನನ್ನ ಅಪರಾಧವನ್ನು ಪರಿಹರಿಸಬಾರದೇ? ನನ್ನ ಪಾಪವನ್ನು ಕ್ಷಮಿಸಬಾರದೇ? ನಾನು ಬೇಗ ಮಣ್ಣಿಗೆ ಸೇರಿಬಿಡುವೆನು; ನೀವು ನನ್ನನ್ನು ಹುಡುಕಿದರೆ ನಾನು ಇರುವುದಿಲ್ಲ.”

ಯೋಬ — Chapters