Skip to content
Opens in a new window
Listen to this chapter • 3:42

[1] ಬೆಳ್ಳಿ ದೊರಕುವ ಗಣಿ ಇದೆ. ಬಂಗಾರ ಪರಿಷ್ಕರಿಸಲು ಸ್ಥಳವೂ ಇದೆ.

[2] ಕಬ್ಬಿಣವನ್ನು ಭೂಮಿಯಿಂದ ತೆಗೆಯುತ್ತಾರೆ; ಅದಿರನ್ನು ತಾಮ್ರವಾಗಲು ಕರಗಿಸುತ್ತಾರೆ.

[3] ಮನುಷ್ಯರು ಕತ್ತಲನ್ನು ಹೋಗಲಾಡಿಸುತ್ತಾರೆ; ಕಾರ್ಗತ್ತಲಲ್ಲಿಯೂ ಮರೆಯಾಗಿರುವ ಲೋಹಗಳಿಗಾಗಿ ಭೂಮಿಯ ಆಳ ಪ್ರದೇಶದೊಳಗೆ ಅವರು ಶೋಧಿಸುತ್ತಾರೆ.

[4] ಜನ ನಿವಾಸದಿಂದ ದೂರವಾಗಿ ಗಣಿ ತೋಡಿ, ಮನುಷ್ಯರು ನಡೆದಾಡದ ಸ್ಥಳಗಳಲ್ಲಿ ಇತರರಿಂದ ಪ್ರತ್ಯೇಕವಾಗಿ ಕೆಲಸ ಮಾಡುತ್ತಾರೆ.

[5] ಭೂಮಿ ಆಹಾರವನ್ನು ಕೊಡುತ್ತದೆ; ಆದರೆ ಅದರ ಕೆಳಭಾಗವು ಬೆಂಕಿಯ ಹಾಗೆ ಬದಲಾಗುವುದು.

[6] ಭೂಮಿಯ ಬಂಡೆಗಳು ಇಂದ್ರನೀಲಗಳು ಸಿಗುತ್ತವೆ; ಅದರ ಧೂಳಿನಲ್ಲಿ ಬಂಗಾರದ ಗಟ್ಟಿಗಳು ಇರುತ್ತವೆ.

[7] ಆ ದಾರಿ ಯಾವ ಪಕ್ಷಿಗೂ ತಿಳಿಯದು; ಹದ್ದಿನ ಕಣ್ಣು ಸಹ ಅದನ್ನು ಕಂಡಿಲ್ಲ.

[8] ಕಾಡುಮೃಗಗಳು ಅದರ ಮೇಲೆ ನಡೆಯಲಿಲ್ಲ; ಸಿಂಹವು ಅದನ್ನು ದಾಟಲಿಲ್ಲ.

[9] ಮಾನವನ ಹಸ್ತವು ಬಂಡೆಗಳನ್ನು ಒಡೆಯುತ್ತದೆ; ಪರ್ವತಗಳ ಬುಡಗಳನ್ನು ಸಹ ಬರಿದಾಗಿ ಮಾಡುತ್ತವೆ.

[10] ಬಂಡೆಗಳಲ್ಲಿ ಸುರಂಗಗಳನ್ನು ಕೊರೆಯುತ್ತಾರೆ; ಅವರ ಕಣ್ಣು ಅದರ ಎಲ್ಲಾ ಸಂಪತ್ತನ್ನು ನೋಡುತ್ತದೆ.

[11] ಜನರು ನದಿಗಳ ಮೂಲಗಳನ್ನು ಹುಡುಕುತ್ತಾರೆ; ಅಡಗಿದ್ದ ಸಂಗತಿಗಳನ್ನು ಬೆಳಕಿಗೆ ತರುತ್ತಾರೆ.

[12] ಆದರೆ ಜ್ಞಾನವು ಎಲ್ಲಿ ದೊರಕುವುದು? ಗ್ರಹಿಕೆ ಇರುವ ಸ್ಥಳ ಎಲ್ಲಿ?

[13] ಜ್ಞಾನದ ಮೌಲ್ಯ ಯಾರಿಗೂ ಗೊತ್ತಿಲ್ಲ; ಜೀವಿಸುವವರಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು.

[14] ಸಾಗರ, “ಜ್ಞಾನವು ನನ್ನ ಹತ್ತಿರ ಇಲ್ಲ,” ಎನ್ನುತ್ತದೆ; ಸಮುದ್ರವು, “ಜ್ಞಾನವು ನನ್ನ ಬಳಿಯಲ್ಲಿ ಇಲ್ಲ,” ಎನ್ನುತ್ತದೆ.

[15] ಚೊಕ್ಕ ಬಂಗಾರಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲಾಗದು; ಜ್ಞಾನದ ಬೆಲೆಗೆ ಬೆಳ್ಳಿಯನ್ನು ತೂಕಮಾಡಲಾಗದು.

[16] ಜ್ಞಾನವನ್ನು ಓಫಿರಿನ ಬಂಗಾರಕ್ಕೂ, ಅಮೂಲ್ಯವಾದ ಗೋಮೇಧಿಕಕ್ಕೂ, ಇಂದ್ರನೀಲಕ್ಕೂ ಬೆಲೆ ಕಟ್ಟಲಾಗದು.

[17] ಬಂಗಾರವೂ, ಸ್ಪಟಿಕವೂ ಜ್ಞಾನಕ್ಕೆ ಸಮವಾಗಿರುವುದಿಲ್ಲ; ಬಂಗಾರದ ಆಭರಣಗಳು ಸಹ ಜ್ಞಾನಕ್ಕೆ ಸಮವಲ್ಲ.

[18] ಹವಳವೂ, ಸೂರ್ಯಕಾಂತ ಶಿಲೆಯೂ ಜ್ಞಾನಕ್ಕೆ ಹೋಲಿಸಲು ಅರ್ಹವಲ್ಲ; ಜ್ಞಾನದ ಬೆಲೆಯು ಮಾಣಿಕ್ಯಗಳಿಗಿಂತ ಎಷ್ಟೋ ಶ್ರೇಷ್ಠ!

[19] ಕೂಷ್ ದೇಶದ ಪುಷ್ಯರಾಗವು ಸಹ ಜ್ಞಾನಕ್ಕೆ ಹೋಲಿಸಲಾಗುವುದಿಲ್ಲ; ಶುದ್ಧ ಬಂಗಾರದಿಂದಲೂ ಜ್ಞಾನವನ್ನು ಕೊಂಡುಕೊಳ್ಳಲಾಗದು.

[20] ಆದರೆ ಜ್ಞಾನವು ಎಲ್ಲಿಂದ ಬರುವುದು? ಗ್ರಹಿಕೆಯ ಸ್ಥಳವು ಎಲ್ಲಿ?

[21] ಎಲ್ಲಾ ಜೀವಿಗಳ ಕಣ್ಣಿಗೂ ಜ್ಞಾನ ಮರೆಯಾಗಿದೆ; ಆಕಾಶದ ಪಕ್ಷಿಗಳಿಗೂ ಅದು ಗೋಚರವಾಗದು.

[22] ನಾಶಲೋಕವೂ ಮರಣವೂ, “ನಾವು ಜ್ಞಾನದ ಸುದ್ದಿಯನ್ನು ನಮ್ಮ ಕಿವಿಗಳಿಂದ ಕೇಳಿದ್ದೇವೆ ಅಷ್ಟೇ,” ಎನ್ನುತ್ತವೆ.

[23] ದೇವರು ಮಾತ್ರ ಜ್ಞಾನ ಮಾರ್ಗವನ್ನು ತಿಳಿದಿರುತ್ತಾರೆ; ಹೌದು, ದೇವರೇ ಜ್ಞಾನ ಸ್ಥಳವನ್ನು ತಿಳಿದಿದ್ದಾರೆ.

[24] ದೇವರೊಬ್ಬರೇ ಭೂಮಿಯ ಕಟ್ಟಕಡೆಯ ತನಕ ದೃಷ್ಟಿಸಿ, ಆಕಾಶದ ಕೆಳಗಿನ ಸಮಸ್ತವನ್ನೂ ನೋಡುವವರಾಗಿದ್ದಾರೆ.

[25] ದೇವರು ಗಾಳಿಗೆ ತಕ್ಕಷ್ಟು ತೂಕವನ್ನು ನೇಮಿಸಿ, ನೀರುಗಳನ್ನು ತಕ್ಕ ಪ್ರಮಾಣಗಳಿಂದ ಅಳತೆಮಾಡಿ,

[26] ಮಳೆಗೆ ಕಟ್ಟಳೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ

[27] ಜ್ಞಾನವನ್ನು ಕಂಡು ಲಕ್ಷಿಸಿದರು. ಹೌದು, ದೇವರು ಜ್ಞಾನವನ್ನು ದೃಢಪಡಿಸಿದ್ದಲ್ಲದೆ, ಅದನ್ನು ಪರೀಕ್ಷೆಮಾಡಿದರು.

[28] ದೇವರು ಮನುಷ್ಯನಿಗೆ, “ಇಗೋ, ಕರ್ತ ದೇವರಲ್ಲಿ ಭಯಭಕ್ತಿ ಇಡುವುದೇ ಜ್ಞಾನ! ದುಷ್ಟತನವನ್ನು ಬಿಟ್ಟುಬಿಡುವುದೇ ವಿವೇಕ,” ಎಂದು ಹೇಳಿದರು.

ಯೋಬ — Chapters