Skip to content
Opens in a new window
Listen to this chapter • 4:45

[1] ಆಗ ತೇಮಾನ್ಯನಾದ ಎಲೀಫಜನು ಹೀಗೆಂದನು:

[2] “ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಪೂರ್ವದಿಕ್ಕಿನ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದು ಉಂಟೋ?

[3] ನಿಷ್ಪ್ರಯೋಜಕವಾದ ನುಡಿಗಳಿಂದಲೂ, ಕೆಲಸಕ್ಕೆ ಬಾರದ ಮಾತುಗಳಿಂದಲೂ ಜ್ಞಾನಿಯು ವಾದಿಸುವನೋ?

[4] ನೀನಾದರೋ ದೇವರ ಭಯಭಕ್ತಿಯನ್ನು ಹಾಳುಮಾಡುತ್ತಿರುವೆ. ದೇವರ ಮೇಲಿನ ಭಕ್ತಿಯನ್ನು ಕಡಿಮೆ ಮಾಡುತ್ತಿರುವೆ.

[5] ಏಕೆಂದರೆ ನಿನ್ನ ಪಾಪವೇ ನಿನ್ನ ಬಾಯಿಯನ್ನು ಪ್ರೇರೇಪಿಸುತ್ತದೆ; ನೀನು ಕುಯುಕ್ತಿಯುಳ್ಳವರ ನಾಲಿಗೆಯನ್ನು ಆಯ್ದುಕೊಳ್ಳುತ್ತಿರುವೆ.

[6] ನಾನಲ್ಲ, ನಿನ್ನ ಬಾಯಿಯೇ ನಿನ್ನನ್ನು ಖಂಡಿಸುತ್ತದೆ; ಹೌದು, ನಿನ್ನ ತುಟಿಗಳೇ ನಿನಗೆ ವಿರೋಧವಾಗಿ ಸಾಕ್ಷಿ ಕೊಡುತ್ತವೆ.

[7] “ನೀನು ಮೊದಲು ಹುಟ್ಟಿದ ಪುರುಷನೋ? ಬೆಟ್ಟಗಳಿಗೆ ಮುಂಚಿತವಾಗಿ ಹುಟ್ಟಿದವನೋ?

[8] ನೀನು ದೇವರ ಆಲೋಚನಾ ಸಭೆಯಲ್ಲಿ ಸದಸ್ಯನೋ? ಜ್ಞಾನವು ನಿನಗೆ ಮಾತ್ರ ಮೀಸಲೋ?

[9] ನಮಗೆ ತಿಳಿಯದೆ ಇರುವುದನ್ನು ನೀನು ಏನು ತಿಳಿದುಕೊಂಡಿರುವೆ? ನಮ್ಮಲ್ಲಿ ಇಲ್ಲದ ಯಾವ ಒಳನೋಟವನ್ನು ನೀನು ಅರ್ಥಮಾಡಿಕೊಂಡಿರುವೆ?

[10] ತಲೆ ನರೆತವರೂ, ಹೆಚ್ಚು ಮುದುಕರಾದವರೂ, ನಿನ್ನ ತಂದೆಗಿಂತ ವೃದ್ಧರಾದವರೂ ನಮ್ಮಲ್ಲಿ ಇದ್ದಾರೆ.

[11] ದೇವರ ಸಂತೈಸುವಿಕೆಗಳೂ ಮೃದುವಾದ ಹಿತವಚನಗಳು ನಿನಗೆ ಸಾಕಾಗಿರುವುದಿಲ್ಲವೋ?

[12] ನಿನ್ನ ಹೃದಯವು ನಿನ್ನನ್ನು ಸೆಳೆದಿರುವುದು ಏಕೆ? ಏಕೆ ನಿನ್ನ ಕಣ್ಣು ಕಿಡಿಕಾರುತ್ತಿದೆ?

[13] ನೀನು ದೇವರ ವಿರುದ್ಧ ನಿನ್ನ ಕೋಪವನ್ನು ಹೊರಹಾಕುತ್ತಿರುವೆ? ನಿನ್ನ ಬಾಯಿಂದ ಕೋಪದ ಮಾತುಗಳನ್ನು ಹೊರಡಿಸುತ್ತೀಯಲ್ಲಾ?

[14] “ಮನುಷ್ಯನು ಎಷ್ಟರವನು? ಅವನು ಶುದ್ಧನಿರಲು ಸಾಧ್ಯವೇ? ಸ್ತ್ರೀಯರಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೆ?

[15] ದೇವರು ತಮ್ಮ ಪರಿಶುದ್ಧರನ್ನು ಆತುಕೊಂಡಿರುವುದಿಲ್ಲ; ಆಕಾಶಗಳೂ ದೇವರ ದೃಷ್ಟಿಯಲ್ಲಿ ಶುದ್ಧವಲ್ಲ.

[16] ಹಾಗಿರುವಾಗ, ನೀರಿನಂತೆ ಅನ್ಯಾಯವನ್ನು ಕುಡಿಯುವ ಮನುಷ್ಯನು, ದೇವರ ದೃಷ್ಟಿಯಲ್ಲಿ ಎಷ್ಟು ಅಲ್ಪನೂ ಅಶುದ್ಧನೂ ಆಗಿದ್ದಾನಲ್ಲವೇ?

[17] “ಕೇಳು, ನಾನು ನಿನಗೆ ವಿವರಿಸುತ್ತೇನೆ, ನಾನು ನೋಡಿದ್ದನ್ನು ನಿನಗೆ ಹೇಳುತ್ತೇನೆ,

[18] ಜ್ಞಾನಿಗಳು ತಮ್ಮ ಪೂರ್ವಜರಿಂದ ಕಲಿತಿದ್ದನ್ನೇ ಮರೆಮಾಡದೆ ನಮಗೆ ಪ್ರಕಟಿಸಿದರು.

[19] ಅವರಿಗೆ ದೇಶವು ಕೊಡಲಾಗಿತ್ತು; ಅವರ ಮಧ್ಯದಲ್ಲಿ ಅಂದು ಪರದೇಶೀಯರು ಹಾದುಹೋಗುವಂತಿರಲಿಲ್ಲ.

[20] ಜ್ಞಾನಿಗಳು ಹೇಳಿದ್ದೇನೆಂದರೆ: ದುಷ್ಟನು ತನ್ನ ಜೀವಮಾನವೆಲ್ಲಾ ವೇದನೆಪಡುತ್ತಾನೆ; ನಿರ್ದಯನು ತನ್ನ ವರ್ಷಗಳೆಲ್ಲ ತೊಂದರೆಗಳನ್ನು ಸಂಗ್ರಹಿಸುತ್ತಾನೆ.

[21] ಭಯಂಕರವಾದ ಸಂಗತಿಗಳು ಅವನ ಕಿವಿಗೆ ಬೀಳುತ್ತವೆ; ಎಲ್ಲವು ಸುಖವಾಗಿರುವಾಗ ಸುಲಿಗೆ ಮಾಡುವವನು ದುಷ್ಟನ ಮೇಲೆ ದಾಳಿ ಮಾಡುತ್ತಾನೆ.

[22] ಕತ್ತಲೆಯೊಳಗಿಂದ ಪಾರಾಗುತ್ತೇನೆಂದು ದುಷ್ಟನು ನಂಬುವುದಿಲ್ಲ; ಅವನ ಖಡ್ಗವು ಅವನಿಗಾಗಿ ಕಾದಿದೆ.

[23] ಅವನು ಆಹಾರ ಎಲ್ಲಿ ಎಂದು ರಣಹದ್ದಿನ ಹಾಗೆ ಅಲೆಯುತ್ತಾನೆ; ಕತ್ತಲೆಯ ದಿನ ತನ್ನ ಕೈ ಹತ್ತಿರ ಸಿದ್ಧವಾಗಿದೆ ಎಂದು ತಿಳಿದಿದ್ದಾನೆ.

[24] ಇಕ್ಕಟ್ಟೂ, ಸಂಕಟವೂ ಅವನನ್ನು ಹೆದರಿಸಿ, ಆಕ್ರಮಣ ಮಾಡಲು ಸಿದ್ಧನಾದ ರಾಜನಂತೆ ತೊಂದರೆಗಳು ಅವನನ್ನು ಆವರಿಸುತ್ತವೆ,

[25] ಏಕೆಂದರೆ ದುಷ್ಟನು ದೇವರಿಗೆ ವಿರೋಧವಾಗಿ ಮುಷ್ಠಿ ತೋರಿಸಿದನಲ್ಲಾ, ಸರ್ವಶಕ್ತರ ಎದುರು ನಿಂತು ಶೂರನಂತೆ ಮೆರೆದನಲ್ಲಾ.

[26] ದೇವರ ವಿರೋಧವಾಗಿ ಬಲವುಳ್ಳ ದೊಡ್ಡ ಗುರಾಣಿಯೊಂದಿಗೆ ಓಡುತ್ತಾನೆ.

[27] “ದುಷ್ಟನು ತನ್ನ ಮುಖದಲ್ಲಿ ಕೊಬ್ಬೇರಿಸಿಕೊಂಡು, ತನ್ನ ಸೊಂಟದಲ್ಲಿ ಬೊಜ್ಜನ್ನು ಬೆಳೆಸಿಕೊಂಡಿದ್ದಾನೆ.

[28] ಹಾಳಾದ ಪಟ್ಟಣಗಳಲ್ಲಿಯೂ, ಯಾರೂ ವಾಸಿಸದ, ಕುಸಿಯಲು ಸಿದ್ಧವಾದಂಥ ಮನೆಗಳಲ್ಲಿಯೂ ವಾಸಮಾಡಿಕೊಂಡಿದ್ದಾನೆ.

[29] ದುಷ್ಟನು ಐಶ್ವರ್ಯವಂತನಾಗುವುದಿಲ್ಲ; ಆದರೂ ಅವನ ಆಸ್ತಿಯು ಸ್ಥಿರವಲ್ಲ; ಅವನ ಸೊತ್ತು ಭೂಮಿಯ ಮೇಲೆ ವಿಸ್ತಾರವಾಗುವುದಿಲ್ಲ.

[30] ಕತ್ತಲೆಯೊಳಗಿಂದ ಅವನು ಪಾರಾಗುವದಿಲ್ಲ; ಕಿಚ್ಚು ಅವನ ಕೊಂಬೆಗಳನ್ನು ಒಣಗಿಸುವುದು; ದೇವರ ಬಾಯಿಯ ಶ್ವಾಸದಿಂದ ಅವನು ತೊಲಗಿ ಹೋಗುವನು.

[31] ದುಷ್ಟನು ವ್ಯರ್ಥವಾದದ್ದನ್ನು ನಂಬಿ ಮೋಸಹೋಗದಿರಲಿ. ಏಕೆಂದರೆ, ವ್ಯರ್ಥವಾದವುಗಳಿಂದ ಅವನಿಗಾಗುವ ಪ್ರತಿಫಲವು ಶೂನ್ಯವೇ.

[32] ದುಷ್ಟನು ತನ್ನ ಸಮಯಕ್ಕಿಂತ ಮೊದಲು ಬತ್ತಿ ಹೋಗುವನು; ಅವನ ಕೊಂಬೆಯು ಹಸಿರಾಗಿರುವುದಿಲ್ಲ.

[33] ದ್ರಾಕ್ಷೆಯ ಬಳ್ಳಿಯಂತೆ ಅವನು ತನ್ನ ಮಾಗದ ಫಲವನ್ನು ಹಾಳುಮಾಡಿಕೊಳ್ಳುವನು; ದುಷ್ಟನು ಹೂವುಗಳನ್ನು ಉದುರಿಸುವ ಓಲಿವ್ ಎಣ್ಣೆಯ ಮರದ ಹಾಗೆ ಇರುವನು.

[34] ದೇವರಿಲ್ಲದವರ ಸಹವಾಸ ಬಂಜರು, ಬೆಂಕಿಯು ಲಂಚಕೋರರ ಮನೆಗಳನ್ನು ಸುಟ್ಟುಹಾಕುವುದು.

[35] ಅವರು ಹಿಂಸೆಯನ್ನು ಗರ್ಭಧರಿಸಿ, ಕೆಟ್ಟದ್ದನ್ನು ಹೆರುವರು; ಅವರ ಹೊಟ್ಟೆಯು ವಂಚನೆಯಿಂದ ತುಂಬಿರುವುದು.”

ಯೋಬ — Chapters