[1] ಆಗ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೀಗೆಂದನು:
[2] “ಯೋಬನೇ, ಈ ಮಾತುಗಳನ್ನು ನೀನು ಯಾವಾಗ ಕೊನೆಗೊಳಿಸುತ್ತೀ? ವಿವೇಕಿಯಾಗು, ಆಮೇಲೆ ಮಾತನಾಡೋಣ.
[3] ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ? ನಿನ್ನ ದೃಷ್ಟಿಯಲ್ಲಿ ನಾವು ದಡ್ಡರೋ?
[4] ಕೋಪದಿಂದ ನಿನ್ನನ್ನು ನೀನೇ ಸೀಳಿಕೊಳ್ಳುವೆಯಾ? ನಿನ್ನ ನಿಮಿತ್ತ ಭೂಮಿ ಹಾಳಾಗಬೇಕೋ? ಬಂಡೆಯು ತನ್ನ ಸ್ಥಳದಿಂದ ತೊಲಗಬೇಕೋ?
[5] “ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿಹೋಗುವುದು; ಅವನ ಬಾಳಿನ ಬೆಂಕಿಯ ಜ್ವಾಲೆಯು ಉರಿಯದೆ ಹೋಗುವುದು.
[6] ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು; ಅವನ ಮೇಲಣ ತೂಗು ದೀಪವು ಆರಿಹೋಗುವುದು.
[7] ಅವನ ಬಲವುಳ್ಳ ಹೆಜ್ಜೆಗಳು ದುರ್ಬಲಗೊಳ್ಳುವುದು; ಅವನ ಯೋಜನೆಗಳೇ ಅವನನ್ನು ಕೆಡವಿಹಾಕುವವು.
[8] ಏಕೆಂದರೆ ದುಷ್ಟನು ತನ್ನ ಹೆಜ್ಜೆಗಳಿಂದಲೇ ಬಲೆಯಲ್ಲಿ ಬೀಳುವನು; ಅವನು ಕುಣಿಯಲ್ಲಿ ಬಿದ್ದು ಅಲೆದಾಡುವನು.
[9] ಬೋನು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವುದು; ಉರುಳು ಅವನನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು.
[10] ನೆಲದ ಮೇಲೆ ಪಾಶವೂ, ದಾರಿಯಲ್ಲಿ ಜಾಲವೂ ಅವನಿಗೆ ಹೊಂಚಿಕೊಂಡಿರುವುವು.
[11] ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ, ಅವನ ಕಾಲುಗಳನ್ನು ಓಡುವಂತೆ ಮಾಡುವುವು.
[12] ಅವನ ಬಲವು ಕುಸಿಯುವುದು; ವಿನಾಶವು ಅವನ ಬೀಳುವಿಕೆಗಾಗಿ ಸಿದ್ಧವಾಗಿರುವುದು.
[13] ಅದು ಅವನ ಚರ್ಮದ ಬಲವನ್ನು ತಿಂದುಬಿಡುವುದು; ಮರಣದ ಚೊಚ್ಚಲತನವು ಅವನ ಅಂಗಾಂಗಗಳನ್ನು ನುಂಗಿಬಿಡುವುದು.
[14] ಅವನು ಭದ್ರತೆಯ ಗುಡಾರದಿಂದ ಹೊರಬೀಳುವನು. ಅವನು ಭಯಂಕರ ಅರಸನ ಬಳಿಗೆ ಸಾಗಬೇಕಾಗುವುದು.
[15] ಬೆಂಕಿಯು ಅವನ ಮನೆಯನ್ನು ಸುಡುವುದು; ಅವನ ಮನೆಯ ಮೇಲೆ ಗಂಧಕವನ್ನು ಎರಚಲಾಗುವುದು.
[16] ಬುಡದಿಂದ ಅವನ ಬೇರುಗಳು ಒಣಗುವುವು; ಮೇಲಿನಿಂದ ಅವನ ರೆಂಬೆಯು ಬಾಡುವುದು.
[17] ಅವನ ಸ್ಮರಣೆಯು ಭೂಮಿಯಿಂದ ಅಳಿದುಹೋಗುವುದು; ನಾಡಿನಲ್ಲಿ ಅವನ ಹೆಸರು ಇಲ್ಲದೆ ಹೋಗುವುದು.
[18] ಬೆಳಕಿನಿಂದ ಅವನನ್ನು ಕತ್ತಲೆಗೆ ದಬ್ಬಲಾಗುವುದು; ಅವನು ಲೋಕದಿಂದ ಬಹಿಷ್ಕರಿಸಲಾಗುವನು.
[19] ಅವನ ಜನರಲ್ಲಿ ಅವನಿಗೆ ಮಗನೂ, ಮೊಮ್ಮಗನೂ ಇರುವುದಿಲ್ಲ, ಅವನು ವಾಸಿಸಿದ ಸ್ಥಳದಲ್ಲಿ ಯಾರೂ ಉಳಿಯುವುದಿಲ್ಲ.
[20] ಪಶ್ಚಿಮ ಜನರು ಅವನ ಸ್ಥಿತಿಯನ್ನು ನೋಡಿ ಆಶ್ಚರ್ಯಪಡುವರು; ಪೂರ್ವದ ಕಡೆಯವರನ್ನು ದಿಗಿಲು ಹಿಡಿಯುವುದು.
[21] ನಿಶ್ಚಯವಾಗಿ ದುಷ್ಟರ ನೆಲೆಯು ಹೀಗೆಯೇ ಇರುವುದು; ದೇವರನ್ನು ಅರಿಯದವನ ಸ್ಥಿತಿ ಇದೇ.”