[1] “ಆದ್ದರಿಂದ ಯೋಬನೇ, ನನ್ನ ಮಾತುಗಳನ್ನು ಕೇಳು. ನನ್ನ ಎಲ್ಲಾ ನುಡಿಗಳಿಗೆ ಕಿವಿಗೊಡು ಎಂದು ಕೇಳಿಕೊಳ್ಳುತ್ತೇನೆ.
[2] ಈಗ ನಾನು ಮಾತಾಡಲು ಪ್ರಾರಂಭಿಸಿದ್ದೇನೆ; ನನ್ನ ಮಾತುಗಳು ನನ್ನ ನಾಲಿಗೆಯ ತುದಿಯಲ್ಲಿವೆ.
[3] ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುತ್ತವೆ; ನನ್ನ ತುಟಿಗಳು ನಾನು ತಿಳಿದುಕೊಂಡಿದ್ದನ್ನೇ ಯಥಾರ್ಥವಾಗಿ ಹೇಳುತ್ತವೆ.
[4] ದೇವರ ಆತ್ಮರು ನನ್ನನ್ನು ಉಂಟುಮಾಡಿದರು. ಸರ್ವಶಕ್ತರ ಶ್ವಾಸವೇ ನನಗೆ ಜೀವವನ್ನು ಕೊಟ್ಟಿತು.
[5] ನಿನಗೆ ಸಾಧ್ಯವಾದರೆ ನನಗೆ ಉತ್ತರಕೊಡು; ನನ್ನ ಎದುರಿನಲ್ಲೇ ನಿನ್ನ ವ್ಯಾಜ್ಯವನ್ನು ವಾದಿಸು.
[6] ನೋಡು, ದೇವರ ದೃಷ್ಟಿಯಲ್ಲಿ ನಾನು ನಿನ್ನಂತೆಯೇ ಇದ್ದೇನೆ; ನಾನು ಸಹ ಜೇಡಿಮಣ್ಣಿನಿಂದ ರೂಪಿತವಾಗಿದ್ದೇನೆ.
[7] ಆದ್ದರಿಂದ ನನ್ನ ಭೀತಿ ನಿನ್ನನ್ನು ಎಚ್ಚರಿಸದಿರಲಿ; ನನ್ನ ಒತ್ತಾಯ ನಿನ್ನ ಮೇಲೆ ಭಾರವಾಗಿರಬಾರದು.
[8] “ನಿಶ್ಚಯವಾಗಿ, ನೀನು ಆಡಿದ್ದೆಲ್ಲಾ ನನ್ನ ಕಿವಿಗೆ ಬಿದ್ದಿವೆ. ನಾನೇ ಈ ರೀತಿಯಾಗಿ ನೀನು ಆಡಿದ ಮಾತುಗಳನ್ನು ಕೇಳಿದ್ದೇನೆ:
[9] ‘ನಾನು ಶುದ್ಧನು, ನಾನು ತಪ್ಪುಮಾಡಲಿಲ್ಲ; ನಾನು ನಿರ್ದೋಷಿ, ನನ್ನಲ್ಲಿ ಏನೂ ಪಾಪವಿಲ್ಲ.
[10] ಆದರೂ ದೇವರು ನನ್ನಲ್ಲಿ ತಪ್ಪು ಕಂಡುಹಿಡಿಯುತ್ತಿದ್ದಾರೆ; ದೇವರು ನನ್ನನ್ನು ಶತ್ರುವೆಂದು ಎಣಿಸುತ್ತಿದ್ದಾರೆ.
[11] ದೇವರು ನನ್ನ ಕಾಲುಗಳಿಗೆ ಕೋಳ ಹಾಕಿದ್ದಾರೆ; ದೇವರು ನನ್ನ ಎಲ್ಲಾ ಹಾದಿಗಳನ್ನೂ ಪರಿಶೋಧಿಸುತ್ತಿದ್ದಾರೆ.’
[12] “ಹೀಗೆಲ್ಲಾ ನೀನು ಮಾತಾಡಿದ್ದು ಸರಿಯಲ್ಲವೆಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ದೇವರು ಮನುಷ್ಯರಿಗಿಂತ ಬಹಳ ದೊಡ್ಡವರು.
[13] ದೇವರು ನಿನ್ನ ಮಾತುಗಳಲ್ಲಿ ಒಂದಕ್ಕಾದರೂ ಉತ್ತರ ಕೊಡಲಿಲ್ಲ ಎಂದು ನೀನು ದೇವರೊಂದಿಗೆ ವ್ಯಾಜ್ಯವಾಡುವುದೇಕೆ?
[14] ಏಕೆಂದರೆ ದೇವರು ಮಾತನಾಡುತ್ತಾರೆ. ಹೌದು, ವಿವಿಧ ರೀತಿಯಿಂದ ಮಾತನಾಡುತ್ತಾರೆ; ಆದರೂ ಯಾರು ದೇವರ ಸ್ವರವನ್ನು ಗ್ರಹಿಸಿಕೊಳ್ಳುವುದಿಲ್ಲ.
[15] ಸ್ವಪ್ನದಲ್ಲಿ, ರಾತ್ರಿಯ ದರ್ಶನದಲ್ಲಿ, ಗಾಢನಿದ್ರೆಯು ಮನುಷ್ಯರಿಗೆ ಬಂದಾಗ, ಹಾಸಿಗೆಯ ಮೇಲಿನ ತೂಕಡಿಕೆಗಳಲ್ಲಿ ಸಹ,
[16] ದೇವರು ಮನುಷ್ಯರ ಕಿವಿಗಳನ್ನು ತೆರೆದು, ಎಚ್ಚರಿಕೆಗಳಿಂದ ಮುದ್ರೆಹಾಕಿ ಮಾತಾಡುತ್ತಾರೆ.
[17] ಮನುಷ್ಯನನ್ನು ಅವನ ದುಷ್ಕಾರ್ಯದಿಂದ ತಪ್ಪಿಸುವದಕ್ಕೂ, ಅವನ ಗರ್ವವನ್ನು ಅಡಗಿಸುವುದಕ್ಕೂ ದೇವರು ಹಾಗೆ ಮಾಡುತ್ತಾರೆ.
[18] ಮನುಷ್ಯನ ಪ್ರಾಣವನ್ನು ಕುಣಿಯಿಂದ ತಡೆಯುತ್ತಾರೆ, ಅವನ ಜೀವವನ್ನು ಖಡ್ಗದಿಂದ ನಾಶವಾಗದ ಹಾಗೆಯೂ ಕಾಪಾಡುತ್ತಾರೆ.
[19] “ಇದಲ್ಲದೆ ಮನುಷ್ಯನು ತನ್ನ ಹಾಸಿಗೆಯಲ್ಲಿ ನೋವಿನಿಂದ ಬಿದ್ದಿರುವಾಗ, ಅವನ ಎಲುಬುಗಳಿಗೆ ನೋವು ಉಂಟಾದಾಗ, ದೇವರು ಅವನನ್ನು ತಿದ್ದುತ್ತಾರೆ.
[20] ಆಗ ಮನುಷ್ಯನು ತನ್ನ ಹಸಿವನ್ನು ಕಳೆದುಕೊಳ್ಳುತ್ತಾನೆ, ಅವನ ಜೀವಕ್ಕೆ ಸವಿ ಊಟವೂ ಅಸಹ್ಯವಾಗುವುದು.
[21] ಅವನ ಶರೀರವು ಕಾಣದ ಹಾಗೆ ಸವೆಯುವುದು; ಕಾಣದಿದ್ದ ಅವನ ಎಲುಬುಗಳು ಸಹ ಬಯಲಾಗುತ್ತವೆ.
[22] ಹೀಗೆ ಮನುಷ್ಯನ ಆತ್ಮವು ಸಮಾಧಿಗೆ ಸಮೀಪಿಸುವುದು. ಅವನ ಪ್ರಾಣವು ಸಾವಿನ ಸಂದೇಶವಾಹಕರ ಹತ್ತಿರವಾಗುವುದು.
[23] ಆಗ ಸಹಸ್ರ ದೂತರಲ್ಲಿ ಒಬ್ಬನು ಮಧ್ಯಸ್ಥನಾಗಿ ಆ ಮನುಷ್ಯನ ಯಥಾರ್ಥತೆಯನ್ನು ತಿಳಿಸುವುದಕ್ಕೆ ಅವನ ಬಳಿಯಲ್ಲಿದ್ದರೆ,
[24] ಆ ಮಧ್ಯಸ್ಥನು ಅವನನ್ನು ಕರುಣಿಸಿ ದೇವರಿಗೆ, ‘ಅಧೋಲೋಕವೆಂಬ ಕುಣಿಗೆ ಇಳಿಯುವುದರಿಂದ ಇವನನ್ನು ಕಾಪಾಡಿರಿ; ನಾನು ಇವನಿಗಾಗಿ ವಿಮೋಚನೆಯ ಕ್ರಯವನ್ನು ಕಂಡುಹಿಡಿದಿದ್ದೇನೆ.
[25] ಅವನ ದೇಹವು ಮಗುವಿನ ದೇಹಕ್ಕಿಂತ ಮೃದುವಾಗಿರಲಿ; ಅವನು ಪುನಃ ತನ್ನ ಯೌವನದ ದಿನಗಳಿಗೆ ಹಿಂದಿರುಗಲಿ,’ ಎಂದು ಹೇಳುತ್ತಿದ್ದನು.
[26] ಆಗ ಆ ಮನುಷ್ಯನು ದೇವರಿಗೆ ಪ್ರಾರ್ಥನೆಮಾಡುವನು; ದೇವರು ಅವನಿಗೆ ತಮ್ಮ ಮೆಚ್ಚುಗೆಯನ್ನು ನೀಡುವರು; ಅವನು ಆನಂದ ಧ್ವನಿಯಿಂದ ದೇವರ ಮುಖವನ್ನು ನೋಡುವನು; ದೇವರು ಅವನನ್ನು ನೀತಿವಂತನೆಂದು ಪುನಃಸ್ಥಾಪಿಸುವರು.
[27] ಅವನು ಜನರ ಮುಂದೆ ಹಾಡುತ್ತಾ ಹೀಗೆ ಹೇಳುವನು: ‘ನಾನು ಪಾಪಮಾಡಿದೆ, ನ್ಯಾಯವನ್ನು ಬಿಟ್ಟು ನಡೆದೆ. ಆದರೂ ದೇವರು ನನ್ನ ಪಾಪಕ್ಕೆ ತಕ್ಕಂತೆ ದಂಡಿಸಲಿಲ್ಲ. ದೇವರು ಮುಯ್ಯಿತೀರಿಸಲಿಲ್ಲ,
[28] ದೇವರು ನನ್ನನ್ನು ಅಧೋಲೋಕಕ್ಕೆ ಹೋಗದಂತೆ ವಿಮೋಚಿಸಿದ್ದಾರೆ; ನಾನು ಜೀವ ಬೆಳಕನ್ನು ಆನಂದಿಸಲು ಬಾಳುವೆನು.’
[29] “ನೋಡು, ದೇವರು ಎರಡು ಸಾರಿಯಲ್ಲದೆ, ಮೂರು ಸಾರಿ ಈ ಕಾರ್ಯಗಳನ್ನೆಲ್ಲಾ ಮನುಷ್ಯರಿಗಾಗಿ ಮಾಡುವರು.
[30] ಮನುಷ್ಯನ ಆತ್ಮವು ಅಧೋಲೋಕದಿಂದ ಹಿಂದಿರುಗಿ ಬಂದು, ಜೀವ ಬೆಳಕನ್ನು ಅನುಭವಿಸುವಂತೆಯೇ ದೇವರು ಹೀಗೆ ಮಾಡುವರು.
[31] “ಯೋಬನೇ, ನನ್ನ ಮಾತನ್ನು ಗಮನಕೊಟ್ಟು ಕೇಳು. ಮೌನವಾಗಿದ್ದು ಕೇಳು, ಈಗ ನಾನು ಮಾತನಾಡುತ್ತೇನೆ.
[32] ನಿನಗೆ ಹೇಳುವುದಕ್ಕೆ ಏನಾದರೂ ಇದ್ದರೆ ಹೇಳು, ನನಗೆ ಉತ್ತರಕೊಡು, ಮಾತನಾಡು, ಏಕೆಂದರೆ ನಾನು ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಆಶೆ.
[33] ಇಲ್ಲವಾದರೆ ನಾನು ಹೇಳುವುದನ್ನು ಕೇಳು; ಮೌನವಾಗಿರು, ಈಗ ನಾನು ನಿನಗೆ ಜ್ಞಾನವನ್ನು ಬೋಧಿಸುತ್ತೇನೆ.”