Skip to content
Opens in a new window
Listen to this chapter • 4:21

[1] “ಕಾಡುಮೇಕೆಗಳು ಈಯುವ ಕಾಲವನ್ನು ನೀನು ತಿಳಿದಿರುವೆಯಾ? ಜಿಂಕೆಗಳ ಹೆರಿಗೆಯನ್ನು ನೋಡಿರುವೆಯಾ?

[2] ಅವುಗಳ ಗರ್ಭ ತುಂಬುವ ತಿಂಗಳುಗಳನ್ನು ಎಣಿಸಿರುವೆಯಾ? ಅವು ಈಯುವ ಕಾಲವನ್ನು ತಿಳಿದಿರುವಿಯೋ?

[3] ಅವು ಬಗ್ಗಿ ಮರಿಗಳನ್ನು ಹಾಕುತ್ತವೆ; ಅದರ ಪ್ರಸವ ವೇದನೆಯನ್ನು ಮರೆತುಬಿಡುತ್ತವೆ.

[4] ಅವುಗಳ ಮರಿಗಳು ಪುಷ್ಟಿಯಾಗಿ ಕಾಡಿನಲ್ಲಿ ಬೆಳೆಯುತ್ತವೆ; ಅವು ತಾಯಿಯನ್ನು ಅಗಲಿದ ಬಳಿಕ ತಿರುಗಿ ಬರುವುದಿಲ್ಲ.

[5] “ಕಾಡುಕತ್ತೆಗೆ ಸ್ವತಂತ್ರವನ್ನು ಕೊಟ್ಟವರು ಯಾರು? ಕಾಡುಕತ್ತೆಯ ಕಟ್ಟನ್ನು ಬಿಚ್ಚಿದವರು ಯಾರು?

[6] ಮರುಭೂಮಿಯನ್ನು ಅದರ ನಿವಾಸವನ್ನಾಗಿ ಕೊಟ್ಟಿರುವುದು ನಾನೇ. ಸವಳುಬಯಲನ್ನು ಅದರ ವಾಸ ಸ್ಥಳವಾಗಿಯೂ ನೇಮಿಸಿದ್ದು ನಾನೇ.

[7] ಪಟ್ಟಣದ ಗದ್ದಲವನ್ನು ಕಾಡುಕತ್ತೆಯು ಧಿಕ್ಕರಿಸುತ್ತದೆ; ಅದು ಓಡಿಸುವವನ ಕೂಗನ್ನು ಲಕ್ಷಿಸುವುದಿಲ್ಲ.

[8] ಬೆಟ್ಟಗಳಲ್ಲಿ ಕಂಡದ್ದೆಲ್ಲಾ ಅದರ ಮೇವು; ಹಸುರಾಗಿರುವುದನ್ನು ಎಲ್ಲಿದ್ದರೂ ಹುಡುಕುತ್ತಲೇ ಇರುವುದು.

[9] “ಕಾಡುಕೋಣವು ನಿನ್ನ ಸೇವೆ ಮಾಡಲು ಎಂದಾದರೂ ಒಪ್ಪಿದೆಯೆ? ಅದು ರಾತ್ರಿಯಲ್ಲಿ ನಿನ್ನ ಗೋದಲಿಯ ಬಳಿಯಲ್ಲಿ ಉಳಿದುಕೊಂಡಿದೆಯೆ?

[10] ಕಾಡುಕೋಣವನ್ನು ಹಗ್ಗದಿಂದ ನೇಗಿಲ ಸಾಲಿಗೆ ಕಟ್ಟಿರುವೆಯಾ? ಅದು ಕಣಿವೆಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೆ?

[11] ಅದರ ಶಕ್ತಿ ಹೆಚ್ಚಾಗಿರುವುದರಿಂದ ನೀನು ಕೆಲಸಕ್ಕಾಗಿ ಅದನ್ನೇ ನಂಬಿರುವೆಯಾ? ನಿನ್ನ ಭಾರವಾದ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯಾ?

[12] ಅದು ನಿನ್ನ ಧಾನ್ಯ ತೆನೆಗಳನ್ನು ಮನೆಗೆ ತರುವುದೆಂದು ನಂಬುವೆಯಾ? ನಿನ್ನ ಕಣದಲ್ಲಿ ಕಾಳು ಕೂಡಿಸುವದೆಂದೂ ಅದನ್ನು ನಿರೀಕ್ಷಿಸುವೆಯಾ?

[13] “ಉಷ್ಟ್ರಪಕ್ಷಿ ಸಂತೋಷದಿಂದ ರೆಕ್ಕೆ ಬಡಿಯುತ್ತದೆ. ಆದರೂ ಕೊಕ್ಕರೆಯ ರೆಕ್ಕೆ ಗರಿಗಳೊಂದಿಗೆ ಅವುಗಳನ್ನು ಹೋಲಿಸಲಾಗದು.

[14] ಏಕೆಂದರೆ ಉಷ್ಟ್ರಪಕ್ಷಿಯು ತನ್ನ ಮೊಟ್ಟೆಗಳನ್ನು ನೆಲದಲ್ಲಿ ಬಿಟ್ಟು, ಕೇವಲ ಮರಳಿನಿಂದ ಅವುಗಳಿಗೆ ಕಾವು ಕೊಡುತ್ತದೆ.

[15] ಜನರು ಕಾಲಿನಿಂದ ಮೊಟ್ಟೆಗಳನ್ನು ಮೆಟ್ಟಿಯಾರು, ಇಲ್ಲವೆ ಕಾಡುಮೃಗ ಅದನ್ನು ಅವುಗಳನ್ನು ತುಳಿದೀತು ಎಂಬ ಚಿಂತೆ ಆ ಪಕ್ಷಿಗೆ ಇಲ್ಲ.

[16] ತನ್ನ ಮರಿಗಳನ್ನು ತನ್ನವುಗಳಲ್ಲ ಎಂಬಂತೆ ಕ್ರೂರವಾಗಿ ನಡೆಸುತ್ತದೆ; ಉಷ್ಟ್ರಪಕ್ಷಿಯು ತನ್ನ ಹೆರಿಗೆ ವ್ಯರ್ಥವಾದರೂ ಅದಕ್ಕೆ ಚಿಂತೆ ಇಲ್ಲ.

[17] ಏಕೆಂದರೆ ದೇವರು ಉಷ್ಟ್ರಪಕ್ಷಿಗೆ ಜ್ಞಾನವನ್ನು ಮರೆಮಾಡಿ, ತಿಳುವಳಿಕೆಯನ್ನು ಅದಕ್ಕೆ ಕೊಡಲಿಲ್ಲವಷ್ಟೆ.

[18] ಆದರೂ ಆ ಪಕ್ಷಿ ತನ್ನ ರೆಕ್ಕೆಗಳನ್ನು ಹರಡಿ ಓಡಿದಾಗ, ಅದು ಕುದುರೆ ಸವಾರನನ್ನು ಸಹ ನೋಡಿ ಅಣಕಿಸುತ್ತದೆ.

[19] “ಯೋಬನೇ, ಕುದುರೆಗೆ ಶಕ್ತಿ ಕೊಟ್ಟವನು ನೀನೋ? ಅದರ ಕೊರಳಿಗೆ ಜುಟ್ಟುಗುಡುಗನ್ನು ಹೊದಿಸಿದವನು ನೀನೋ?

[20] ಮಿಡತೆಯ ಹಾಗೆ ಅದನ್ನು ಹಾರುವಂತೆ ಮಾಡಿದವನು ನೀನೋ? ಅದರ ಕೆನೆತದ ಪ್ರಭಾವ ಭಯಂಕರವಾಗಿದೆಯಲ್ಲಾ?

[21] ಕುದುರೆಯು ನೆಲವನ್ನು ಕೆರೆಯುತ್ತಾ ತನ್ನ ಶಕ್ತಿಯಲ್ಲಿ ಹಿಗ್ಗುತ್ತದೆ; ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೊರಡುತ್ತದೆ.

[22] ಭಯವನ್ನು ಕಂಡು ನಗುತ್ತದೆ; ಯಾವುದಕ್ಕೂ ಹೆದರುವುದಿಲ್ಲ; ಖಡ್ಗಕ್ಕೆ ಸಹ ಹಿಂದೆಗೆಯುವುದಿಲ್ಲ.

[23] ಅದರ ಮೇಲೆ ಬತ್ತಳಿಕೆಯೂ, ಪ್ರಜ್ವಲಿಸುವ ಭಲ್ಲೆಯೂ, ಭರ್ಜಿಯೂ ಥಳಥಳಿಸುತ್ತವೆ.

[24] ಕುದುರೆ ಕಹಳೆಯ ನಾದವನ್ನು ಕೇಳಿದರೂ ಭೀಕರ ಉತ್ಸಾಹದಲ್ಲಿ ನೆಲನುಂಗುವಂತೆ ನಿಲ್ಲದೆ ಓಡುತ್ತದೆ.

[25] ರಣಕಹಳೆ ಮೊಳಗಿದಾಗ ಕುದುರೆ ಕೆನೆಯುತ್ತದೆ. ಅದು ಅಧಿಪತಿಗಳ ಗರ್ಜನೆಯನ್ನೂ ಕಾಳಗದ ಆರ್ಭಟವನ್ನೂ ದೂರದಿಂದಲೇ ಮೂಸಿ ನೋಡಿ ತಿಳಿಯುತ್ತದೆ.

[26] “ಯೋಬನೇ, ಗಿಡುಗವು ತನ್ನ ರೆಕ್ಕೆಗಳನ್ನು ಹರಡಿ, ದಕ್ಷಿಣದ ಕಡೆಗೆ ಹಾರುವುದು ನಿನ್ನ ಜ್ಞಾನದಿಂದಲೋ?

[27] ರಣಹದ್ದು ಎತ್ತರಕ್ಕೆ ಹಾರುವುದೂ, ಉನ್ನತ ಸ್ಥಳದಲ್ಲಿ ಗೂಡುಕಟ್ಟುವುದು ನಿನ್ನ ಅಪ್ಪಣೆಯಿಂದಲೋ?

[28] ಅದು ಬಂಡೆಯ ಸಂದುಗಳಲ್ಲಿ ರಾತ್ರಿಯನ್ನು ಕಳೆಯುತ್ತದೆ; ಶಿಲಾಶಿಖರದ ದುರ್ಗಗಳಲ್ಲಿಯೂ ಅದು ತಂಗುತ್ತದೆ.

[29] ಅಲ್ಲಿಂದಲೇ ಆಹಾರವನ್ನು ಹುಡುಕುತ್ತದೆ; ಅದರ ಕಣ್ಣುಗಳು ದೂರದಿಂದಲೇ ನೋಡುತ್ತವೆ.

[30] ಅದರ ಮರಿಗಳು ತಂದ ಬೇಟೆಯನ್ನು ತಿಂದುಬಿಡುತ್ತವೆ; ಹೆಣ ಬಿದ್ದಲ್ಲಿಯೇ ರಣಹದ್ದು ಇರುವುದು.”

ಯೋಬ — Chapters