Skip to content
Opens in a new window
Listen to this chapter • 2:54

[1] ಆಗ ನಾಮಾಥ್ಯನಾದ ಚೋಫರನು ಹೀಗೆಂದನು:

[2] “ಬಹಳ ಮಾತುಗಳಿಂದ ಉತ್ತರ ಕೊಡಬಾರದೋ? ಬಾಯಿ ಬಡುಕನು ನೀತಿವಂತನೆಂದು ಎನಿಸಿಕೊಳ್ಳುವನೋ?

[3] ನಿನ್ನ ವ್ಯರ್ಥ ಮಾತಿಗೆ ಮನುಷ್ಯರು ಮೌನವಾಗಿರಬೇಕೋ? ನೀನು ಗೇಲಿ ಮಾಡುವಾಗ ಯಾವನೂ ನಿನ್ನನ್ನು ಖಂಡಿಸುವುದಿಲ್ಲವೋ?

[4] ಏಕೆಂದರೆ ನೀನು, ‘ನನ್ನ ನಂಬಿಕೆ ತಪ್ಪಿಲ್ಲದ್ದು, ನಿಮ್ಮ ದೃಷ್ಟಿಯಲ್ಲಿ ನಾನು ಶುದ್ಧನಾಗಿದ್ದೇನೆ,’ ಎಂದು ದೇವರಿಗೆ ಹೇಳಿದ್ದೀ.

[5] ಆಹಾ, ದೇವರು ಮಾತನಾಡಿ, ನಿನ್ನ ವಿರೋಧವಾಗಿ ತಮ್ಮ ತುಟಿಗಳನ್ನು ತೆರೆದು,

[6] ಜ್ಞಾನದ ಮರ್ಮಗಳನ್ನು ನಿನಗೆ ತೋರಿಸಿದರೆ ಒಳ್ಳೆಯದು, ನಿಜ ಜ್ಞಾನಕ್ಕೆ ಎರಡು ಬದಿಗಳಿವೆ; ದೇವರು ನಿನ್ನ ಪಾಪಗಳನ್ನು ತಮ್ಮ ಲಕ್ಷ್ಯಕ್ಕೆ ತರಲಿಲ್ಲ ಎಂದು ತಿಳಿದುಕೋ.

[7] “ನೀನು ದೇವರ ರಹಸ್ಯಗಳನ್ನು ಕಂಡುಕೊಳ್ಳುವಿಯಾ? ಸರ್ವಶಕ್ತರ ಮಿತಿಯನ್ನು ನಿನ್ನಿಂದ ಪರೀಕ್ಷಿಸಲಾದೀತೇ?

[8] ಅದು ಆಕಾಶಕ್ಕಿಂತಲೂ ಎತ್ತರವಾಗಿದೆ; ಆಗ ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳವಾಗಿದೆ; ಆಗ ನೀನೇನು ತಿಳುಕೊಳ್ಳುವಿ?

[9] ಅದರ ಅಳತೆ ಭೂಮಿಗಿಂತ ಉದ್ದವೂ, ಸಮುದ್ರಕ್ಕಿಂತ ಅಗಲವೂ ಆಗಿದೆ.

[10] “ದೇವರು ಬಂದು ನಿನ್ನನ್ನು ಸೆರೆಮನೆಯಲ್ಲಿಟ್ಟರೂ, ನ್ಯಾಯವಿಚಾರಣೆಗೆ ಕರೆದರೂ, ದೇವರನ್ನು ತಡೆಯುವವರು ಯಾರು?

[11] ಖಂಡಿತವಾಗಿ ದೇವರು ಮೋಸಗಾರರನ್ನು ಗುರುತಿಸುತ್ತಾರೆ; ದೇವರು ದುಷ್ಟತನವನ್ನು ನೋಡಿ ಅದನ್ನು ಗ್ರಹಿಸಿಕೊಳ್ಳದೆ ಇರುತ್ತಾರೋ?

[12] ಒಂದು ಕಾಡುಕತ್ತೆ ಮರಿಗೆ ಹೇಗೆ ಮನುಷ್ಯನಾಗಲು ಸಾಧ್ಯವಿಲ್ಲವೋ, ಹಾಗೆಯೇ ದಡ್ಡ ಮನುಷ್ಯನು ಜ್ಞಾನಿಯಾಗಲು ಸಾಧ್ಯವಿಲ್ಲ.

[13] “ಆದರೂ ನೀನು ನಿನ್ನ ಹೃದಯವನ್ನು ದೇವರಿಗೆ ಸಮರ್ಪಿಸಿ, ನಿನ್ನ ಕೈಗಳನ್ನು ದೇವರ ಕಡೆಗೆ ಚಾಚಿ,

[14] ನಿನ್ನ ಕೈಯಲ್ಲಿರುವ ಪಾಪವನ್ನು ದೂರಮಾಡಿಬಿಟ್ಟು, ದುಷ್ಟತನವನ್ನು ನಿನ್ನ ಗುಡಾರಗಳಲ್ಲಿ ವಾಸಿಸಲು ಅನುಮತಿಸದಿದ್ದರೆ,

[15] ನೀನು ದೋಷದಿಂದ ಬಿಡುಗಡೆಯಾಗಿ ನಿನ್ನ ಮುಖವನ್ನು ಎತ್ತುವಿ; ಹೌದು, ನೀನು ಸ್ಥಿರವಾಗಿದ್ದು, ಹೆದರದೆ ಇರುವಿ.

[16] ಖಂಡಿತವಾಗಿ ನಿನ್ನ ಕಷ್ಟವನ್ನು ಮರೆತುಬಿಡುವಿ; ಹರಿದುಹೋದ ನೀರಿನ ಹಾಗೆ ಅದನ್ನು ಜ್ಞಾಪಕಮಾಡಿಕೊಳ್ಳುವಿ.

[17] ನಿನ್ನ ಜೀವಮಾನವು ಮಧ್ಯಾಹ್ನಕ್ಕಿಂತ ಪ್ರಜ್ವಲಿಸುವುದು; ನಿನ್ನ ಕತ್ತಲೆಯು ಬೆಳಗಿನಂತೆ ಇರುವುದು.

[18] ನೀನು ನಿರೀಕ್ಷೆ ಇದೆ ಎಂದು ಭರವಸೆಯಿಂದ ಇರುವಿ; ನೀನು ನಿನ್ನ ಬಗ್ಗೆ ಯೋಚಿಸಿ ಭರವಸೆಯಿಂದ ವಿಶ್ರಾಂತಿ ತೆಗೆದುಕೊಳ್ಳುವಿ.

[19] ನೀನು ಮಲಗಿಕೊಂಡಾಗ ಯಾರೂ ನಿನ್ನನ್ನು ಹೆದರಿಸರು; ಅನೇಕರು ನಿನ್ನಿಂದ ಮೆಚ್ಚಿಕೆಯನ್ನು ಅಪೇಕ್ಷಿಸುವರು.

[20] ಆದರೆ ದುಷ್ಟರ ಕಣ್ಣುಗಳು ಕುಂದುವವು; ಅವರು ತಪ್ಪಿಸಿಕೊಳ್ಳುವುದಿಲ್ಲ; ಪ್ರಾಣಬಿಡಬೇಕೆಂಬುದೇ ಅವರ ನಿರೀಕ್ಷೆಯಾಗಿರುವುದು.”

ಯೋಬ — Chapters