[1] ಅದಕ್ಕೆ ಯೋಬನು ಉತ್ತರವಾಗಿ ಹೀಗೆಂದನು:
[2] “ಅಯ್ಯೋ, ನನ್ನ ವ್ಯಥೆಯನ್ನು ತೂಕಮಾಡಿ ನೋಡಿದರೆ ಒಳ್ಳೇದು, ನನ್ನ ದುಃಖವನ್ನೆಲ್ಲಾ ತಕ್ಕಡಿಗೆ ಹಾಕಿದರೆ ಲೇಸು.
[3] ಏಕೆಂದರೆ ನನ್ನ ಕಷ್ಟ ಈಗಲೇ ಸಮುದ್ರದ ಮರಳಿಗಿಂತ ಭಾರವಾಗಿದೆ; ನನ್ನ ಮಾತುಗಳು ದುಡುಕಿದ್ದರಲ್ಲಿ ಆಶ್ಚರ್ಯವಿಲ್ಲ.
[4] ಸರ್ವಶಕ್ತರ ಬಾಣಗಳು ನನ್ನಲ್ಲಿ ನಾಟಿವೆ; ಅವುಗಳ ವಿಷವನ್ನು ನನ್ನ ಆತ್ಮವು ಹೀರುತ್ತಿದೆ; ದೇವರ ವಿಷಯವಾದ ಹೆದರಿಕೆಗಳು ನನ್ನನ್ನು ಸುತ್ತುವರೆದಿವೆ.
[5] ಹುಲ್ಲು ಇರುವಾಗ ಕಾಡುಕತ್ತೆಯು ಅರಚುವುದೋ? ಮೇವು ಇದ್ದರೆ ಎತ್ತು ಕೂಗುವುದೋ?
[6] ರುಚಿ ಇಲ್ಲದ ಆಹಾರನ್ನು ಉಪ್ಪಿಲ್ಲದೆ ತಿನ್ನಬಹುದೋ? ಕೋಳಿ ಮೊಟ್ಟೆಯ ಲೋಳೆಯಲ್ಲಿ ರುಚಿಯುಂಟೋ?
[7] ಮುಟ್ಟಲು ಕೂಡ ನನಗೆ ಇಷ್ಟವಾಗಲಿಲ್ಲ, ಅಂಥ ಆಹಾರವು ನನಗೆ ಬೇಸರ.
[8] “ದೇವರು ನನ್ನ ವಿಜ್ಞಾಪನೆಯನ್ನು ಲಾಲಿಸಿದರೆ ಸಾಕು, ನಾನು ನಿರೀಕ್ಷಿಸಿದ್ದನ್ನು ದೇವರು ಕೊಟ್ಟರೆ ಲೇಸು.
[9] ನನ್ನನ್ನು ಜಜ್ಜುವುದು ದೇವರಿಗೆ ಮೆಚ್ಚಿಗೆಯಾದರೆ, ದೇವರು ತಮ್ಮ ಕೈಚಾಚಿ ನನ್ನ ಪ್ರಾಣವನ್ನು ತೆಗೆದುಕೊಳ್ಳಲಿ.
[10] ಹಾಗಿದ್ದರೆ, ಇದು ನನಗೆ ಆದರಣೆಯಾಗಿರುವುದು; ಪರಿಶುದ್ಧ ದೇವರ ಮಾತುಗಳನ್ನು ನನ್ನ ಅತ್ಯಂತ ಯಾತನೆಯಲ್ಲಿಯೂ ನಾನು ನಿರಾಕರಿಸಲಿಲ್ಲ; ಇದರಿಂದ ಬರುವ ಆನಂದವು ನನಗೆ ಇನ್ನೂ ಇರುವುದು.
[11] “ನಾನು ನಿರೀಕ್ಷೆಯಿಂದಿರಲು, ನನಗೆ ಶಕ್ತಿ ಎಲ್ಲಿದೆ? ನಾನು ಸಹನೆಯಿಂದಿರಲು, ನನಗೆ ಭವಿಷ್ಯ ಏನಿದೆ?
[12] ನನ್ನ ಶಕ್ತಿ ಕಲ್ಲುಗಳ ಶಕ್ತಿಯೋ? ನನ್ನ ಶರೀರ ಕಂಚಿನ ಶರೀರವೋ?
[13] ನನಗೆ ಸಹಾಯವು ಇಲ್ಲದೆ ಹೋಗಿದೆಯಲ್ಲಾ? ಈಗ ಯಶಸ್ಸು ಸಹ ನನ್ನಿಂದ ತೊಲಗಿಹೋಗಿದೆಯಲ್ಲಾ.
[14] “ಒಬ್ಬನು ಸರ್ವಶಕ್ತರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ, ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.
[15] ಆದರೆ ನನ್ನ ಸಹೋದರರಾದರೋ, ಉಕ್ಕಿ ಹರಿಯುವ ತೊರೆಯಂತೆಯೂ, ಬತ್ತಿದ ಹಳ್ಳದಂತೆಯೂ ಅಪನಂಬಿಗಸ್ತರಾಗಿದ್ದಾರೆ.
[16] ಅವು ಮಂಜುಗಡ್ಡೆಯಿಂದ ಕಪ್ಪಾಗಿವೆ, ಅವುಗಳಲ್ಲಿ ಹಿಮ ಅಡಗಿಕೊಳ್ಳುತ್ತದೆ.
[17] ಉಷ್ಣ ಸಮಯದಲ್ಲಿ ಅವು ಹರಿಯುವದಿಲ್ಲ; ಸೆಕೆಯಾದಾಗ ಬತ್ತಿ ಅದರ ಸ್ಥಳದಿಂದ ಮಾಯವಾಗುತ್ತವೆ.
[18] ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣ ಮಾಡುವ ವರ್ತಕರ ಗುಂಪುಗಳು, ದಾರಿತಪ್ಪಿ ಮರಳುಗಾಡಿನಲ್ಲಿ ಅಲೆದು ನಾಶವಾಗುತ್ತವೆ.
[19] ತೇಮದ ವರ್ತಕರ ಗುಂಪುಗಳು ನೀರಿಗಾಗಿ ಹಂಬಲಿಸುತ್ತಾರೆ; ಶೆಬದ ವ್ಯಾಪಾರಿಗಳು ನಿರೀಕ್ಷೆಯಿಂದ ನೋಡುತ್ತಾರೆ.
[20] ಅವರು ನಿರೀಕ್ಷಿಸಿದ್ದರಿಂದ ವ್ಯಥೆಗೊಂಡರು; ಅವರು ಬಂದು ಸ್ಥಳಸೇರಿದರೂ ನಿರಾಶರಾದರು.
[21] ಈಗ ನೀವು ಸಹ ಹಾಗೆಯೇ ನಿಸ್ಸಹಾಯಕರಾಗಿ ಇದ್ದೀರಿ; ಏಕೆಂದರೆ ನೀವು ನನ್ನ ವಿಪತ್ತನ್ನು ಕಂಡು ಹಿಂಜರಿಯುತ್ತೀರಿ.
[22] ನಾನು ನಿಮ್ಮನ್ನು, ‘ನನಗೆ ದಾನಮಾಡಿರಿ,’ ಎಂದು ಬಿನ್ನವಿಸಿದೆನೋ? ‘ನಿಮ್ಮ ಆಸ್ತಿಯಿಂದ ನನಗಾಗಿ ಈಡು ಕೊಡಿರಿ,’ ಎಂದೆನೋ?
[23] ‘ಶತ್ರುವಿನ ಕೈಯಿಂದ ನನ್ನನ್ನು ತಪ್ಪಿಸಿರಿ,’ ಎಂದೂ, ‘ಬಲಾತ್ಕಾರಿಗಳ ಕೈಗಳಿಂದ ನನ್ನನ್ನು ವಿಮೋಚಿಸಿರಿ,’ ಎಂದೂ ನಾನು ಕೇಳಿದೆನೋ?
[24] “ನನಗೆ ಬೋಧಿಸಿರಿ, ನಾನು ಮೌನವಾಗಿರುವೆನು; ನಾನು ಮಾಡಿದ ತಪ್ಪನ್ನು ನನಗೆ ತಿಳಿಸಿರಿ.
[25] ಯಥಾರ್ಥ ಮಾತುಗಳು ಎಷ್ಟೋ ನೋವನ್ನು ತರುತ್ತವೆ! ಆದರೆ ನಿಮ್ಮ ತರ್ಕವು ರುಜುಪಡಿಸುವುದೇನು?
[26] ನಾನು ಹೇಳಿದ ಮಾತುಗಳನ್ನು ತಿದ್ದಬೇಕೆನ್ನುವಿರೋ? ಬೇಸರದ ನನ್ನ ಮಾತುಗಳು ನಿಮಗೆ ಗಾಳಿಮಾತುಗಳೋ?
[27] ತಂದೆಯಿಲ್ಲದವರಿಗಾಗಿ ಚೀಟು ಹಾಕುತ್ತೀರಿ, ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.
[28] “ಆದ್ದರಿಂದ ಈಗ ಸ್ವಲ್ಪ ದಯೆಯುಳ್ಳವರಾಗಿ ನನ್ನನ್ನು ದೃಷ್ಟಿಸಿರಿ; ನಾನು ನಿಮ್ಮೆದುರಿನಲ್ಲಿ ಸುಳ್ಳು ಹೇಳುವೆನೋ?
[29] ಕರುಣೆ ತೋರಿಸಿರಿ, ಅನ್ಯಾಯವಾಗದಿರಲಿ; ಪುನಃ ಯೋಚಿಸಿರಿ, ನನ್ನ ಪ್ರಾಮಾಣಿಕತೆಯು ಪ್ರಶ್ನಿಸಲಾಗಿದೆ.
[30] ನನ್ನ ನಾಲಿಗೆಯಲ್ಲಿ ದುಷ್ಟತನ ಇದೆಯೋ? ವಿಪತ್ತುಗಳ ವಿವೇಚನೆಯು ನನಗಿಲ್ಲವೋ?