[1] ಆಮೇಲೆ ಯೋಬನು ತನ್ನ ಬಾಯಿತೆರೆದು, ತನ್ನ ಜನ್ಮ ದಿವಸವನ್ನು ಶಪಿಸಿದನು.
[2] ಯೋಬನು ಇಂತೆಂದನು:
[3] “ನಾನು ಹುಟ್ಟಿದ ದಿವಸವೂ, ‘ಗಂಡು ಮಗುವನ್ನು ಗರ್ಭಧರಿಸಿದೆ!’ ಎಂದು ಹೇಳಿದ ರಾತ್ರಿಯೂ ನಾಶವಾಗಲಿ.
[4] ಆ ದಿವಸವು ಕತ್ತಲಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.
[5] ಕತ್ತಲೂ ಕಾರ್ಗತ್ತಲೂ ಆ ದಿನವನ್ನು ವಶಮಾಡಿಕೊಳ್ಳಲಿ; ಮೋಡವು ಅದರ ಮೇಲೆ ಕವಿಯಲಿ; ಕತ್ತಲೆ ಅದನ್ನು ಭಯಪಡಿಸಲಿ.
[6] ಆ ರಾತ್ರಿಯನ್ನು ಅಂಧಕಾರವು ಮುತ್ತಲಿ; ವರ್ಷದ ದಿನಗಳಲ್ಲಿ ಆ ದಿನವನ್ನು ಸೇರಿಸದಿರಲಿ. ಅದು ತಿಂಗಳುಗಳನ್ನು ಲೆಕ್ಕಿಸದಿರಲಿ.
[7] ಇಗೋ ಆ ರಾತ್ರಿಯು ಬಂಜೆಯಾಗಲಿ; ಅದರಲ್ಲಿ ಆನಂದ ಧ್ವನಿಯು ಕೇಳದಿರಲಿ.
[8] ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ ದಿನಗಳನ್ನು ಶಪಿಸುವುದರಲ್ಲಿಯೂ ನಿಪುಣರಾದವರು ಆ ದಿನವನ್ನು ಶಪಿಸಲಿ.
[9] ಅದರ ಮುಂಜಾನೆಯ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದುಕೊಂಡರೂ ಬಾರದಿರಲಿ ಅರುಣೋದಯವು ಆ ದಿನವನ್ನು ನೋಡದಿರಲಿ.
[10] ಏಕೆಂದರೆ ಆ ದಿನವು ನನ್ನ ತಾಯಿಯ ಗರ್ಭದ ಬಾಗಿಲನ್ನು ಮುಚ್ಚಲಿಲ್ಲ, ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ.
[11] “ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ? ನಾನು ಗರ್ಭದಿಂದ ಬಂದಾಗಲೇ ಏಕೆ ಪ್ರಾಣ ಬಿಡಲಿಲ್ಲ?
[12] ತಾಯಿಯ ಮಡಿಲು ನನ್ನನ್ನು ಸ್ವಿಕರಿಸಿದ್ದೇಕೆ? ತಾಯಿಯ ಮೊಲೆಹಾಲು ಕುಡಿಯಮಾಡಿದ್ದೇಕೆ?
[13] ಆಗ ಸತ್ತಿದ್ದರೆ ನಾನು ಶಾಂತವಾಗಿ ಮಲಗಿಕೊಳ್ಳುತ್ತಿದ್ದೆನು; ನಾನು ವಿಶ್ರಾಂತಿಯಲ್ಲಿರುತ್ತಿದ್ದೆನು.
[14] ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮಗಾಗಿ ಕಟ್ಟಿಸಿಕೊಂಡ ರಾಜರೊಂದಿಗೂ ಮಂತ್ರಿಗಳೊಡನೆಯೂ ನಾನಿರುತ್ತಿದ್ದೆನು.
[15] ಬಂಗಾರವನ್ನು ಕೂಡಿಸಿಟ್ಟು, ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡ ವಿಶ್ರಮಿಸಿಕೊಳ್ಳುತ್ತಿದ್ದೆನು.
[16] ಗರ್ಭಸ್ರಾವವಾಗಿ ಹೂಣಿಟ್ಟ ಪಿಂಡದಂತೆಯೂ ಬೆಳಕನ್ನು ನೋಡದ ಕೂಸುಗಳಂತೆಯೂ ನಾನೇಕೆ ಆಗಲಿಲ್ಲ?
[17] ಅಲ್ಲಿ ದುಷ್ಟರು ತೊಂದರೆ ಕೊಡುವುದು ಇರುವುದಿಲ್ಲ. ಶಕ್ತಿ ಕುಂದಿದವರು ಅಲ್ಲಿ ವಿಶ್ರಾಂತಿ ಹೊಂದಿರುತ್ತಾರೆ.
[18] ಸೆರೆಯವರು ಕೂಡ ಶಾಂತವಾಗಿರುತ್ತಾರೆ; ಬಾಧೆಪಡಿಸುವವನ ಶಬ್ದವನ್ನು ಕೇಳುವುದಿಲ್ಲ.
[19] ಅಲ್ಲಿ ಕಿರಿಯರು ಹಿರಿಯರು ಎಂಬ ಭೇದ ಇಲ್ಲಾ; ಗುಲಾಮರು ಯಜಮಾನರಿಂದ ಬಿಡುಗಡೆಯಾಗಿರುತ್ತಾರೆ.
[20] “ಕಷ್ಟದಲ್ಲಿ ಇರುವವನಿಗೆ ಬೆಳಕೂ ಕಹಿ ಮನಸ್ಸುಳ್ಳವರಿಗೆ ಜೀವವನ್ನು ಕೊಡುವುದೇಕೆ?
[21] ಅವರು ನಿಕ್ಷೇಪಕ್ಕಾಗಿ ಅಗಿಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು.
[22] ಅವರು ಸಮಾಧಿ ಸೇರಿದ ಮೇಲೆ ಸಂತೋಷ ಸಂಭ್ರಮದಿಂದ ಹರ್ಷಿಸುವರೋ?
[23] ದೇವರು ಸುತ್ತಲೂ ಬೇಲಿಹಾಕಿ, ದಾರಿ ಮುಚ್ಚಿದ ಮೇಲೆ ಅವರಿಗೆ ಬೆಳಕು ಏಕೆ?
[24] ನಿಟ್ಟುಸಿರೇ ನನ್ನ ದೈನಂದಿನ ಆಹಾರವಾಗಿದೆ; ನನ್ನ ನರಳಾಟವು ಜಲಧಾರೆಯಂತಿದೆ.
[25] ನನಗೆ ಭಯ ಹುಟ್ಟಿದೊಡನೆ ಆಪತ್ತು ಬಂದೊದಗುತ್ತದೆ; ಯಾವುದಕ್ಕೆ ಹೆದರುತ್ತೇನೋ, ಅದೇ ತಪ್ಪದೆ ಸಂಭವಿಸುತ್ತದೆ.
[26] ನನಗೆ ಶಾಂತಿ ಇಲ್ಲ, ವಿಶ್ರಾಂತಿಯೂ ಇಲ್ಲ; ನಾನು ಸಮಾಧಾನವಾಗಿಯೂ ಇಲ್ಲ, ಯಾವಾಗಲೂ ಕಳವಳವೇ ಇರುತ್ತದೆ.”