[1] ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು:
[2] “ನಿಸ್ಸಂದೇಹವಾಗಿ ನೀವೇ ಆ ಜನರು; ನಿಮ್ಮ ಸಂಗಡಲೇ ಜ್ಞಾನವು ಸಾಯುವುದು.
[3] ನಿಮ್ಮ ಹಾಗೆಯೇ ನನಗೂ ಸಹ ತಿಳುವಳಿಕೆ ಉಂಟು; ನಾನು ನಿಮಗಿಂತ ಕಡಿಮೆ ಇಲ್ಲ; ಇಂಥಾ ವಿಷಯಗಳನ್ನು ತಿಳಿಯದಿರುವವನು ಯಾರು?
[4] “ನಾನು ನೀತಿವಂತನೂ, ನಿರ್ದೋಷಿಯಾದರೂ ಗೆಳೆಯರ ಗೇಲಿ ಪರಿಹಾಸ್ಯಕ್ಕೆ ಗುರಿಯಾದೆನು; ನಾನು ದೇವರಿಗೆ ಪ್ರಾರ್ಥಿಸಿದೆ; ದೇವರು ನನಗೆ ಉತ್ತರಕೊಟ್ಟರು;
[5] ಸುಖಜೀವಿಗಳಾಗಿರುವ ಜನರು ತೊಂದರೆಯಲ್ಲಿ ಇರುವವರನ್ನು ಅಪಹಾಸ್ಯ ಮಾಡುತ್ತಾರೆ, ಎಡವಿ ಬೀಳುವ ಜನರಿಗೆ ಕಾದಿದೆ ಆಪತ್ತು.
[6] ಕಳ್ಳರ ಗುಡಾರಗಳು ವೃದ್ಧಿಯಾಗಿವೆ; ದೇವರನ್ನು ಕೆರಳಿಸುವವರು ನಿಶ್ಚಿಂತರಾಗಿದ್ದಾರೆ; ದೇವರೇ ತಮ್ಮ ಕೈಯಲ್ಲಿ ಇರುವುದಾಗಿ ತಿಳಿಯುತ್ತಾರೆ.
[7] “ಆದರೂ ಮೃಗಗಳನ್ನು ಕೇಳು, ಅವು ನಿನಗೆ ಬೋಧಿಸುವುವು; ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುವುವು.
[8] ಭೂಮಿಯ ಸಂಗಡ ಮಾತನಾಡು, ಅದು ನಿನಗೆ ಬೋಧಿಸುವುದು, ಸಮುದ್ರದ ಮೀನುಗಳು ನಿನಗೆ ವಿವರಿಸುವುವು.
[9] ಯೆಹೋವ ದೇವರ ಕೈ ಇವುಗಳನ್ನೆಲ್ಲಾ ಮಾಡಿತೆಂದು ಇವುಗಳಲ್ಲಿ ತಿಳಿಯದಿರುವುದು ಯಾವುದು?
[10] ದೇವರ ಕೈಯಲ್ಲಿ ಎಲ್ಲಾ ಜೀವಿಗಳ ಪ್ರಾಣವೂ ಎಲ್ಲಾ ಮನುಷ್ಯರ ಶ್ವಾಸವೂ ಇವೆ.
[11] ಬಾಯಿಯು ಆಹಾರವನ್ನು ರುಚಿ ನೋಡುವಂತೆ ಕಿವಿಯು ನುಡಿಗಳನ್ನು ವಿವೇಚಿಸುವುದಿಲ್ಲವೇ?
[12] ಮುದುಕರಲ್ಲಿ ಜ್ಞಾನವು ಇರುವುದಿಲ್ಲವೋ? ದೀರ್ಘಾಯುಷ್ಯರಲ್ಲಿ ತಿಳುವಳಿಕೆಯನ್ನು ತರುವುದಿಲ್ಲವೋ?
[13] “ಜ್ಞಾನವೂ, ಶಕ್ತಿಯೂ ದೇವರಲ್ಲಿವೆ; ಸಮಾಲೋಚನೆಯೂ, ಗ್ರಹಿಕೆಯೂ ದೇವರವೇ.
[14] ದೇವರು ಕೆಡವಿದ್ದನ್ನು ತಿರುಗಿ ಕಟ್ಟಲಾಗುವುದಿಲ್ಲ; ದೇವರು ಸೆರೆಯಲ್ಲಿ ಹಾಕುವ ಮನುಷ್ಯನನ್ನು ಯಾರೂ ಬಿಡಿಸಲಾಗುವುದಿಲ್ಲ.
[15] ದೇವರು ಮಳೆಯನ್ನು ತಡೆಹಿಡಿಯುತ್ತಾರೆ, ಭೂಮಿ ಒಣಗುತ್ತದೆ; ದೇವರು ನೀರನ್ನು ಬಿಟ್ಟರೆ, ಭೂಮಿಯನ್ನು ಹಾಳುಮಾಡುತ್ತದೆ.
[16] ಬಲವೂ, ಜ್ಞಾನವೂ ದೇವರಲ್ಲಿವೆ; ವಂಚಕ ಹಾಗು ವಂಚಿತ ದೇವರಿಗೆ ಒಳಪಟ್ಟವರು.
[17] ದೇವರು ಸಲಹೆಗಾರರನ್ನು ಸೆರೆಹಿಡಿಯುತ್ತಾರೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾರೆ.
[18] ದೇವರು ಅರಸರಿಂದ ಹಾಕಲಾದ ಬಂಧನಗಳನ್ನು ಬಿಚ್ಚಿ, ಅವರ ನಡುಗಳಿಗೆ ವಸ್ತ್ರವನ್ನು ಕಟ್ಟುತ್ತಾರೆ.
[19] ದೇವರು ಯಾಜಕರನ್ನು ಅಧಿಕಾರದಿಂದ ತೆಗೆದುಹಾಕುತ್ತಾರೆ; ಪ್ರಧಾನರನ್ನು ಕೆಡವಿಬಿಡುತ್ತಾರೆ.
[20] ದೇವರು ವಿಶ್ವಾಸಾರ್ಹ ಸಲಹೆಗಾರರನ್ನು ಮೌನಗೊಳಿಸುತ್ತಾರೆ; ವೃದ್ಧರ ವಿವೇಚನೆಯನ್ನು ತೆಗೆದುಬಿಡುತ್ತಾರೆ.
[21] ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾರೆ; ಬಲಿಷ್ಠರ ಬಲವನ್ನು ಸಡಿಲಿಸುತ್ತಾರೆ.
[22] ದೇವರು ಕತ್ತಲೆಯೊಳಗಿಂದ ಅಗಾಧವಾದ ವಿಷಯಗಳನ್ನು ಪ್ರಕಟಪಡಿಸುತ್ತಾರೆ, ಗಾಢಾಂಧಕಾರವನ್ನು ಪ್ರಕಾಶಗೊಳಿಸುತ್ತಾರೆ.
[23] ದೇಶಗಳನ್ನು ಬೆಳೆಸುವುದೂ, ದಂಡಿಸುವುದೂ ದೇವರ ಕೈಯಲ್ಲಿದೆ; ದೇಶಗಳನ್ನು ವಿಸ್ತಾರಮಾಡುವುದೂ, ಚದರಿಸುವುದೂ ದೇವರ ಅಧಿಕಾರದಲ್ಲಿದೆ.
[24] ದೇವರು ಭೂಮಿಯ ಮುಖ್ಯಸ್ಥರ ವಿವೇಚನೆಯನ್ನು ತೆಗೆದುಬಿಡುತ್ತಾರೆ; ಅಂಥವರು ಮಾರ್ಗವಿಲ್ಲದ ಅಲೆಯ ಮಾಡುವುದೂ ದೇವರಿಗೆ ಸಾಧ್ಯ.
[25] ನಾಯಕರು ಬೆಳಕು ಇಲ್ಲದ ಕತ್ತಲೆಯಲ್ಲಿ ತಡಕಾಡುವಂತೆಯೂ ಅವರು ಮತ್ತೇರಿದವರಂತೆ ದಿಗ್ಭ್ರಮೆಗೊಳಿಸುವಂತೆಯೂ ಮಾಡಲು ದೇವರು ಶಕ್ತರು.