Skip to content
Opens in a new window
Listen to this chapter • 3:33

[1] “ಇದನ್ನು ನೋಡಿದಾಗ ನನ್ನ ಹೃದಯವು ನಡುಗಿ, ಅದರ ಸ್ಥಳದಿಂದ ಜಿಗಿಯುವಂತಾಗುತ್ತದೆ.

[2] ದೇವರ ಧ್ವನಿಯ ಘರ್ಜನೆಯನ್ನು ಕೇಳಿರಿ. ದೇವರ ಬಾಯಿಂದ ಹೊರಡುವ ಮಾತನ್ನು ಲಕ್ಷ್ಯಕೊಟ್ಟು ಆಲಿಸಿರಿ.

[3] ತಮ್ಮ ಮಿಂಚನ್ನು ದೇವರು ಆಕಾಶಮಂಡಲದಲ್ಲಿ ಹರಡುತ್ತಾರೆ; ಅದನ್ನು ಭೂಮಿಯ ಅಂಚುಗಳವರೆಗೆ ಕಳುಹಿಸುತ್ತಾರೆ.

[4] ಮಿಂಚಿನ ತರುವಾಯ ಘರ್ಜನೆಯ ಶಬ್ದ ಕೇಳಿಬರುವುದು; ದೇವರು ಮಹತ್ತಿನ ಶಬ್ದದಿಂದ ಗುಡುಗುತ್ತಾರೆ; ದೇವರ ಸ್ವರ ಕೇಳುವಾಗ ಅದನ್ನು ತಡೆಯಲಾಗದು.

[5] ದೇವರು ತಮ್ಮ ಸ್ವರದಿಂದ ಅದ್ಭುತಕಾರ್ಯಗಳನ್ನು ಗುಡುಗುತ್ತಾರೆ; ನಾವು ಗ್ರಹಿಸಲಾಗದ ಮಹಾತ್ಕಾರ್ಯಗಳನ್ನು ದೇವರು ಮಾಡುತ್ತಾರೆ.

[6] ದೇವರು ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎಂದು ಹೇಳುತ್ತಾರೆ. ಮಳೆಗೆ, ‘ಭೂಮಿಯ ಮೇಲೆ ರಭಸದಿಂದ ಸುರಿ’ ಎಂದು ಆಜ್ಞಾಪಿಸುತ್ತಾರೆ.

[7] ಹೀಗೆ ದೇವರು ತಮ್ಮ ಕೃತ್ಯವನ್ನು ಜನರೆಲ್ಲರೂ ತಿಳುಕೊಳ್ಳುವಂತೆ ಮಾಡುತ್ತಾರೆ. ಸ್ವಲ್ಪಕಾಲ ಮನುಷ್ಯರ ದುಡಿಮೆಯನ್ನು ನಿಲ್ಲಿಸುತ್ತಾರೆ.

[8] ಆಗ ಮೃಗಗಳು ಅಡಗುವ ಸ್ಥಳಕ್ಕೆ ಹೋಗುತ್ತವೆ, ತಮ್ಮ ಗುಹೆಗಳಲ್ಲಿ ಉಳಿಯುತ್ತವೆ.

[9] ದಕ್ಷಿಣದಿಕ್ಕಿನಿಂದ ಬಿರುಗಾಳಿಯು ಬೀಸುತ್ತದೆ. ಉತ್ತರದಿಂದ ಚಳಿಯೂ ಬರುತ್ತದೆ.

[10] ದೇವರ ಶ್ವಾಸದಿಂದ ನೀರು ಮಂಜುಗಡ್ಡೆ ಆಗುವುದು; ವಿಶಾಲ ಸಮುದ್ರದ ನೀರು ಗಟ್ಟಿಯಾಗುವುದು.

[11] ಮೋಡವನ್ನು ತೇವಾಂಶದಿಂದ ಭಾರಮಾಡುತ್ತಾರೆ; ಮೇಘಮಂಡಲವು ದೇವರ ಮಿಂಚನ್ನು ಚದರಿಸುತ್ತದೆ.

[12] ಭೂಲೋಕದಲ್ಲೆಲ್ಲಾ ಸಿಡಿಲುಗಳಿಗೆ ದೇವರು ಆಜ್ಞಾಪಿಸಲು, ಎಲ್ಲಾ ಕೆಲಸವನ್ನು ಮಾಡುವಂತೆ ಅವು ತಿರುಗುತ್ತವೆ.

[13] ಜನರ ಶಿಕ್ಷಣಕ್ಕಾಗಿಯೂ, ಭೂಮಿಯ ಹಿತಕ್ಕಾಗಿಯೂ ದೇವರು ತಮ್ಮ ಪ್ರೀತಿಯನ್ನು ತೋರಿಸಲು, ಮೇಘಗಳನ್ನು ಬರಮಾಡುತ್ತಾರೆ.

[14] “ಆದ್ದರಿಂದ ಯೋಬನೇ, ಇದಕ್ಕೆ ಕಿವಿಗೊಡು; ಮೌನವಾಗಿ ನಿಂತು ದೇವರ ಅದ್ಭುತಗಳನ್ನು ಧ್ಯಾನಿಸು.

[15] ದೇವರು ಮೋಡಗಳಿಗೆ ಅಪ್ಪಣೆ ಕೊಡುವುದನ್ನು ಅರಿತಿರುವೆಯಾ? ದೇವರ ಮೇಘದ ಸಿಡಿಲು ಹೊಳೆಯುವುದನ್ನೂ ನೀನು ತಿಳಿದಿರುವೆಯಾ?

[16] ಮೋಡಗಳ ತೂಗಾಟವನ್ನು ಬಲ್ಲೆಯಾ? ಜ್ಞಾನಪೂರ್ಣರಾದ ದೇವರ ಅದ್ಭುತಗಳನ್ನೂ ತಿಳಿದುಕೊಂಡಿರುವೆಯಾ?

[17] ಭೂಮಿಯು ದಕ್ಷಿಣ ಗಾಳಿಯಿಂದ ಸ್ತಬ್ಧವಾಗಿರುವಾಗ, ನಿನ್ನ ವಸ್ತ್ರ ಹೇಗೆ ಬಿಸಿಯಾಗಿರುತ್ತವೆ?

[18] ಎರಕ ಹೊಯ್ದ ಬಲವಾಗಿರುವ ಕನ್ನಡಿಯ ಹಾಗೆ, ನೀನು ದೇವರ ಸಂಗಡ ಸೇರಿಕೊಂಡು ಆಕಾಶಮಂಡಲವನ್ನು ವಿಸ್ತರಿಸಬಲ್ಲೆಯಾ?

[19] “ನಾವು ದೇವರಿಗೆ ಏನು ಹೇಳಬೇಕೆಂದು ನಮಗೆ ತಿಳಿಸು; ನಮ್ಮ ಅಂಧಕಾರದಿಂದ ನಾವು ಏನೂ ವಾದಿಸಲು ಸಾಧ್ಯವಿಲ್ಲ.

[20] ನಾನು ಮಾತನಾಡಬೇಕೆಂದು ದೇವರಿಗೆ ಹೇಳಿಕಳುಹಿಸಬೇಕೆ? ಹಾಗೆ ಮನುಷ್ಯನು ಮಾತನಾಡಿದರೆ, ನಿಜವಾಗಿಯೂ ಬದುಕಿರಲು ಸಾಧ್ಯವೇ?

[21] ಗಾಳಿ ಬೀಸಿ ಆಕಾಶ ಶುಭ್ರವಾದಾಗ, ಪ್ರಜ್ವಲಿಸುವ ಸೂರ್ಯನನ್ನು ದೃಷ್ಟಿಸಲಾಗದು ಹೌದು, ಯಾರೂ ದಿಟ್ಟಿಸಿ ನೋಡಲಾರರು.

[22] ಉತ್ತರದಿಂದ ಹೊನ್ನಿನ ಹೊಳಪು ಬರುತ್ತದೆ; ಅದರಂತೆಯೇ ದೇವರ ವಿಸ್ಮಯ ತೇಜಸ್ಸಿನಿಂದ ಬರುತ್ತಾರೆ.

[23] ಇಂಥಾ ಸರ್ವಶಕ್ತರನ್ನು ನಾವು ಕಂಡುಹಿಡಿಯಲಾಗದು; ದೇವರು ಶಕ್ತಿಯಲ್ಲಿ ಉನ್ನತರಾಗಿದ್ದಾರೆ; ನ್ಯಾಯತೀರ್ಪಿನಲ್ಲಿಯೂ, ಮಹಾ ನೀತಿಯಲ್ಲಿಯೂ ದೇವರು ದಬ್ಬಾಳಿಕೆ ನಡೆಸುವವರಲ್ಲ.

[24] ಆದ್ದರಿಂದ ಮನುಷ್ಯರು ದೇವರಿಗೆ ಭಯಪಡುತ್ತಾರೆ; ಆದರೆ ತಾವೇ ಜ್ಞಾನಿಗಳೆಂದು ತಿಳಿದಿರುವವರು ದೇವರು ಲಕ್ಷಿಸುವುದಿಲ್ಲ.”

ಯೋಬ — Chapters