Skip to content
Opens in a new window
Listen to this chapter • 3:33

[1] ಯೋಬನು ತಾನು ನೀತಿವಂತನೆಂದು ಸಾಧಿಸಿದ್ದನು. ಆದ್ದರಿಂದ ಆ ಮೂರು ಸ್ನೇಹಿತರು ಯೋಬನಿಗೆ ಉತ್ತರ ಕೊಡುವುದನ್ನು ನಿಲ್ಲಸಿಬಿಟ್ಟರು.

[2] ಆಗ ರಾಮ ಗೋತ್ರದ ಬೂಜ್ಯನಾದ ಬರಕೇಲನ ಮಗ ಎಲೀಹು, ಯೋಬನ ಮೇಲೆ ಬಹು ಕೋಪಗೊಂಡನು. ಯೋಬನು ದೇವರಿಗಿಂತ ತನ್ನನ್ನು ನ್ಯಾಯವಂತನೆಂದು ಸ್ಥಾಪಿಸಿದ್ದರಿಂದ, ಎಲೀಹು ಅವನ ಮೇಲೆ ಕೋಪಗೊಂಡನು.

[3] ಯೋಬನ ಮೂವರು ಸ್ನೇಹಿತರ ಮೇಲೆಯೂ ಎಲೀಹು ಕೋಪಗೊಂಡನು. ಅವರು ಉತ್ತರ ಕಂಡುಕೊಳ್ಳದೆ, ಯೋಬನನ್ನು ಖಂಡಿಸಿದ್ದರಿಂದ ಎಲೀಹುವಿನ ಕೋಪ ಉರಿಯಿತು.

[4] ಎಲೀಹು, ಯೋಬನ ಮಾತುಗಳು ಮುಗಿಯುವವರೆಗೂ ಕಾದಿದ್ದನು. ಏಕೆಂದರೆ ಅವನಿಗಿಂತ ಅವರೆಲ್ಲರೂ ಹಿರಿಯರಾಗಿದ್ದರು.

[5] ಆ ಮೂವರ ಮಾತಿನಲ್ಲಿ ಏನೂ ಉತ್ತರವಿಲ್ಲವೆಂದು ಎಲೀಹು ನೋಡಿದಾಗ, ಅವನ ಕೋಪ ಮತ್ತಷ್ಟು ಉರಿಯಿತು.

[6] ಆಗ ಬೂಜ್ಯನಾದ ಬರಕೇಲನ ಮಗ ಎಲೀಹು ಹೇಳಿದ್ದೇನೆಂದರೆ: “ನಾನು ಪ್ರಾಯದಲ್ಲಿ ಯುವಕನು, ನೀವು ಪ್ರಾಯಸ್ಥರು. ಆದ್ದರಿಂದ ನಾನು ಸಂಕೋಚಗೊಂಡು ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವುದಕ್ಕೆ ಭಯಪಟ್ಟೆನು.

[7] ‘ದಿನ ಗತಿಸಿದವರು ಮಾತನಾಡಲಿ, ಬಹಳ ವರ್ಷದವರು ಜ್ಞಾನವನ್ನು ಬೋಧಿಸಲಿ,’ ಎಂದುಕೊಂಡೆನು.

[8] ಆದರೆ ಮನುಷ್ಯನಲ್ಲಿ ಒಂದು ಆತ್ಮ ಉಂಟು; ಸರ್ವಶಕ್ತರ ಶ್ವಾಸವು ಅವನಿಗೆ ತಿಳುವಳಿಕೆಯನ್ನು ಕೊಡುತ್ತದೆ.

[9] ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; ಮುದುಕರೇ ನ್ಯಾಯವನ್ನು ಬಲ್ಲವರಲ್ಲ.

[10] “ಆದಕಾರಣ, ನಾನು ಹೇಳುತ್ತಿದ್ದೇನೆ: ನನ್ನ ಮಾತನ್ನು ಕೇಳಿಸಿಕೊಳ್ಳಿರಿ, ನನಗೆ ಗೊತ್ತಿದ್ದನ್ನು ನಾನು ತಿಳಿಸುತ್ತೇನೆ.

[11] ನೀವು ಮಾತಾಡಿ ಮುಗಿಸುವ ತನಕ ನಾನು ಕಾದಿದ್ದೆ. ನೀವು ಹೇಳುತ್ತಿದ್ದ ಕಾರಣಗಳನ್ನೂ, ಏನು ಹೇಳಬೇಕೆಂದು ಹುಡುಕುತ್ತಿದ್ದ ಪದಗಳನ್ನೂ ನಾನು ಕೇಳುತ್ತಿದ್ದೆನು.

[12] ನಾನು ನಿಮ್ಮ ಮಾತಿಗೆ ಪೂರ್ಣ ಲಕ್ಷ್ಯವಿಟ್ಟಿದ್ದೆನು. ಆದರೆ, ನಿಮ್ಮಲ್ಲಿ ಯೋಬನ ತಪ್ಪನ್ನು ರುಜುಪಡಿಸುವವರೂ, ಯೋಬನ ವಾದಗಳಿಗೆ ಸರಿಯಾಗಿ ಉತ್ತರ ಕೊಡುವವರೂ ನಿಮ್ಮಲ್ಲಿ ಯಾರೂ ಇಲ್ಲ.

[13] ‘ನಾವು ಯೋಬನಲ್ಲಿ ಜ್ಞಾನವನ್ನು ಕಂಡುಕೊಂಡಿದ್ದೇವೆ ದೇವರೇ ಅವನನ್ನು ಖಂಡಿಸಿಬಿಡಲಿ, ಇದು ಮನುಷ್ಯನಿಂದಾಗುವುದಿಲ್ಲ,’ ಎಂಬುದಾಗಿ ಅಂದುಕೊಳ್ಳಬೇಡಿರಿ.

[14] ಯೋಬನು ನನಗೆ ವಿರೋಧವಾಗಿ ನುಡಿಗಳನ್ನು ಪ್ರಯೋಗ ಮಾಡಲಿಲ್ಲ; ನಿಮ್ಮ ವಾದಗಳಿಂದ ನಾನು ಅವನಿಗೆ ಉತ್ತರ ಕೊಡುವುದಿಲ್ಲ.

[15] “ಯೋಬನೇ, ಇವರು ವಿಸ್ಮಯಗೊಂಡು ಇನ್ನು ಉತ್ತರ ಕೊಡದವರಾಗಿದ್ದಾರೆ; ಇವರಿಗೆ ಮಾತನಾಡಲು ಪದಗಳೇ ಸಿಕ್ಕುತ್ತಾಯಿಲ್ಲ.

[16] ಇವರು ಇನ್ನು ಉತ್ತರ ಕೊಡದೆ ಮೌನವಾಗಿ ಸುಮ್ಮನೆ ನಿಂತಿದ್ದರೆ, ನಾನೂ ಕಾದುಕೊಂಡಿರಬೇಕೋ?

[17] ನಾನು ನನ್ನ ಪಾಲಿನ ಉತ್ತರವನ್ನು ಹೇಳುವೆನು, ನಾನೇ ನನ್ನ ಅಭಿಪ್ರಾಯವನ್ನು ತಿಳಿಸುವೆನು.

[18] ಏಕೆಂದರೆ ಅನೇಕ ವಿಷಯಗಳಿಂದ ನಾನು ತುಂಬಿದ್ದೇನೆ; ನನ್ನೊಳಗಿನ ಆತ್ಮವು ನನ್ನನ್ನು ಒತ್ತಾಯಪಡಿಸುತ್ತಿದೆ.

[19] ನನ್ನ ಅಂತರಾತ್ಮವು ತೆರೆಯದ ದ್ರಾಕ್ಷಾರಸದ ಹಾಗೆ ಇದೆ; ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಇದೆ.

[20] ನೆಮ್ಮದಿಯಿಂದಿರಲು ನಾನು ಮಾತಾಡಲೇಬೇಕು; ನನ್ನ ತುಟಿಗಳನ್ನು ತೆರೆದು ಉತ್ತರಕೊಡುವೆನು.

[21] ನಾನು ಯಾವ ಮನುಷ್ಯನ ಮುಖದಾಕ್ಷಿಣ್ಯ ನೋಡೆನು; ನಾನು ಯಾವ ಮನುಷ್ಯನನ್ನು ಹೊಗಳೆನು.

[22] ಹೊಗಳುವುದರಲ್ಲಿ ನಾನು ಪ್ರವೀಣನಾಗಿದ್ದರೆ, ನನ್ನ ಸೃಷ್ಟಿಕರ್ತ ಆಗಿರುವವರು ನನ್ನನ್ನು ಬೇಗ ತೆಗೆದುಕೊಂಡು ಹೋಗಲಿ.

ಯೋಬ — Chapters