[1] ನಾಮಾಥ್ಯನಾದ ಚೋಫರನು ಉತ್ತರಕೊಟ್ಟು ಹೇಳಿದ್ದೇನೆಂದರೆ:
[2] “ನಾನು ತುಂಬಾ ಕಳವಳಗೊಂಡದ್ದರಿಂದ, ನನ್ನ ಆಲೋಚನೆಗಳು ನನ್ನನ್ನು ಉತ್ತರಿಸಲು ಪ್ರೇರೇಪಿಸಿದವು.
[3] ನನ್ನನ್ನು ಅವಮಾನಿಸುವ ಖಂಡನೆಯನ್ನು ನಾನು ಕೇಳಿದ್ದೇನೆ; ಆದ್ದರಿಂದ ನನ್ನ ತಿಳುವಳಿಕೆಯು ನನ್ನನ್ನು ಉತ್ತರಿಸಲು ಪ್ರೇರೇಪಿಸುತ್ತದೆ.
[4] “ದೇವರು ಮನುಷ್ಯನನ್ನು ಭೂಮಿಯಲ್ಲಿ ಇರಿಸಿದ ಕಾಲದಿಂದ ವಿಷಯ ಹೇಗಿದೆ ಎಂಬುದು ನಿನಗೆ ನಿಶ್ಚಯವಾಗಿ ಗೊತ್ತಿದೆ.
[5] ದುಷ್ಟರ ಜಯವು ಅಲ್ಪ ಕಾಲ, ಭಕ್ತಿಹೀನರ ಸಂತೋಷವು ಕ್ಷಣ ಮಾತ್ರ.
[6] ಹೆಮ್ಮೆಯು ಆಕಾಶಕ್ಕೆ ಏರಿದರೂ, ಅವನ ತಲೆ ಮೇಘಕ್ಕೆ ಮುಟ್ಟಿದರೂ,
[7] ಗೊಬ್ಬರದ ಹಾಗೆ ಶಾಶ್ವತವಾಗಿ ಅವನು ನಾಶವಾಗುವನು; ಅವನನ್ನು ನೋಡಿದವರು, ‘ಅವನೆಲ್ಲಿ?’ ಎಂದು ಕೇಳುವರು.
[8] ಭಕ್ತಿಹೀನನು ಕನಸಿನ ಹಾಗೆ ಹಾರಿಹೋಗುವನು, ಇನ್ನೆಂದಿಗೂ ಸಿಗಲಾರನು; ಅವನು ಕತ್ತಲೆಯ ಹಾಗೆ ಕಾಣದೆ ಹೋಗುವನು.
[9] ಅವನನ್ನು ನೋಡಿದವರು ಇನ್ನು ಮುಂದೆ ನೋಡರು; ಅವನ ಸ್ಥಳವು ಇನ್ನು ಅವನನ್ನು ಕಾಣದು.
[10] ಅವನ ಮಕ್ಕಳು ಬಡವರ ದಯೆಯನ್ನು ಬೇಡುವರು; ಅವನ ಮಕ್ಕಳ ಕೈಗಳು ಅವನ ಸಂಪತ್ತನ್ನು ಹಿಂತಿರುಗಿಸಬೇಕಾಗುವುದು.
[11] ಅವನ ಎಲುಬುಗಳು ಯೌವನದ ಶಕ್ತಿಯಿಂದ ತುಂಬಿತ್ತು, ಅದು ಅವನ ಸಂಗಡ ಧೂಳಿನಲ್ಲಿ ಮಲಗುವುದು.
[12] “ಅವನ ಕೆಟ್ಟತನವು ಬಾಯಿಗೆ ಸಿಹಿಯಾಗಿತ್ತು, ಅವನು ನಾಲಿಗೆಯ ಕೆಳಗೆ ಅದನ್ನು ಬಚ್ಚಿಟ್ಟುಕೊಂಡಿದ್ದನು.
[13] ಅದನ್ನು ಬಿಟ್ಟುಕೊಡಲು ಇಷ್ಟಪಡದೆ, ತನ್ನ ಬಾಯಿಯೊಳಗೆ ದೀರ್ಘಸಮಯ ಇಟ್ಟುಕೊಂಡರೂ,
[14] ಅವನ ಆಹಾರವು ಅವನ ಕರುಳಲ್ಲಿ ಹುಳಿಯಾಗಿ, ಅದು ಅವನೊಳಗಿನ ಸರ್ಪಗಳ ವಿಷವಾಗುವುದು.
[15] ಅವನು ನುಂಗಿದ ಐಶ್ವರ್ಯವನ್ನು ಕಾರಿಬಿಡುವನು; ಅವನ ಹೊಟ್ಟೆಯೊಳಗಿಂದ ದೇವರು ಅದನ್ನು ಹೊರಡಿಸಿ ಬಿಡುವನು.
[16] ಅವನು ಸರ್ಪಗಳ ವಿಷವನ್ನು ಹೀರುವನು; ಹಾವಿನ ನಾಲಿಗೆ ಅವನನ್ನು ಕೊಲ್ಲುವುದು.
[17] ಅವನು ಜೇನು, ಮೊಸರೂ ಹರಿಯುವ ಹಳ್ಳಗಳನ್ನೂ, ಸಮೃದ್ಧಿಯಾಗಿ ಹರಿಯುವ ನದಿಗಳನ್ನೂ ನೋಡನು.
[18] ಅವನು ತನ್ನ ಪ್ರಯಾಸದ ಫಲವನ್ನು ಸವಿಯದೆ ಪರರಿಗೆ ಕೊಡಬೇಕಾಗುವುದು; ಅವನು ತಾನು ಪಡೆದ ಲಾಭದ ಆನಂದವನ್ನು ಅನುಭವಿಸುವುದಿಲ್ಲ.
[19] ಏಕೆಂದರೆ ಅವನು ಬಡವರನ್ನು ಜಜ್ಜಿ ಅವರನ್ನು ನಿರ್ಗತಿಕರನ್ನಾಗಿ ಮಾಡಿದನು; ತಾನು ನಿರ್ಮಿಸದ ಮನೆಗಳನ್ನು ವಶಪಡಿಸಿಕೊಂಡಿದ್ದಾನೆ.
[20] “ಖಂಡಿತವಾಗಿ ಅವನ ಆಕಾಂಕ್ಷೆಗೆ ತೃಪ್ತಿ ಇರುವುದಿಲ್ಲ; ಅವನು ತನ್ನ ಇಷ್ಟ ಸಂಪತ್ತಿನಲ್ಲಿ ಏನೂ ಉಳಿಸಿಕೊಳ್ಳುವುದಿಲ್ಲ.
[21] ಅವನಿಗೆ ಆಹಾರವು ಉಳಿಯದು; ಆದ್ದರಿಂದ ಅವನ ಸಮೃದ್ಧಿಯು ಅಸ್ಥಿರವಾಗಿರುವುದು.
[22] ಅವನ ಸಮೃದ್ಧಿಯಿಂದ ತುಂಬಿರುವಾಗಲೇ ಅವನಿಗೆ ಇಕ್ಕಟ್ಟಾಗುವುದು; ಘೋರ ದುಃಖವು ಅವನ ಮೇಲೆ ಬರುವುದು.
[23] ಅವನ ಹೊಟ್ಟೆ ತುಂಬುವಾಗ, ದೇವದಂಡನೆ ಅವನ ಮೇಲೆ ಬರುವುದು; ಹೌದು, ದೇವದಂಡನೆಯು ಅವನ ಮೇಲೆ ಸುರಿಯುವುದು.
[24] ಅವನು ಕಬ್ಬಿಣದ ಆಯುಧಕ್ಕೆ ತಪ್ಪಿಸಿಕೊಂಡು ಓಡಿಹೋದರೆ, ಕಂಚಿನ ಬಾಣ ಅವನನ್ನು ತಿವಿಯುವುದು.
[25] ಅವನು ಆ ಬಾಣವನ್ನು ಎಳೆದರೆ, ಅದು ಬೆನ್ನಿನಿಂದ ಹೊರಡುವುದು; ಅವನ ಪಿತ್ತಕೋಶದಿಂದ ಅದರ ಮಿಂಚುವ ಮೊನೆ ಬರುವುದು; ಸಾವಿನ ಭಯವು ಅವನನ್ನೂ ಆವರಿಸುವುದು.
[26] ಅವನ ನಿಕ್ಷೇಪಗಳಲ್ಲಿ ಅಂಧಕಾರವು ಪೂರ್ಣವಾಗಿ ಕವಿಯುವುದು; ಯಾರೂ ಹೊತ್ತಿಸದ ಬೆಂಕಿ ಅವನನ್ನು ದಹಿಸುವುದು; ಅವನ ಗುಡಾರದಲ್ಲಿ ಉಳಿದದ್ದೆಲ್ಲ ನಾಶವಾಗುವುದು.
[27] ಆಕಾಶವು ಅವನ ಅಪರಾಧವನ್ನು ಪ್ರಕಟಿಸುವುದು; ಭೂಮಿಯು ಅವನಿಗೆ ವಿರೋಧವಾಗಿ ಏಳುವುದು.
[28] ಅವನ ಮನೆಯ ಧನಧಾನ್ಯವು ತೊಲಗಿ ಹೋಗುವುದು; ದೇವದಂಡನೆಯ ದಿನದಲ್ಲಿ ಅದು ಪ್ರವಾಹದಿಂದ ಕೊಚ್ಚಿಕೊಂಡು ಹೋಗುವುದು.
[29] ದುಷ್ಟನಿಗೆ ದೇವರಿಂದ ಬರುವ ಪಾಲೂ, ಅವನಿಗೆ ನೇಮವಾಗಿರುವ ಬಾಧ್ಯತೆಯೂ ಇವೇ.”