[1] ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ:
[2] ನನ್ನ ನ್ಯಾಯವನ್ನು ತಪ್ಪಿಸಿದ ಜೀವಂತ ದೇವರಾಣೆ, ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತರ ಆಣೆ,
[3] “ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿದೆ; ದೇವರು ಊದಿದ ಶ್ವಾಸವು ನನ್ನ ಮೂಗಿನಲ್ಲಿ ಆಡುತ್ತಿದೆ.
[4] ನನ್ನ ತುಟಿಗಳು ಸುಳ್ಳನ್ನು ನುಡಿಯುವುದೇ ಇಲ್ಲ. ನನ್ನ ನಾಲಿಗೆಯು ಎಷ್ಟು ಮಾತ್ರಕ್ಕೂ ಮೋಸದ ಮಾತುಗಳನ್ನಾಡುವುದಿಲ್ಲ.
[5] ನೀವು ನ್ಯಾಯವಂತರೆಂದು ನಾನು ಒಪ್ಪುವುದಿಲ್ಲ; ನಾನು ಸಾಯುವ ತನಕ, ನನ್ನ ಪ್ರಾಮಾಣಿಕತ್ವವನ್ನು ಬಿಡುವುದಿಲ್ಲ.
[6] ನನ್ನ ನಿಷ್ಕಪಟತೆಯನ್ನು ದೃಢವಾಗಿ ಹಿಡುಕೊಂಡಿದ್ದೇನೆ; ಅದನ್ನು ಎಂದಿಗೂ ನಾನು ಹೋಗಗೊಡಿಸುವುದಿಲ್ಲ; ನಾನು ಜೀವಂತವಾಗಿ ಇರುವವರೆಗೂ ನನ್ನ ಮನಸ್ಸಾಕ್ಷಿಯು ನನ್ನನ್ನು ನಿಂದಿಸುವುದಿಲ್ಲ.
[7] “ನನ್ನ ಶತ್ರು ದುಷ್ಟನ ಹಾಗಿರಲಿ; ನನ್ನ ವಿರುದ್ಧ ಏಳುವವನು ಅನ್ಯಾಯವಂತನ ಹಾಗಿರಲಿ.
[8] ದೇವರು ಭಕ್ತಿಹೀನನನ್ನು ಕಡಿದುಬಿಟ್ಟರೆ, ಅವನ ಪ್ರಾಣ ತೆಗೆದುಕೊಂಡರೆ, ಅವನಿಗೆ ನಿರೀಕ್ಷೆ ಎಲ್ಲಿ?
[9] ಭಕ್ತಿಹೀನನಿಗೆ ಯಾತನೆ ಬಂದರೆ, ದೇವರು ಅವನ ಮೊರೆಯನ್ನು ಕೇಳುವರೋ?
[10] ಭಕ್ತಿಹೀನನು ಸರ್ವಶಕ್ತರಲ್ಲಿ ಆನಂದವಾಗಿರುವನೋ? ಸರ್ವಕಾಲದಲ್ಲಿಯೂ ದೇವರನ್ನು ಕರೆಯುವನೋ?
[11] “ನಾನು ದೇವರ ಶಕ್ತಿಯ ಬಗ್ಗೆ ನಿಮಗೆ ಬೋಧಿಸುವೆನು; ಸರ್ವಶಕ್ತರ ಮಾರ್ಗಗಳನ್ನು ನಾನು ಮರೆಮಾಡೆನು.
[12] ನೀವೆಲ್ಲರೂ ಇದನ್ನು ನೋಡಿದ್ದರೂ, ಮತ್ತೆ ಏಕೆ ಈ ಪ್ರಕಾರ ವ್ಯರ್ಥವಾಗಿ ವಾದಿಸುತ್ತೀರಿ?
[13] “ಇದು ದುಷ್ಟರಿಗೆ ದೇವರಿಂದ ಬಂದ ಪಾಲಾಗಿದೆ; ಹಿಂಸಕರಿಗೆ ಸರ್ವಶಕ್ತರಿಂದ ಹೊಂದುವ ಪಾಲು ಹೀಗಿರುತ್ತವೆ:
[14] ಅವರ ಮಕ್ಕಳು ಹೆಚ್ಚಿದರೂ ಖಡ್ಗಕ್ಕೆ ಗುರಿಯಾಗುವರು; ಅವರ ಸಂತತಿಯವರಿಗೆ ಆಹಾರದ ಕೊರತೆ ಇರುವುದು.
[15] ಅವರ ಮನೆಯಲ್ಲಿ ಯಾರಾದರೂ ಉಳಿದರೆ, ವ್ಯಾಧಿಯಿಂದ ಸತ್ತು ಸಮಾಧಿ ಸೇರುವರು; ಅವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸುವುದಿಲ್ಲ.
[16] ದುಷ್ಟರು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ, ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿಕೊಂಡಿದ್ದರೂ,
[17] ಅವರು ಕೂಡಿಸಿಟ್ಟಿದ್ದನ್ನು ನೀತಿವಂತರು ಹಂಚಿಕೊಳ್ಳುವರು; ಅವರ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.
[18] ದುಷ್ಟರು ಕಟ್ಟಿಕೊಂಡ ಮನೆಯು ಜೇಡ ಹುಳದ ಗೂಡಿನಂತೆಯೂ, ಕಾವಲುಗಾರನ ಗುಡಿಸಿಲಂತೆಯೂ ದುರ್ಬಲವಾಗಿರುವುದು.
[19] ದುಷ್ಟರು ಧನಿಕರಾಗಿ ನಿದ್ರಿಸಿದರೂ ಮತ್ತೆ ನಿದ್ರೆಬಾರದು; ಅವರು ತಮ್ಮ ಕಣ್ಣನ್ನು ತೆರೆಯುತ್ತಲೇ ಆಸ್ತಿ ಇಲ್ಲವಾಗಿರುವುದು.
[20] ವಿಪತ್ತುಗಳು ಪ್ರವಾಹದಂತೆ ಅಂಥವರನ್ನು ಹಿಡಿಯುವುವು; ರಾತ್ರಿಯಲ್ಲಿ ಬಿರುಗಾಳಿ ಅಂಥವರನ್ನು ಅಪಹರಿಸುವುದು.
[21] ಪೂರ್ವದಿಕ್ಕಿನ ಗಾಳಿ ದುಷ್ಟರನ್ನು ಬಡಿಯಲು, ಅವರು ಕೊಚ್ಚಿಕೊಂಡು ಹೋಗುವರು; ಅದು ಅವರನ್ನು ಅವರ ಸ್ಥಳದಿಂದ ಹಾರಿಸಿಬಿಡುವುದು.
[22] ಆ ಗಾಳಿಯು ಕರುಣೆ ಇಲ್ಲದೆ ದುಷ್ಟರ ಮೇಲೆ ಬೀಸಲು, ಅವರು ಅದರ ಶಕ್ತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವರು.
[23] ಕೊನೆಗೆ ಜನರು ದುಷ್ಟರ ಕಡೆಗೆ ಅಪಹಾಸ್ಯದಿಂದ ಚಪ್ಪಾಳೆ ತಟ್ಟುವರು; ಅನಂತರ ಅವರ ಸ್ಥಳದೊಳಗಿಂದ ಅವರನ್ನು ಹೊರಹಾಕುವರು.”