[1] “ಯೋಬನೇ, ಲಿವ್ಯಾತಾನ್ ಮೊಸಳೆಯನ್ನು ಗಾಳದಿಂದ ಎಳೆಯಬಲ್ಲೆಯಾ? ಹಗ್ಗದಿಂದ ಅದರ ನಾಲಿಗೆಯನ್ನು ಬಿಗಿಯಬಲ್ಲೆಯಾ?
[2] ಅದರ ಮೂಗಿನಲ್ಲಿ ಗಾಳ ಇಡುವೆಯಾ? ಅದರ ದವಡೆಗೆ ಮುಳ್ಳಿನಿಂದ ಚುಚ್ಚುವೆಯಾ?
[3] ಅದು ಅನೇಕ ಸಾರಿ ಕರುಣೆಗಾಗಿ ನಿನಗೆ ವಿಜ್ಞಾಪನೆಮಾಡಿತೇ? ನಿನ್ನ ಸಂಗಡ ನಮ್ರತೆಯಿಂದ ಮಾತನಾಡೀತೇ?
[4] ನೀನು ಅದನ್ನು ಇಡೀ ಜೀವಮಾನಕ್ಕೂ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಡಂಬಡಿಕೆ ಮಾಡಿಕೊಂಡೀತೆ?
[5] ಸಾಕುಪಕ್ಷಿಯಂತೆ ಅದನ್ನು ಆಡಿಸಬಲ್ಲೆಯಾ? ಮನೆಯಲ್ಲಿರುವ ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟಿ ಹಾಕಬಲ್ಲೆಯಾ?
[6] ಬೆಸ್ತರು ಅದಕ್ಕಾಗಿ ವ್ಯಾಪಾರ ಒಪ್ಪಂದ ಮಾಡುತ್ತಾರೆಯೆ? ಅವರು ಅದನ್ನು ವರ್ತಕರಲ್ಲಿ ಹಂಚಿ ಮಾರುವರೆ?
[7] ಆ ಮೊಸಳೆಯ ಚರ್ಮವನ್ನು ಮುಳ್ಳುಗಳಿಂದ ಚುಚ್ಚಬಲ್ಲೆಯಾ? ಅದರ ತಲೆಯನ್ನು ಮೀನು ಹಿಡಿಯುವ ಈಟಿಯಿಂದ ತಿವಿಯಬಲ್ಲೆಯಾ?
[8] ಅದರ ಮೇಲೆ ನಿನ್ನ ಕೈಹಾಕಿ ನೋಡು! ಆ ಹೋರಾಟವನ್ನು ನೆನೆಸಿಕೊಂಡರೆ, ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ!
[9] ಅದನ್ನು ಹಿಡಿಯಬಹುದೆಂಬ ನಿರೀಕ್ಷೆಯು ವ್ಯರ್ಥವಾದದ್ದು; ಹಿಡಿಯ ಬಂದವನು ನೋಡಿದ ಮಾತ್ರಕ್ಕೆ ಹೆದರಿ ಬಿದ್ದುಹೋಗುವನು.
[10] ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರುವಾಗ, ನನಗೆ ಎದುರಾಗಿ ನಿಲ್ಲಲು ಶಕ್ತರು ಯಾರು?
[11] ನಾನು ಸಾಲ ತೀರಿಸಬೇಕೆಂದು ನನಗೆ ವಿರೋಧವಾಗಿ ಹಕ್ಕು ಸಾಧಿಸುವವರು ಯಾರು? ಆಕಾಶದ ಕೆಳಗೆ ಇರುವಂಥ ಪ್ರತಿಯೊಂದೂ ನನ್ನದೇ.
[12] “ನಾನು ಲಿವ್ಯಾತಾನ್ ಮೊಸಳೆಯ ದೇಹದ ಭಾಗಗಳನ್ನೂ ಬಲವನ್ನೂ, ಅದರ ಆಕರ್ಷಕ ಸೊಬಗನ್ನೂ ವರ್ಣಿಸದೆ ಸುಮ್ಮನಿರಲಾರೆನು.
[13] ಅದರ ಹೊರ ವಸ್ತ್ರವನ್ನು ತೆಗೆಯಬಲ್ಲವರು ಯಾರು? ಅದರ ಜೋಡು ದವಡೆಗಳೊಳಗೆ ಕಡಿವಾಣದಿಂದ ನುಗ್ಗಬಲ್ಲವರು ಯಾರು?
[14] ಅದರ ಮುಖದ ಕದಗಳನ್ನು ತೆರೆಯಬಲ್ಲವರು ಯಾರು? ಅದರ ಹಲ್ಲುಗಳ ಸುತ್ತಲೂ ಭಯಭೀತಿ ಆವರಿಸಿರುವುದು.
[15] ಗುರಾಣಿಗಳ ಸಾಲುಗಳು ಅದರ ಬೆನ್ನಿಗೆ ಹೆಮ್ಮೆಯಾಗಿವೆ; ಅವು ಒಟ್ಟಿಗೆ ಬಿಗಿಯಾಗಿ ಮುದ್ರಿಸಲಾಗಿವೆ.
[16] ಗಾಳಿಯೂ ಅವುಗಳ ನಡುವೆ ನುಗ್ಗದಂತೆ, ಒಂದಕ್ಕೊಂದು ಹೊಂದಿಕೊಂಡಿವೆ.
[17] ಆ ಅಡ್ಡಣಗಳು ಒಂದಕ್ಕೊಂದು ಅಂಟಿಕೊಂಡಿವೆ; ಪ್ರತ್ಯೇಕಿಸಲಾಗದಂತೆ ಹಿಡಿದುಕೊಂಡಿವೆ.
[18] ಅದರ ಸೀನಿನ ತುಂತುರುಗಳು ಬೆಳಕಿನ ಹೊಳಪನ್ನು ಹೊರಹಾಕುವುದು; ಅದರ ಕಣ್ಣುಗಳು ಉದಯದ ಕಿರಣಗಳ ಹಾಗೆ ಇವೆ.
[19] ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ.
[20] ಆಪುಹುಲ್ಲಿಗೆ ಬೆಂಕಿಯಿಟ್ಟಾಗ ಕುದಿಯುವ ಪಾತ್ರೆಯೊಳಗಿಂದ ಆವಿ ಬರುವಂತೆ, ಅದರ ಮೂಗಿನೊಳಗಿಂದ ಹೊಗೆ ಹಾಯುವುದು.
[21] ಅದರ ಶ್ವಾಸವೇ ಇದ್ದಲನ್ನು ಹೊತ್ತಿಸುವುದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡುವುದು.
[22] ಅದರ ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿರುವುದು; ಅದರ ಮುಂದೆ ಭಯವು ಸಾಗುತ್ತಿರುವುದು.
[23] ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲದೆ ಇರುತ್ತವೆ.
[24] ಅದರ ಹೃದಯವು ಬಂಡೆಯಂತೆಯೂ, ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.
[25] ಅದು ಎದ್ದರೆ ಶೂರರು ಸಹ ಹೆದರುತ್ತಾರೆ; ಅದರ ಹೊಡೆತಕ್ಕೆ ಭಯಭ್ರಾಂತರಾಗಿ ಹಿಂಜರಿಯುವರು.
[26] ಖಡ್ಗದಿಂದ ಹೊಡೆದರೆ ಅದಕ್ಕೇನೂ ಆಗುವುದಿಲ್ಲ; ಭರ್ಜಿ, ಬಾಣ, ಕವಚ ಇವುಗಳಿಂದಲೂ ಅದಕ್ಕೆ ಏನು ಆಗುವುದಿಲ್ಲ.
[27] ಕಬ್ಬಿಣವು ಅದಕ್ಕೆ ಒಣಹುಲ್ಲಿನಂತೆಯೂ, ಕಂಚು ಅದಕ್ಕೆ ಕೊಳೆತ ಕಟ್ಟಿಗೆಯಂತೆಯೂ ಇರುವುದು.
[28] ಲಿವ್ಯಾತಾನ್ ಮೊಸಳೆಯನ್ನು ಬಿಲ್ಲುಬಾಣಗಳು ಓಡಿಸಲು ಅಸಾಧ್ಯ; ಕವಣೆಯ ಕಲ್ಲು ಅದಕ್ಕೆ ಹೊಟ್ಟಿಗೆ ಸಮಾನ.
[29] ದೊಣ್ಣೆಗಳು ಅದಕ್ಕೆ ಒಣಹುಲ್ಲಿನ ಹಾಗೆ ಇರುವುದು; ಭರ್ಜಿ ಅದಕ್ಕೆ ತಾಕಿದರೆ, ಅದು ನಗುವುದು.
[30] ಅದರ ಹೊಟ್ಟೆಯ ಅಡಿಯಲ್ಲಿ ಚೂಪಾದ ಒಡೆದ ಮಡಕೆಗಳಂತಿವೆ, ಅದು ಕೆಸರಿನ ಮೇಲೆ ತೆನೆಬಡಿಯುವ ಯಂತ್ರದಿಂದ ಆಗುವ ಗುರುತಿನಂತಿರುವುದು.
[31] ಅದು ಆಳವಾದ ನೀರನ್ನು ಕುದಿಯುವ ಹಂಡೆಯ ನೀರಿನಂತೆ ಕಲಕುವುದು; ಸಮುದ್ರವನ್ನು ತೈಲದ ಪಾತ್ರೆಯ ಹಾಗೆಯೂ ಕದಲಿಸುವುದು.
[32] ಸಾಗರಕ್ಕೆ ನೆರೆ ಬಂತೋ ಎಂಬಂತೆ, ಅದು ತಾನು ಬಂದ ಹಾದಿಯನ್ನೇ ಬೆಳ್ಳಗಾಗುವಂತೆ ಮಾಡುವುದು.
[33] ಭೂಮಿಯ ಮೇಲೆ ಇದಕ್ಕೆ ಸಮಾನವಾದದ್ದು ಇಲ್ಲ; ಇದು ಭಯಭೀತಿಯಿಲ್ಲದ ಸೃಷ್ಟಿ.
[34] ಇದು ಪ್ರತಿ ಅಹಂಕಾರಿಯನ್ನು ನೋಡುವುದು; ಗರ್ವಪಡುವ ಎಲ್ಲರ ಮೇಲೆ ಇದು ರಾಜನಾಗಿರುವುದು.”