[1] ಆಮೇಲೆ ತೇಮಾನ್ಯನಾದ ಎಲೀಫಜನು ಹೀಗೆಂದನು:
[2] “ಮನುಷ್ಯನಿಂದ ದೇವರಿಗೆ ಪ್ರಯೋಜನವೇನು? ಒಬ್ಬನು ಜ್ಞಾನಿಯಾಗಿದ್ದರೂ ದೇವರಿಗೆ ಪ್ರಯೋಜನವಾಗಿರುವನೇ?
[3] ನೀನು ನೀತಿವಂತನಾಗಿದ್ದರೆ, ಸರ್ವಶಕ್ತರಿಗೆ ಮೆಚ್ಚಿಕೆಯೋ? ನಿನ್ನ ಮಾರ್ಗಗಳು ನಿರ್ದೋಷವಾಗಿದ್ದರೆ, ದೇವರಿಗೆ ಲಾಭವೇನು?
[4] “ನಿನ್ನ ಭಕ್ತಿಗಾಗಿ ದೇವರು ನಿನ್ನನ್ನು ಗದರಿಸುತ್ತಾರೋ? ನಿನ್ನ ಭಕ್ತಿಗಾಗಿ ದೇವರು ನ್ಯಾಯತೀರ್ಪಿಗೆ ಗುರಿಪಡಿಸುತ್ತಾರೆಯೇ?
[5] ನಿನ್ನ ದುಷ್ಟತನವು ಬಹಳವಲ್ಲವೋ? ನಿನ್ನ ಪಾಪಗಳಿಗೆ ಅಂತ್ಯವೇ ಇಲ್ಲಾ.
[6] ನೀನು ಕಾರಣವಿಲ್ಲದೆ ನಿನ್ನ ಸಹೋದರರಿಂದ ಈಡು ತೆಗೆದುಕೊಂಡಿದ್ದೀ; ಅವರ ವಸ್ತ್ರಗಳನ್ನು ಸಹ ನೀನು ಕಿತ್ತುಕೊಂಡಿರುವೆ.
[7] ನೀನು ದಣಿದವರಿಗೆ ನೀರು ಕೊಡಲಿಲ್ಲ; ಹಸಿದವರಿಗೆ ಆಹಾರವನ್ನು ಬಡಿಸಲಿಲ್ಲ.
[8] ನೀನು ಬಲಿಷ್ಠನಾಗಿದ್ದರೂ, ಜಮೀನು ಬಹಳವಾಗಿದ್ದರೂ, ಗೌರವಕ್ಕೆ ಯೋಗ್ಯನಾದ ಮನುಷ್ಯನಾಗಿ ಊರಲ್ಲಿ ವಾಸಿಸಿದರೂ,
[9] ವಿಧವೆಯರನ್ನು ಬರಿದಾಗಿ ಕಳುಹಿಸಿಬಿಟ್ಟೆ; ದಿಕ್ಕಿಲ್ಲದವರ ತೋಳುಗಳನ್ನು ಮುರಿದುಬಿಟ್ಟೆ.
[10] ಆದ್ದರಿಂದ ನಿನ್ನ ಸುತ್ತಲೂ ಉರುಲುಗಳು ಕಾದಿವೆ; ಹಠಾತ್ತಾಗಿ ಬರುವ ವಿಪತ್ತು ನಿನ್ನನ್ನು ತಲ್ಲಣಗೊಳಿಸುತ್ತದೆ.
[11] ಇದಲ್ಲದೆ ನೀನು ಕಾಣದಷ್ಟು ಕತ್ತಲು ನಿನಗಿರುವುದು; ಜಲಪ್ರವಾಹವೂ ನಿನ್ನನ್ನು ಮುಳುಗಿಸುವುದು.
[12] “ದೇವರು ಸ್ವರ್ಗದಲ್ಲಿ ಇದ್ದಾರಲ್ಲವೇ? ನಕ್ಷತ್ರಮಂಡಲವನ್ನು ನೋಡು, ಅವು ಎಷ್ಟು ಉನ್ನತ!
[13] ನೀನಾದರೋ, ‘ದೇವರಿಗೆ ಏನು ಗೊತ್ತು? ಕಾರ್ಗತ್ತಲಿರುವಾಗ ದೇವರು ನ್ಯಾಯತೀರಿಸಲು ಸಾಧ್ಯವೇ?
[14] ದಟ್ಟವಾದ ಮೋಡಗಳು ದೇವರಿಗೆ ಪರದೆಯ ಹಾಗಿರುವುದರಿಂದ ದೇವರು ನಮ್ಮನ್ನು ನೋಡಲು ಸಾಧ್ಯವಿಲ್ಲ. ದೇವರು ಆಕಾಶಮಂಡಲದ ಮೇಲ್ಗಡೆಯಲ್ಲಿ ನಡೆದಾಡುತ್ತಾರೆ,’ ಎಂದು ಹೇಳಿಕೊಂಡಿರುವೆ ಅಲ್ಲವೇ?
[15] ದುಷ್ಟರು ಮೊದಲಿನಿಂದಲೂ ನಡೆದ ದಾರಿಯಲ್ಲಿ ನೀನು ನಡೆಯುವಿಯಾ?
[16] ಅಕಾಲ ಮರಣವು ಅವರನ್ನು ಅಪಹರಿಸಿತು; ಅವರ ಅಡಿಪಾಯವು ಪ್ರವಾಹದಿಂದ ಕೊಚ್ಚಿಹೋಯಿತು.
[17] ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು! ಸರ್ವಶಕ್ತ ನಮಗೇನು ಮಾಡಲು ಸಾಧ್ಯ?’ ಎಂದು ಹೇಳಿಕೊಳ್ಳುತ್ತಿದ್ದರು.
[18] ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರು. ಅಬ್ಬಾ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
[19] ನೀತಿವಂತರು ದುಷ್ಟರ ದುರ್ಗತಿಯನ್ನು ನೋಡಿ ಹಿಗ್ಗುವರು. ನಿರ್ದೋಷಿಗಳು ಹೀಗೆಂದು ದುಷ್ಟರನ್ನು ಅಣಕಿಸುವರು:
[20] ‘ನಮಗೆ ವಿರುದ್ಧವಾಗಿ ಎದ್ದವರು ಹಾಳಾಗಿ ಹೋದರು. ಅವರ ಸೊತ್ತನ್ನು ಬೆಂಕಿಯು ನಾಶಮಾಡಿತು!’
[21] “ದೇವರಿಗೆ ಅಧೀನವಾಗಿ, ದೇವರೊಂದಿಗೆ ಸಮಾಧಾನದಿಂದಿರು; ಇದರಿಂದ ನಿನಗೆ ಸಮೃದ್ಧಿ ಬರುವುದು.
[22] ದೇವರ ಬಾಯಿಂದಲೇ ಶಿಕ್ಷಣವನ್ನು ಸ್ವೀಕರಿಸು; ದೇವರ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.
[23] ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರಮಾಡಿ, ಸರ್ವಶಕ್ತರ ಕಡೆಗೆ ನೀನು ತಿರುಗಿಕೊಂಡರೆ, ನೀನು ಪುನಃಸ್ಥಾಪಿತವಾಗುವೆ.
[24] ನೀನು ಬಂಗಾರವನ್ನು ಧೂಳಿನಂತೆಯೂ, ಓಫೀರ್ ದೇಶದ ಬಂಗಾರವನ್ನು ನದಿಯ ಕಲ್ಲುಗಳಂತೆಯೂ ಎಣಿಸು.
[25] ಆಗ ಸರ್ವಶಕ್ತರು ನಿನಗೆ ಬಂಗಾರವಾಗಿರುವರು. ದೇವರು ನಿನಗೆ ಸಮೃದ್ಧಿಯಾದ ಬೆಳ್ಳಿಯೂ ಆಗಿರುವರು.
[26] ನಿಶ್ಚಯವಾಗಿ ಸರ್ವಶಕ್ತರಲ್ಲಿ ನೀನು ಆನಂದಗೊಳ್ಳುವೆ. ನಿನ್ನ ಮುಖವನ್ನು ದೇವರ ಕಡೆಗೆ ಎತ್ತುವೆ.
[27] ನೀನು ದೇವರಿಗೆ ಪ್ರಾರ್ಥನೆಮಾಡುವೆ, ನಿನ್ನ ಪ್ರಾರ್ಥನೆಯನ್ನು ದೇವರು ಕೇಳುವರು; ನೀನು ಮಾಡಿದ ಹರಕೆಗಳನ್ನು ಸಲ್ಲಿಸುವೆ.
[28] ನೀನು ಏನಾದರೂ ನಿರ್ಣಯಿಸಿದ್ದರೆ, ಅದು ನಿನಗೆ ನೆರವೇರುವುದು ಮತ್ತು ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.
[29] ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ‘ಮೇಲಕ್ಕೆ ಎತ್ತು!’ ಎಂದು ನೀನು ದೇವರಿಗೆ ಮೊರೆಯಿಡಲು, ದೇವರು ಬಿದ್ದವರನ್ನು ರಕ್ಷಿಸುವರು.
[30] ನಿರ್ದೋಷಿಯಾಗಿ ಇಲ್ಲದವರನ್ನು ಸಹ ದೇವರು ವಿಮೋಚಿಸುತ್ತಾರೆ; ನಿನ್ನ ಕೈಗಳ ಶುದ್ಧತ್ವದಿಂದ ಅಂಥವರು ಬಿಡುಗಡೆಯಾಗುವರು.”