Skip to content
Opens in a new window
Listen to this chapter • 2:50

[1] ಆಗ, ಶೂಹ್ಯನಾದ ಬಿಲ್ದದನು ಈ ಪ್ರಕಾರ ಉತ್ತರಕೊಟ್ಟನು:

[2] “ನೀನು ಎಷ್ಟರವರೆಗೆ ಇವುಗಳನ್ನು ನುಡಿಯುತ್ತಿರುವೆ? ನೀನು ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ.

[3] ದೇವರು ತೀರ್ಪಿಗೆ ವಿರುದ್ಧವಾದದ್ದನ್ನು ಮಾಡುತ್ತಾರೋ? ಸರ್ವಶಕ್ತರು ನೀತಿಗೆ ವಿರುದ್ಧವಾದದ್ದನ್ನು ಮಾಡುವರೋ?

[4] ನಿನ್ನ ಮಕ್ಕಳು ದೇವರಿಗೆ ವಿರೋಧವಾಗಿ ಪಾಪಮಾಡಿದ್ದರೆ, ದೇವರು ಅವರ ಪಾಪಕ್ಕಾಗಿ ಅವರನ್ನು ದಂಡಿಸುವರು.

[5] ಆದರೆ ನೀನೇ ದೇವರನ್ನು ಜಾಗ್ರತೆಯಾಗಿ ಹುಡುಕಿ, ಸರ್ವಶಕ್ತರಿಗೆ ಬಿನ್ನಹ ಮಾಡು.

[6] ನೀನು ಶುದ್ಧನೂ, ಯಥಾರ್ಥನೂ ಆಗಿದ್ದರೆ, ನಿಶ್ಚಯವಾಗಿ ಈಗಲೇ ದೇವರು ನಿನಗೋಸ್ಕರ ಎಚ್ಚೆತ್ತು, ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವರು.

[7] ನಿನ್ನ ಆರಂಭವು ಅಲ್ಪವಾಗಿದ್ದರೂ, ನಿನ್ನ ಅಂತ್ಯವು ಬಹಳವಾಗಿ ವೃದ್ಧಿ ಹೊಂದುವುದು.

[8] “ಪೂರ್ವಿಕರನ್ನು ವಿಚಾರಿಸು; ಅವರ ಪಿತೃಗಳು ಕಲಿತಿದ್ದನ್ನು ಕಂಡುಕೊಳ್ಳುವುದಕ್ಕೆ ಸಿದ್ಧನಾಗು.

[9] ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯದವರೂ ಆಗಿದ್ದೇವೆ; ಏಕೆಂದರೆ ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿನಂತಿವೆ.

[10] ಪೂರ್ವಿಕರು ನಿನಗೆ ಬೋಧಿಸಿ ಬುದ್ಧಿ ಹೇಳಲಿಲ್ಲವೋ? ಅವರು ತಮ್ಮ ತಿಳುವಳಿಕೆಯನ್ನು ಹೊರತರಲಿಲ್ಲವೋ?

[11] ಕೆಸರಿಲ್ಲದೆ ಆಪು ಹುಲ್ಲು ಬೆಳೆಯುವುದೋ? ನೀರಿಲ್ಲದೆ ಜಂಬು ಹುಲ್ಲು ಮೊಳೆಯುವುದೋ?

[12] ಅದು ಹಸುರಾಗಿ ಇನ್ನೂ ಕೊಯ್ಯದೆ ಇದ್ದಾಗಲೂ, ಎಲ್ಲಾ ಹುಲ್ಲಿಗಿಂತಲೂ ಅದು ಮೊದಲು ಒಣಗಿಹೋಗುವುದು.

[13] ದೇವರನ್ನು ಮರೆಯುವವರೆಲ್ಲರ ದಾರಿ ಹಾಗೆಯೇ; ಭಕ್ತಿಹೀನರ ನಿರೀಕ್ಷೆಯು ನಾಶವಾಗುವುದು.

[14] ಅಂಥವರ ಭರವಸೆಯು ಭಂಗವಾಗುವುದು; ಅವರ ಆಶ್ರಯವು ಜೇಡರ ಹುಳದ ಮನೆಯಂತಿರುವುದು.

[15] ಅಂಥಾ ಮನೆ ಮೇಲೆ ಒರಗಿಕೊಂಡರೆ, ಅದು ನಿಲ್ಲದು; ಅದನ್ನು ಬಿಗಿಹಿಡಿದರೆ, ಅದು ತಡೆಯಲಾರದು.

[16] ಸೂರ್ಯನ ಮುಂದೆ ಭಕ್ತಿಹೀನರು ಹಸುರು ಬಳ್ಳಿಯಂತೆ ಇದ್ದಾರೆ; ಆ ಬಳ್ಳಿಯು ತೋಟದಲ್ಲೆಲ್ಲಾ ಹಬ್ಬುತ್ತಿದೆ.

[17] ಅವರ ಬೇರುಗಳು ಬಂಡೆಗಳ ರಾಶಿಯ ಮೇಲೆ ಸುತ್ತಿ, ಕಲ್ಲುಗಳ ನಡುವೆ ನುಗ್ಗುತ್ತವೆ.

[18] ಭಕ್ತಿಹೀನನನ್ನು ಅವನ ಸ್ಥಳದಿಂದ ಕಿತ್ತುಹಾಕಿದರೆ, ‘ನಾನು ನಿನ್ನನ್ನು ಎಂದಿಗೂ ನೋಡಿಲ್ಲ,’ ಎಂದು ಆ ನೆಲವು ಅವನನ್ನು ಅಲ್ಲಗಳೆಯುವುದು.

[19] ಹೀಗೆ ಭಕ್ತಿಹೀನನ ಜೀವವು ಒಣಗಿಹೋಗುವುದು; ಆದರೆ ಆ ಮಣ್ಣಿನ ನೆಲದಿಂದ ಬೇರೆ ಸಸಿಗಳು ಮೊಳೆಯುವುದು.

[20] “ದೇವರು ನಿರ್ದೋಷಿಯನ್ನು ತಿರಸ್ಕರಿಸುವುದಿಲ್ಲ; ಕೆಡುಕರ ಕೈಗಳನ್ನು ದೇವರು ಬಲಪಡಿಸುವದಿಲ್ಲ.

[21] ದೇವರು ನಿನ್ನ ಬಾಯನ್ನು ನಗೆಯಿಂದ ತುಂಬಿಸುವರು; ನಿನ್ನ ತುಟಿಗಳನ್ನು ಜಯ ಧ್ವನಿಯಿಂದಲೂ ತುಂಬಿಸುವರು.

[22] ನಿನ್ನ ಶತ್ರುಗಳಿಗೆ ನಾಚಿಕೆಯಾಗುವುದು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವುದು.”

ಯೋಬ — Chapters