[1] “ಈಗ ನೀನು ಕರೆದರೆ, ನಿನಗೆ ಉತ್ತರ ಕೊಡುವವರು ಇದ್ದಾರೋ? ಪರಿಶುದ್ಧರಲ್ಲಿ ಯಾರ ಕಡೆಗೆ ನೀನು ತಿರುಗಿಕೊಳ್ಳುವೆ?
[2] ಮೂಢನನ್ನು ಅಸಮಾಧಾನವು ಕೊಲ್ಲುವುದು; ಮುಗ್ಧನನ್ನು ಅಸುಹೆ ಸಾಯುವಂತೆ ಮಾಡುವುದು.
[3] ಮೂಢನು ಬೇರೂರುವುದನ್ನು ನಾನು ನೋಡಿದೆನು, ಕೂಡಲೇ ಅವನ ಮನೆ ಶಾಪಕ್ಕಿಡಾಗುವುದನ್ನು ಕಂಡೆನು.
[4] ಅವನ ಮಕ್ಕಳು ಭದ್ರತೆಯಿಲ್ಲದವರಾಗುವರು; ಬಿಡಿಸತಕ್ಕವರಿಲ್ಲದೆ ಅವರು ನ್ಯಾಯಸ್ಥಾನದಲ್ಲಿ ಸೋತುಹೋಗುವರು.
[5] ಹಸಿದವರು ಅವನ ಪೈರನ್ನು ತಿಂದುಬಿಡುವರು; ಮುಳ್ಳುಬೇಲಿ ಹಾಕಿದ್ದರೂ ಅದನ್ನು ತೆಗೆದುಕೊಳ್ಳುವರು; ಅವನ ಆಸ್ತಿಯನ್ನು ಬಾಯಾರಿಕೆಯಾದವರು ನುಂಗಿಬಿಡುವರು.
[6] ಮಣ್ಣಿನಿಂದ ಕಷ್ಟಗಳು ಹುಟ್ಟುವುದಿಲ್ಲ; ಭೂಮಿಯಿಂದ ತೊಂದರೆ ಮೊಳೆಯುವುದಿಲ್ಲ.
[7] ಆದರೂ ಕಿಡಿಗಳು ಹಾರುವ ಪ್ರಕಾರವೇ, ಮನುಷ್ಯನು ಶ್ರಮೆಹೊಂದಲು ಹುಟ್ಟುತ್ತಾನೆ.
[8] “ನಾನು ನೀನಾಗಿದ್ದರೆ ದೇವರಿಗೇ ಬೇಡಿಕೊಳ್ಳುತ್ತಿದ್ದೆ; ನನ್ನ ವಿಷಯವನ್ನು ದೇವರ ಮುಂದೆಯೇ ಇಡುತ್ತಿದ್ದೆ.
[9] ದೇವರು ಸಂಶೋಧನೆ ಮಾಡಲಾಗದಷ್ಟು ಮಹಾಕಾರ್ಯಗಳನ್ನೂ, ಅಸಂಖ್ಯವಾದ ಅದ್ಭುತ ಕೃತ್ಯಗಳನ್ನೂ ಮಾಡುತ್ತಾರೆ.
[10] ಭೂಮಿಯ ಮೇಲೆ ಮಳೆಯನ್ನು ಕೊಡುತ್ತಾರೆ; ಹೊಲಗಳ ಮೇಲೆ ನೀರನ್ನು ಸುರಿಸುತ್ತಾರೆ.
[11] ದೇವರು ತಗ್ಗಿದವರನ್ನು ಉನ್ನತದಲ್ಲಿಡುತ್ತಾರೆ; ದುಃಖವುಳ್ಳವರನ್ನು ಭದ್ರತೆಗೆ ಒಯ್ಯುತ್ತಾರೆ.
[12] ದೇವರು ವಂಚಕರ ಯೋಜನೆಗಳನ್ನು ಭಂಗಪಡಿಸುತ್ತಾರೆ. ಕುಯುಕ್ತಿಯುಳ್ಳವರ ಕೈಗಳು ಯಾವುದೇ ಯಶಸ್ಸನ್ನು ಸಾಧಿಸದಂತೆ ಮಾಡುತ್ತಾರೆ.
[13] ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುತ್ತಾರೆ, ಮತ್ತು ಕುತಂತ್ರಿಯ ಯೋಜನೆಗಳನ್ನು ನಿರರ್ಥಕಮಾಡುತ್ತಾರೆ.
[14] ಕುತಂತ್ರರು ಹಗಲಿನಲ್ಲಿಯೇ ಕತ್ತಲೆಯನ್ನು ಸಂಧಿಸುತ್ತಾರೆ; ಮಧ್ಯಾಹ್ನದಲ್ಲಿ ರಾತ್ರಿಯಂತೆ ತಡಕಾಡುತ್ತಾರೆ.
[15] ದೇವರು ದಿಕ್ಕಿಲ್ಲದವರನ್ನು ದಬ್ಬಾಳಿಕೆಮಾಡುವವರ ಬಾಯಿಯೆಂಬ ಖಡ್ಗದಿಂದಲೂ, ಬಲಿಷ್ಠರ ಕೈಯೊಳಗಿಂದಲೂ ರಕ್ಷಿಸುತ್ತಾರೆ.
[16] ಆದ್ದರಿಂದ ಬಡವರಿಗೆ ನಿರೀಕ್ಷೆಯುಂಟಾಗುವುದು; ಅನ್ಯಾಯವು ತನ್ನ ಬಾಯಿ ಮುಚ್ಚಿಕೊಳ್ಳುವುದು.
[17] “ಇಗೋ, ದೇವರು ಗದರಿಸುವ ಮನುಷ್ಯನು ಧನ್ಯನು; ಸರ್ವಶಕ್ತರ ಶಿಕ್ಷೆಯನ್ನು ತಿರಸ್ಕರಿಸಬೇಡ.
[18] ಗಾಯ ಮಾಡುವವರೂ ಗಾಯ ಕಟ್ಟುವವರೂ ದೇವರೇ; ಹೊಡೆಯುವುದೂ ಗುಣಪಡಿಸುವುದೂ ದೇವರ ಕೈಯೇ.
[19] ದೇವರು ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವರು; ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು.
[20] ಬರದಲ್ಲಿ ನಿನ್ನನ್ನು ಮರಣದೊಳಗಿಂದಲೂ, ಯುದ್ಧದಲ್ಲಿ ಖಡ್ಗದ ಬಲದಿಂದಲೂ ದೇವರು ವಿಮೋಚಿಸುವರು.
[21] ನೀನು ನಾಲಿಗೆಯೆಂಬ ಚಾಟಿಹೊಡೆತಕ್ಕೆ ಮರೆಯಾಗಿರುವೆ; ನಾಶ ಬಂದಾಗ ನೀನು ಭಯಪಡುವುದಿಲ್ಲ.
[22] ನೀನು ನಾಶಕ್ಕೂ, ಕ್ಷಾಮಕ್ಕೂ ನಗುವೆ; ಕಾಡುಮೃಗಗಳಿಗೂ ನೀನು ಭಯಪಡುವುದಿಲ್ಲ.
[23] ಹೊಲದ ಕಲ್ಲುಗಳ ಸಂಗಡ ನಿನಗೆ ಒಪ್ಪಂದ ಇರುವುದು; ಕಾಡು ಮೃಗಗಳೂ ನಿನ್ನೊಂದಿಗೆ ಸಮಾಧಾನವಾಗಿರುವವು.
[24] ನಿನ್ನ ಗುಡಾರವು ಕ್ಷೇಮವಾಗಿದೆ ಎಂದು ನೀನು ತಿಳಿದುಕೊಳ್ಳುವೆ, ನಿನ್ನ ಆಸ್ತಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.
[25] ನಿನ್ನ ಸಂತತಿಯು ಬಹಳವಾಗಿದೆ ಎಂದೂ, ನಿನ್ನ ಸಂತಾನವು ಭೂಮಿಯ ಹುಲ್ಲಿನಂತಿದೆ ಎಂದೂ ತಿಳಿದುಕೊಳ್ಳುವೆ.
[26] ಸಿವುಡು ತನ್ನ ಕಾಲದಲ್ಲಿ ಮನೆಗೆ ಸೇರುವಂತೆ ನೀನು ಪೂರ್ಣ ಪ್ರಾಯದವನಾಗಿ ಸಮಾಧಿ ಸೇರುವೆ.
[27] “ಇದನ್ನು ನಾವು ಪರಿಶೋಧಿಸಿದ್ದೇವೆ; ಇದು ಸತ್ಯವಾದದ್ದು, ಇದನ್ನು ನೀನು ಕೇಳಿ ತಿಳಿದುಕೋ, ಇದನ್ನು ನೀನು ಅನ್ವಯಿಸು.”