[1] ಎಲೀಹು ಮುಂದುವರಿದು ಹೇಳಿದ್ದೇನೆಂದರೆ:
[2] “ನನ್ನನ್ನು ಸ್ವಲ್ಪ ತಾಳಿಕೋ, ನಾನು ನಿನಗೆ ತೋರಿಸಿಕೊಡುತ್ತೇನೆ. ಏಕೆಂದರೆ ದೇವರ ಪರವಾಗಿ ಇನ್ನೂ ಹೇಳತಕ್ಕ ಮಾತುಗಳು ಇವೆ.
[3] ನಾನು ನನ್ನ ತಿಳುವಳಿಕೆಯನ್ನು ದೂರದಿಂದ ಪಡೆದುಕೊಳ್ಳುತ್ತೇನೆ. ನನ್ನ ಸೃಷ್ಟಿಕರ್ತ ನ್ಯಾಯವಂತರು ಎಂದು ನಿರೂಪಿಸುವೆನು.
[4] ನಿಜವಾಗಿ ನನ್ನ ಮಾತುಗಳು ಸುಳ್ಳಲ್ಲ; ತಿಳುವಳಿಕೆಯಲ್ಲಿ ಸಂಪೂರ್ಣನಾದ ಒಬ್ಬನಾಗಿ ನಾನು ನಿನ್ನ ಬಳಿಯಲ್ಲಿಯೇ ಇದ್ದೇನೆ.
[5] “ನೋಡು, ದೇವರು ಸರ್ವಶಕ್ತರು, ಆದರೂ ಯಾರನ್ನೂ ತಿರಸ್ಕಾರ ಮಾಡುವುದಿಲ್ಲ. ಶಕ್ತಿವಂತರಾದ ದೇವರು ತಮ್ಮ ಉದ್ದೇಶದಲ್ಲಿ ದೃಢವಾಗಿದ್ದಾರೆ.
[6] ದುಷ್ಟರು ಬಹುಕಾಲ ಬಾಳಲು ದೇವರು ಅನುಮತಿಸುವುದಿಲ್ಲ; ಆದರೆ ದೇವರು ಬಾಧೆಪಡುವವರಿಗೆ ಅವರ ಹಕ್ಕುಗಳನ್ನು ಕೊಡುತ್ತಾರೆ.
[7] ದೇವರು ನೀತಿವಂತರಿಂದ ತಮ್ಮ ಕಣ್ಣುಗಳನ್ನು ತೊಲಗಿಸುವುದಿಲ್ಲ; ದೇವರು ನೀತಿವಂತರನ್ನು ಅರಸುಗಳ ಸಂಗಡ ಸಿಂಹಾಸನದಲ್ಲಿ ಕುಳ್ಳಿರಿಸುವರು; ಹೌದು, ದೇವರು ಅವರನ್ನು ಎಂದೆಂದಿಗೂ ಉನ್ನತಕ್ಕೇರಿಸುವರು.
[8] ಒಂದು ವೇಳೆ ಜನರು ಸಂಕಟದ ಸಂಕೋಲೆಗಳಿಂದ ಬಂಧಿತರಾಗಿ, ಬಾಧೆಯ ಹಗ್ಗಗಳಿಂದ ಹಿಡಿಯಲಾಗಿದ್ದರೆ,
[9] ದೇವರು ಅವರ ಕೃತ್ಯವನ್ನೂ ಸೊಕ್ಕಿನ ದ್ರೋಹಗಳನ್ನೂ ಅವರಿಗೆ ಹೇಳುವರು.
[10] ದೇವರು ಅವರ ಕಿವಿಯನ್ನು ತಿದ್ದುವಿಕೆಗಾಗಿ ತೆರೆದು, ಜನರು ದುಷ್ಟತನವನ್ನು ಬಿಟ್ಟು ತಿರುಗಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುವರು.
[11] ಒಂದು ವೇಳೆ, ಜನರು ವಿಧೇಯರಾಗಿ ದೇವರನ್ನು ಸೇವಿಸಿದರೆ, ತಮ್ಮ ದಿವಸಗಳನ್ನು ಅಭಿವೃದ್ಧಿಯಲ್ಲಿ ಕಳೆಯುವರು. ತಮ್ಮ ವರ್ಷಗಳನ್ನು ಸಂತೃಪ್ತಿಯಲ್ಲಿಯೂ ಪೂರೈಸುವರು.
[12] ಅವರು ವಿಧೇಯರಾಗದಿದ್ದರೆ, ಸಂಕಟದ ಸಾಗರದಲ್ಲಿ ಸಾಗಿಹೋಗುವರು; ತಿಳುವಳಿಕೆಯಿಲ್ಲದ ಬಾಳನ್ನು ಬಾಳುವರು.
[13] “ಹೃದಯದಲ್ಲಿ ಭಕ್ತಿಹೀನರಾಗಿರುವವರು ಕೋಪವನ್ನು ಕೂಡಿಸುವರು; ದೇವರು ಅವರನ್ನು ಬಂಧಿಸಿದರೂ, ಅವರು ದೇವರಿಗೆ ಮೊರೆ ಇಡುವುದಿಲ್ಲ.
[14] ಅವರು ತಮ್ಮ ಯೌವನದಲ್ಲಿ, ಪುರುಷಗಾಮಿಗಳ ಮಂದಿರದಲ್ಲಿ ಗತಿಸಿಹೋಗುವರು.
[15] ಶ್ರಮೆ ಪಡುವವರನ್ನು ದೇವರು ಅವರ ಶ್ರಮೆಯ ಮೂಲಕವೇ ಬಿಡುಗಡೆ ಮಾಡುವರು; ದೇವರು ಅವರ ಹಿಂಸೆಯ ಮೂಲಕವೇ ಅವರೊಂದಿಗೆ ಮಾತನಾಡುವರು.
[16] “ದೇವರು ನಿನ್ನನ್ನು ಇಕ್ಕಟ್ಟಿನೊಳಗಿಂದ ಬಿಡಿಸುವರು; ಇಕ್ಕಟ್ಟಿಲ್ಲದ ವಿಶಾಲ ಸ್ಥಳವು ನಿನಗೆ ದೊರೆಯುವುದು; ನಿನ್ನ ಆದರಣೆಗಾಗಿ ನಿನ್ನ ಮೇಜು ಉತ್ತಮ ಆಹಾರಗಳಿಂದ ತುಂಬಿರುವುದು.
[17] ಆದರೆ ಈಗ ನೀನು ದುಷ್ಟರಿಗೆ ಬರಬೇಕಾದ ತೀರ್ಪಿನಿಂದ ತುಂಬಿರುವೆ. ನ್ಯಾಯವಿಚಾರಣೆಯೂ, ತೀರ್ಪೂ ನಿನ್ನನ್ನು ಹಿಡಿದಿರುತ್ತವೆ.
[18] ಯಾರೂ ನಿನ್ನನ್ನು ಸಂಪತ್ತಿನಿಂದ ಆಕರ್ಷಿಸದಂತೆ ಜಾಗರೂಕನಾಗಿರು; ದೊಡ್ಡ ಲಂಚತನವು ನಿನ್ನನ್ನು ವಂಚಿಸಬಾರದು.
[19] ನಿನ್ನ ಐಶ್ವರ್ಯವೂ, ಶಕ್ತಿಸಾಮರ್ಥ್ಯವೂ ಕಷ್ಟಾನುಭವವಿಲ್ಲದೆ ಸಾಗಿಸಲು ಸಾಧ್ಯವೇ?
[20] ಜನರನ್ನು ಅವರ ಮನೆಗಳಿಂದ ಎಳೆದುಕೊಂಡು ಹೋಗುವುದಕ್ಕೆ ರಾತ್ರಿಯನ್ನು ಬಯಸಬೇಡ.
[21] ಅಕ್ರಮದ ಕರೆಗೆ ಕಾಲಿಡಬೇಡ, ಎಚ್ಚರಿಕೆ! ನೀನು ಕಷ್ಟಕ್ಕಿಂತಲೂ ಕೇಡನ್ನು ಆರಿಸಿಕೊಂಡಿದ್ದೀ.
[22] “ದೇವರು ತಮ್ಮ ಶಕ್ತಿಯಲ್ಲಿ ಉನ್ನತರಾಗಿದ್ದಾರೆ. ದೇವರಂಥ ಬೋಧಕರು ಯಾರಿದ್ದಾರೆ?
[23] ದೇವರ ಮಾರ್ಗವನ್ನು ದೇವರಿಗೆ ನೇಮಿಸಿದವರ‍್ಯಾರು? ‘ನೀವು ಮಾಡಿರುವುದು ಅನ್ಯಾಯ,’ ಎಂದು ದೇವರಿಗೆ ಹೇಳುವವರು ಯಾರು?
[24] ಮನುಷ್ಯರು ಹೊಗಳಿ ಹಾಡುವ ಹಾಡುಗಳಿಂದ, ದೇವರ ಕೃತ್ಯಗಳನ್ನು ಉನ್ನತಪಡಿಸಲು ನೆನಸಿಕೋ.
[25] ಎಲ್ಲಾ ಮನುಷ್ಯರು ದೇವರ ಕೃತ್ಯಗಳನ್ನು ಕಂಡಿದ್ದಾರೆ; ಹೌದು, ಮನುಷ್ಯರು ದೂರದಿಂದ ನೋಡುತ್ತಾರೆ.
[26] ದೇವರು ಮಹೋನ್ನತರು; ದೇವರು ನಮ್ಮ ಅರಿವಿಗೆ ನಿಲುಕರು. ದೇವರ ವರ್ಷಗಳು ಅಸಂಖ್ಯಾತವಾಗಿವೆ.
[27] “ದೇವರು ನೀರಿನ ಹನಿಗಳನ್ನು ಕೂಡಿಸಿದಾಗ, ಮಂಜಿನಿಂದ ತಿಳಿಮಳೆ ಸುರಿಯುತ್ತವೆ.
[28] ಮೋಡಗಳು ಮಳೆಗರೆಯುತ್ತವೆ. ಮನುಷ್ಯರ ಮೇಲೆ ಸಮೃದ್ಧಿಯಾಗಿ ಚಿಮುಕಿಸುತ್ತವೆ.
[29] ಮೋಡಗಳ ವಿಸ್ತೀರ್ಣತೆಯನ್ನೂ, ದೇವರ ಗುಡಾರದಿಂದ ಗುಡುಗುವುದನ್ನೂ ಗ್ರಹಿಸಿಕೊಳ್ಳುವವರು ಯಾರು?
[30] ಇಗೋ, ದೇವರು ಮಿಂಚನ್ನು ತಮ್ಮ ಸುತ್ತಲು ಚದರಿಸುತ್ತಾರೆ. ಸಮುದ್ರದ ಆಳವನ್ನು ಸಹ ಆವರಿಸುತ್ತಾರೆ.
[31] ಈ ರೀತಿಯಾಗಿ ದೇವರು ದೇಶಗಳನ್ನು ಆಳುತ್ತಾರೆ ಸಮೃದ್ಧಿಯಾಗಿ ದೇವರು ಆಹಾರ ಕೊಡುತ್ತಾರೆ.
[32] ದೇವರು ತಮ್ಮ ಕೈಯಲ್ಲಿ ಮಿಂಚನ್ನು ಹಿಡಿದುಕೊಂಡು, ಅದನ್ನು ಗುರಿಮುಟ್ಟುವಂತೆ ಆಜ್ಞಾಪಿಸುತ್ತಾರೆ.
[33] ಬಿರುಗಾಳಿಯು ಬರುತ್ತಿದೆ ಎಂದು ದೇವರ ಸಿಡಿಲು ತಿಳಿಸುತ್ತದೆ; ದನಕರುಗಳು ಸಹ ದೇವರ ಆಗಮನವನ್ನು ತಿಳಿಸುತ್ತವೆ.