[1] “ಇಗೋ, ನನ್ನ ಕಣ್ಣು ಎಲ್ಲವನ್ನು ನೋಡಿದೆ; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿದೆ.
[2] ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದುಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
[3] ನಾನು ಸರ್ವಶಕ್ತರ ಸಂಗಡ ಖಂಡಿತವಾಗಿ ಮಾತನಾಡುವೆನು; ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
[4] ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರು ವ್ಯರ್ಥ ವೈದ್ಯರೇ.
[5] ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು; ಮೌನವೇ ನಿಮಗೆ ಜ್ಞಾನವು.
[6] ಈಗ ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.
[7] ದೇವರ ಪರವಾಗಿ ಮಾತಾಡುವ ನೀವು ಅನ್ಯಾಯದಿಂದ ಮಾತಾಡುವಿರೋ? ದೇವರಿಗೋಸ್ಕರ ಮಾತಾಡುವ ನೀವು ವಂಚನೆಯಿಂದ ಮಾತಾಡುವಿರೋ?
[8] ನೀವು ದೇವರಿಗೆ ಪಕ್ಷಪಾತವನ್ನು ತೋರಿಸುವಿರೋ? ದೇವರ ಪರವಾಗಿ ನೀವು ವಾದಿಸುವಿರೋ?
[9] ದೇವರು ನಿಮ್ಮನ್ನು ಶೋಧಿಸಿದರೆ, ಅದು ನಿಮಗೆ ಒಳ್ಳೇದೋ? ಒಬ್ಬ ಮನುಷ್ಯನು ಇನ್ನೊಬ್ಬನನ್ನು ವಂಚಿಸುವ ಪ್ರಕಾರ, ನೀವೂ ದೇವರನ್ನು ವಂಚಿಸುವಿರೋ?
[10] ನೀವು ರಹಸ್ಯವಾಗಿ ಪಕ್ಷಪಾತಮಾಡಿದರೂ, ದೇವರು ನಿಶ್ಚಯವಾಗಿಯೂ ನಿಮ್ಮನ್ನು ಖಂಡಿಸುವರು.
[11] ದೇವರ ವೈಭವವು ನಿಮ್ಮನ್ನು ಹೆದರಿಸುವುದಿಲ್ಲವೋ? ದೈವಭಯವು ನಿಮ್ಮ ಮೇಲೆ ಬೀಳುವುದಿಲ್ಲವೋ?
[12] ನಿಮ್ಮ ನೀತಿವಚನಗಳು ಬೂದಿಯ ಗಾದೆಗಳು; ನಿಮ್ಮ ವಾದಗಳು ಬರೀ ಮಣ್ಣಿನ ಗೋಡೆಯೇ.
[13] “ಸುಮ್ಮನಿರಿ, ನನ್ನನ್ನು ಮಾತನಾಡಲು ಬಿಡಿರಿ; ನನಗೇನಾದರೂ ಆಗಲಿ.
[14] ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು; ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
[15] ದೇವರು ನನ್ನನ್ನು ಕೊಂದರೂ, ನಾನು ದೇವರ ಮೇಲೆ ನಿರೀಕ್ಷೆಯಿಂದಿರುವೆನು; ನಾನು ನಿಶ್ಚಯವಾಗಿ ನನ್ನ ನಡತೆಯ ಒಳ್ಳೆಯತನವನ್ನು ದೇವರ ಮುಂದೆ ಸ್ಥಾಪಿಸುವೆನು.
[16] ಇದೇ ನನ್ನ ಬಿಡುಗಡೆಗೆ ಕಾರಣವಾಗಿರುವುದು; ಭಕ್ತಿಹೀನರು ದೇವರ ಮುಂದೆ ಬರಲು ಧೈರ್ಯಮಾಡುವುದಿಲ್ಲ.
[17] ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ ಮತ್ತು ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
[18] ಇಗೋ, ನನ್ನ ನ್ಯಾಯವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯ ಹೊಂದುವುದು ನನಗೆ ಗೊತ್ತೇ ಇದೆ.
[19] ಯಾರಾದರೂ ನನ್ನ ವಿರುದ್ಧ ದೂರನ್ನು ತರಬಹುದೋ? ಹಾಗಿದ್ದರೆ ನಾನು ಮೌನವಾಗಿದ್ದು ಸತ್ತು ಹೋಗುವೆನು.
[20] “ದೇವರೇ, ಈ ಎರಡು ಸಂಗತಿಗಳನ್ನು ಮಾತ್ರ ನನಗೆ ದಯಪಾಲಿಸಿರಿ; ಆಗ ನಿಮ್ಮಿಂದ ನಾನು ಅಡಗಿಕೊಳ್ಳುವುದಿಲ್ಲ:
[21] ನಿಮ್ಮ ಕೈಯನ್ನು ನನ್ನಿಂದ ದೂರಮಾಡಿರಿ; ನಿಮ್ಮ ಭಯವು ನನ್ನನ್ನು ಹೆದರಿಸದಿರಲಿ.
[22] ಆಮೇಲೆ ನೀವು ನನ್ನನ್ನು ಕರೆದರೆ, ನಾನು ಉತ್ತರಿಸುವೆನು; ಅಥವಾ ನಾನು ಮಾತಾಡಿದರೆ, ನೀವು ಉತ್ತರಕೊಡಿರಿ.
[23] ನಾನು ಎಷ್ಟೋ ಅಕ್ರಮಗಳನ್ನೂ, ಪಾಪಗಳನ್ನೂ ಮಾಡಿದ್ದೇನೆ. ನನ್ನ ಅಪರಾಧವನ್ನೂ, ಪಾಪವನ್ನೂ ನನಗೆ ತೋರಿಸಿಕೊಡಿರಿ.
[24] ಏಕೆ ನಿಮ್ಮ ಮುಖವನ್ನು ಮರೆಮಾಡುತ್ತೀರಿ? ನನ್ನನ್ನು ನಿಮ್ಮ ಶತ್ರುವಿನ ಹಾಗೆ ಏಕೆ ಭಾವಿಸುತ್ತೀರಿ?
[25] ಗಾಳಿಯಿಂದ ಹಾರಿಹೋಗುವ ಎಲೆಯನ್ನು ತೊಂದರೆಪಡಿಸುವಿರೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿರೋ?
[26] ಏಕೆಂದರೆ ನನಗೆ ವಿರೋಧವಾಗಿ ಕಹಿಯಾದ ತೀರ್ಪನ್ನು ನೀವು ಬರೆದಿರುವಿರಿ; ನನ್ನ ಯೌವನದ ಪಾಪಗಳನ್ನು ನನ್ನ ಮೇಲೆ ಹೊರಿಸಿರುವಿರಿ.
[27] ನನ್ನ ಪಾದಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಿದ್ದೀರಿ, ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕಿದ್ದೀರಿ; ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡುತ್ತೀರಿ.
[28] “ಆದ್ದರಿಂದ ಮಾನವನು ಕೊಳೆತ ವಸ್ತುವಿನಂತೆಯೂ, ನುಸಿಹಿಡಿದ ಬಟ್ಟೆಯಂತೆಯೂ ಅಳಿದು ಹೋಗುತ್ತಾನೆ.